ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಸರಸ್ವತಮ್ಮನ ಸಮ್ಮೇಳನ

By Shami
|
Google Oneindia Kannada News

HY Rajagopal
ಕನ್ನಡ ಪುಸ್ತಕ ಓದುವವರು, ಕನ್ನಡದಲ್ಲಿ ಬರೆಯುವವರು ಮತ್ತು ಕನ್ನಡ ಸಾಹಿತ್ಯ ಕುರಿತು ಗಂಭೀರ ಸಮಾಲೋಚನೆ ಮಾಡುವವರಿಗೆ ಮೀಸಲಾದ ಅಪ್ಪಟ ಕನ್ನಡ ಸಾಹಿತ್ಯ ಸಮ್ಮೇಳನಗಳು ಅಮೆರಿಕಾದಲ್ಲಿ ನಡೆದುಕೊಂಡು ಬರುತ್ತಿವೆ. ಕನ್ನಡ ಸಾಹಿತ್ಯ ರಂಗ ಎಂಬ ಹೆಸರಿನ ಸಂಸ್ಥೆ ಎರಡು ವರ್ಷಗಳಿಗೊಮ್ಮೆ ಏರ್ಪಡಿಸುವ ಸಮಾನ ಅಭಿರುಚಿಯ, ಸಮಾನ ಮನಸ್ಕರ ಕನ್ನಡ ಶಾರದೆಯ ಸಮಾವೇಶವನ್ನು ವಸಂತೋತ್ಸವ ಎಂದು ಕರೆಯಲಾಗುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಜರುಗುವ ಐದನೇ ಸಮ್ಮೇಳನದ ಆಶೋತ್ತರಗಳನ್ನು ಸ್ಥೂಲವಾಗಿ ವಿವರಿಸುವ ಕಾರ್ಯಕಾರಿ ಸಮಿತಿಯ ಪ್ರಥಮ ಪ್ರಕಟಣೆಯನ್ನು ನಿಮಗೆ ಒಪ್ಪಿಸಲಾಗಿದೆ, ಓದಿ - ಶಾಮ್.

ಉತ್ತರ ಅಮೆರಿಕದ ಕನ್ನಡ ಸಾಹಿತ್ಯ ರಂಗ ತನ್ನ ಐದನೆಯ ವಸಂತ ಸಾಹಿತ್ಯೋತ್ಸವವನ್ನು ಈ ಮೂಲಕ ಪ್ರಕಟಿಸುತ್ತ ಕನ್ನಡ ಸಾಹಿತ್ಯಾಭಿಮಾನಿಗಳೆಲ್ಲರೂ ತಪ್ಪದೆ ಆ ಸಮ್ಮೇಳನಕ್ಕೆ ಬರಬೇಕೆಂದು ಅತ್ಯಂತ ವಿಶ್ವಾಸದಿಂದ ಕೋರುತ್ತಿದೆ.

ಈ ಸಮ್ಮೇಳನ ಬರುವ ವರ್ಷದ ಮೇ ತಿಂಗಳಲ್ಲಿ (May 2011) ಉತ್ತರ ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೋ ಸಮೀಪದಲ್ಲಿ ಅಲ್ಲಿನ ಅತ್ಯಂತ ಪ್ರತಿಷ್ಠಿತ ಕನ್ನಡ ಸಂಸ್ಥೆಯಾದ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ (KKNC) ಸಹ ಪ್ರಾಯೋಜಕತೆಯಿಂದ ನಡೆಯಲಿದೆ. ಅದೇ ಪ್ರದೇಶದಲ್ಲಿರುವ ಸಾಹಿತ್ಯಗೋಷ್ಠಿ ಸಂಸ್ಥೆಯೂ ಈ ಸಮ್ಮೇಳನಕ್ಕೆ ತನ್ನ ಬೆಂಬಲ ನೀಡಿದೆ. ಸಮ್ಮೇಳನದ ವಿವರಗಳನ್ನು ಅವು ಸಿದ್ಧವಾದಂತೆಲ್ಲ ನಿಮಗೆ ದಟ್ಸ್ ಕನ್ನಡ.ಕಾಂ ಮುಂತಾದ ಮಾಧ್ಯಮಗಳ ಮೂಲಕ ತಿಳಿಸುತ್ತೇವೆ. ದಯವಿಟ್ಟು ಅವನ್ನು ಗಮನಿಸಿ.

