ಸಿಂಗಪುರದಲ್ಲಿ ಚೇತೋಹಾರಿ 'ಚೇತಾಸ್' ನಾದವೈಭವ

Posted By: ಸಿಂಗಪುರ ಸುದ್ದಿವಾಹಿನಿ
Subscribe to Oneindia Kannada

ಸಿಂಗಪುರ, ಅಕ್ಟೋಬರ್ 29 : ಯುವ ಕಲಾಭಾರತಿ ಪ್ರಶಸ್ತಿಗೆ ಭಾಜನರಾಗಿರುವ, ಸಿಂಗಪುರದವರೇ ಆದ ಕರ್ನಾಟಕ ಸಂಗೀತ ಪ್ರವೀಣೆ ವಿದುಷಿ ವೈಷ್ಣವಿ ಆನಂದ್ ಅವರ ನೇತೃತ್ವದಲ್ಲಿ "ಚೇತಾಸ್" ತಂಡದ ಶಿಷ್ಯವೃಂದವು ಶಾಸ್ತ್ರೀಯ ಸಂಗೀತ ವಾದ್ಯಗೋಷ್ಠಿಯನ್ನು ಪ್ರಸ್ತುತ ಪಡಿಸಿತು.

ಹಿಂದುಸ್ಥಾನಿ ರಾಗ ಕಾಪಿಯಲ್ಲಿದ್ದ ಪುರಂದರ ದಾಸರ 'ಜಗದೋದ್ಧಾರನ' ಕೃತಿಯನ್ನು ಶಾಸ್ತೀಯ ಮತ್ತು ನವೀನ ಶೈಲಿಗಳ ಸಂಗಮದೊಂದಿಗೆ ಸಿಂಹದ ಮರಿಗಳು ನಿರ್ವಹಿಸಿದ ಬಗೆ ವರ್ಣಿಸಲಸದಳ. ಗಾಯನ, ತಬಲಾ, ವಯಲಿನ್, ಮೃದಂಗ, ಕೀಬೋರ್ಡ್, ಚಂಡೆ, ಕೊಳಲು ವಿವಿಧ ವಾದ್ಯಗಳ ಸಮ್ಮಿಲನದ ಈ ಗೋಷ್ಠಿಯ ನಾದ ವೈಭವಪ್ರೇಕ್ಷಕರನ್ನು ಮೈಮರೆಸಿ ತಲ್ಲೀನರಾಗಿಸಿತು. [ಈರ ಮಾರ ಆಡುವ ಕನ್ನಡದಲ್ಲಿದೆ ಶ್ರೀಮಂತಿಕೆ : ಕೃಷ್ಣೇಗೌಡ]

Mesmerizing music and dance at Singara Sammelana

ರುದ್ರಮನೋಹರ ಭದ್ರಕಾಳಿ

ನಂತರ ವೇದಿಕೆಯ ಮೇಲೆ ಆಗಮಿಸಿದ Ocean Kids ತಮ್ಮ ಅದ್ಭುತವಾದ, ಸೃಜನಶೀಲ ನೃತ್ಯವಾದ "ನೃತ್ಯ ವಿಸ್ಮಯ"ವನ್ನು ಪ್ರದರ್ಶಿಸಿ ರಂಜಿಸಿದರು. 1989ರಲ್ಲಿ ಉದಯಗೊಂಡ ಕನ್ನಡ ಕರಾವಳಿಯ ಕೂಸುಗಳಾದ "ಕಡಲ ಮಕ್ಕಳು" ತಂಡ ತಮ್ಮ ಪೌರಾಣಿಕ ಕಥನಗಳನ್ನು ನೃತ್ಯ ರೂಪಕಗಳನ್ನು ಪ್ರದರ್ಶಿಸುವದರಲ್ಲಿ ಹೆಸರಾದ ತಂಡ.

