ವಿಚ್ಛೇದನ ಪಡೆಯಲು ಅನುಗೆ ಹೆತ್ತವರ ಸಲಹೆ

ಈಗ ಎಲ್ಲ ಕರೆಗಳಿಗಿಂತ ಕಷ್ಟವಾದ, ಭಾರತದಲ್ಲಿನ ಅಪ್ಪಅಮ್ಮನಿಗೆ ಕರೆ ಮಾಡುವ ಸಮಯ. ಅತ್ತ ಕಡೆ ಪೋನ್‌ ರಿಂಗುಣಿಸಿತು. ಅನುವಿನ ತಾಯಿ ಉತ್ತರಿಸಿದರು. ''ಅಮ್ಮ, ಅಪ್ಪನಿಗೂ ಈ ಕರೆಗೆ ಸೇರಿಕೊಳ್ಳಲು ತಿಳಿಸುವೆಯ?"" ಅನು ಕೇಳಿದಳು. ಅವಳ ಧ್ವನಿ ಭಾರವಾಗಿತ್ತು. ''ಅಪ್ಪ, ಅಮ್ಮ, ನಾನು ನಿಮಗೆ ಒಂದು ವಿಷಯ ಹೇಳುವುದಿದೆ."" ಒಂದು ಕ್ಷಣ ಅತ್ತ ಕಡೆ ಸಂಪೂರ್ಣ ನಿಶ್ಯಬ್ದ ನೆಲೆಸಿತು. ನೀತು ಏನಾದರೂ ಅವರಿಗೆ ತಿಳಿಸಿದ್ದಾಳೆಯೆ?

''ನಾನು ದೀಪಕ್‌ನನ್ನು ಬಿಟ್ಟು ಬಿಟ್ಟೆ. ಅವನು ನನ್ನನ್ನು ಹಲವಾರು ಸಲ ಹೊಡೆದು, ಅತ್ಯಾಚಾರ ಮಾಡಿದ್ದಾನೆ. ಮತ್ತೆ ಇವತ್ತು, ಇವತ್ತೆ ಬೆಳಿಗ್ಗೆ, ನಾನು ಅವನನ್ನೇನಾದರೂ ಬಿಟ್ಟು ಹೋದರೆ ಕೊಲ್ಲುವುದಾಗಿ ಬೆದರಿಸಿದ್ದಾನೆ.""

''ಅನು, ನೀನು ಕ್ಷೇಮವಾಗಿದ್ದೀಯ ತಾನೆ?"" ತಕ್ಷಣ ಅವಳ ತಂದೆ ಬಹಳ ಕಾಳಜಿ, ಕಳವಳದಿಂದ ಕೇಳಿದರು.

''ನಾನು ಈಗ ಒಂದು ಹೋಟಲ್‌ನಲ್ಲಿ ಇಳಿದುಕೊಂಡಿದ್ದೇನೆ.""

ಮಾತಿಲ್ಲದ ಒಂದು ಕ್ಷಣದ ನಂತರ, ಅವಳ ತಾಯಿ ಮಾತನಾಡಿದರು. ''ನೀನು ಆರೋಗ್ಯವಾಗಿದ್ದೀಯ? ನೀನು ಎಲ್ಲಿ ಇದ್ದೀಯ?""

ಸ್ವಲ್ಪ ಹೊತ್ತಿನ ಮುಂಚೆ ಅವಳು ಹೇಳಿದ್ದು ಅನುವಿನ ಅಮ್ಮನ ಮನಸ್ಸಿಗೆ ಇನ್ನೂ ಇಳಿದಿರಲಿಲ್ಲ. ಭಾರತದಲ್ಲಿ ಅಷ್ಟೊಂದು ಜನ ಸ್ನೇಹಿತರು ಹಾಗು ಮನೆಯವರು ಇರುವಾಗ ಯಾರೂ ಲಾಡ್ಜಿನಲ್ಲಿ ಉಳಿದುಕೊಳ್ಳಲು ಹೋಗುವುದಿಲ್ಲ.

''ನಾನು ಹಿಲ್ಟನ್‌ ಹೋಟೆಲ್‌ನಲ್ಲಿ ಇಳಿದುಕೊಂಡಿದ್ದೀನಿ, ಹಾಗೂ ಕ್ಷೇಮವಾಗಿದ್ದೀನಿ. ನನಗೆ ಪೋಲಿಸ್‌ ಆಧಿಕಾರಿಯಾಗಿರುವ ಒಬ್ಬ ಸ್ನೇಹಿತ ಇದ್ದಾರೆ. ಅವರು ಮನೆಯಿಂದ ನನ್ನ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಬರಲು ಸಹಾಯ ಮಾಡಿದರು.""

