ರೂಪಾ ದೀಪಕ್‌ನನ್ನು ಕೊಲೆ ಮಾಡಿದಳೇ...?


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ದೀಪಕ್‌ನ ಸಾವಿನ ವಿಷಯ ತಿಳಿಸಲು ರೂಪ ಅಸ್ಪತ್ರೆಯಿಂದ ಅನೂಗೆ ಕರೆ ಮಾಡಿದ್ದಳು. ದೀಪಕ್‌ನ ಕಾರು ಬೆಟ್ಟದ ರಸ್ತೆಯ ತಡೆಗೋಡೆಯಿಂದ ಕೆಳಗೆ ಉರುಳಿ ಬಿದ್ದಿದೆ ಹಾಗೂ ಅಪಘಾತದ ಸ್ಥಳಕ್ಕಿಂತ ಸ್ವಲ್ಪವೇ ದೂರದಲ್ಲಿ ರಸ್ತೆಯ ಮೇಲೆ ಟೈರ್‌ ಬದಲಾಯಿಸುವ ಕಬ್ಬಿಣದ ರಾಡ್‌ ಒಂದು ಸಿಕ್ಕಿದೆ ಎಂದು ಅನೂಳಿಗೆ ಡ್ಯಾನ್‌ ಹೇಳಿದ್ದ. ಅದನ್ನೆ ಟಿವಿಯಲ್ಲಿನ ವಾರ್ತಾ ವರದಿಗಾರನೂ ದೃಢೀಕರಿಸಿದ್ದ. ಹಾಗೂ, ಅಂದು ರಾತ್ರಿ ದೀಪಕ್‌ ಪವನ್‌ನ ಜೊತೆ ಊಟ ಮಾಡಿದ್ದ.

ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಲ್ಲಿ ಕಾರಿನಲ್ಲಿಯೆ ಕುಳಿತು ಅನು ಹಲವಾರು ವಿಷಯಗಳನ್ನು ಪರ್ಯಾಲೋಚಿಸುತ್ತಿದ್ದಳು. ಪವನ್‌ ಯಾಕೆ ದೀಪಕ್‌ನ ಜೊತೆ ಊಟ ಮಾಡುತ್ತಿದ್ದ? ಅಪಘಾತವಾದ ಮೇಲೆ ಆ ವಿಷಯ ತಿಳಿಸಲು ಡ್ಯಾನ್‌ ದೀಪಕ್‌ನ ಮನೆಗೆ ಹೋದಾಗ ರೂಪ ಹೊರಗೆ ಹೋಗಲು ಸಿದ್ಧವಾಗಿರುವಂತೆ ಬಟ್ಟೆ ಧರಿಸಿಕೊಂಡಿದ್ದಳು. ಯಾಕೆ? ಎಲ್ಲಿಗೆ ಹೋಗಲು?

ಅಂದು ಬೆಳಿಗ್ಗೆ ತಾನು ರೂಪಾಳನ್ನು ಭೇಟಿಯಾಗಿದ್ದರೆ ಚೆನ್ನಾಗಿತ್ತು ಎಂದು ಅನು ಅಂದುಕೊಂಡಳು. ಆದರೆ ಅವಳ ಸೆಲ್‌ಫೋನ್‌ ಸಿಗ್ನಲ್‌ ನಿಂತುಹೋದ ನಂತರ ಆ ಮನೆಯ ಒಳಗೆ ಕಾಲಿಡಲು ಅನೂಳಿಗೆ ಬಹಳ ಭಯವಾಗಿತ್ತು. ಬರುತ್ತೇನೆ ಎಂದು ಹೇಳಿ ಬೆಳಿಗ್ಗೆಯೂ ಅವಳಿಗೆ ರೂಪಾಳನ್ನು ನೋಡಲು ಆಗಿರಲಿಲ್ಲ. ಮತ್ತೆ ಈಗ, ಆಸ್ಪತ್ರೆಯಲ್ಲಿ ಬಂದು ಭೇಟಿಯಾಗುತ್ತೇನೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ವಾಪಸು ಹಿಂದಿರುಗುತ್ತಿದ್ದಾಳೆ. ಡ್ಯಾನ್‌ ಪೋಲಿಸ್‌ ಕೆಲಸಕ್ಕೆ ಸೇರಿಕೊಂಡು ಈಗ ಒಂದು ವರ್ಷಕ್ಕೂ ಮೇಲಾಗಿದೆ. ಅವನ ಆ ಅನುಭವಿ ಪೋಲಿಸ್‌ ಬುದ್ಧಿ ಸಹ ಇಲ್ಲಿ ಕೇವಲ ಅಪಘಾತಕ್ಕಿಂತ ಮಿಗಿಲಾದದ್ದು ಏನೋ ಇದೆ ಎನ್ನುತ್ತಿದೆ.

