ಕನ್ನಡ ಸಂಘ (ಸಿಂಗಪುರ)ದ 20ನೇ ವಾರ್ಷಿಕ ಮಹಾಸಭೆ

By: ಸುರೇಶ ಭಟ್ಟ ಮತ್ತು ಶ್ರೀವಿದ್ಯಾ
Subscribe to Oneindia Kannada

1996ರಲ್ಲಿ ಅಧಿಕೃತವಾಗಿ ನೋಂದಾಯಿತವಾದ ಕನ್ನಡ ಸಂಘ (ಸಿಂಗಪುರ)ಕ್ಕೆ ಇಪ್ಪತ್ತು ವರ್ಷಗಳು ತುಂಬಿದ ಸಂತಸ. ಈ ಸಂತಸವನ್ನು ಸಂಘದ ಈ ವರ್ಷದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಡಗರದಿಂದ ಆಚರಿಸುವ ಪ್ರಯಾಸ ನಡೆದಿದೆ. ಈ ನಿಟ್ಟಿನಲ್ಲಿ ಈ ವರ್ಷದ ವಾರ್ಷಿಕ ಮಹಾಸಭೆಯನ್ನು ಮತ್ತು "ಪ್ರೇಮ ಪ್ರಣತಿ" ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ಆಯೋಜಿಸಲಾಗಿತ್ತು.

20ನೇ ವಾರ್ಷಿಕ ಮಹಾಸಭೆ

12ನೇ ಜೂನ್ 2016, ಭಾನುವಾರದಂದು ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ಕನ್ನಡ ಸಂಘ (ಸಿಂಗಪುರ)ದ 20ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಾರ್ಥನೆ ವೃಂದಗೀತೆಯೊಂದಿಗೆ ಆರಂಭವಾಯಿತು. ಸಭಾಧ್ಯಕ್ಷರಾದ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷ ವಿಜಯರಂಗ ಪ್ರಸಾದ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಸಿಂಗಪುರದಲ್ಲಿ ಸಂಘದ 20ನೇ ವರ್ಷಗಳ ಹೆಮ್ಮೆಯ ಮೈಲಿಗಲ್ಲು; ನಡೆದು ಬಂದ ದಾರಿಯ ಮತ್ತು ನಡೆಸಿದ ನಾಯಕರ ಮತ್ತು ತಂಡಗಳ ಕಿರು-ಚಿತ್ರ ಪರಿಚಯ ನೀಡಿದರು.

20th annual general body of Singapore Kannada Sangha

ಕಾರ್ಯಕಾರಿ ಸಮಿತಿಯ ಹಾಗೂ ಉಪಸಮಿತಿಗಳ ಸದಸ್ಯರು, ಸ್ವಯಂಸೇವಕರು ಮತ್ತು ಪ್ರಾಯೋಜಕರು ಇವರೆಲ್ಲರ ಸಹಕಾರವನ್ನು ಸ್ಮರಿಸಿ, ಈ ವರ್ಷದ ಕಾರ್ಯಕ್ರಮಗಳಲ್ಲಿ ಮೂಡಿಬಂದ ಹೊಸತನ, ತಂತ್ರಜ್ಞಾನದ ಬಳಕೆ, ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಮುಖ್ಯ ಕಾರಣಗಳನ್ನು ವಿವರಿಸಿದರು.

ಕನ್ನಡ ಸಂಘ (ಸಿಂಗಪುರ)ಕ್ಕೆ ಇಪ್ಪತ್ತು ವರ್ಷಗಳು ತುಂಬಿದ ಸಂತಸವನ್ನು ಸಂಭ್ರಮದಿಂದ ಆಚರಿಸಲು 29 ಹಾಗೂ 30ನೇ ಅಕ್ಟೋಬರ್ 2016ರಂದು ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರಿನಲ್ಲಿ ಎರಡು ದಿನಗಳ 'ಸಿಂಗಾರ ಸಾಂಸ್ಕೃತಿಕ ಸಮ್ಮೇಳನ'ವನ್ನು ಆಯೋಜಿಸಿರುವುದಾಗಿ ಪ್ರಕಟಿಸಿದಾಗ ಸಭಿಕರು ಹರ್ಷದಿಂದ ಕರತಾಡನ ಮಾಡಿದರು.

