ದೀಪಕ್‌ಗೆ ನಿಜವಾಗಲೂ ಆಗಿದ್ದೇನು? ಈಗ ಪವನ್‌ ಎಲ್ಲಿದ್ದಾನೆ?


‘ಅನು, ಇವರು ಮೈಕ್‌ ಟರ್ನರ್‌, ನನ್ನ ಬ್ಯಾಸ್ಕೆಟ್‌ಬಾಲ್‌ ಸ್ನೇಹಿತ, ಹಾಗು ಅತ್ಯುತ್ತಮ ಲಾಯರ್‌.’

ಅನು ಅವರಿಗೆ ಅಭಿವಂದಿಸಲು ಮೇಲೆದ್ದಳು. ‘ನಿಮ್ಮನ್ನು ಭೇಟಿಯಾಗಿದ್ದು ಸಂತೋಷ, ಮೈಕ್‌. ಇಷ್ಟು ಕಮ್ಮಿ ಅವಧಿಯಲ್ಲಿ ಬಂದಿದ್ದಕ್ಕೆ ಬಹಳ ಧನ್ಯವಾದಗಳು. ’ ಅವಳಿಗೆ ಇಲ್ಲಿನ ಜನರ ಕೊನೆಯ ಹೆಸರನ್ನು, ಅಂದರೆ ಅವರ ಸರ್‌ನೇಮ್‌ ಅನ್ನು ಹಿಡಿದು ಮಿಸ್ಟರ್‌, ಮಿಸೆಸ್‌ ಎಂದು ಸಂಭೋಧಿಸಲು ಇಲ್ಲಿಯ ತನಕ ರೂಢಿಯೆ ಆಗಿರಲಿಲ್ಲ.

‘ಮಿಸ್‌ ಸ್ಯಾಟ್ಯನ್‌... ನಾನು ನಿಮ್ಮನ್ನು ಅನು ಎಂದು ಕರೆಯಬಹುದೆ?’

‘ಖಂಡಿತ. ಹಾಗೆ ಕರೆಯಿರಿ.’

‘ಡ್ಯಾನ್‌ ನನಗೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಆದರೆ ಈಗ ನಾವಾಗಿಯೆ ಅವರಿಗೆ ಎಲ್ಲವನ್ನೂ ತಿಳಿಸುವುದು ಒಳ್ಳೆಯದು. ’

‘ಹೌದು, ಒಪ್ಪುತ್ತೇನೆ’

‘ಗ್ರೇಟ್‌! ನಮ್ಮಿಬ್ಬರ ಅಭಿಪ್ರಾಯ ಒಂದೆ ಆಗಿದೆ ಹಾಗಿದ್ದರೆ. ಡ್ಯಾನ್‌, ನೀವು ಸ್ವಲ್ಪ ಹೊರಗೆ ಹೋಗ್ತೀರಾ, ದಯವಿಟ್ಟು? ಇದು ವಕೀಲ ಮತ್ತು ಕಕ್ಷಿಗಾರನ ನಡುವಿನ ವಿಷಯ... ನಿಮಗೆ ಗೊತ್ತಲ್ಲವೆ?’

‘ಒಂದು ನಿಮಿಷ,‘ ಅನು ಹೇಳಿದಳು. ‘ಡ್ಯಾನ್‌, ನೀನು ರೂಪಾಳಿಗೂ ಸಹ ಒಬ್ಬ ಲಾಯರ್‌ ಅನ್ನು ಹುಡುಕಬೇಕಿದೆ.’

ಅವನು ಹೌದೆಂದು ತಲೆಯಾಡಿಸಿದ. ‘ಅವಳನ್ನು ಪೋಲಿಸರು ಪ್ರಶ್ನಿಸುವ ಸಮಯದಲ್ಲಿ ಮೈಕ್‌ ಅವಳ ಜೊತೆ ಕುಳಿತುಕೊಳ್ಳುತ್ತಾರೆ. ಅವಳಿಗೆ ಅದಕ್ಕಿಂತ ಹೆಚ್ಚಿಗೆ ಬೇರೆ ಯಾರಾದರೂ ಬೇಕಾದರೆ ಮೈಕ್‌ ಅದಕ್ಕೆ ವ್ಯವಸ್ಥೆ ಮಾಡುತ್ತಾರೆ. ಈಗ ನೀನು ಅದರ ಬಗ್ಗೆ ಚಿಂತಿಸಬೇಡ. ನಿನ್ನನ್ನು ಆಮೇಲೆ ಕಾಣುತ್ತೇನೆ, ’ ಎಂದು ಹೇಳಿ ಅವನು ಹೊರಗೆ ಹೋದ.