''ಅವರು ನಿನ್ನ ಸ್ನೇಹಿತ ಡ್ಯಾನೆ?"" ಈಗ ನಿಜವಾಗಿಯೂ ಆತಂಕದಿಂದ ಅವಳ ತಾಯಿ ಕೇಳಿದರು.

''ಹೌದು, ಅವರು ನನಗೆ ಬಹಳ ಸಹಾಯ ಮಾಡಿದರು.""

ಅವರು ಆಳಲು ಆರಂಭಿಸಿದರು. ''ನಾನು ಅವರ ಜೊತೆ ಮಾತನಾಡಬಹುದೆ?""

''ಅಮ್ಮ, ಅವರು ಈಗ ತಾನೆ ಹೋದರು. ಆಮೇಲೆ ಮತ್ತೆ ನನಗೆ ಕರೆ ಮಾಡುತ್ತಾರೆ. ಆದರೆ ಹೋಗುವುದಕ್ಕಿಂತ ಮುಂಚೆ ನಾನು ಇಲ್ಲಿ ಸಂಪೂರ್ಣ ಸುರಕ್ಷಿತವಾಗಿರುತ್ತೇನೆ ಎಂದು ಖಾತ್ರಿಮಾಡಿಕೊಂಡೆ ಹೋದರು. ನಾನು ಎಲ್ಲಿದ್ದೇನೆ ಎಂದು ದೀಪಕ್‌ ಕಂಡುಹಿಡಿದರೂ ಸಹ ಹೋಟೆಲ್‌ನವರು ಅವನಿಗೆ ರೂಮಿನ ಬೀಗದ ಕೈ ಕೊಡುವುದಿಲ್ಲ. ಈ ದೇಶದಲ್ಲಿ ಹೋಟೆಲ್‌ಗಳು ಬಹಳ ಸುರಕ್ಷಿತವಾಗಿರುತ್ತವೆ. ಆದು ನಿಮಗೂ ಗೊತ್ತು.""

ಈಗ ಅವಳ ಅಪ್ಪ ಮಾತಿಗೆ ತೊಡಗಿದರು. ''ಅನು, ನೀನು ಮತ್ತು ನಾನು ಯಾವಾಗಲೂ ಯಾವುದೇ ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಪರಸ್ಪರ ಹೇಳಿಕೊಂಡೇ ಬಂದಿದ್ದೇವೆ. ಯಾಕೆ ನೀನು ದೀಪಕ್‌ ನಿನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾನೆಂದು ನಮಗೆ ಇಲ್ಲಿಯತನಕ ಹೇಳಲಿಲ್ಲ?""

''ನನ್ನ ಕೈಯಲ್ಲಿ ಆಗಲಿಲ್ಲ! ಇದು ಹೋಗುತ್ತಾಹೋಗುತ್ತಾ ಇಷ್ಟು ಕೆಟ್ಟದಾಗುತ್ತದೆಂದು ನನಗೆ ಗೊತ್ತಾಗಲಿಲ್ಲ. ಅವನು ಯಾವಾಗಲೂ ತನ್ನದು ತಪ್ಪಾಯಿತೆಂದು ಕ್ಷಮೆ ಬೇಡುತ್ತಿದ್ದ. ಅವನು ಬದಲಾಗುತ್ತಾನೆಂದು ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ನೀವು ಯಾವಾಗಲೂ ನನ್ನ ಬಗ್ಗೆ ಚಿಂತೆ ಮಾಡುತ್ತ ಇರುವುದು ನನಗೆ ಇಷ್ಟವಿರಲಿಲ್ಲ.""

''ಅನು, ನಿನಗೆ ಗೊತ್ತು ನಾವು ಎಂದೂ ನಿನ್ನ ಅಥವ ಅವನ ಬಗ್ಗೆ ತಕ್ಷಣದ ತೀರ್ಮಾನಕ್ಕೆ ಬರುವುದಿಲ್ಲ ಎಂದು. ಹೋಗಲಿ ಬಿಡು, ಈಗ ಎಲ್ಲ ಆಗಿಹೋಗಿದೆ. ನಡೆದದ್ದರ ಬಗ್ಗೆ ಚರ್ಚೆ ಮಾಡುವುದು ಬೇಡ. ನೀನು ಈಗ ಹೇಗಿದ್ದೀಯ? ನಿನಗೇನಾದರೂ ಗಾಯವಾಗಿದೆಯಾ?""

