ಅಕ್ಕ - ಸಮ್ಮೇಳನ ಯಶಸ್ವಿಗೊಳಿಸುವುದು ಹೇಗೆ?

By: * ಶ್ರೀವತ್ಸ ಜೋಶಿ, ವಾಷಿಂಗ್ಟನ್ ಡಿಸಿ.
Subscribe to Oneindia Kannada
Srivathsa Joshi
"ಒಂದು ಮರವನ್ನು ಕಡಿಯಲು ಎಂಟು ತಾಸುಗಳ ಸಮಯವನ್ನು ನನಗೆ ಕೊಟ್ಟರೆ ಅದರಲ್ಲಿ ನಾನು ಆರು ತಾಸನ್ನು ಕೊಡಲಿ ಹರಿತಗೊಳಿಸಲು ಉಪಯೋಗಿಸುತ್ತೇನೆ" - ಎಂಬ ಅರ್ಥ ಬರುವಂಥ ಪ್ರಖ್ಯಾತ ನುಡಿ, ಅಮೆರಿಕದ ಮಹಾನ್ ಅಧ್ಯಕ್ಷರುಗಳಲ್ಲೊಬ್ಬನೆನಿಸಿದ ಅಬ್ರಹಾಂ ಲಿಂಕನ್ ಹೇಳಿದ್ದು. ಮೂಲ ಇಂಗ್ಲಿಷ್ ರೂಪವೇ ಬೇಕಿದ್ದವರಿಗೆ- "If I had eight hours to chop down a tree, I'd spend six sharpening my ax."

ಯಾವುದೇ ಒಂದು ಕೆಲಸವನ್ನು ಯಶಸ್ವಿಯಾಗಿ ಮುಗಿಸಬೇಕಾದರೆ ಅದರ ಪೂರ್ವಭಾವಿ ತಯಾರಿ ಎಷ್ಟು ಮುಖ್ಯ ಎನ್ನುವುದನ್ನು ಬಹುಶಃ ಇದಕ್ಕಿಂತ ಸಮರ್ಥವಾಗಿ ಬೇರೆ ಪದಗಳಲ್ಲಿ ಹೇಳುವುದು ಆಗದೇನೋ.

‘ಅಕ್ಕ' ವಿಶ್ವ ಕನ್ನಡ ಸಮ್ಮೇಳನದಂಥ ಬೃಹತ್ ಯೋಜನೆಯಲ್ಲಂತೂ ಇದು ಅಕ್ಷರಶಃ ಸತ್ಯ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದ ತಯಾರಿಗಳಿಗೆ ಕನಿಷ್ಠ ಮುನ್ನೂರು ದಿನಗಳಿಂದ ‘ಹಗಲಿರುಳೂ' ಎಂಬಂತೆ ತೊಡಗಿಸಿಕೊಳ್ಳುವ ಕಾರ್ಯಕರ್ತರಿಲ್ಲದೆ ಸಮ್ಮೇಳನ ರೂಪುಗೊಳ್ಳುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಅಷ್ಟಾಗಿ ಈ ಎಲ್ಲ ಕಾರ್ಯಕರ್ತರೂ ಸಂಸಾರ, ಉದ್ಯೋಗ-ವ್ಯವಹಾರಗಳ ಮಾಮೂಲಿ ಜೀವನವನ್ನು ಎಂದಿನಂತೆ ನಿಭಾಯಿಸಿಕೊಳ್ಳುತ್ತಲೇ ಸಮ್ಮೇಳನ ತಯಾರಿಗಳಲ್ಲಿ ತೊಡಗಿಸಿಕೊಳ್ಳುವವರು.

ತಾಯ್ನೆಲದಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ತಾಯ್ನುಡಿಯ ಮೇಲಿನ ಪ್ರೀತಿ-ಅಭಿಮಾನಗಳಿಂದ ನುಡಿತೇರನ್ನೆಳೆಯಲು ಟೊಂಕ ಕಟ್ಟಿ ನಿಲ್ಲುವವರು. ಏನೋ ಒಂದು ತುಡಿತ, ಏನೋ ಒಂದು ಸೆಳೆತ. ಎಲ್ಲಿಯವರೆಗೆಂದರೆ ಕೆಲವು ವಿಭಾಗಗಳ ಸ್ವಯಂಸೇವಕರಿಗೆ ಕೆಲಸದ ತತ್ಪರತೆಯಲ್ಲಿ ಸಮ್ಮೇಳನದ ಆದ್ದೂರಿತನವನ್ನು, ವರ್ಣವೈಭವವನ್ನು ಸವಿಯುವ ಅವಕಾಶದಿಂದ ವಂಚಿತರಾಗುವ ಸನ್ನಿವೇಶವೂ ಇಲ್ಲದಿಲ್ಲ. ಹಾಗಿದ್ದರೂ ‘ಇದು ನಮ್ಮ ಸಮ್ಮೇಳನ, ನಾವು ಇದನ್ನು ಚಂದವಾಗಿ ನಡೆಸಿಕೊಡಬೇಕು' ಎಂದು ನಿಸ್ವಾರ್ಥ ಭಾವದಿಂದ, ಬತ್ತದ ಉತ್ಸಾಹದಿಂದ, ದುಡಿಯುವ ಸ್ವಯಂಸೇವಕರಿಗೆ ಮನಃಪೂರ್ವಕ ಮೆಚ್ಚುಗೆ ಸಲ್ಲಲೇಬೇಕು.