‘ಕ್ಷಮಿಸಿ, ಮೈಕ್‌.‘ ಅನು ಮುಗುಳ್ನಕ್ಕಳು. ‘ದಯವಿಟ್ಟು ಮುಂದುವರೆಸಿ.’

‘ಮೊದಲಿಗೆ, ನೀವು ಮೊದಲ ಸಲ ರೂಪಾಳನ್ನು ಭೇಟಿಯಾಗಿದ್ದು ಯಾವಾಗ?’

‘ನಾನು ಇಲ್ಲಿಯತನ ಅವಳನ್ನು ಎಂದೂ ಭೇಟಿಯಾಗಿಲ್ಲ.’

ಮೈಕ್‌ ಅಪನಂಬಿಕೆಯಿಂದ ನೋಡಿದ. ‘ಇಲ್ಲವೇ ಇಲ್ಲ? ಸರಿ, ಹಾಗಿದ್ದರೆ, ನಿಮಗೆ ಅವರು ಎಷ್ಟು ದಿನಗಳಿಂದ ಗೊತ್ತು?’

‘ಕೆಲವು ತಿಂಗಳುಗಳಿಂದ. ಅವಳೇ ನನಗೆ ಕರೆ ಮಾಡುತ್ತಿದ್ದಳು. ನಾನಾಗಿ ನಾನು ಎಂದೂ ಅವಳಿಗೆ ಕರೆ ಮಾಡಿಲ್ಲ.’

‘ನಿಮಗೆ ಎಷ್ಟು ದಿನಗಳಿಂದ... ನಿಮ್ಮ ಮಾಜಿ ಗಂಡ ಗೊತ್ತಿದ್ದರು?’

‘ಡ್ಯಾನ್‌ ನಿಮಗೆ ಎಲ್ಲವನ್ನೂ ಹೇಳಿದ್ದಾನೆಯೆ? ಎರಡು ವರುಷಗಳಿಗಿಂತ ಕಡಿಮೆ.’

‘ನೆನ್ನೆ ಬೆಳಿಗ್ಗೆ ನೀವು ರೂಪಾಳನ್ನು ಭೇಟಿಯಾಗಲು ಕಾರಿನಲ್ಲಿ ಹೋಗಿದ್ದಿರಿ ಎಂದು ಡ್ಯಾನ್‌ ಹೇಳಿದರು. ನಿಜವೆ?’

‘ಹೋಗುತ್ತಿದ್ದೆ, ಆದರೆ ನಾನು ಅವಳನ್ನು ಭೇಟಿಯಾಗಲು ಆಗಲಿಲ್ಲ. ಏಕೆಂದರೆ ಅವಳ ಮನೆಯ ಹತ್ತಿರ ನನ್ನ ಸೆಲ್‌ಫೋನ್‌ ಸಿಗ್ನಲ್‌ ಇಲ್ಲದೆ ಕೆಲಸ ಮಾಡುತ್ತಿರಲಿಲ್ಲ. ಡ್ಯಾನ್‌ಗೆ ಕರೆ ಮಾಡುವ ಸ್ಥಿತಿಯಲ್ಲಿ ಇಲ್ಲದೆ ದೀಪಕ್‌ನ ಮನೆಯ ಒಳಗೆ ಕಾಲಿಡುವ ರಿಸ್ಕ್‌ ತೆಗೆದುಕೊಳ್ಳಲು ನಾನು ಇಷ್ಟ ಪಡಲಿಲ್ಲ.’

‘ನೆನ್ನೆ ಮಧ್ಯಾಹ್ನ ಪೂರ್ತಿ ನೀವು ಎಲ್ಲಿದ್ದಿರಿ?’

‘ಸಂಜೆ ಆರು ಗಂಟೆಯವರೆಗು ಕೆಲಸದಲ್ಲಿ ಇದ್ದೆ. ಆಮೇಲೆ 7 ರಿಂದ 8 ರವರೆಗೆ ನನ್ನ ಯೋಗಾಭ್ಯಾಸದ ತರಗತಿಗೆ ಹೋಗಿದ್ದೆ. ಆಮೇಲೆ ಮನೆಗೆ ಹೋಗಿ ಎಂದಿನಂತೆ ಹಿತ್ತಲಿನಲ್ಲಿರುವ ಬಿಸಿನೀರಿನ ಟಬ್ಬಿನಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದೆ. ನಾನು ಟಬ್ಬಿನಲ್ಲಿದ್ದಾಗ ಡ್ಯಾನ್‌ ಮತ್ತು ರೂಪ ಇಬ್ಬರೂ ಅನೇಕ ಸಲ ನನಗೆ ಕರೆ ಮಾಡಿದ್ದಾರೆ. ಆದರೆ ನಾನು ಹೊರಗೆ ಇದ್ದಿದ್ದರಿಂದ ಪೋನ್‌ ರಿಂಗ್‌ ಆಗಿದ್ದು ನನಗೆ ಕೇಳಿಸಲಿಲ್ಲ.’