''ಅಂತಹದ್ದೇನೂ ಆಗಿಲ್ಲ. ಹೇಳಬೇಕೆಂದರೆ, ಈಗ ನಿಮ್ಮ ಜೊತೆ ಮಾತನಾಡಿದ ಮೇಲೆ ಸ್ವಲ್ಪ ನಿರಾಳ, ನೆಮ್ಮದಿ ಆಯಿತು. ಇಷ್ಟು ದಿನ ಎಲ್ಲಾ ಚೆನ್ನಾಗಿದೆ ಅಂತ ಮಾಡುತ್ತಿದ್ದ ನಟನೆಯೆ ಕಷ್ಟವಾಗಿತ್ತು ನನಗೆ.""

''ಹೋಗಲಿ ಬಿಡು. ಇವತ್ತು ಏನು ಆಯಿತು?""

''ಅವನಿಗೆ ಯಾವುದರ ಬಗ್ಗೆಯೊ ಕೋಪ ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ. ಆಮೇಲೆ ನನ್ನನ್ನು ಗೊಡೆಗೆ ಎಸೆದು ನನ್ನ ಉಸಿರುಗಟ್ಟಿಸಲು ಪ್ರಯತ್ನಿಸಿದ. ನಾನು ಅವನನ್ನೇನಾದರೂ ಬಿಟ್ಟು ಹೋದರೆ ಕೊಲ್ಲುವುದೊ ಮತ್ತೊಂದೊ ಮಾಡುವುದಾಗಿ ಹೇಳಿದ.""

ಆದದ್ದರ ಬಗ್ಗೆ ಸ್ವಲ್ಪ ವಿಚಿತ್ರವೆಂಬಂತೆ ಯಾವುದೇ ಭಾವಾವೇಶ ಇಲ್ಲದೆ ಅದು ಯಾರಿಗೊ ನಡೆದ ಹಾಗೆ ಅಥವ ಅವಳು ಟಿವಿಯಲ್ಲಿ ನೋಡಿದ ಯಾವುದೊ ಧಾರಾವಾಹಿಯ ಕತೆಯನ್ನು ಇನ್ನೊಬ್ಬರಿಗೆ ಹೇಳುವಂತೆ ಅನು ಹೇಳಿದಳು.

''ಅನು..."" ಅವಳಿಗೆ ಅವಳ ತಾಯಿ ಬಿಕ್ಕಳಿಸುವುದು ಕೇಳಿಸಿತು. ''....ನಿನಗೆ ಮನೆಗೆ ವಾಪಸು ಬರಬೇಕೆ? ಅವನು ಅಪಾಯಕಾರಿ ಇರಬಹುದು. ನೀನು ಈಗ ನಮ್ಮ ಜೊತೆ, ನಿನ್ನ ಮನೆಯವರ ಜೊತೆ ಇರಬೇಕು. ಯಾಕೆ ನೀನು ರಜಾ ತೆಗೆದುಕೊಂಡು ವಿಮಾನದ ಟಿಕೆಟ್‌ ಬುಕ್‌ ಮಾಡಿ ಬಂದುಬಿಡಬಾರದು? ನಾವು ನಿನಗೆ ಇದೆಲ್ಲವನ್ನೂ ಮರೆಯಲು ಸಹಾಯ ಮಾಡುತ್ತೇವೆ.""

ಆ ಮಾತು ಅನೂಳನ್ನು ಬಹಳ ತಟ್ಟಿತು. ಅವಳ ಹೃದಯದಲ್ಲಿ ಮನೆಗೆ ಹಿಂದಿರುಗುವ ಬಯಕೆ ಹುಟ್ಟಿತು. ಜೊತೆಯಲ್ಲಿ ಅವಳಿಗೆ ಸ್ವಲ್ಪ ಗೊಂದಲವೂ ಆಯಿತು. ''ನಾನು ಏನು ಮಾಡಬೇಕೆಂದೆ ನನಗೆ ಗೊತ್ತಾಗುತ್ತಿಲ್ಲ. ಇದೆಲ್ಲ ಎಷ್ಟು ಬೇಗ ನಡೆದು ಹೋಯಿತು. ನನಗೆ ಸಹಾಯ ಮಾಡಲು ಡ್ಯಾನ್‌ ಇದ್ದಾರೆನ್ನುವುದೆ ನನಗೆ ಸ್ವಲ್ಪ ನೆಮ್ಮದಿ.""