ನಿಜ, ಸಮಾರೋಪ ಸಮಾರಂಭದಲ್ಲಿ ಸಮಯ ಸಿಕ್ಕಿದರೆ ಒಬ್ಬೊಬ್ಬ ಸ್ವಯಂಸೇವಕನ ಹೆಸರನ್ನೂ ಘೋಷಿಸಿ ವೇದಿಕೆಗೆ ಕರೆದು ಕೃತಜ್ಞತೆ ಸಲ್ಲಿಸುವ ಪರಿಪಾಟ ಇದೆ, ಇಲ್ಲವೆಂದೇನಿಲ್ಲ. ಆದರೆ ಆ ಘಳಿಗೆಯಷ್ಟೇ ಸ್ವಯಂಸೇವಕರ ಸ್ಮರಣೆಗೆ ಅಂತಾಗಬಾರದು. ಇದು ವಿಶ್ವ ಕನ್ನಡಿಗರ ಸಮ್ಮೇಳನ. ಇದರಲ್ಲಿ "ನಾವು ದೂರದ ಊರುಗಳಿಂದ/ ರಾಜ್ಯಗಳಿಂದ/ ದೇಶಗಳಿಂದ ಬಂದವರು. ಮದುವೆಯಲ್ಲಿ ‘ಗಂಡಿನ ಕಡೆಯವರು' ಇದ್ದಂತೆ. ಸಮ್ಮೇಳನದಲ್ಲಿ ನಮ್ಮ ಮನಃಸಂತೋಷಕ್ಕೆ ಯಾವುದೇ ರೀತಿಯಲ್ಲೂ ಚ್ಯುತಿಯಾಗಬಾರದು. ಅಂಥ ‘ಸೇವೆ'ಯನ್ನು ಸ್ವಯಂಸೇವಕರಿಂದ ನಾವು ಬಯಸುತ್ತೇವೆ" ಎಂಬ ಮನೋಭಾವ ಯಾರಿಗೂ ಇರಬಾರದು.

ಸಮ್ಮೇಳನಕ್ಕಾಗಿ ಕರ್ನಾಟಕದಿಂದ ಬರುವವರಾದರೂ ಅಷ್ಟೆ. ಅಲ್ಲಿ ಅಮೆರಿಕದಲ್ಲಿ ನಮಗೆ ರಾಜಮರ್ಯಾದೆ ಸಿಗುತ್ತದೆ/ಸಿಗಬೇಕು. ನಾವು ಕಲಾವಿದರು, ಹೆಚ್ಚಿನ ಗೌರವಾದರಗಳನ್ನು ಬಯಸುವವರು' ಎಂಬ ಅಹಂ ಭಾವ ಆ ನಮ್ಮ ಮಿತ್ರರಲ್ಲಿರಬಾರದು.