‘ಅನು, ಈಗ ನಾನು ಕೇಳಿದ ಪ್ರಶ್ನೆಗಳನ್ನೆ ಡಿಟೆಕ್ಟಿವ್‌ಗಳೂ ಕೇಳುತ್ತಾರೆ. ನೀವು ಏನಾದರೂ ತಪ್ಪು ಹೇಳುತ್ತೀರ ಎಂದು, ನಿಮ್ಮ ಮಾತಿನಲ್ಲಿ ಏನಾದರು ತಪ್ಪುಗಳಿದೆಯೆ ಎಂದು ಹುಡುಕಲು ಪದೆ ಪದೆ ಅದನ್ನೆ ಕೇಳುತ್ತಾರೆ. ಅರ್ಥವಾಯಿತೆ?’

‘ಆಯಿತು,‘ ಅವಳು ಹೇಳಿದಳು. ಆದರೂ ಅವಳಿಗೆ ಅವೆಲ್ಲ ಸಂಪೂರ್ಣವಾಗಿ ಅರ್ಥವಾಗಲಿಲ್ಲ. ನಾನು ತಪ್ಪು ಮಾಡಲಿ ಎಂದು ಯಾಕೆ ಅವರು ಅಪೇಕ್ಷಿಸುತ್ತಾರೆ, ಎಂದುಕೊಂಡಳು.

‘ನನಗೆ ಈ ವಿಷಯದ ಬಗ್ಗೆ ನೀವು ಇನ್ನೇನಾದರೂ ಹೇಳುವುದು ಇದೆಯೆ?’

‘ಒಂದೆ ಒಂದಿದೆ. ಪವನ್‌ ಎನ್ನುವ ಒಬ್ಬ ವ್ಯಕ್ತಿ ಹಾಗು ನಾನು ಬಾಲ್ಯಸ್ನೇಹಿತರು. ನಿಜ ಹೇಳಬೇಕೆಂದರೆ, ಅವನು ನೆನ್ನೆ ರಾತ್ರಿ ದೀಪಕ್‌ ಜೊತೆ ಊಟಕ್ಕೆ ಹೋಗಿದ್ದಾನೆ. ಒಂದು ದಿನ ರಾತ್ರಿ ಪವನ್‌ ನನ್ನನ್ನು ಡ್ಯಾನ್‌ ಜೊತೆ ನೋಡಿದ. ಅದಾದ ಮೇಲೆ ಅವನು ಇಲ್ಲಿಯವರೆಗೆ ನನ್ನ ಜೊತೆ ಮಾತನಾಡಿಲ್ಲ ಹಾಗು ಯಾವುದೆ ಇಮೇಯ್ಲ್‌ು ಸಹ ಮಾಡಿಲ್ಲ. ಪವನ್‌ ಮತ್ತು ದೀಪಕ್‌ ಇಬ್ಬರೂ ಬನಾರಸ್‌ ಐ.ಐ.ಟಿ.ಯಲ್ಲಿ ಓದಿದವರು ಎಂದು ನನಗೆ ಗೊತ್ತು. ನನ್ನ ಮದುವೆಯಲ್ಲಿ ನಾನೆ ಅವರನ್ನು ಒಬ್ಬರಿಗೊಬ್ಬರಿಗೆ ಪರಿಚಯಿಸಿದ್ದೆ. ಆದರೆ ಅದಾದ ಮೇಲೆ ಅವರಿಬ್ಬರೂ ಪರಸ್ಪರ ಭೇಟಿಯಾಗುತ್ತಿದ್ದದ್ದು ನನಗೆ ಗೊತ್ತಿರಲಿಲ್ಲ.’

ಮೈಕ್‌ ಇವೆಲ್ಲವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ. ‘ಇನ್ನೇನಾದರು ಇದೆಯೆ, ಅನು?’

