ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಲ್ಲಾಸ್ ನಲ್ಲಿ ಮಲ್ಲಿಗೆ ಕನ್ನಡಿಗರ ಘಮಘಮ ಯುಗಾದಿ!

ಗಿಡ, ಮರ ಬಳ್ಳಿಗಳು ಹೊಸ ಎಲೆಯನ್ನು ಮೈದುಂಬಿಸಿಕೊಂಡು ನಳನಳಿಸುತ್ತಿರುವಂತೆ ಮಲ್ಲಿಗೆ ಕನ್ನಡ ಸಂಘವೂ ಹೊಸ ಸದಸ್ಯರಿಂದ ಕೂಡಿ ಉತ್ಸಾಹವನ್ನು ಮೈದುಂಬಿಸಿಕೊಂಡಿದೆ. ಹೊಸ ಹುಮ್ಮಸ್ಸಿನಿಂದ ಎಲ್ಲರೂ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.

By ಮೀನಾ ಭಾರದ್ವಾಜ್
|
Google Oneindia Kannada News

ಡಲ್ಲಾಸ್ ಕನ್ನಡಿಗರಿಗೆ ವಸಂತ ಬಂದೊಡನೆ ಯುಗಾದಿಯ ಆಚರಣೆ ಪ್ರಾರಂಭ. ಮನೆಯ ಮಟ್ಟದಲ್ಲಿ, ಸ್ನೇಹಿತರ ಗುಂಪಿನಲ್ಲಿ, ಸಂಘ ಸಂಸ್ಥೆಗಳೊಡನೆ ಹೆಚ್ಚು ಕಡಿಮೆ ಒಂದು ತಿಂಗಳಾದರೂ ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವ ರೀತಿಯಲ್ಲಿ ಆಚರಿಸುತ್ತಲೇ ಇರುತ್ತಾರೆ. ಆದರೆ ಸ್ಥಳೀಯ ಕನ್ನಡ ಸಂಘವಾದ ಮಲ್ಲಿಗೆ ಕನ್ನಡ ಸಂಘದಲ್ಲಿ ಆಚರಿಸುವುದು ಒಂದು ವಿಶೇಷವೇ.

ಇಲ್ಲಿ ನಗರದ ಎಲ್ಲ ಭಾಗದ ಸ್ನೇಹಿತರು ಹೊಸ ಹಾಗು ಹಳೆ ಸದಸ್ಯರು ಭೇಟಿ ಆಗುವ ಸಂದರ್ಭ. ಹಾಗಾಗಿ ಇದಕ್ಕೆ ಹೆಚ್ಚು ಆಕರ್ಷಣೆ. ಕವಿ ವಾಣಿ 'ಸುರಲೋಕದ ಸುರನದಿಯಲಿ ಮಿಂದು, ಸುರಲೋಕದ ಸಂಪದವನು ತಂದು, ನವ ಸಂವತ್ಸರ ಭೂಮಿಗೆ ಬಂದು ಕರೆಯುತಿದೆ ನಮ್ಮನು ಇಂದು! ಎನ್ನುವಂಥ ಆತ್ಮೀಯ ಕರೆಯೋಲೆ ಸಂಘದ ಹೊಸ ಸಮಿತಿಯಿಂದ ಬಂದಿತ್ತು.

Mallige Kannada Sangha celebrates Ugadi in Dallas

ಗಿಡ, ಮರ ಬಳ್ಳಿಗಳು ಹೊಸ ಎಲೆಯನ್ನು ಮೈದುಂಬಿಸಿಕೊಂಡು ನಳನಳಿಸುತ್ತಿರುವಂತೆ ನಮ್ಮ ಸಂಘವೂ ಹೊಸ ಸದಸ್ಯರಿಂದ ಕೂಡಿ ಉತ್ಸಾಹವನ್ನು ಮೈದುಂಬಿಸಿಕೊಂಡಿದೆ. ಇದರ ನೇತೃತ್ವವನ್ನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀವತ್ಸ ರಾಮನಾಥನ್ ಅವರು ಈ ಸಂಘದ ಚುಕ್ಕಾಣಿಯನ್ನು ಮೂರನೇ ಬಾರಿಗೆ ಹಿಡಿದಿದ್ದಾರೆ.

ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಬಿಸಬೇಕು ಎನ್ನುವುದು ಶ್ರೀವತ್ಸ ಹಾಗು ಸಮಿತಿಯ ನಿರ್ಧಾರ. ಅದರಂತೆ ಜಾಕ್ ಸಿಂಗ್ಲಿ ಸಭಾಂಗಣದಲ್ಲಿ 3:30ಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಲಾವಣ್ಯ ಚೇತನ್ ಸರಳವಾಗಿ ಮತ್ತು ಚೊಕ್ಕವಾಗಿ ಹೊಸ ಸಮಿತಿಯ ಪರವಾಗಿ ಸದಸ್ಯರೆಲ್ಲರನ್ನೂಕಾರ್ಯಕ್ರಮಕ್ಕೆ ಸ್ವಾಗತಿಸಿದರು.[ಮಲ್ಲಿಗೆ ಕನ್ನಡ ಸಂಘದ ಯುಗಾದಿ ಸಂಭ್ರಮ]

Mallige Kannada Sangha celebrates Ugadi in Dallas

ಬಹು ಬಾರಿ ಕಾರ್ಯಕ್ರಮ ಮುಗಿದ ನಂತರ ರಾಷ್ಟ್ರಗೀತೆಯನ್ನು ಹೇಳುವ ಪರಿಪಾಠ. ಅದಕ್ಕೆ ಹೊರತಾಗಿ ಹಾಗು ಸ್ಥಳೀಯ ಫುಟಬಾಲ್ ಹಾಗು ಇತರೆ ಕಾರ್ಯಕ್ರಮಗಳಲ್ಲಿ ನಡೆಯುವ ಹಾಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಶುರು ಮಾಡಲಾಯಿತು. ಅಮೆರಿಕಾ ಹಾಗು ಭಾರತದ ರಾಷ್ಟ್ರಗೀತೆಗಳನ್ನು ಹಾಡಲು ಮುಂದಾಳತ್ವವನ್ನು ಚಿ. ನಮ್ರತಾ ಶ್ರೀವತ್ಸ ವಹಿಸಿದರೆ, ಸಭಾಂಗಣದಲ್ಲಿದ್ದ ಜನರು ಅವಳಿಗೆ ಸ್ವರ ಜೋಡಿಸಿದರು.

ಸ್ಥಳೀಯ ಕನ್ನಡ ಶಾಲೆಗಳಲ್ಲಿ ಒಂದಾದ ಬಾಲದತ್ತ ಕನ್ನಡ ಶಾಲೆಯ ಮಕ್ಕಳು 'ತಾಯಿ ಶಾರದೆ ಲೋಕ ಪೂಜಿತೆ' ಹಾಡನ್ನು ವಾದ್ಯಗಳೊಂದಿಗೆ ನುಡಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು. ಮಕ್ಕಳಿಗೆ ಮಾರ್ಗದರ್ಶನವಿತ್ತವರು ಚೈತ್ರ ಶ್ರೀಧರ್, ದೇವಿ ಹಿಪ್ಪರಗಿ ಹಾಗು ನಮ್ರತಾ ಅವಿನಾಶ್. ನಿತ್ಯಾ ಮಂಜುನಾಥ್ ನಿರ್ದೇಶಿಸಿದ್ದ ಚಿಣ್ಣರ ಚಿಲಿಪಿಲಿ ನೃತ್ಯದಲ್ಲಿ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟ ಪುಟಾಣಿಗಳು ಚೆಂದದ ಹೆಜ್ಜೆಗಳನ್ನು ಇಟ್ಟರು. ಜನಪ್ರಿಯ ಹಾಡುಗಳಲ್ಲಿ ಒಂದಾದ ನಿಸಾರ್ ಅಹಮದ್ ಅವರು ರಚಿಸಿರುವ 'ಬೆಣ್ಣೆ ಕದ್ದ ನಮ್ಮ ಕೃಷ್ಣ' ಹಾಡಿಗೆ ಅರುಂಧತಿ ಹಾಗು ಪರಿಮಳ ಅವರ ನೇತೃತ್ವದಲ್ಲಿ ಮಕ್ಕಳು ಅತ್ಯುತ್ಸಾಹದಲ್ಲಿ ಪಾಲ್ಗೊಂಡರು.

