ಲೇಕ್ ಗಳ ವಿಸ್ಮಯ ಲೋಕವಿದು - ಫಿನ್ ಲ್ಯಾಂಡ್

ಮೊದಲು ಕೇಳಿದಾಗ 'ಹೌದೇ?' ಎಂಬ ವಿಸ್ಮಯಭರಿತ ಪ್ರಶ್ನೆಯನ್ನು ಮನಸ್ಸಿನಲ್ಲಿ ಮೂಡಿಸುವ ಈ ನಾಡಿಗೆ 'ಫಿನ್ ಲ್ಯಾಂಡ್' ಎನ್ನುತ್ತಾರೆ. ಈ ಪ್ರಶ್ನೆಗೆ ಕಾರಣ ಮತ್ತು ಉತ್ತರವೆಂಬಂತೆ ಒಂದು ಲಕ್ಷ, ಎಂಬತ್ತೇಳು ಸಾವಿರದ, ಎಂಟುನೂರಾ ಎಂಬತ್ತೆಂಟು ಸರೋವರಗಳು ಇಲ್ಲಿ ಇವೆ...ಅಚ್ಚರಿಯಾಗದೇ ಇರುತ್ತಾ?

ಅಚ್ಚುಕಟ್ಟಾಗಿ, ಸ್ವಚ್ಛವಾಗಿ, ಶಿಸ್ತಿನಿಂದ ಹರಿದಾಡುವ ರಸ್ತೆಯಂಚಿನಲ್ಲಿ ನಡೆಯುತ್ತ ಹೋದರೆ ' ಅಗೋ ಅಲ್ಲೊಂದು ...ಇಗೋ ಇಲ್ಲೊಂದು ' ಎಂಬಂತೆ ಸರೋವರಗಳು ಎದುರಾಗುತ್ತದೆ, ಮುಗುಳ್ನಗೆ ಸೂಸುತ್ತವೆ.

Travel experience of Jayashree Deshpande - Finland tour

ಕಸಕಡ್ಡಿಗಳ ಸುಳಿವೇ ಇಲ್ಲದೆ ಸ್ಫಟಿಕ ಶುಭ್ರ ನೀರಿನಲ್ಲಿ ಆಗೀಗ ಇಣುಕುವ ಸೂರ್ಯ ಕಣ್ಣುಗಳಿಗೆ ಮಿಂಚು ಹೊಡೆಸುತ್ತಾನೆ, ಬರೀ ನೀರೇಕೆ? ನಮ್ಮತ್ತಲೂ ದೃಷ್ಟಿ ಹಾಯಿಸಿ ಎಂದು ಕೈ ಬೀಸುವ ಹಚ್ಚ ಹಸುರು ಕಾನನ ನೀಲಿಬಾನಿನ ಹಿನ್ನೆಲೆಯಲ್ಲಿ ಹಗುರವಾಗಿ ತೇಲುತ್ತಿರುವ ಮೋಡಗಳ ಸೆರಗನ್ನು ತಲೆಯ ಮೇಲೆ ಹೊದ್ದು ಮಂತ್ರ ಮುಗ್ಧವಾಗಿಸುವ ಸೃಷ್ಟಿ ಸಿರಿಯಿದು!

ದಂಡೆಗುಂಟ ನವಿರುಗಲ್ಲುಗಳ ಮಾಲೆ ಸರೋವರದ ನೀರಿಗೆ ತನ್ನ ಚೌಕಟ್ಟಿನ ರಕ್ಷಣೆ ಕೊಟ್ಟಂತೆ ಕಾವಲಿಗೆ ನಿಂತಂತಿದೆ...ಅದರೊಟ್ಟಿಗೆ ನೀರ ಹೊರವಲಯದಲ್ಲೂ, ನೀರ ಮಧ್ಯದಲ್ಲಿ ನಡುಗಡ್ಡೆಯಾಗಿ ಎದ್ದು ನಿಂತ ಪುಟ್ಟ ನೆಲದಲ್ಲೂ ಸಮೃದ್ಧವಾಗಿ ಬೆಳೆದು ನಿಂತ ಹಸಿಕಾಡಿನ ಚೂಪು ಚೂಪು ಕೋನಿಫೆರಸ್ ಮರಗಳ ವಯ್ಯಾರದ ವೈಖರಿಗೆ ಖುಷಿಯಾಗಿಬಿಡುತ್ತದೆ.