20th annual general body of Singapore Kannada Sangha

ವಾರ್ಷಿಕ ಮಹಾಸಭೆಯ ಕಾರ್ಯಕಲಾಪ

19ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿ ಅನುಮೋದನೆಯ ನಂತರ ವಿ.ಜಿ. ರಮೇಶ್ ಅವರ ಸಂಕಲನದ "2015-16ರಲ್ಲಿ ಸಂಘವು ಆಯೋಜಿಸಿದ ಕಾರ್ಯಕ್ರಮಗಳ ಕಿರು ದೃಶ್ಯ ಸುರುಳಿ"ಯನ್ನು ಪ್ರದರ್ಶಿಸಲಾಯಿತು. 2015-16ರ ಸಂಘದ ಚಟುವಟಿಕೆಗಳ ವಾರ್ಷಿಕ ವರದಿಯ ಅನುಮೋದನೆಯಾದ ನಂತರ 01-ಏಪ್ರಿಲ್-2015ರಿಂದ 31-ಮಾರ್ಚ್-2016ರ ವಾರ್ಷಿಕ ಪರಿಶೋಧಿತ ಲೆಕ್ಕಪತ್ರ ವರದಿ ಮತ್ತು ಅದರ ಅನುಮೋದನೆ ಹಾಗೂ 2016-2017ರ ಸಾಲಿನ ಲೆಕ್ಕಪತ್ರ ಪರಿಶೋಧಕರ ನೇಮಕಾತಿ ನಡೆಯಿತು.

2015-16ರ ಅವಧಿಯಲ್ಲಿ ಬಹುತೇಕ ಕಾರ್ಯಕ್ರಮಗಳನ್ನು ಉಚಿತ ಅಥವಾ ರಿಯಾಯತಿ ದರದಲ್ಲಿ ಆಯೋಜಿಸಿದ್ದನ್ನು ಸಂಘದ ಸದಸ್ಯರ, ಸಭಿಕರ ಗಮನಕ್ಕೆ ತರಲಾಯಿತು. ಕಾರ್ಯಕ್ರಮಗಳ, ಲೆಕ್ಕ-ಪತ್ರಗಳ ಮತ್ತಿತರ ವಿಷಯಗಳ ಬಗ್ಗೆ ಸಂಘದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ವಿಜಯರಂಗ ಪ್ರಸಾದ್, ಕಾರ್ಯದರ್ಶಿ ಶ್ರೀನಿವಾಸ್ ಕೆ. ಜೆ., ಖಜಾಂಚಿ ಸುಮನ ಹೆಬ್ಬಾರ್ ಹಾಗೂ ಲೆಕ್ಕಪತ್ರಪರಿಶೋಧಕರಾದ ನಾರಾಯಣ ಮೋಹನ್ ಅವರು ಸಮಂಜಸವಾದ ಉತ್ತರ ನೀಡಿದರು. ವಾರ್ಷಿಕ ಮಹಾಸಭೆಯ ಕಾರ್ಯಕಲಾಪಗಳು ನಡೆಯುತ್ತಿದ್ದಾಗ ಕಾರ್ಯಕಾರಿ ಸಮಿತಿಯ ಸದಸ್ಯರೂ ವೇದಿಕೆಯ ಮೇಲೆ ಆಸೀನರಾಗಿದ್ದುದು ಸಂಘದ ಕಾರ್ಯಕ್ರಮಗಳು ಒಂದು ಒಕ್ಕೂಟದ ಕೆಲಸ ಎಂಬ ಸಂದೇಶವನ್ನು ಸಾರಿತ್ತು.

