ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೂರ ಜಾತ್ರೆಯ ಸವಿ ನೀಡಿದ ಸಿಂಗಾರ ಉತ್ಸವ

By * ವೆಂಕಟ್, ಸಿಂಗಪುರ
|
Google Oneindia Kannada News

Singara Utsava 2012 in Singapore
ಕನ್ನಡ ಸಂಘ (ಸಿಂಗಪುರ) ಮತ್ತು ASSETZನ ಜಂಟಿ ಆಯೋಜನೆಯಲ್ಲಿ ಏಪ್ರಿಲ್ 28 ಶನಿವಾರದಂದು ಸಿಂಗಪುರ ಪಾಲಿಟೆಕ್ನಿಕ್‌ನ ಸಭಾಂಗಣದಲ್ಲಿ "ಸಿಂಗಾರ ಉತ್ಸವ -2012" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರನೆಯ ವರ್ಷಕ್ಕೆ ಕಾಲಿಡುತ್ತಿರುವ ಈ ಉತ್ಸವವು ಪ್ರತಿ ವರ್ಷವೂ ತನ್ನ ಸಫಲತೆಯ ಗಡಿಯನ್ನು ವಿಸ್ತರಿಸುತ್ತಾ ಬಂದು ಸಿಂಗನ್ನಡಿಗರಿಗೆ ನಮ್ಮೂರಿನ ಜಾತ್ರೆಯ ಸವಿ ನೆನಪನ್ನು ಮರುಕಳಿಸಿ, ಹಬ್ಬದ ವಾತಾವರಣವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಏಪ್ರಿಲ್ 28ರಂದು ಮಧ್ಯಾಹ್ನ 3 ಗಂಟೆಗೆ ಸಭಾಂಗಣವು ಅಲಂಕಾರಕ್ಕೆ ತಯಾರಾಗಿ ತನ್ನನ್ನು ರಂಗೇರಿಸುವವರಿಗಾಗಿ ಕಾಯುತ್ತಿರುವಂತೆ ಭಾಸವಾಗುತಿತ್ತು. ಯಥಾಪ್ರಕಾರ ಸಂಘದ ಕಾರ್ಯಕರ್ತರು ಬೇಗನೆ ಬಂದು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರೆ, ಅಲ್ಲಲ್ಲಿ ಮಕ್ಕಳು ಎಂದಿನಂತೆ ತಮ್ಮ ಸ್ನೇಹಿತರೊಂದಿಗೆ ಆಟವಾಡುತ್ತಾ ನಾವು ಬಂದಿರುವುದು ಇದಕ್ಕಾಗಿಯೇ ಎಂದು ಸಾರಿ ಹೇಳುವಂತಿತ್ತು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳ ಅಲಂಕಾರ, ಸಿದ್ಧತೆಗಳು ಅಲ್ಲಲ್ಲಿ ಗುಂಪುಗಳಲ್ಲಿ ನಿರಂತರ ಸಾಗಿತ್ತು.

ಕಾರ್ಯಕ್ರಮವು ಪ್ರಾಯೋಜಕರನ್ನು ಪರಿಚಯಿಸುವ ಮತ್ತು ಸಿಂಗಾರ-ಉತ್ಸವದ ಹಳೆಯ ನೆನಪುಗಳ ವಿಡಿಯೋದ ಪ್ರದರ್ಶನದ ನಂತರ "ಶ್ರೀ ಗಣೇಶ" ಸ್ತುತಿಯ ಪ್ರಾರ್ಥನೆಯೊಂದಿಗೆ ಶುಭಾರಂಭವಾಯಿತು. ತದನಂತರ ಬಿಡುವಿಲ್ಲದೆ ಸುಮಾರು 5 ಗಂಟೆಗಳ ಕಾಲ ವಿವಿಧ ಬಗೆಯ ಮನೋರಂಜನೆಯ ಸಿಹಿದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಿತು. ಪ್ರತಿಭಾವಂತ ಮಕ್ಕಳಿಂದ ವಿವಿಧ ಬಗೆಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಗಾಯನ, ನೃತ್ಯ, ಏಕಪಾತ್ರಭಿನಯ, ವೇಷ-ಭೂಷಣಗಳು, ಜಾದು, ಗಣಿತದಲ್ಲಿನ ಪರಿಣತಿ, ವೃಂದಗಾನ ಮತ್ತು ಹಲವು ವಿವಿಧ 34 ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು.