ಕಿರಿದಾಗಿ ಬೀಸುವ ಸುಳಿಗಾಳಿಗೆ ಇಷ್ಟಿಷ್ಟೇ ಅಲುಗುತ್ತ ಮನಸೆಳೆಯುತ್ತದೆ! ಯಾರೋ ಹೇಳಿದಂತೆ ಬಣ್ಣ ಬಳಿದುಕೊಂಡು ಎದ್ದು ನಿಂತ ಅಸಂಖ್ಯಾತ ಹೂಗಿಡಗಳು ಒಮ್ಮೆ ತಮ್ಮನ್ನು ಮೂಸಿನೋಡಲು ಆಹ್ವಾನಿಸುತ್ತವೆ.

Travel experience of Jayashree Deshpande - Finland tour

ಹೌದು,ಹೆಚ್ಚು ಕಡಿಮೆ ಕರ್ನಾಟಕದಷ್ಟೇ ವಿಸ್ತೀರ್ಣ ಹೊಂದಿರುವ ಇಲ್ಲಿ ಇರುವ ಸರೋವರಗಳು ಈ ಭೂಭಾಗದ ಮುಖ್ಯ ಅಂಶ, ಜೀವನಾಧಾರ ಜಲಸ್ರೋತ. ಜೀವನಾಡಿ.

ಉತ್ತರದಲ್ಲಿ ನಾರ್ವೆ, ಪಶ್ಚಿಮಕ್ಕೆ ಸ್ವೀಡನ್, ಪೂರ್ವದಲ್ಲಿ ರಷ್ಯಾಗಳನ್ನು ಗಡಿದೇಶಗಳಾಗಿ ಹೊಂದಿರುವ ಈ ಶಾಂತ ಭೂಭಾಗ ಸದ್ದಿಲ್ಲದಂತೆ ಅಸಂಖ್ಯ ಅಭಿವೃದ್ಧಿಯ ಬೀಡಾಗಿದೆ.

ಅದೇ ರೀತಿ ಗುಲ್ಲು ಗಲಾಟೆ ಇಲ್ಲದೆ ಎಬ್ಬಿಸಿ ನಿಲ್ಲಿಸಿರುವ ಆರೆಂಟು Nuclear Reactor ಗಳು ಈ ದೇಶಕ್ಕೆ ಅಗತ್ಯವಾದ ವಿದ್ಯುತ್ ಪೂರೈಕೆಯನ್ನು ಸಮಥ೯ವಾಗಿ ನಡೆಸಿವೆ.

ಅತ್ಯಾಧುನಿಕ, ಸಕಲ ಸೌಲಭ್ಯಗಳನ್ನು ತನ್ನ ಪ್ರಜೆಗಳಿಗೆ ನೀಡಬಯಸುವ ಈ ನಾಡು ಇಲ್ಲಿ ಯಾರೂ 'ಭಿಕ್ಷುಕರು' ಆಗುವ ಪರಿಸ್ಥಿತಿಯನ್ನು ತರ ಬಯಸುವುದಿಲ್ಲ. ಹಾಗಾಗಿಯೇ ಇದೊಂದು ವೆಲ್ಫೇರ್ ಸ್ಟೇಟ್ (welfare state) ಅನಿಸಿಕೊಂಡಿದೆ.

ತನ್ನದೇ ಆದ ಸಾಂಸ್ಕೃತಿಕ ನೆಲೆವೀಡಿನ ಶ್ರೀಮಂತಿಕೆಯಿರುವ ಫಿನ್ ಲ್ಯಾಂಡಿಗೆ ಆರು ಬಾರಿ ಹೋಗಿ ಬಂದಿರುವ ನನಗೆ ಇಂದಿಗೂ ಈ ನೆಲ ಹೊಸಹೊಸದೇ ಅನಿಸುವುದು ಸುಳ್ಳು ಅಲ್ಲವೇ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+