ಇದನ್ನು ಹೇಳುವಾಗ ನನಗೆ ಥಟ್ಟನೆ ನೆನಪಾಗೋದು ಕನ್ನಡ ಚಿತ್ರನಟ ರಮೇಶ್ ಅರವಿಂದ್. 2008ರ ಶಿಕಾಗೋ ಸಮ್ಮೇಳನ ಅಂದುಕೊಳ್ಳುತ್ತೇನೆ. ಆ ಸಮ್ಮೇಳನಕ್ಕೆ ರಮೇಶ್ ಬಂದಿದ್ದರು. ಚಿತ್ರರಂಗದ ಇತರ ನಟನಟಿಯರೂ ಬಂದಿದ್ದರು. ಅವರೆಲ್ಲ ತಮ್ಮ ಕಾರ್ಯಕ್ರಮದ ನಿಗದಿತ ವೇಳೆಗಷ್ಟೇ ಯಾವುದೋ ಅನ್ಯ ಗ್ರಹದ ಜೀವಿಗಳಂತೆ ಬಂದು ಕಾಣಿಸಿಕೊಂಡರೇ ವಿನಾ ಬೇರೆ ಸಮಯದಲ್ಲಿ ಪತ್ತೆಯಿಲ್ಲ. ರಮೇಶ್ ಹಾಗಲ್ಲ, ಪಂಚೆ ಉಟ್ಟು, ಶಲ್ಯ ಹೊದ್ದುಕೊಂಡು ಪಕ್ಕಾ ಕನ್ನಡಿಗನ ದಿರಿಸಿನಲ್ಲಿ ಎಲ್ಲರೊಡನೆ ಬೆರೆತು ನಸುನಗುತ್ತ ‘ಇವರು ನಮ್ಮವರು' ಎಂಬ ಭಾವವನ್ನು ಅತ್ಯಂತ ಸಹಜವಾಗಿ ಮೂಡಿಸಿದ್ದರು. ರಮೇಶ್ ಅದೆಷ್ಟೇ ಸೀಧಾ ಸಾದಾ ಸಮ್ಮೇಳನಾರ್ಥಿಯೆಂದರೆ ಏನಾದರೂ ಕೆಲಸವನ್ನು ತಾನು ಮಾಡಲೇ ಎಂದು ಕೇಳಿ ಮಾಡಲಿಕ್ಕೂ ರೆಡಿಯಿರುವಂಥವರು!

ಇರಲಿ, ರಮೇಶ್ ಗುಣಗಾನಕ್ಕಾಗಿ ಅಲ್ಲ ನಾನಿದನ್ನು ಪ್ರಸ್ತಾಪಿಸಿದ್ದು. ‘ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಆ ಮೂರು ದಿನಗಳಲ್ಲಿ ಯಾವೊಂದು ಹಮ್ಮುಬಿಮ್ಮು ಇಲ್ಲದೆ ಸರಳತೆ ಮತ್ತು ಆತ್ಮೀಯತೆಗಳನ್ನು ಪ್ರದರ್ಶಿಸಿದರೆ ಸಮ್ಮೇಳನ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತದಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಪರಮಾವಧಿ ತೃಪ್ತಿಯೂ ಸಿಗುತ್ತದೆ. ‘ಕೊಡಲಿ ಮತ್ತು ಮರ ಕಡಿಯುವ' ರೂಪಕದ ಭಾಷೆಯಲ್ಲೇ ಹೇಳಬೇಕೆಂದರೆ, ಆರು ತಾಸು ಹರಿತಗೊಳಿಸಿದ ಕೊಡಲಿ ಎರಡು ತಾಸುಗಳಲ್ಲಿ ಮರ ಕಡಿಯುವ ಪ್ರಕ್ರಿಯೆ ಅತ್ಯಂತ ದಕ್ಷತೆಯಿಂದ, ಅಚ್ಚುಕಟ್ಟಾಗಿ ನಡೆದುಹೋಗುತ್ತದೆ.

ಇನ್ನೇನು ಭರ್ತಿ ಎರಡು ತಿಂಗಳೂ ಇಲ್ಲ, ಬಂದೇ ಬಿಡುತ್ತದೆ ಆಗಸ್ಟ್ 31 ತಯಾರಿಗಳು ಸಾಗಿವೆ, ಸಾಗುತ್ತಿವೆ. ನಿರೀಕ್ಷೆಗಳೂ ಅಪೇಕ್ಷೆಗಳೂ ಏರುತ್ತಿವೆ. ಅವು ಫಲಿಸಬೇಕಾದರೆ, ನಾವೆಲ್ಲರೂ ಕಾಯಾ ವಾಚಾ ಮನಸಾ ಸ್ವಯಂಸೇವಕರಾಗೋಣ. ಕನ್ನಡ ಸಮ್ಮೇಳನದಲ್ಲಿ ಕನ್ನಡಿಗನಾಗಿ ನಾನು ಅತಿಥಿಯಲ್ಲ ಆತಿಥೇಯ ಎಂದು ಪ್ರತಿಯೊಬ್ಬರೂ ಪಣ ತೊಡೋಣ. ನಮ್ಮನೆಯ ಸಮಾರಂಭದಲ್ಲಿ ನಾವು ಆತಿಥೇಯರೇ ತಾನೆ? [ಕೃಪೆ : ಜಗಲಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How to make a India community convention meaningful and successful in United States of North America? Columnist Srivathsa Joshi in Virginia draws a road map for the forth coming AKKA World Kannada Convention 2012. Three day biannual Kannada conference will be held in Atlanta GA, Aug 31 to 2 Sept. Local Kannada community org Nrupatunga Kannada Koota Atlanta (NKK) hosting the event.
Please Wait while comments are loading...