ಕಾಳಿ, ಶಿವನ ಕಥನಗಳನ್ನು ಸುಂದರ ನಾಟಕೀಯ ಪರಿಕಲ್ಪನೆಗಳ ಮೂಲಕ ಮತ್ತು ವಿವಿಧ ಬಗೆಯ ವಿನ್ಯಾಸ, ದೃಶ್ಯ, ಸಂಗೀತ, ದನಿ, ಬೆಳಕು ಮತ್ತು ವಸ್ತ್ರವಿನ್ಯಾಸಗಳ ಸೊಬಗಿನ ಮಿಶ್ರಣ ಮಾಡಿ ತೋರಿಸುವ ಕಡಲ ಮಕ್ಕಳ 'ಭದ್ರಕಾಳಿ' ಪ್ರದರ್ಶನ ತುಂಬಾ ಅದ್ಭುತವಾಗಿತ್ತು. ಸಿಂಗನ್ನಡಿಗರ ಮನದಲ್ಲಿ ಉತ್ಪತ್ತಿಯಾದ ಹರುಷೋಲ್ಲಾಸ ಅವರ ಪ್ರಚಂಡ ಕರತಾಡನದಲ್ಲಿ ಪ್ರತಿಫಲನಗೊಂಡಿತು.

ಮಾಹಿತಿ ತಂತ್ರಜ್ಞರಿಂದ ಕನ್-ಫ್ಯೂಜ಼ನ್!

ವಿಶ್ವೇಶ್ ಭಟ್ ನೇತೃತ್ವದಲ್ಲಿ ಟೆಕ್ಕಿಗಳ ತಂಡ 'ಸ್ವರಾಮೃತ'ದವರಿಂದ ಶಾಸ್ತ್ರೀಯ ಸಂಗೀತವನ್ನು ಆಧಾರವಾಗಿಟ್ಟುಕೊಂಡ ಲಘು ಸಂಗೀತ, ಸ್ಯಾಂಡಲ್ ವುಡ್ ಹಾಗು ಹಾಲಿವುಡ್ ಸಂಗೀತಗಳ ಮಿಶ್ರಣದ ಕನ್ನಡ ಹಾಡುಗಳ "Kan-fusion" ಪ್ರೇಕ್ಷಕರನ್ನು ಕನ್ಫ್ಯೂಸ್ ಮಾಡದೆ, ಆನಂದ ಸಾಗರದಲ್ಲಿ ಮುಳುಗಿಸಿತು. ಹಿಂದೂಸ್ಥಾನಿ ಸಂಗೀತದ ಜೋಗ್ ರಾಗದಲ್ಲಿ ದುಮ್ಮಿಕ್ಕಿದ ಸಂಗೀತಧಾರೆಯ ಜೊತೆಯಲ್ಲಿಯೇ ಹಾಸ್ಯರಸಾಯನ ಹದವಾಗಿ ಬೆರತು ಮೇಘಮಲ್ಹಾರದಲ್ಲಿ ತೇಲುವಂತೆ ಮಾಡಿದ ಕನ್ನಡ ಸಮ್ಮಿಲನ ಸಂಗೀತದ ಗಾನಸುಧೆ ಎಲ್ಲರನ್ನೂ ಮೈಮರೆಸಿತು.

Mesmerizing music and dance at Singara Sammelana

ಮಳೆಬಿಲ್ಲಿನ ಮೇಲೇರುವ, ಆಕಾಶಕೆ ಕೈ ಚಾಚುವ

ಗಾನ ಕೋಗಿಲೆ ಡಾ. ಭಾಗ್ಯಮೂರ್ತಿ ನೇತೃತ್ವದ ತಂಡ, ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕಾಗಿಯೇ ವಿಶೇಷವಾಗಿ ರಚಿಸಲ್ಪಟ್ಟ ಕವಿ ಶ್ರೀ ಗಿರೀಶ್ ಜಮದಗ್ನಿಯವರ "ಮಳೆಬಿಲ್ಲಿನ ಮೇಲೇರುವ, ಆಕಾಶಕೆ ಕೈ ಚಾಚುವ" ಎಂಬ ಮಧುರ ಗೀತೆಯನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು.