Mallige Kannada Sangha celebrates Ugadi in Dallas

ನಂತರ ಕಾರ್ಯಕ್ರಮಗಳ ಪ್ರಾಯೋಜಕರು ಹಾಗು ದಾನಿಗಳನ್ನು ಅನು ಬೆನಕಟ್ಟಿ ಅವರು ಪ್ರಶಂಸಿಸಿ ವೇದಿಕೆಯ ಮೇಲೆ ಅಭಿನಂದಿಸಿದರು. ಎಸ್ ಜಾನಕಿ ಅವರು ಹಾಡಿರುವ ಎವರ್ ಗ್ರೀನ್ ಹಾಡುಗಳಲ್ಲಿ ಒಂದಾದ 'ಗಿಲಿ ಗಿಲಿ ಗಿಲಕ್ಕ' ಹಾಡಿಗೆ ಉತ್ತರ ಕರ್ನಾಟಕದಲ್ಲಿ ಲಾವಣಿಗೆ ತೊಡುವಂತಹ ಬಣ್ಣ ಬಣ್ಣದ ಕಚ್ಚೆ ಸೀರೆಯನ್ನು ಧರಿಸಿ, ಮೂಗಿಗೆ ಮುತ್ತಿನ ನತ್ತನ್ನು ಇಟ್ಟು ಲವಲವಿಕೆಯಿಂದ ನಲಿದರು ಲಲನಾಮಣಿಗಳು. ಇದನ್ನು ಅಪ್ಪಟ ಉತ್ತರ ಕರ್ನಾಟಕದ ಶೈಲಿಯಲ್ಲಿ ಪ್ರಸ್ತುತ ಪಡಿಸಲು ಸಹಾಯವಾದವರು ವಿದ್ಯಾ ಆದ್ಯ ರವರು.[ಡಲ್ಲಾಸ್ ನಲ್ಲಿ ನಾಗಶ್ರೀ ಸಂಗೀತ ಆರಂಗ್ರೇಟಮ್]

ನಂತರ ಬಂದ ಮಕ್ಕಳು 'ಎದೆಯೊಳಗೆ ಗಿಟಾರು' ಹಾಡಿಗೆ ಹೊಳೆಯುವ ಅಂಗಿಗಳನ್ನು ತೊಟ್ಟು ರಾಕ್ ಬ್ಯಾಂಡ್ ಶೈಲಿಯಲ್ಲಿ ನೃತ್ಯ ಮಾಡಿ ವೀಕ್ಷಕರನ್ನು ಆಕರ್ಷಿಸಿದರು. ನಂತರ ಬಂದ ಕಾರ್ಯಕ್ರಮ ಕಾಮನಬಿಲ್ಲು. ಇದರಲ್ಲಿ ಭಾಗವಹಿಸಿದ ಮಕ್ಕಳು ಹಾಡುಗಳನ್ನು ಸ್ವತಃ ತಾವೇ ಹಾಡಿ, ಹಾಡಿಗೆ ಹೆಜ್ಜೆ ಹಾಕಿದರೆ, ಇದನ್ನು ನಿರ್ದೇಶಿಸಿದ್ದ ರೇಖಾ ಪ್ರಕಾಶ್ ಅವರು, ವೇದಿಕೆ ಮೇಲೆ ಕ್ಯಾನ್ವಾಸ್ ಇಟ್ಕೊಂಡು ಕುಂಚದೊಂದಿಗೆ ವರ್ಣರಂಜಿತ ಚಿತ್ತಾರವನ್ನು ಮೂಡಿಸಿದರು. ಈ ತೈಲ ವರ್ಣದ ಚಿತ್ರವನ್ನು ಸ್ಥಳದಲ್ಲೇ ಹರಾಜು ಹಾಕಿ ಬಂದ ಹಣವನ್ನು ದೇಣಿಗೆ ಕೊಡುವ ಉದ್ದೇಶವಿದೆಯೆಂದು ಘೋಷಿಸಿದರು.