''ನಿನಗೆ ನಾವೇನಾದರು ಅಲ್ಲಿಗೆ ಬರುವುದು ಬೇಕಾ?"" ಅವಳ ತಂದೆ ಕೇಳಿದರು.

''ನನಗೆ ಗೊತ್ತಿಲ್ಲ. ಅದರ ಬಗ್ಗೆ ಯೋಚಿಸಿ ಹೇಳುತ್ತೇನೆ. ಈಗ ನಾನು ಇಲ್ಲಿ ಹೋಟೆಲ್‌ನಲ್ಲಿ ಇದ್ದೇನೆ. ನಾನು ನಿಮಗೆ ನಾಳೆ ಕರೆ ಮಾಡುತ್ತೇನೆ. ಇದು ನಮಗೆಲ್ಲ ತುಂಬ ಕಷ್ಟದ ಸಮಯ ಎಂದು ನನಗೆ ಗೊತ್ತು. ನನಗೆ ನೀವು ಎಲ್ಲವನ್ನು ತಿಳಿದುಕೊಳ್ಳುವುದು ಬೇಕಿತ್ತು, ಜೊತೆಗೆ ಏನೂ ಚಿಂತೆ ಮಾಡದಿರುವುದು ಸಹ. ನಾನು ಈ ಪರಿಸ್ಥಿತಿಯಿಂದ ಹೊರಗೆ ಬರುತ್ತೇನೆ. ನಾನು ಇದನ್ನು ನಿಭಾಯಿಸಬಲ್ಲೆ ಎಂದು ನಿಮಗೆ ಗೊತ್ತು.""

''ನೀನು ಒಬ್ಬಳೇ ಇರುವುದಕ್ಕೆ ನಮಗೆ ಬಹಳ ನೋವಾಗುತ್ತಿದೆ. ಹೋಗಿ ಸ್ವಲ್ಪ ವಿಶ್ರಾಂತಿ ತಗೊ, ಅನು. ಹಾಗೆಯೆ ದಯವಿಟ್ಟು ನಾಳೆ ಬೆಳಿಗ್ಗೆ ನಮಗೆ ಕರೆ ಮಾಡು ನಿನ್ನ ಬೆಳಿಗ್ಗೆ. ಹ್ಞಾಂ, ಪರವಾಗಿಲ್ಲ, ಯಾವಾಗ ಬೇಕಾದರೂ ಕರೆ ಮಾಡು. ನಾವು ಮತ್ತೆ ಮಾತಾಡೋಣ. ನಾವು ಇರುವುದೆ ನಿನಗೆ ಸಹಾಯ ಮಾಡಲು. ಯಾವುದಕ್ಕೂ ನೀನು ನಿನ್ನ ಈಗಿನ ದೂರವಾಣಿ ಸಂಖ್ಯೆ ಕೊಡು.""

''ದಯವಿಟ್ಟು ನೀವೇನೂ ಚಿಂತೆ ಮಾಡಬೇಡಿ. ನನಗೇನೂ ಆಗುವುದಿಲ್ಲ. ನಾನು ಅತಿಕೆಟ್ಟದ್ದು ಎನ್ನುವುದನ್ನೆಲ್ಲ ನೋಡಿಯಾಯಿತು. ಇದನ್ನು ನಾನು ಖಂಡಿತ ದಾಟುತ್ತೇನೆ. ನನ್ನ ಹೋಟೆಲ್‌ನ ಸಂಖ್ಯೆ.....""

''ಅನು, ವಿಶ್ರಾಂತಿ ತಗೊ."" ಅವಳ ತಂದೆಯ ಧ್ವನಿ ಬಹಳ ಭಾರವಾಗಿತ್ತು.