ಶಿಸ್ತಿನ ಸುಂದರ ಸಿಂಗಪುರ ಮತ್ತು ಗಂಧದ ನಾಡಾದ ಕನ್ನಡನಾಡಿನಿಂದ ಬಂದವರ ನಡುವೆ ಬೆಸೆಯಲ್ಪಟ್ಟ ಬಂಧ ಹೀಗೆಯೇ ಭಾವಪೂರ್ಣವಾಗಿ ಬೆಳೆಯುತ್ತಿರಲಿ, ಸಿರಿಗನ್ನಡ ಮತ್ತು ಸಿಂಗನ್ನಡದ ತೇರು ಭವಿಷ್ಯದಲ್ಲಿಯೂ ಅಷ್ಟೇ ಭದ್ರವಾಗಿ ಸಾಗುತ್ತಿರಲಿ ಎಂಬ ಆಶಯವನ್ನು ಸುಲಲಿತವಾಗಿ ವ್ಯಕ್ತಪಡಿಸುವ ಈ ಸುಂದರ ಗೀತೆಗೆ ಅಷ್ಟೇ ಮಧುರವಾಗಿ, ರಸವತ್ತಾಗಿ ರಾಗ ಸಂಯೋಜನೆ ಮಾಡಿದ ಡಾ. ಭಾಗ್ಯಮೂರ್ತಿ, ಸಂಗೀತ ನೀಡಿದ ಕಿಶೋರ್ ಮೂರ್ತಿ ಹಾಗು ಇಂಪಾಗಿ, ಸುಶ್ರಾವ್ಯವಾಗಿ ಹಾಡಿದ ಅವರ ತಂಡ, ನೆರೆದ ಎಲ್ಲ ಸಿಂಗನ್ನಡಿಗರ ಹೃದಯವನ್ನು ಮುಟ್ಟಿತು ಎಂದರೆ ಅತಿಶಯೋಕ್ತಿಯೇನಲ್ಲ.

ಮನಸೂರೆಗೊಂಡ ಜಾನಪದದ ಮೆರವಣಿಗೆ

ಮಧ್ಯಾಹ್ನದ ಕಾರ್ಯಕ್ರಮ ಭವ್ಯ ಜಾನಪದ ಮೆರವಣಿಗೆಯೊಂದಿಗೆ ಆರಂಭವಾಯಿತು. ಕರ್ನಾಟಕದ ಶತಮಾನಗಳ ಪರಂಪರೆಯ ಜೀವಂತ ದ್ಯೋತಕ ಜಾನಪದ ಕಲೆಗಳು. ನಮ್ಮ ಭೂತಕಾಲದ ಭವ್ಯ ಸಂಸ್ಕೃತಿಯನ್ನು ಇಂದಿಗೂ ಸೊಗಸಾಗಿ ಎತ್ತಿ ಹಿಡಿಯುವ ಕಾರ್ಯವನ್ನು ನಮ್ಮ ಜಾನಪದ ಕಲೆಗಳು ಮಾಡಿ, ಜಗತ್ತಿಗೆ ನಮ್ಮ ಸಂಸ್ಕೃತಿಯ ಸಿರಿಯನ್ನು ಪರಿಚಯಿಸುತ್ತಿವೆ. ಇಂತಹ ಜಾನಪದ ಕಲೆಗಳ ಮೆರವಣಿಗೆಯನ್ನು ಆಯೋಜನೆ ಮಾಡಿ ಕನ್ನಡ ಸಂಘ (ಸಿಂಗಪುರ) ಜಾನಪದ ಜಗತ್ತಿಗೆ ಹೃತ್ಪೂರ್ವಕ ನಮನ ಸಲ್ಲಿಸಿತು.

Mesmerizing music and dance at Singara Sammelana

ಈ ಕಾರ್ಯಕ್ರಮಕ್ಕೆ ದೊರೆತ ಕರ್ನಾಟಕ ಸರ್ಕಾರದ ವಿಶೇಷ ಬೆಂಬಲ ಅವಿಸ್ಮರಣೀಯ. ಈ ವಿಶೇಷವಾದ ಮೆರವಣಿಗೆಯಲ್ಲಿ ಕನ್ನಡ ನೆಲದ ಪರಂಪರೆಯ ವಿವಿಧತೆಯನ್ನು ಡೊಳ್ಳು ಕುಣಿತಗಾರರು, ವೀರಗಾಸೆಯವರು, ನೀಲಗಾರರು, ಲಂಬಾಣಿಯರು, ತಮಟೆ ವಾದ್ಯಗಾರರು ತಮ್ಮ ವಿಶೇಷವಾದ ಕಲೆ ಮತ್ತು ವೇಷಭೂಷಣಗಳಿಂದ ಪ್ರಚುರಪಡಿಸಿ ಜನಮನ ಸೂರೆಗೊಂಡರು. ಮುಖ್ಯವಾದ ವಿಶೇಷವೇನೆಂದರೆ, ಸಿಂಗಪುರದ ಪ್ರಸಿದ್ಧ ಜಾನಪದ ನೃತ್ಯವಾದ "ಲಯನ್ ಡಾನ್ಸ್" ಕೂಡ ಈ ಮೆರವಣಿಗೆಯಲ್ಲಿ ಭಾಗವಹಿಸಿ ಶೋಭೆ ತಂದಿತು.