Mallige Kannada Sangha celebrates Ugadi in Dallas

ಅಧ್ಯಕ್ಷರ ಭಾಷಣ : ತಮ್ಮ ಧ್ಯೇಯ ಹಾಗು ಬರುವ ವರ್ಷಗಳ ಯೋಜನೆಯನ್ನು ಶ್ರೀವತ್ಸ ರಾಮನಾಥನ್ ಅವರು ವಿವರಿಸಿದರು. ಈ ಕನ್ನಡದ ದೀವಿಗೆಯನ್ನು ಹಾಗು ನಾಯಕತ್ವವನ್ನು ಯುವ ಮುಂದಾಳುಗಳಿಗೆ ಹಾಗು ಮುಂದಿನ ಪೀಳಿಗೆಗೆ ನಡೆಸಿಕೊಂಡು ಹೋಗಲು ಬೆಂಬಲಿಸುವುದಾಗಿ ತಿಳಿಸಿದರು. ಸಂಘವು ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ, ದತ್ತಿ ಕಾರ್ಯಗಳಲ್ಲಿ ಭಾಗವಹಿಸುವುದಾಗಿ ಹೇಳಿದರು.

ಲಾಭರಹಿತ ಸಂಸ್ಥೆಗಳಲ್ಲಿ ಒಂದಾದ ಮಲ್ಲಿಗೆ ಕನ್ನಡ ಸಂಘದ ವಿಶೇಷ ಚೇತನಗಳಿಗೆ ಸ್ಥಾಪಿಸರುವ ಸಂಸ್ಥೆ 'ನಿರೀಕ್ಷೆ'. ಇದು ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿದೆ. ಈ ವರ್ಷ ಮಲ್ಲಿಗೆ ಕನ್ನಡ ಸಂಘವು 'ನಿರೀಕ್ಷೆ' ಸಂಸ್ಥೆಗೆ ನೆರವಾಗಲು ಮುಂದಾಗಿದೆ ಎಂದು ತಿಳಿಸಿ ತಾವು ಈ ಸಂಸ್ಥೆಗೆ ಭೇಟಿ ಇತ್ತಾಗ ತಮ್ಮ ಅನುಭವ ಹೇಗಿತ್ತು ಎಂದು ಅವರು ವಿವರಿಸಿದರು. ಈ ಸಂಸ್ಥೆಯ ವಿವರ ಉಳ್ಳ ಒಂದು ಕಿರು ಚಿತ್ರವನ್ನು ತೋರಿಸಲಾಯಿತು.

Mallige Kannada Sangha celebrates Ugadi in Dallas

ನಂತರ ಬಂದದ್ದು ಹಾಸ್ಯ ನಾಟಕ 'ಸ್ಯಾಂಡಲ್ವುಡ್ ಸಕ್ಕು'. ದುಷ್ಯಂತ ಶಕುಂತಲೆಯ ಕಥೆಯನ್ನು ಕನ್ನಡದ ಚಲನಚಿತ್ರ ಗೀತೆಗಳ ಮೂಲಕ ಹಾಸ್ಯ ಪ್ರಧಾನವಾಗಿ ಪ್ರಸ್ತುತ ಪಡಿಸಿದರು. ಚೈತ್ರ ಶ್ರೀಧರ್ ಅವರು ಹೇಳಿದ ಒಂದು ಸಣ್ಣ ದೃಶ್ಯಾಂತದಿಂದ ಪ್ರೇರಿತರಾಗಿ, ಸಂದರ್ಭೋಚಿತವಾಗಿ ಉಪಯೋಗಿಸಿದ ಗೀತೆಗಳು, ವಿದ್ಯಾ ಪೆರುವಾಜೆ ಹಾಗು ರಾಜ್ ಜಲವಾಡಿ ಅವರ ನೃತ್ಯ ಹಾಗು ಅಭಿನಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ವೀಣಾ ಅರವಿಂದ್, ಅರವಿಂದ್ ಕಶ್ಯಪ್ ಹಾಗು ಮಧು ಐಯಂಗಾರ್ ಅವರ ಅಭಿನಯಗಳು ಪೂರಕವಾಗಿದ್ದವು. ರಜಿನಿ ಕಿರಣ್ ಲವಲವಿಕೆಯಿಂದ ಸೂತ್ರಧಾರಿ ಪಾತ್ರವನ್ನು ನಿರ್ವಹಿಸಿದರು.