ಕನ್ನಡ ಸಾಹಿತ್ಯ ರಂಗ ಉತ್ತರ ಅಮೆರಿಕದಲ್ಲಿರುವ ಹಲವಾರು ಕನ್ನಡ ಸಂಸ್ಥೆಗಳಲ್ಲಿ ಸಾಹಿತ್ಯಕ್ಕೇ ಮೀಸಲಾದ ಏಕೈಕ ರಾಷ್ಟ್ರೀಯ ಸಂಸ್ಥೆ. ಸಂಪೂರ್ಣವಾಗಿ ಸ್ವಾವಲಂಬಿಯಾದ, ಸ್ವತಂತ್ರವಾಗಿ ವ್ಯವಹರಿಸುವ, ಆರ್ಥಿಕ ಲಾಭೋದ್ದೇಶವಿಲ್ಲದ ಸಂಸ್ಥೆ ಇದು. ಸಂಸ್ಥೆ ಚಿಕ್ಕದು, ಆದರೆ ಅದರ ಧ್ಯೇಯಗಳು, ಆಶೋತ್ತರಗಳು ದೊಡ್ಡವು. ಇದುವರೆಗೆ ನೀವೆಲ್ಲ ಈ ಸಂಸ್ಥೆಯನ್ನು ಪ್ರೀತಿಯಿಂದ ನೋಡಿ ಅದಕ್ಕೆ ನಿಮ್ಮ ಬೆಂಬಲ ನೀಡಿದ್ದೀರಿ, ಅದಕ್ಕೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಇನ್ನು ಮುಂದೆಯೂ ನೀವು ಅದೇ ರೀತಿ ನಿಮ್ಮ ಬೆಂಬಲ ನೀಡುವಿರೆಂದು ಆಶಿಸುತ್ತೇವೆ.

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಅಮೆರಿಕದ ಸ್ಥಳೀಯ ಕನ್ನಡ ಕೂಟಗಳಲ್ಲೆಲ್ಲ ಅತಿ ದೊಡ್ಡ ಸಂಸ್ಥೆ. 1973ರಲ್ಲಿ ಸ್ಥಾಪನೆಯಾದ ಈ ಕೂಟ ಸಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಸಹಸ್ರಾರು ಕನ್ನಡಿಗರಿಗೆ ಮಮತೆಯ ಮನೆಯಾಗಿದೆ. ವಿವಿಧ ರೀತಿಯ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಲ್ಲದೆ, ಸುತ್ತಲಿನ ಸಮಾಜದೊಂದಿಗೆ ನಿಕಟ ವ್ಯವಹಾರವನ್ನೂ ಇಟ್ಟುಕೊಂಡು ಅದರ ಚಟುವಟಿಕೆಗಳಲ್ಲೂ ಭಾಗವಹಿಸುವ ಸಂಸ್ಥೆ ಇದು. (ಗ್ಯಾಲರಿ ನೋಡಿರಿ) ಹೊಸ ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಉತ್ಸಾಹವಿರುವ ಈ ಸಂಸ್ಥೆಯ ಪದಾಧಿಕಾರಿಗಳು ಕನ್ನಡ ಸಾಹಿತ್ಯ ರಂಗದೊಂದಿಗೆ ಬರುವ ವರ್ಷದ ವಸಂತ ಸಾಹಿತ್ಯೋತ್ಸವನ್ನು ನಡೆಸುವ ಯೋಜನೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ, ಅದಕ್ಕೆ ತಮ್ಮ ಪೂರ್ಣ ಸಹಕಾರ ಬೆಂಬಲಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ರಂಗ ಅತ್ಯಂತ ಋಣಿಯಾಗಿದೆ.

ಈ ಸಮ್ಮೇಳನದ ಮುಖ್ಯ ಗುರಿ ಇಲ್ಲಿನ ಎಲ್ಲ ಕನ್ನಡ ಸಾಹಿತ್ಯಾಸಕ್ತರನ್ನೂ, ಬರಹಗಾರರನ್ನೂ ಒಂದೆಡೆ ಸೇರಿಸಿ ಅವರು ತಂತಮ್ಮ ವಿಚಾರಗಳನ್ನು ಮಂಡಿಸಲು, ಆಲೋಚನೆಗಳನ್ನು ಹಂಚಿಕೊಳ್ಳಲು ಅನುವಾಗುವಂತಹ ಒಂದು ಗದ್ದಲವಿಲ್ಲದ, ನೆಮ್ಮದಿಯ, ಸಂತೋಷದ ವೇದಿಕೆಯನ್ನು ಕಲ್ಪಿಸುವುದು. (ಗ್ಯಾಲರಿ ನೋಡಿರಿ) ಇಲ್ಲಿನವರು ಬರೆದ ಹೊಸ ಪುಸ್ತಕಗಳನ್ನು ಕುರಿತು ಚರ್ಚಿಸುವುದು, ಈ ನಾಡಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಯೋಚಿಸುವುದು, ಕರ್ನಾಟಕದಿಂದ ಬರುವ ಅತಿಥಿ ಸಾಹಿತಿಗಳೊಂದಿಗೆ ಸಾವಧಾನವಾಗಿ, ಮನಸಾರೆ ಮಾತನಾಡುವುದು. ಇಂಥ ಎಲ್ಲಕ್ಕೂ ಒಂದು ಉತ್ತಮ ಅವಕಾಶವನ್ನು ಕೊಡುತ್ತದೆ ಈ ಸಮ್ಮೇಳನ.