ಪೋನನ್ನು ವಾಪಸು ಅದರ ಸ್ಥಳದಲ್ಲಿ ಇಡುತ್ತ ಅವಳು ಹಾಸಿಗೆಯ ಮೇಲೆ ಕುಳಿತುಕೊಂಡಳು. ಕಣ್ಣೀರು ಸುರಿಯಲು ಪ್ರಾರಂಭವಾಯಿತು. ನುಗ್ಗಿ ಬಂದ ಮಿಶ್ರಭಾವಗಳಿಂದಾಗಿ ಅಳು ಬಂತು. ಇಂತಹ ಪ್ರೀತಿಸುವ, ಬೆಂಬಲಿಸುವ ತಂದೆತಾಯಿ ಪಡೆಯುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ. ನಾನು ಅವರ ಜೊತೆ ಇರಬೇಕು, ಆಪ್ತರ ಜೊತೆ ಇರಬೇಕು. ಮುಂದಿನ ವಾರ ನಾನು ಭಾರತಕ್ಕೆ ಹೋಗುತ್ತೇನೆ.

ದೀಪಕ್‌ ಅವಳಿಗೆ ಮತ್ತೆ ಕರೆ ಮಾಡುತ್ತಾನೆಯೆ? ಅವಳು ಈಗ ಎಲ್ಲಿದ್ದಾಳೆಂದು ಅವನಿಗೆ ಚಿಂತೆ ಆಗಿದೆಯೆ? ಅವಳು ಹೋಟೆಲ್‌ನಲ್ಲಿ ಸುರಕ್ಷಿತವಾಗಿದ್ದಾಳೆಂದು ಅವಳು ಅವನಿಗೆ ಕರೆ ಮಾಡಿ ತಿಳಿಸಬೇಕೆ? ಯಾವುದರಿಂದ ಸುರಕ್ಷಿತ? ಅವನಿಂದ? ಪೋನು ರಿಂಗುಣಿಸಿತು. ಅವಳಿಗೆ ಗಾಬರಿಯಾಯಿತು. ಅವಳು ಎಲ್ಲಿದ್ದಾಳೆ ಎಂದು ದೀಪಕ್‌ಗೆ ಹೇಗೆ ಗೊತ್ತಾಯಿತು?

''ಅನು..."" ಪೋನಿನಲ್ಲಿ ಅವಳ ಅಮ್ಮನ ನಡುಗುವ ಧ್ವನಿ ಕೇಳಿಸಿತು. ''... ದೀಪಕ್‌ ಏನೇ ಹೇಳಲಿ, ಅವನಲ್ಲಿಗೆ ವಾಪಸು ಮಾತ್ರ ಹೋಗಬೇಡ.""

''ಇಲ್ಲ, ಅಮ್ಮ. ನಾನು ಹೋಗುವುದಿಲ್ಲ. ನೀವಿಬ್ಬರೂ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದಕ್ಕೆ ಬಹಳ ಧನ್ಯವಾದಗಳು. ನೀವು ಬೆಂಬಲಿಸುತ್ತೀರ ಎಂದು ನನಗೆ ಗೊತ್ತಿತ್ತು. ಆದರೆ ನಿಮ್ಮನ್ನೆಲ್ಲ ಇಂತಹ ಸ್ಥಿತಿ ಅನುಭವಿಸುವಂತೆ ಮಾಡಿದ್ದಕ್ಕೆ ನನಗೆ ನಿಜವಾಗಲೂ ಬೇಜಾರಾಗುತ್ತಿದೆ. ನನ್ನನ್ನು ನೋಡಿ ನಗುವಂತಹ ಸಮಾಜದಲ್ಲಿ ನೀವು ಜೀವನ ಮಾಡಬೇಕಿದೆ ಎಂದು ನನಗೆ ಗೊತ್ತು.""

ಅವಳ ಅಮ್ಮ ಅಷ್ಟೊತ್ತಿಗೆ ಧೈರ್ಯ ತಂದುಕೊಂಡಿದ್ದರು. ''ಅನು, ಗಮನ ಇಟ್ಟು ಕೇಳಿಸಿಕೊ,"" ಪರಿಚಿತವಾದ ಅಧಿಕಾರಿಕ ಸ್ವರದಲ್ಲಿ ಅವರು ನುಡಿದರು. ""ನೀನು ಯಾವ ತಪ್ಪೂ ಮಾಡಿಲ್ಲ. ನಿನಗೆ ವಿದ್ಯೆ, ದುಡ್ಡು, ಹಾಗು ನಮ್ಮ ಬೆಂಬಲ ಇದೆ. ಬೇರೆಯವರು ಏನು ಹೇಳುತ್ತಾರೆ ಎಂದು ನಾವು ಲೆಕ್ಕಿಸುವುದಿಲ್ಲ. ನೀನು ಈ ಪರಿಸ್ಥಿತಿಯಿಂದ ಹೊರ ಬರುತ್ತೀಯ. ಕಾಲ ಬದಲಾಗುತ್ತಿದೆ, ಇಲ್ಲೂ ಭಾರತದಲ್ಲೂ ಸಹ. ವಿವಾಹ ವಿಚ್ಛೇದನ ಇಲ್ಲೂ ಈಗ ಸಾಮಾನ್ಯ ಆಗಿಬಿಟ್ಟಿದೆ...""