ರಸ ಸಂಜೆ : ಈ ಬಾರಿಯ ಕಾರ್ಯಕ್ರಮದ ಪ್ರಮುಖ ಭಾಗ ಸ್ಥಳೀಯ ಕಲಾವಿದರಿಂದ ಕೂಡಿದ ರಸ ಸಂಜೆ. ಎರಡು ಬಾರಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ವಿಜೇತ ವಿಜಯೆಂದ್ರ ರಾವ್, ಸ್ಥಳೀಯ ರೇಡಿಯೋ ಸಂಸ್ಥೆ ನಡೆಸುವ ಹಾಡಿನ ಸ್ಪರ್ಧೆಯಲ್ಲಿ ಇತ್ತೀಚೆಗೆ ಗೆದ್ದಿರುವ ಸುಮೀತ್, ಹಲವಾರು ಖಾಸಗಿ ಆಲ್ಬಂಗಳಿಗೆ ಹಾಡಿರುವ, ಪ್ರಸಿದ್ಧ ಗಾಯಕರೊಡನೆ ಸಹಗಾಯಕಿಯಾಗಿ ಭಾಗವಹಿಸಿ ಅನುಭವವಿರುವ ಅಪರ್ಣ ನರೇಂದ್ರ ಅವರು ತಮ್ಮ ಗಾಯನದೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು.

Mallige Kannada Sangha celebrates Ugadi in Dallas

ಅಪರ್ಣ ತನ್ನ ಸುಶ್ರಾವ್ಯ ಕಂಠದಿಂದ 'ದೀಪವು ನಿನ್ನದೆ'ಯನ್ನು ಹಾಡಿದರೆ, ಸುಮೀತ್ 'ಸಂತೋಷಕ್ಕೆ ಹಾಡು ಸಂತೋಷಕ್ಕೆ' ಹಾಡನ್ನು ಹಾಡಿ ಇಡೀ ಪ್ರೇಕ್ಷಕವೃಂದವನ್ನು ಮತ್ತೊಮ್ಮೆ ವೇದಿಕೆಯೆಡೆ ಸೆಳೆದರು. ಯಾವುದೇ ಮುನ್ಸೂಚನೆ ಇಲ್ಲದೆ ಈ ತಂಡದೊಂದಿಗೆ ಶ್ರೀವತ್ಸರವರು 'ಬಾನಿಗೊಂದು ಎಲ್ಲೆ ಎಲ್ಲಿದೆ' ಹಾಡನ್ನು ಹಾಡಿ ಪ್ರೇಕ್ಷಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದರು. ಕಾಯಕ್ರಮದ ಕೊನೆಯಲ್ಲಿ 'ದಿ ಲಾಸ್ಟ್ ಕನ್ನಡಿಗ' ಎನ್ನುವ ಕಿರು ಚಿತ್ರವನ್ನು ಪ್ರದರ್ಶಿಸಯಲಾಯಿತು.

ಕಾರ್ಯಕ್ರಮದ ಕಾರ್ಯದರ್ಶಿಗಳಾದ ನಂದಿನಿ ಕಂಬಿಯವರಿಂದ ಚಿಕ್ಕ ಹಾಗು ಚೊಕ್ಕ ವಂದನಾರ್ಪಣೆ. ಇಷ್ಟೆಲ್ಲಾ ಕಾರ್ಯಕ್ರಮಗಳಿಂದ ತುಂಬಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ವೃತಿಪರ ಟಿವಿ ನಿರೂಪಕಿಯ ಹಾಗೆ ನಿರೂಪಿಸಿದವರು ಗಗನ ಬದರಿನಾಥ್.