ಇವಲ್ಲದೆ ಸಾಹಿತ್ಯಾತ್ಮಕವಾದ ಉತ್ತಮ ಮನರಂಜನೆಯ ಕಾರ್ಯಕ್ರಮಗಳೂ ಇರುತ್ತವೆ. ಈ ಹಿಂದೆ ನಡೆದ ವಸಂತ ಸಾಹಿತ್ಯೋತ್ಸವಗಳಲ್ಲಿ ಪಾಲುಗೊಂಡವರೆಲ್ಲ ತಮ್ಮ ಅನುಭವಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಮುಂದಿನ ಸಮ್ಮೇಳನದಲ್ಲಿ ಇನ್ನೂ ಹೆಚ್ಚು ಮಂದಿ ಪಾಲುಗೊಂಡು ಕನ್ನಡ ಸಾಹಿತ್ಯಸುಧೆಯನ್ನು ಆಸ್ವಾದಿಸುವರೆಂದು ನಂಬಿದ್ದೇವೆ.

ಪ್ರತಿ ಸಮ್ಮೇಳನದ ಸಂದರ್ಭದಲ್ಲೂ ಕನ್ನಡ ಸಾಹಿತ್ಯ ರಂಗ ಒಂದೊಂದು ಹೊಸ ಪುಸ್ತಕ ಹೊರತಂದಿದೆ. ಈ ಪುಸ್ತಕ ಯೋಜನೆಯಲ್ಲಿ ಅಮೆರಿಕದ ಕನ್ನಡ ಲೇಖಕರಿಗೇ ಅಗ್ರಸ್ಥಾನವಿರುತ್ತದೆ. ಈ ಸಲದ ಪುಸ್ತಕ ಯೋಜನೆಯ ಬಗ್ಗೆ ಸದ್ಯದಲ್ಲೇ ಪ್ರಕಟನೆ ಹೊರಡಲಿದೆ. ಅದನ್ನೂ, ಸಮ್ಮೇಳನದ ಬಗ್ಗೆ ಮುಂದೆ ಬರಲಿರುವ ವಾರ್ತಾ ಪ್ರಕಟನೆಗಳನ್ನೂ ದಯವಿಟ್ಟು ಎದುರುನೋಡಿ. ಮತ್ತೊಮ್ಮೆ ಎಲ್ಲ ಕನ್ನಡ ಸಾಹಿತ್ಯಾಭಿಮಾನಿಗಳಿಗೂ ಐದನೇ ವಸಂತ ಸಾಹಿತ್ಯೋತ್ಸವಕ್ಕೆ ಸುಸ್ವಾಗತ ಕೋರುತ್ತೇವೆ.

ವಿವರಗಳಿಗೆ ಎಚ್.ವೈ. ರಾಜಗೋಪಾಲ್ ([email protected]) ಅವರನ್ನು ಸಂಪರ್ಕಿಸಬಹುದು.

* ಎಚ್.ವೈ. ರಾಜಗೋಪಾಲ್
ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ ಕಾರ್ಯಕಾರಿ ಸಮಿತಿ

* ಕೆಎಸ್ಆರ್ ಆಡಳಿತ ವರ್ಗ

ಕನ್ನಡ ಸಾಹಿತ್ಯರಂಗವು 11 ಸದಸ್ಯರನ್ನೊಳಗೊಂಡ ಬೋರ್ಡ್ ಆಫ್ ಟ್ರಸ್ಟೀಸ್ ಆಡಳಿತಕ್ಕೆ ಒಳಪಟ್ಟಿರುತ್ತದೆ. 5 ಸದಸ್ಯರ ಕಾರ್ಯಕಾರಿ ಸಮಿತಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ರೂಪಿಸುತ್ತದೆ . ಈ ಎರಡೂ ಸಮಿತಿಯನ್ನು ಸರ್ವಸದಸ್ಯರ ಸಭೆ ಚುನಾಯಿಸುತ್ತದೆ. ಟ್ರಸ್ಟಿನ ಪ್ರಸಕ್ತ ಸಾಲಿನ ಅಧ್ಯಕ್ಷರು ನ್ಯೂಯಾರ್ಕ್ ನಿವಾಸಿ ಡಾ.ಎಚ್.ಕೆ. ಚಂದ್ರಶೇಖರ್. ಆಡಳಿತ ಸಮಿತಿ ಸದಸ್ಯರ ಹೆಸರು ಕೆಳಕಂಡಂತಿವೆ:

* ಎಚ್ ವೈ ರಾಜಗೋಪಾಲ್ (ಪೆನ್ಸಿಲ್ವೇನಿಯಾ) ಅಧ್ಯಕ್ಷ
* ಎಂ.ಎಸ್. ನಟರಾಜ (ಮೇರಿಲ್ಯಾಂಡ್) ಉಪಾಧ್ಯಕ್ಷ
* ವಲ್ಲೀಶ ಶಾಸ್ತ್ರೀ (ದಕ್ಷಿಣ ಕ್ಯಾಲಿಫೋರ್ನಿಯಾ) ಉಪಾಧ್ಯಕ್ಷ
* ಗೋಪಾಲ್ ಎಸ್ ಕುಕ್ಕೆ (ನ್ಯೂ ಜೆರ್ಸಿ) ಕಾರ್ಯದರ್ಶಿ
* ಗುಂಡು ಶಂಕರ್ (ನ್ಯೂ ಜೆರ್ಸಿ) ಖಚಾಂಜಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X