‘ಮತ್ತೇನೂ ನನಗೆ ಹೊಳೆಯುತ್ತಿಲ್ಲ.’

‘ಸರಿ, ಈಗ ಅವರು ನಾನು ಕೇಳಿದ ಪ್ರಶ್ನೆಗಳನ್ನೆ ತಿರುಗಮರುಗ ಕೇಳುತ್ತಾರೆ. ನಾನು ಆಗಲೆ ಹೇಳಿದ ಹಾಗೆ ಅದೆಲ್ಲ ಪುನರಾವರ್ತನೆಯಂತೆ ಕಾಣಿಸುತ್ತದೆ. ಅವರು ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡಿ. ನೇರವಾಗಿ ಮಾತನಾಡಿ. ಏನನ್ನೂ ಹೆಚ್ಚಿಗೆ ಸೇರಿಸಬೇಡಿ, ಅಥವ ಸುಮ್ಮನೆ ಹೆಚ್ಚಿಗೆ ವಿವರಿಸಲು ಹೋಗಬೇಡಿ. ’ ಮಾರ್ಕ್‌ ಅವಳನ್ನು ಗಂಭೀರವಾಗಿ ನೋಡಿದ. ‘ನಾನು ಏನು ಹೇಳುತ್ತಿದ್ದೇನೆ ಎಂದು ನಿಮಗೆ ಅರ್ಥವಾಗ್ತಿದೆಯೆ?’

ಅನು ಹೌದೆಂದು ತಲೆಯಾಡಿಸಿದಳು. ಅವಳ ಅಂಗೈಗಳು ಬೆವರಲು ಆರಂಭಿಸಿದ್ದವು.

‘ನಾನು ಏನು ಹೇಳುತ್ತಿದ್ದೇನೆ ಅಂದರೆ, ಅವರು ಕೇಳಿದ್ದಕ್ಕಿಂತ ಹೆಚ್ಚಿಗೆ ನೀವು ವಿವರಣೆ ಕೊಡಲು ಹೋಗಬೇಡಿ. ಹಾಗೆಯೆ, ಅವರು ನೀವು ಹೇಳಬೇಕೆಂದುಕೊಂಡದ್ದಕ್ಕಿಂತ ಹೆಚ್ಚಿಗೆ ಹೇಳಿಬಿಡುವಂತೆ ತಂತ್ರಗಳನ್ನು ಮಾಡುತ್ತಾರೆ. ಏನೇನೊ ಕಠಿಣವಾದ ಪ್ರಶ್ನೆಗಳನ್ನೆಲ್ಲ ಕೇಳಿ ನೀವು ಗೊಂದಲಕ್ಕೊಳಗಾಗುವಂತೆ ಮಾಡುತ್ತಾರೆ. ಸರಳವಾದ, ನೇರವಾದ ಉತ್ತರ ಹೇಳುವುದೆ ಸರಿಯಾದ ಮಾರ್ಗ. ತಿಳಿಯಿತೆ? ನೀವು ಬಹಳಷ್ಟನ್ನು ಬಿಟ್ಟುಕೊಡುತ್ತಿದ್ದೀರ ಎಂದು ನನಗೆ ಅನ್ನಿಸಿದರೆ ನಾನು ನಿಮ್ಮ ಮುಂಗೈ ತಟ್ಟುವುದರ ಮೂಲಕ ಸನ್ನೆ ಮಾಡುತ್ತೇನೆ. ಅವರು ಯಾವುದಾದರೂ ಯೋಗ್ಯವಲ್ಲದ ಪ್ರಶ್ನೆಯನ್ನು ಕೇಳಿದರೆ ಆಗ ನಾನು ನಿಮಗೆ ಆ ಪ್ರಶ್ನೆಗೆ ಉತ್ತರಿಸಬೇಡಿ ಎಂದು ನೇರವಾಗಿ ಹೇಳುತ್ತೇನೆ.’

‘ಗೊತ್ತಾಯಿತು,’ ಅನು ವಿಧೇಯತೆಯಿಂದ ಉತ್ತರಿಸಿದಳು. ಅವನೇನು ಹೇಳುತ್ತಿದ್ದಾನೆ ಎಂದರೆ ನಾನು ಬಾಯಿ ಮುಚ್ಚಿಕೊಂಡು ಇರಬೇಕು ಎಂದು. ನಾನು ಯಾವಾಗಲು ಮಾಡುವ ಹಾಗೆ ಸುಮ್ಮನೆ ಮಾತನಾಡುತ್ತಲೆ ಇರಬೇಡ ಎಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+