Mallige Kannada Sangha celebrates Ugadi in Dallas

ಹಲವಾರು ಕಾರ್ಯಕ್ರಮದ ಯಶಸ್ಸು ಒಂದು ಕಣ್ತುಂಬುವಂತಹ ಕಾರ್ಯಕ್ರಮ ಮತ್ತು ಹೊಟ್ಟೆ ತುಂಬುವಂತಹ ಭೋಜನದಿಂದ ನಿರ್ಧಾರವಾಗುತ್ತದೆ. ಈ ಭಾರಿಯ ಭೋಜನ ಒಂದು ಭೂರಿ ಭೋಜನವೆಂದೇ ಹೇಳಬೇಕು. 600 ಜನಕ್ಕೆ ಅಮೆರಿಕಾದಲ್ಲಿ ಬಾಳೆ ಎಲೆ ಊಟ. ಹೆಚ್ಚಾಗಿ ಈಗ ಬಫೆ ವ್ಯವಸ್ಥೆಯೇ ಹೆಚ್ಚಾಗಿ, ಆರಾಮವಾಗಿ ಊಟ ಬಡಿಸಿ, ಉಣಿಸುವುದು ಅಪರೂಪ. ಎಲ್ಲೂ ಹರಿದಿರದ ಬಾಳೆಯೆಲೆಗಳನ್ನು ಒದಗಿಸಿದ್ದು ಅತ್ಯುತ್ತಮವಾಗಿತ್ತು. ಈ ಊಟದ ವ್ಯವಸ್ಥೆ ಸುಬ್ರಮಣ್ಯ ಅವರ ನೇತೃತ್ವದ 45 ಜನರನ್ನು ಒಳಗೊಂಡ ತಂಡದ್ದಾಗಿತ್ತು.

Mallige Kannada Sangha celebrates Ugadi in Dallas

ಪ್ರತಿ ಹೋಟೆಲ್ ಗು ಭೇಟಿ ಕೊಟ್ಟು ಅವರಿಂದ ಬೆಲೆಗಳ ಪಟ್ಟಿ ಪಡೆದು, ಅದನ್ನು ಹೋಲಿಸಿ ನೋಡಿದ್ದಲ್ಲದೆ ಯಾರು ಉತ್ತಮ ಗುಣಮಟ್ಟದ ಆಹಾರ ನೀಡುವರೋ ಅವರಿಂದ ಊಟವನ್ನು ತರಿಸಲಾಗಿತ್ತು. ಎಲ್ಲ ತಿನಿಸುಗಳು ಕರ್ನಾಟಕದ ರುಚಿಯಲ್ಲಿ ಇರಬೇಕೆಂದು, ಸಂಘದ ಸದಸ್ಯರಿಂದ ಯಾರು ಯಾವ ಯಾವ ತಿನಿಸುಗಳನ್ನು ರುಚಿಯಾಗಿ ಮಾಡುತ್ತಾರೋ ಅದನ್ನು ಮಾಡುವ ಬಗೆ ಹಾಗು ಬೇಕಾಗುವ ಸಾಮಾನನ್ನು ಪಟ್ಟಿ ಮಾಡಿ ಹೋಟೆಲ್ನವರಿಗೆ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಬಂದ ಸದಸ್ಯರು ಬಾಳೆ ಎಲೆ ಊಟ ಚಪ್ಪರಿಸದಷ್ಟೇ ಅಲ್ಲ ಅದರದ್ದೇ ಮಾತು. ಸ್ವಯಂ ಸೇವಕರಿಗೆ ಸಮಿತಿ ಪದಾಧಿಕಾರಿಗಳಿಗೆ ಅಭಿನಂದಿಸಿ ಮೆಸೇಜ್ ಗಳನ್ನು ಕಳಿಸುತ್ತಲೇ ಇದ್ದಾರೆ. ಒಟ್ಟಿನಲ್ಲಿ ಡಲ್ಲಾಸ್ ನಗರದಲ್ಲಿ ಯಶಸ್ವಿ ಯುಗಾದಿ!

English summary
Mallige Kannada Sangha celebrated Ugadi festival in Dallas, USA. In this mega Kannada event more than 600 people attended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X