20th annual general body of Singapore Kannada Sangha

ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ

ಕನ್ನಡ ಸಂಘ (ಸಿಂಗಪುರ)ವು ಸಿಂಗನ್ನಡಿಗ ಬರಹಗಾರರಿಗೆ ಸಂಘದ ದ್ವೈವಾರ್ಷಿಕ ಪತ್ರಿಕೆ "ಸಿಂಗಾರ", ಮಾಸಿಕ ಪತ್ರಿಕೆ "ಸಿಂಚನ"ದಲ್ಲಿ ಲೇಖನ ಬರೆಯಲು ಅವಕಾಶ, ಜಾಗತಿಕ ಹಾಗೂ ಸ್ಥಳೀಯ ಸಾಹಿತ್ಯಕ ಸ್ಪರ್ಧೆಗಳು, ಸಂಘದ ಕಾರ್ಯಕ್ರಮಗಳಲ್ಲಿ ಸಿಂಗನ್ನಡಿಗ ಬರಹಗಾರರ ಪುಸ್ತಕ ಬಿಡುಗಡೆ ಹೀಗೆ ವಿವಿಧ ರೀತಿಯಲ್ಲಿ ತನ್ನ ಸಹಕಾರ ನೀಡುತ್ತಾ ಬಂದಿದೆ. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಸಿಂಗನ್ನಡಿಗ ಕವಿಗಳಿಬ್ಬರ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ವಾರ್ಷಿಕ ಮಹಾಸಭೆ ಮತ್ತು ಕಿರು-ವಿರಾಮದ ನಂತರ ಕನ್ನಡ ಸಂಘ (ಸಿಂಗಪುರ)ವು ವಸಂತ ಕುಲಕರ್ಣಿ ಮತ್ತು ವೆಂಕಟ್ ಅವರ ಆಯ್ದ ಭಾವಗೀತೆಗಳನ್ನಾದರಿಸಿದ "ಪ್ರೇಮ ಪ್ರಣತಿ" ಧ್ವನಿಸುರುಳಿಯ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. "ಪ್ರೇಮಪ್ರಣತಿ" ಧ್ವನಿಸುರುಳಿಯ ಗೀತೆಗಳಲ್ಲಿ ಒಂದಾದ ವಸಂತ ಕುಲಕರ್ಣಿಯವರ ವಿರಚಿತ "ಬೆಳಕಹನಿ ಧರೆಗಿಳಿದಿದೆ" ಎಂಬ ಸಮೂಹಗಾನದೊಂದಿಗೆ ಸಮಾರಂಭವು ಪ್ರಾರಂಭವಾಯಿತು.

20th annual general body of Singapore Kannada Sangha

ವಿಜಯರಂಗ ಪ್ರಸಾದ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಸಿಂಗಪುರಕ್ಕೆ ಬಂದ ಕನ್ನಡಿಗರು; ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಅವರ ಪಾತ್ರ, ಸಿಂಗಪುರದಲ್ಲಿ ಕನ್ನಡ ಸಂಘದ ಅವಶ್ಯಕತೆ, ಪರಸ್ಪರ ಅಪರಿಚಿತರಾದ ಕನ್ನಡಿಗರ ಸಮ್ಮಿಲನ ಮಾಡುವ ಕನ್ನಡ ಸಂಘದ ಪ್ರಯತ್ನ; ಸಿಂಗನ್ನಡಿಗ ಕಲಾವಿದರಿಗೆ ಕನ್ನಡ ಸಂಘವು ಒದಗಿಸುತ್ತಿರುವ ಒಂದು ಸ್ಪೂರ್ತಿದಾಯಕ ಪ್ರಯೋಗಶೀಲ ವೇದಿಕೆ; ಕರ್ನಾಟಕದ ಪ್ರಸಿದ್ದ ಕಲಾವಿದರನ್ನು ಕರೆಸಿ ವೇದಿಕೆಯನ್ನು ಸೃಷ್ಥಿಸಿರುವುದು; ಸಿಂಗನ್ನಡಿಗ ಬರಹಗಾರರ ಸಾಧನೆಗಳನ್ನು ರಸವತ್ತಾಗಿ ವಿವರಿಸಿದರು.

ವೆಂಕಟ್ ಮತ್ತು ವಸಂತ್ ಕುಲಕರ್ಣಿ ಕವನಗಳು ಭಾವಗೀತೆ ರೂಪದಲ್ಲಿ ಧ್ವನಿ ಸಾಂದ್ರಿಕೆ ಸುರುಳಿಯಾಗಿ ಬಿಡುಗಡೆಗೊಂಡಿರುವ ಈ ಶುಭ-ಸಂದರ್ಭದಲ್ಲಿ ಅವರ ಸಾಧನೆಯನ್ನು ಹೆಮ್ಮೆಯಿಂದ ಸ್ಮರಿಸಿದ ಅವರು ಇಂತಹ ಸಾಧನೆಗಳು, ಕನ್ನಡ ಸಂಘದ ಚಟುವಟಿಕೆಗಳು ಮತ್ತು ಕನ್ನಡ ಕಾರ್ಯಕ್ರಮಗಳು ಇನ್ನೂ ಅನೇಕರಿಗೆ ಸ್ಪೂರ್ತಿದಾಯಕವಾಗಿರಲೆಂದು ಆಶಿಸಿದರು.