ಸಿಂಗಪುರದ ಸಾಂಸ್ಕೃತಿಕ ಶ್ರೀಮಂತಿಕೆ

ನಂತರ ಸಿಂಗಪುರದ ಅರ್ಥ ಮತ್ತು ಕಾನೂನು ವಿಭಾಗದ ಹಿರಿಯ ಮಂತ್ರಿ ಇಂದ್ರಾಣಿ ರಾಜಾ ಅವರು ಆಗಮಿಸಿದರು. ವೇದಿಕೆಯ ಮೇಲೆ ರಾಮಕೃಷ್ಣ ಮಠದ ಸ್ವಾಮಿ ವಿಮುಕ್ತಾನಂದ ಮತ್ತು ಕನ್ನಡದ ಪ್ರಸಿದ್ಧ ಕಾದಂಬರಿಕಾರ ಡಾ. ಎಸ್ ಎಲ್ ಭೈರಪ್ಪ ಅವರು ಉಪಸ್ಥಿತರಿದ್ದರು. ಕನ್ನಡ ಸಂಘ ಸಿಂಗಪುರದ ಅಧ್ಯಕ್ಷ ವಿಜಯರಂಗಪ್ರಸಾದ್ ಮತ್ತು ಖಜಾಂಚಿ ಸುಮನ ಹೆಬ್ಬಾರ್ ಅವರು ಇಂದ್ರಾಣಿ ರಾಜಾ ಹಾಗೂ ಸ್ವಾಮಿ ವಿಮುಕ್ತಾನಂದ ಅವರಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಗೌರವಿಸಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಶ್ರೀಮತಿ ಇಂದ್ರಾಣಿ ರಾಜಾ ಅವರು "ಸಿಂಗಪುರ ಒಂದು ವಿಶ್ವದ ಎಲ್ಲ ಜನರು ಬಂದು ಸೇರುವ "ಕರಗುವ ಮೂಸೆ (ಮೆಲ್ಟಿಂಗ್ ಪಾಟ್)" ಮತ್ತು ಅವರ ಆಗಮನ ಮತ್ತು ಇರುವಿಕೆಯಿಂದ ಸಿಂಗಪುರದ ಸಾಂಸ್ಕೃತಿಕ ಶ್ರೀಮಂತಿಕೆ ಇನ್ನೂ ಹೆಚ್ಚು ಬೆಳಗುತ್ತದೆ" ಎಂದು ಅಭಿಪ್ರಾಯಪಟ್ಟರು.

ಮತ್ತೊಮ್ಮೆ ವೇದಿಕೆಯ ಮೇಲೆ ಆಗಮಿಸಿದ "ಕಡಲ ಮಕ್ಕಳು" ತಮ್ಮ ಅದ್ಭುತವಾದ, ಸೃಜನಶೀಲ ನೃತ್ಯವಾದ "ಗಣೇಶ ವಂದನೆ"ಯನ್ನು ಪ್ರದರ್ಶಿಸಿ ರಂಜಿಸಿದರು. ವಿವಿಧ ಬಗೆಯ ವಿನ್ಯಾಸ, ದೃಶ್ಯ, ಸಂಗೀತ, ದನಿ, ಬೆಳಕು ಮತ್ತು ವಸ್ತ್ರ ವಿನ್ಯಾಸಗಳ ಸೊಬಗಿನ ಮಿಶ್ರಣದಿಂದ ಒಡಗೂಡಿದಮಕ್ಕಳ ಗಣೇಶ ವಂದನೆ ಪ್ರದರ್ಶನ ಸಭಿಕರನ್ನೆಲ್ಲಾ ರೋಮಾಂಚನಗೊಳಿಸಿತು. ಉನ್ನತ ಮಟ್ಟದ ನಾಟ್ಯ ಕಲೆ, ಅಭಿನಯ ಮತ್ತು ಸಂಗೀತಗಳ ಹದವಾದ ಮಿಶ್ರಣ ಈ ಪ್ರದರ್ಶನಕ್ಕೆ ಮೆರುಗು ತಂದಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Sangha Singapore has organized Singara Sammelana on the occation it's 20th Anniversary. Kids from Singapore, under the guidance of Vaishnavi Anand Chetas, a musical extravaganza. Kan-fusion Vishwesh Bhat and fusion dance by Ocean Kids enthral the Kannada audience at Singapore Polytechnic convension hall.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