ನನಗೆ ರೂಪ ಬಹಳ ಚೆನ್ನಾಗಿ ಗೊತ್ತಿದ್ದಾಳೆಯೆ? ನಾನು ಅವಳನ್ನು ನಂಬುತ್ತೇನೆಯೆ? ಅವಳನ್ನು ಕಾಣಲು ನಾನು ಇಲ್ಲಿಗೆ ಬರಲೇಬಾರದಾಗಿತ್ತು. ಅವಳು ಇಲ್ಲಿಯ ತನಕ ಬರುತ್ತೇನೆ ಎಂದು ಮಾತು ಕೊಟ್ಟು ಬರದೆ ಹೋಗಿರಲಿಲ್ಲ. ಅದೂ ರೂಪಾಳ ವಿಷಯಕ್ಕೇ ಯಾಕೆ ಹೀಗೆ? ಅದೂ ಒಂದೇ ದಿನದಲ್ಲಿ ಎರಡು ಸಲ?

ಅನು ತನ್ನ ಮನೆಗೆ ವಾಪಸಾಗಿ, ಕಾರನ್ನು ಗರಾಜಿನಲ್ಲಿ ನಿಲ್ಲಿಸಿದಳು. ಮನೆಯ ಒಳಗೆ ಬಂದು, ಟಿವಿಯಲ್ಲಿ ಮಾಮೂಲಿನಂತೆ ಓಪ್ರಾ ವಿನ್‌ಫ್ರೇಯ ಕಾರ್ಯಕ್ರಮವನ್ನು ಹಾಕಿದಳು. ಆತ್ಮಸ್ಥೈರ್ಯ ಹೆಚ್ಚಿಸುವ ಓಪ್ರಾಳ ಉಪಸ್ಥಿತಿ ಮನೆಯನ್ನೆಲ್ಲ ತುಂಬಿತು. ಮನೆಯ ಫೋನಿನ ಆನ್ಸರಿಂಗ್‌ ಯಂತ್ರದತ್ತ ಗಮನ ಹೋಯಿತು. ಅದರಲ್ಲಿ ಕೆಂಪು ದೀಪ ಮಿನುಗುತ್ತಿತ್ತು. ಅಪರಾಧಿ ಭಾವನೆಯಲ್ಲಿ ನಿಟ್ಟುಸಿರು ಬಿಟ್ಟಳು. ನಾನು ಇನ್ನೂ ಯಾಕೆ ಆಸ್ಪತ್ರೆಗೆ ಬಂದಿಲ್ಲ ಎಂದು ರೂಪ ಯೋಚನೆ ಮಾಡುತ್ತಿರಬಹುದು.

ರೂಪಾಳಿಂದ ಫೋನ್‌ ಕರೆ ಬರಲು ಪ್ರಾರಂಭವಾದಾಗಿನಿಂದ, ಫೋನ್‌ ಶಬ್ದ ಮಾಡಿದ ಪ್ರತಿಸಲವೂ ಅನೂ ಉದ್ವೇಗಕ್ಕೊಳಗಾಗುತ್ತಿದ್ದಳು. ರೂಪಾಳಿಗೆ ಏನೋ ಆಗಿದೆ, ರೂಪ ಅಪಾಯದಲ್ಲಿದ್ದಾಳೆ, ಹೀಗೆ. ಆದರೆ ಈಗ ಅದೆಲ್ಲವೂ ಕೊನೆಯಾಗಿದೆ. ಆಕೆ ಸುರಕ್ಷಿತವಾಗಿದ್ದಾಳೆ. ದೀಪಕ್‌ ಅವಳಿಗೆ ಇನ್ನು ಯಾವ ರೀತಿಯಲ್ಲೂ ಅಪಾಯ ಮಾಡುವ ಸ್ಥಿತಿಯಲ್ಲಿ ಇಲ್ಲ.