ವಿವಾಹ ವಿಚ್ಛೇದನ? ನನಗೆ ಬೇಡ. ಅದರ ಬಗ್ಗೆ ಇಲ್ಲಿಯ ತನಕ ನಾನು ಯೋಚನೆಯೆ ಮಾಡಿರಲಿಲ್ಲ.

''....ನೀನು ಅವನನ್ನು ಬಿಟ್ಟು ಬಂದಿದ್ದಕ್ಕೆ ನಮಗೆ ನಿನ್ನ ಮೇಲೆ ನಿಜವಾಗಲೂ ಹೆಮ್ಮೆಯಾಗುತ್ತಿದೆ. ಹೊಡೆಸಿಕೊಳುವುದಕ್ಕೆ ಇಲ್ಲ ಅತ್ಯಾಚಾರ ಮಾಡಿಸಿಕೊಳ್ಳುವುದಕ್ಕೆ ಯಾರೂ ಅರ್ಹರಲ್ಲ. ಧೈರ್ಯವಾಗಿರು! ನಾನು ಹೇಳುವುದು ನಿನಗೆ ಕೇಳಿಸುತ್ತಿದೆಯಾ? ಒಬ್ಬ ಮನುಷ್ಯ ಕ್ಷಮೆ ಕೇಳಿದ ಮಾತ್ರಕ್ಕೆ ಅವನಲ್ಲಿಗೆ ವಾಪಸು ಹೋಗಬೇಡ. ""

ವಿಚ್ಛೇದನ ಎನ್ನುವ ಪದವನ್ನು ಕೇಳಿಯೆ ಇರದ ಸಂಸ್ಕೃತಿಯಿಂದ ಬಂದವಳು ಅನು. ನನಗೇ ಯಾಕೆ ಇದೆಲ್ಲ ಆಗುತ್ತಿದೆ? ''ಹೌದು, ಧನ್ಯವಾದ, ಅಮ್ಮ,"" ಅಳುತ್ತ ಹೇಳಿದಳು. ''ನಾನು ಕೇಳಿಸಿಕೊಳ್ಳುತ್ತಿದ್ದೇನೆ.""

ಆದರೆ ಅವರಿಗೆ ಮತ್ತಷ್ಟು ದೃಢೀಕರಣ ಬೇಕಿತ್ತು. ''ನಿನಗೆ ಒಬ್ಬಳೆ ಹೋಟೆಲಿನಲ್ಲಿ ಇರುವುದಕ್ಕೆ ಆಗುತ್ತದೆಯೆ?""

''ಹೌದು, ಇಲ್ಲಿ ನಾನು ಬಹಳ ಸುರಕ್ಷಿತವಾಗಿದ್ದೇನೆ. ನನ್ನ ಬಗ್ಗೆ ಚಿಂತೆ ಮಾಡಬೇಡಿ. ನಾನು ನಾಳೆ ಕರೆ ಮಾಡುತ್ತೇನೆ.""

ಅವಳ ಅಪ್ಪ ಹಾಗು ಅಮ್ಮ ಅವಳಿಗೆ ನಾವು ನಿನ್ನನ್ನು ಪ್ರೀತಿಸುತ್ತೇವೆ ಎಂದೊ ಇಲ್ಲ ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತೇವೆ ಎಂದೊ ಎಂದೂ ಹೇಳುತ್ತಿರಲಿಲ್ಲ. ಅಪ್ಪಅಮ್ಮ ಮತ್ತು ಮಕ್ಕಳ ನಡುವೆ ಆ ಮಾತು ಎಂದೂ ನುಸುಳಿರಲಿಲ್ಲ. ಅದು ಕೇವಲ ತಿಳಿದುಕೊಳ್ಳುವಂತಹುದು.

ಅಧ್ಯಾಯ - 32 ಅಧ್ಯಾಯ - 34

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+