ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಹ್ಲಾದ್ ಆಚಾರ್ಯ ಸಿಂಗಪುರದಲ್ಲಿ ಸೃಷ್ಟಿಸಿದ ಇಂದ್ರಜಾಲ

By ರೇಖಾ ಹೆಗಡೆ ಬಾಳೇಸರ
|
Google Oneindia Kannada News

ಇರುವುದನ್ನು ಇಲ್ಲವಾಗಿಸಿ, ಇಲ್ಲದಿರುವುದರಿಂದ ಇರುವಿಕೆ ಸೃಷ್ಟಿಸಿ.... ಕಣ್ಣಿಗೆ ಕಾಣುತ್ತಿರುವುದೂ ಸುಳ್ಳೋ, ನಿಜವೋ ಎನ್ನುವುದು ತಿಳಿಯದಷ್ಟು ಮೋಡಿಯೊಳಗೆ ಮುಳುಗಿಸುವ ಕಲೆ ಇಂದ್ರಜಾಲ. ಅದೂ ಇದೂ ವಸ್ತುಗಳ ಜೊತೆಗೆ ನೋಡುಗರ ಕಣ್ಣು, ಬುದ್ಧಿ, ಮನಸ್ಸುಗಳನ್ನು ಭ್ರಮೆಯ ಲಹರಿಯೊಳಗೆ ಮಾಯ ಮಾಡುವ ಅದ್ಭುತ ಕಣ್ಕಟ್ಟು ಕೌಶಲ್ಯ ಇದು.

ಇಂಥದೇ ಒಂದು ಮನೋಹರ ಇಂದ್ರಜಾಲ ಪ್ರದರ್ಶನ 'ಮಾಯ-ಛಾಯ' ಕಳೆದ ವಾರಾಂತ್ಯದಲ್ಲಿ ಸಿಂಗಪುರದಲ್ಲಿ ನಡೆಯಿತು. ಅಕ್ಟೋಬರ್ 13ರ ಸಂಜೆ ಕನ್ನಡ ಸಂಘ (ಸಿಂಗಪುರ) ಹಾಗೂ Woodlands CCಯ ಆಶ್ರಯದಲ್ಲಿ ಕರ್ನಾಟಕದ ಪ್ರಸಿದ್ಧ ಜಾದುಗಾರ ಪ್ರಹ್ಲಾದ ಆಚಾರ್ಯ ಅವರು ಜಾದು, ಮಾತನಾಡುವ ಗೊಂಬೆ ಮತ್ತು ನೆರಳು-ಬೆಳಕಿನಾಟದ ಮೂಲಕ ಸಿಂಗಪುರದ ಕನ್ನಡಿಗರನ್ನು ಮಂತ್ರಮುಗ್ಧರನ್ನಾಗಿಸಿದರು. ತಮ್ಮ ಹಾಸ್ಯಪ್ರಜ್ಞೆಯ ಬಲದಿಂದ ನಗೆಗಡಲಿನಲ್ಲಿ ತೇಲಿಸಿದರು.

Prahlad Acharya magic mesmerizes Singapore

ಮೊದಲಿಗೆ ಪ್ರೇಕ್ಷಕವರ್ಗದ ಮಕ್ಕಳನ್ನೂ ತೊಡಗಿಸಿಕೊಂಡು ಹಗ್ಗದ ಜೊತೆಗಿನ ಕೈಚಳಕ, ರಿಂಗ್ ಜಾದು, ಎಲೆಯ ಮಾಯಾಜಾಲ ಇವುಗಳನ್ನು ಪ್ರದರ್ಶಿಸಿದ ಆಚಾರ್ಯ ಅವರು ಈ ಮೂಲಕ ಸಮಸ್ತ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಇದರ ನಂತರ ವೇದಿಕೆಯಲ್ಲಿ ಅವರ ಜೊತೆಗೂಡಿದ್ದು ಮಾತನಾಡುವ ಗೊಂಬೆ 'ಕಿಟ್ಟಿ'. ಕಿಟ್ಟಿಯ ವಾಕ್ಚಾತುರ್ಯ, ಹಾವಭಾವ, ಹಾಸ್ಯಗಳು ಪ್ರೇಕ್ಷಕರಲ್ಲಿ ನಗೆಯ ಧಾರೆ ಹರಿಸಿದವು. ಮಕ್ಕಳಂತೂ ಬಿದ್ದು, ಬಿದ್ದು ನಗುತ್ತಿದ್ದುದು ಸಾಮಾನ್ಯವಾಗಿತ್ತು. ಈ ಮೂಲಕ ವೆಂಟ್ರಿಲೋಕಿಸಂನಲ್ಲಿ ಆಚಾರ್ಯ ಅವರಿಗಿರುವ ಚಾತುರ್ಯ ಸಿಂಗನ್ನಡಿಗರ ಮನಸೂರೆಗೊಂಡಿತು.