20th annual general body of Singapore Kannada Sangha

ಕವಿದ್ವಯರಿಗೆ ಶುಭಾಶಯ ಕೋರಿದ ಎಚ್ಚೆಸ್ವಿ

ಧ್ವನಿ ಸಾಂದ್ರಿಕೆ ಸುರುಳಿಯ ಬಿಡುಗಡೆಯಾದ ಮೇಲೆ ಕಾರ್ಯಕ್ರಮದ ಮುಖ್ಯ ಅತಿಥಿ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಹೃದಯದ ಭಾಷೆಯಾದ ಕನ್ನಡದ ಬಗ್ಗೆ, ಹೊರನಾಡಿನಲ್ಲಿ ಕನ್ನಡ ಉಳಿಸಿ, ಬೆಳೆಸುತ್ತಿರುವ ಸ್ವಾಭಿಮಾನಿ ಕನ್ನಡಿಗರ ಬಗ್ಗೆ ರಸವತ್ತಾಗಿ ಮಾತನಾಡಿ, ವೇದಿಕೆಯ ಮೇಲಿದ್ದ ಕವಿದ್ವಯರಿಗೆ ಶುಭಕೋರಿದರು.

ಈ ಧ್ವನಿ ಸುರುಳಿಗೆ ಸಂಗೀತ ಸಂಯೋಜಿಸಿದ ಉಪಾಸನಾ ಮೋಹನ್, ಧ್ವನಿ ನೀಡಿದ ಕಲಾವಿದರಲ್ಲೊಬ್ಬರಾದ ಪಂಚಮ್ ಹಳಿಬಂಡಿ ಅವರು, ಭಾವಗೀತೆಗಳನ್ನು ರಚಿಸಿದ ವಸಂತ್ ಕುಲಕರ್ಣಿ ಮತ್ತು ವೆಂಕಟ್ ಅವರು ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದರು. ವಿಜಯರಂಗ ಪ್ರಸಾದ್ ಅವರು ಎಲ್ಲರಿಗೂ ಸಂಘದ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ತದನಂತರ "ಪ್ರೇಮಪ್ರಣತಿ" ಧ್ವನಿಸುರುಳಿಯಲ್ಲಿರುವ ಈ ಕವಿದ್ವಯರ ಭಾವಗೀತೆಗಳನ್ನು ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ ಹಾಗೂ ನಮ್ಮವರೇ ಆದ ವಿನುತ ಭಟ್ ಮತ್ತು ಕುಮಾರಿ ಶೀತಲ್ ಭಾರಧ್ವಾಜ್ ರವರು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರಿಗೆ ಮುದ ನೀಡಿದರು. ಧ್ವನಿ ಸಾಂದ್ರಿಕೆ ಸುರುಳಿಯ ಬಿಡುಗಡೆಯ ಕಾರ್ಯಕ್ರಮದ ಅಂಗವಾಗಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹಾ ಹಮ್ಮಿಕೊಳ್ಳಲಾಗಿತ್ತು.

20th annual general body of Singapore Kannada Sangha

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

ಉಪಾಸನಾ ಮೋಹನ್ ಸ್ವರಸಂಯೋಜಿಸಿದ ಕವಿ ದೊಡ್ಡರಂಗೇಗೌಡ ಅವರ "ಹನಿ ಹನಿ ಮಂಜಿನ ಮಣಿ ಮಣಿ" ಎಂಬ ಗೀತೆಗೆ ಪುಟಾಣಿಗಳು ಹೆಜ್ಜೆ ಹಾಕಿದರು. ಕುಮಾರಿ ವೃಂದಾ ಕುಲಕರ್ಣಿ ಕವಿ ಎಚ್.ಎಸ್.ವಿ. ಯವರ ಜನಪ್ರಿಯ "ಅಮ್ಮ ನಾನು ದೇವರಾಣೆ" ಹಾಡಿಗೆ ನೃತ್ಯ ಮಾಡಿ ಸಭಿಕರ ಮನಸೆಳೆದರು. ಈ ಎರಡು ನೃತ್ಯಗಳ ನಿರ್ದೇಶನದ ಹೊಣೆ ಭಾರ್ಗವಿ ಆನಂದ್ ಅವರದ್ದಾಗಿತ್ತು.