ಹೋಗಿ ರೂಪಾಳಿಗೆ ಸಹಾಯ ಮಾಡಲು ಅನು ಮತ್ತೊಮ್ಮೆ ಕಾತರಗೊಂಡಳು. ಎದ್ದುಹೋಗಿ ಅಡಿಗೆಕೋಣೆಯ ಮೇಜಿನ ಮುಂದೆ ಕುಳಿತಳು. ರೂಪಾಳೆಡೆಗಿನ ಅವಳ ಜವಾಬ್ದಾರಿ ನಿಜವಾಗಲೂ ಪ್ರಾರಂಭವಾಗಿದ್ದು ಎಂದಿನಿಂದ? ಈಗ ದೀಪಕ್‌ ಚಿರನಿದ್ರೆಗೆ ಜಾರಿಕೊಂಡ ನಂತರ ಆ ಜವಾಬ್ದಾರಿ ಮುಗಿದಂತಾಯಿತೆ? ಅಥವಾ ರೂಪಾಳಿಗೆ ಅನೂಳ ಸಹಾಯ ಎಂದಿಗಿಂತ ಹೆಚ್ಚಿಗೆ ಬೇಕಿರುವುದು ಈಗಲೆ ಏನು? ಮತ್ತೆ ಅವಳು ಅದೇ ಮೂಲಪ್ರಶ್ನೆಗೆ ಬಂದು ನಿಂತಳು: ರೂಪ ದೀಪಕ್‌ನನ್ನು ಕೊಂದಳೆ?

ಮತ್ತೆ ಅವಳ ಸೆಲ್‌ಫೋನ್‌ ರಿಂಗುಣಿಸಿತು. ಡ್ಯಾನ್‌ ಎಂದು ಪರದೆ ತೋರಿಸಿತು.

ನಾನು ಮನೆಯಲ್ಲಿದ್ದೇನೆ, ಡ್ಯಾನ್‌.

ಅದನ್ನು ಕೇಳಿ ನನಗೆ ನಿರಾಳವಾಯಿತು. ಇದು ಅಪಘಾತಕ್ಕಿಂತ ಹೆಚ್ಚಾಗಿ ಕೊಲೆ ಪ್ರಕರಣ ಎಂದೆ ಕಾಣಿಸುತ್ತಿದೆ.

ನಿಜವಾಗಲೂ? ಯಾಕೆ?

ಯಾಕೆ ಎನ್ನುವುದನ್ನು ನಾವು ಕಂಡುಹಿಡಿಯುತ್ತೇವೆ. ಅಥವಾ, ನಾವು ಎನ್ನುವುದಕ್ಕಿಂತ ಅವರು ಎನ್ನಬೇಕು ನಾನು. ಯಾಕೆಂದರೆ ಅಧಿಕೃತವಾಗಿ ನಾನು ಈ ಕೇಸಿನಲ್ಲಿ ಇಲ್ಲ.

ಆಗಿದ್ದರೆ ನೀನು ಯಾಕೆ ಇನ್ನೂ ಮನೆಗೆ ಬಂದಿಲ್ಲ. ಅವರೆ ಕಂಡುಹಿಡಿಯಲಿ.

ನನಗೆ ಸ್ವಲ್ಪ ಯೋಚನೆ ಆಗಿದೆ, ಹಲ್ಲುಕಚ್ಚಿಹಿಡಿದು ಹೇಳಿದ. ಇದರಲ್ಲಿ ನಿನ್ನ ಪಾಲು ಇಲ್ಲ ಎಂದು ಹೇಳಲು ನಿನಗೆ ಯಾವ ಸಾಕ್ಷ್ಯವೂ ಇಲ್ಲ, ರೂಪಾಳಿಗೂ ಇಲ್ಲ. ಜೊತೆಗೆ ರೂಪ ಬೇರೆ ದೀಪಕ್‌ನನ್ನು ಕಂಡರೆ ಆಗದ ಇರುವ ವ್ಯಕ್ತಿಗಳಲ್ಲಿ ನಿನ್ನನ್ನು ಹೆಸರಿಸಿದ್ದಾಳೆ, ಎಂದು ಅಮೇರಿಕನ್ನರು ಬಳಸುವ ದೈನಂದಿನ ಇಂಗ್ಲಿಷ್‌ ಮಾದರಿಯಲ್ಲಿ ಹೇಳಿದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+