ತದನಂತರ ಪ್ರಹ್ಲಾದ ಆಚಾರ್ಯ ಅವರು ಪ್ರದರ್ಶಿಸಿದ್ದು ನೆರಳು-ಬೆಳಕಿನಾಟ. ತಮ್ಮೆರಡು ಕೈ-ಬೆರಳುಗಳು ಮತ್ತು ಪುಟ್ಟದೊಂದು ಬೆಳಕಿನ ಮೂಲದ ಮೂಲಕ ವೇದಿಕೆಯ ಮೇಲಿನ ಬಿಳಿ ಪರದೆಯ ಮೇಲೆ ಹೊಸದೊಂದು ಲೋಕವನ್ನೇ ಅವರು ಸೃಷ್ಟಿಸಿದರು. ಹಳ್ಳಿಯೊಂದರ ಮುಂಜಾನೆಯ ಸೊಗಸನ್ನು ಕಣ್ಣೆದರು ಮೂಡಿಸಿದ ಅವರು ಅದಕ್ಕೆ ತಕ್ಕ ದನಿಗಳ ಬಳಕೆ, ವ್ಯಾಖ್ಯಾನದಿಂದ ಗಮನ ಸೆಳೆದರು.

ನಂತರ 'ಭಾದ್ರಪದ ಶುಕ್ಲದಾ ಚೌತಿಯಂದು' ಹಾಡಿನ ಹಿನ್ನೆಲೆಯಲ್ಲಿ 'ಶ್ಯಮಂತಕೋಪಾಖ್ಯಾನ'ದ ಕತೆಗೆ, 'ಧರಣಿ ಮಂಡಲ ಮಧ್ಯದೊಳಗೆ' ಹಾಡಿನ ಹಿನ್ನೆಲೆಯಲ್ಲಿ ಪುಣ್ಯಕೋಟಿಯ ಕತೆಗೆ ಅದ್ಭುತವಾಗಿ ಜೀವ ತುಂಬಿದ ಅವರು, ಈ ಅಪರೂಪದ ಪ್ರದರ್ಶನಕ್ಕೆ ಪ್ರೇಕ್ಷಕರಿಂದ 'ಸ್ಟಾಂಡಿಂಗ್ ಓವೇಶನ್'ಗೆ ಪಾತ್ರರಾದರು. ಅವರ ಕೈ (ಬೆ)ನೆರಳಿನಲ್ಲಿ ಮೂಡಿದ ಹುಲಿ-ಹಸು, ಕರಡಿ-ಕೃಷ್ಣ ಮತ್ತಿತರ ಪಾತ್ರಗಳು ಮಕ್ಕಳಿಂದ ಮುದುಕರವರೆಗೆ ಎಲ್ಲರನ್ನೂ ಬೆರಗುಗೊಳಿಸಿದವು.

ಕಾರ್ಯಕ್ರಮದ ನಡುವೆಯೇ ಸಿಂಗನ್ನಡಿಗ ಮಕ್ಕಳಿಗಾಗಿ ಇಂದ್ರಜಾಲ ವಿ‌ಷಯದ ಕುರಿತ 'ರಸಪ್ರಶ್ನೆ' ಕಾರ್ಯಕ್ರಮವೂ ಏರ್ಪಾಡಾಗಿತ್ತು. ಪಾಲ್ಗೊಂಡ ಏಳು ತಂಡಗಳ ಪೈಕಿ ನಿಶಾಂತ ಹೆಗಡೆ, ಅನನ್ಯ ಬಾಳೆಹಿತ್ಲು, ಜ್ಯೋತ್ಸ್ನರಾಮಕೃಷ್ಣ ಇವರ ತಂಡ ಮೊದಲ ಸ್ಥಾನ ಪಡೆದರೆ, ಕ್ಷೀರಜಾ, ದಿವ್ಯನ್ ಪವಾರ್ ಹಾಗೂ ರಾಹುಲ್ ಖಡಕೆ ಅವರ ತಂಡ ಎರಡನೆಯ ಸ್ಥಾನ ಪಡೆಯಿತು. ಗೆಲುವು ಪಡೆದ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೆ ಕನ್ನಡ ಸಂಘದ ಪರವಾಗಿ ಪ್ರಹ್ಲಾದ ಆಚಾರ್ಯ ಅವರು ಪ್ರಶಸ್ತಿ ವಿತರಿಸಿದರು.

ಸಂಘದ ಪರವಾಗಿ ಆಚಾರ್ಯ ಅವರನ್ನು ಸಿಂಗಪುರದ ಸೆಂಬವಾಂಗ್ ಜಿ.ಆರ್.ಸಿ. (ವುಡ್ ಲ್ಯಾಂಡ್ಸ್) ಸಂಸದೆ ಎಲೀನ್ ಲೀ, ಡೇವಿಡ್ ಸಿಮ್ ಬಿಬಿಎಮ್ ಸಿಸಿಸಿ ಚೇರ್ಮನ್ ಅವರೊಡಗೂಡಿ ಸನ್ಮಾನಿಸಿದರು. ಕಾರ್ಯಕ್ರಮವು ವಿದುಷಿ ಭಾಗ್ಯಮೂರ್ತಿ ಅವರ ಮುಂದಾಳತ್ವದಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಇಡೀ ಕಾರ್ಯಕ್ರಮವನ್ನು ಶೀತಲ್ ಭಾರದ್ವಾಜ್ ಬಹು ಸೊಗಸಾಗಿ ನಿರೂಪಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ ಅವರು ಸ್ವಾಗತ ಭಾಷಣ ಮಾಡಿದರೆ, ಕಾರ್ಯಕಾರಿ ಸಮಿತಿ ಸದಸ್ಯೆ ಸಾಧ್ವಿ ಸಂಧ್ಯಾ ಅವರು ಆಭಾರ ಮನ್ನಣೆ ಮಾಡಿದರು.

English summary
Famous magician from Karnataka Prahlad Acharya mesmerizes Singapore Kannadigas with his magic tricks on 13th October, 2013. He was invited to Singapore by Kannada Sangha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X