ಇದಾದ ನಂತರ ಉಪಾಸನಾ ಮೋಹನ್ ಅವರ ನೇತೃತ್ವದಲ್ಲಿ ಪರಂಪರೆಯನ್ನು ಬಿಂಬಿಸುವ ಭಾವಗೀತೆಗಳ ಗುಚ್ಛವನ್ನು (medley) ಪ್ರಸ್ತುತ ಪಡಿಸಲಾಯಿತು. ಮೋಹನ್, ಪಂಚಮ್ ಹಳಿಬಂಡಿ, ಸ್ಥಳೀಯ ಗಾಯಕರಾದ ಅರುಣ್ ರಾಮಕೃಷ್ಣ, ವಿನುತ ಭಟ್ ಮತ್ತು ಕುಮಾರಿ ಶೀತಲ್ ಅವರು ಮೈಸೂರು ಅನಂತ ಸ್ವಾಮಿ, ಅಶ್ವಥ್, ಉಪಾಸನಾ ಅವರ ಸ್ವರ ಸಂಯೋಜಿತ ಜನಪ್ರಿಯ ಗೀತೆಗಳನ್ನು ಸುಮಧುರವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಆಹ್ವಾನಿತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಕನ್ನಡ ಸಂಘ (ಸಿಂಗಪುರ)ದ ಇನ್ನೊಂದು ಯಶಸ್ವೀ ಪ್ರಯೋಗ ಇದಾಗಿತ್ತು. ಉಪಾಸನಾ ಮೋಹನರವರ ಸಂಗೀತ ಸಂಯೋಜನೆ ಮತ್ತು ನಿರ್ದೇಶನದ ಎರಡು ಸಮೂಹ ಗೀತೆಗಳೊಂದಿಗೆ ಈ ಸಮಾರಂಭವು ಮುಕ್ತಾಯಗೊಂಡಿತು. ಅರ್ಚನ ಜಯಪ್ರಕಾಶ್ ಈ ಕಾರ್ಯಕ್ರಮದ ನಿರೂಪಣೆಯನ್ನು ಸೊಗಸಾಗಿ ನಡೆಸಿಕೊಟ್ಟರು. ಸಂಘದ ಸಹಕಾರ್ಯದರ್ಶಿ ವೆಂಕಟೇಶ ಗದ್ದೆಮನೆ ಸಮಾರಂಭದ ಜವಾಬ್ದಾರಿ ಹೊತ್ತಿದ್ದರು.

ಯಾವಾಗಲೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಸಿಂಗಪುರದ ಕನ್ನಡ ಸಂಘಕ್ಕೆ ಈ "ಪ್ರೇಮಪ್ರಣತಿ" ಧ್ವನಿಸುರುಳಿ ಬಿಡುಗಡೆ ಸಮಾರಂಭ ಮತ್ತೊಂದು ಮೈಲಿಗಲ್ಲು.

20th annual general body of Singapore Kannada Sangha

ವಸಂತ ಕುಲಕರ್ಣಿ ಮತ್ತು ವೆಂಕಟ್ ಅವರ ಬಗ್ಗೆ

ವೃತ್ತಿ ಜೀವನದ ನಡುವೆ ತಮ್ಮ ಪ್ರವೃತ್ತಿಗೂ ಸ್ವಲ್ಪ ಸಮಯ ಮುಡಿಪಾಗಿಡುವ ವಸಂತ ಕುಲಕರ್ಣಿ ಮತ್ತು ವೆಂಕಟ್ ಅವರು ಕಥೆ, ಕವನ, ಹನಿಗವನ, ಚಿಂತನ ಲೇಖನಗಳನ್ನು ಬರೆದು ಕನ್ನಡ ಸಂಘದ ಪ್ರಕಟಣೆಯ ಮಾಧ್ಯಮ (ಸಿಂಚನ, ಸಿಂಗಾರ) ಹಾಗೂ ಅಂತರ್ಜಾಲ ಪತ್ರಿಕೆ kannada.oneindia.com ಮುಂತಾದ ಕಡೆ ಪ್ರಕಟಿಸಿದ್ದಾರೆ. ವಸಂತ ಕುಲಕರ್ಣಿ ಚೊಚ್ಚಲ ಕವನ ಸಂಕಲನ "ಅಂತರ ಮತ್ತು ಇತರ ಕವನಗಳು" ನವೆಂಬರ್ 2012ರಂದು ಲೋಕಾರ್ಪಣೆಗೊಂಡಿತ್ತು.

ವರದಿ: ಸುರೇಶ ಭಟ್ಟ ಮತ್ತು ಶ್ರೀವಿದ್ಯಾ (ಸಿಂಗಪುರ)
ಛಾಯಾಚಿತ್ರಗಳು: ಸಮಂತ್ ಯಾದವ್, ಸುಧೀಂದ್ರ ಆರ್., ರಮೇಶ್ ನಾಡಗೌಡ ಮತ್ತು ಗಿರೀಶ್ ಜಮದಗ್ನಿ (ಸಿಂಗಪುರ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
20th anniversary and annual general body of Kannada Sangha Singapore conducted on 12th June in a grand fashion. Poet HS Venkatesha Murthy was the chief guest. Upasana Mohan and his team enthralled the audience with melodious music. Collection of poems of Vasant Kulkarni and Venkat too were released.
Please Wait while comments are loading...