ಎಲ್ಲಾ ಕಾರ್ಯಕ್ರಮಗಳಿಗೂ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು, ಒನ್ಸ್‌ಮೋರ್ ಎಂದು ಕೂಗಿ ಪ್ರೋತ್ಸಾಹಿಸಿದ್ದು ಭಾಗವಹಿಸಿದವರ ಮುಖಾರವಿಂದದಲ್ಲಿ ನಗುವಾಗಿ ಚೆಲ್ಲಿ ಅವರ ಶ್ರಮಕ್ಕೆ ಸಾರ್ಥಕತೆಯ ಗರಿಯನ್ನು ಮೂಡಿಸಿದಂತಿತ್ತು. ಒಟ್ಟಾರೆ 40 ಮಕ್ಕಳಿಂದ ಪ್ರದರ್ಶನಗೊಂಡ "ವೇಷ-ಭೂಷಣ"ವು ಸಭಾಂಗಣವನ್ನು ಇನ್ನೊಂದು ಲೋಕಕ್ಕೆ ಕರೆದೊಯ್ದಂತಿತ್ತು. ಆಧುನಿಕ ಉಡುಪುಗಳಿಂದ, ವಿವಿಧ ಜನಾಂಗೀಯ ಉಡುಪುಗಳಲ್ಲಿ ಅಲಂಕೃತಗೊಂಡ ಮಕ್ಕಳ ಹೆಜ್ಜೆಯ ನಡಿಗೆ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಕಾರ್ಯಕ್ರಮದ ನಡುವೆ ಮಕಾನ್-ಮುಂಬೈನ ಚಾಟ್ಸ್, ಕಾಫಿ, ಟೀಗಳನ್ನು ಸವಿದು ಬಂದು ಕಾರ್ಯಕ್ರಮವನ್ನು ನೋಡುವುದು ಸಾಮಾನ್ಯವಾಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ನಾಟಕಕಾರ ದಾಶರಥಿ ದೀಕ್ಷಿತ್ ವಿರಚಿತ "ಗಾಂಪರ ಗುಂಪು" ನಾಟಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸಿತು. ಕೊನೆಯಲ್ಲಿ ಲಕ್ಕಿ-ಡ್ರಾವನ್ನು ZED Habitatsನ ಜಯಶ್ರೀ ಅವರಿಂದ ಎತ್ತಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೊರಗಡೆ ಯಥಾರೀತಿ ಸಾಗಿತ್ತು ಊಟದ ನಡುವೆ ಮಾತು - ಮಾತಿನ ನಡುವೆ ನಗು, ಪ್ರಶಂಸೆಗಳು, ಮತ್ತೆ ಸಿಗೋಣವೆನ್ನುವ ಶುಭಾಹಾರೈಕೆಗಳು, ಕಾರ್ಯಕರ್ತರಿಂದ ಸಭಾಂಗಣವನ್ನು ಶುದ್ಧಿಗೊಳಿಸುವ ಕೆಲಸ ಸಾಗಿತ್ತು. ಹಬ್ಬವೆಂದರೆ ಹೀಗೆ ತಾನೆ?

ಈ ಕಾರ್ಯಕ್ರಮದ ಸಹ ಪ್ರಾಯೋಜಕರಾದ DLF-India, ZED Habitats, Makaan Mumbai ಮತ್ತು Learning Form Montessori ಅವರ ಸಹಾಯದಿಂದ ಈ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಿಕೊಡಲು ಸಾಧ್ಯವಾಯಿತು. [ಛಾಯಾಚಿತ್ರ : ರಾಜೇಶ್ ಹೆಗಡೆ]

English summary
Singapore Utsava 2012 celebrated in Singapore on April 28, 2012. Fancy dress by children was the highlight of the show. Performance by talented children took the audience out of the world. The program was organized by Kannada Sangha Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X