ಪ್ರೇಕ್ಷಕರ ಮನತಟ್ಟಿದ ಸೀತೆಯ ಸ್ವಗತ

ಇದಿಷ್ಟೇ ಆಗಿದ್ದರೆ ಈ ಪ್ರಯೋಗ ಅದ್ಭುತ ಎನ್ನಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಬಸುರಿ ಸೀತೆಯ ನೋವನ್ನು ಸಶಕ್ತವಾಗಿಸಿದ್ದು ಸ್ವತಃ 36 ವಾರಗಳ ಬಸುರಿಯಾಗಿದ್ದ ಭ್ರಮರಿಯವರು! ಕನ್ನಡ ಕಲಾಕ್ಷೇತ್ರದಲ್ಲಾಗಲೀ ಅಥವಾ ಇತರ ಭಾರತೀಯ ರಂಗಭೂಮಿಯಲ್ಲಿ ಇಂಥ ಒಂದು ಪ್ರಯೋಗವನ್ನು ಇದುವರೆಗೂ ನೋಡಿಲ್ಲ, ಕೇಳಿಲ್ಲ. ಒಬ್ಬ ಬಸುರಿ ಆ ದೇಹಸ್ಥಿತಿಗೆ ತಕ್ಕುದಾದ ಪಾತ್ರವನ್ನು ಅತ್ಯಂತ ನೈಜರೂಪದಲ್ಲಿ ಬಿಂಬಿಸಿದ್ದು ಇದೆ ಮೊದಲೇನೋ. ಆ ದೃಷ್ಟಿಯಿಂದ ನೋಡಿದಾಗಲಂತೂ ಈ ಪ್ರಯತ್ನ ಮಹತ್ವದ್ದು ಎನಿಸುತ್ತದೆ.
ಅಲ್ಲಿ ನೆರೆದಿದ್ದ ನಮಗೆಲ್ಲ ಅವರನ್ನು ನೋಡಿದ ತಕ್ಷಣ ಕಣ್ಣು ಕುಕ್ಕಿದ್ದು ಇಷ್ಟು ತುಂಬಿದ ಬಸುರಿ ಹೇಗೆ ಭರತನಾಟ್ಯ ನಿಭಾಯಿಸಲು ಸಾಧ್ಯ? ಆದರೆ ಒಮ್ಮೆ ರೂಪಕ ಆರಂಭವಾದಾಗ ಅಲ್ಲಿದ್ದಿದ್ದು ಬರೀ ಸೀತೆ, ವಾಲ್ಮೀಕಿಯ ವನದಲ್ಲಿನ ಬಸುರಿ ಸೀತೆ. ಜಟಿಲ ಹೆಜ್ಜೆಗಳಲ್ಲಿ, ಭರತನಾಟ್ಯದ ಬಳುಕು ಭಂಗಿಗಳಲ್ಲಿ, ಭ್ರಮರಿ ಬಸುರಿ ಎಂದು ಅಲ್ಲಿ ಕುಳಿತವರಯಾರಿಗೂ ಅನಿಸಲೇ ಇಲ್ಲ, ಹಾಗೆಯೇ ಸೀತೆಯ ಭಾವವೈವಿಧ್ಯಗಳಲ್ಲಿ ಕಂಡಿದ್ದು ಕೇವಲ ತುಂಬಿದ ಬಸುರಿ ಸೀತೆ.
ರೂಪಕವು ಸೀತೆ ವಾಲ್ಮೀಕಿಯ ವನದಲ್ಲಿ ಒಬ್ಬಳೇ ಕುಳಿತು ಮರೆಯಾಗುತ್ತಿರುವ ಲಕ್ಷ್ಮಣನನ್ನೇ ನೋಡುತ್ತಾ, ಹಕ್ಕಿಗಳ ಕುಹೂಗಾನದಿಂದ ಯೋಚನಾಸರಣಿ ತುಂಡಾಗಿಯೂ, ಹೊಸ ಸರಣಿ ಆರಂಭವಾದಂತೆಯೂ ಮೊದಲಾಗುತ್ತದೆ. ಹುತ್ತದಿಂದ ಹೊರಬಂದು ಕವಿಯಾದವನೇ, ಕೇಳು ನನ್ನ ವ್ಯಥೆಯ, ಹಾಡು ನನ್ನ ಕಥೆಯ ಎಂದು ಸೀತೆ ಅನ್ನುತ್ತಿದ್ದಂತೆ, ವನವೆಲ್ಲ ರಾಮನಾಮದಿಂದ ಅನುರಣಿಸತೊಡಗುತ್ತದೆ. ಆಗ ಸೀತೆಯ ಮನ ನಲಿವಿನಿಂದ ತುಯ್ಯಿತೆ, ನೋವಿನಿಂದ ಹುಯಿಲಿಟ್ಟಿತೆ?
![]() | |
| ಹೌದು.. ಕೊನೆಗೂ ಬಣ್ಣದ ಜಿಂಕೆ ಸಿಗಲಿಲ್ಲ ಸೀತೆಗೆ. | |
![]() | |
ತನ್ನ ಕನಸುಗಳೆಲ್ಲ ಯಾವಾಗಲೂ ಕಾಡಿನ ಪಾಲೇಕೆ ಎಂದು ಕೇಳುವ ಸೀತೆಗೆ ಉತ್ತರ ಯಾರಲ್ಲಿದೆ? ಆದರೆ ಆ ಕಾಡಲ್ಲಿ ರಾಮ ನೀ ಜೊತೆಗಿದ್ದೆ. ಎದೆಯ ಹಾರಗಳನ್ನೂ ತೆಗೆದಿರಿಸಿ ಮೈಗೆ ಮೈತಾಗಿಸಿ ಸುತ್ತಿದ ಆ ಅರಣ್ಯ ರಮ್ಯಲೋಕವಾಗಿತ್ತು ಎಂದು ಹಂಬಲಿಸುವ ವಿರಹಿ ಸೀತೆ. ಜೊತೆಯಲ್ಲೇ ಕರಾಳ ಲಂಕೆಯ ಕತ್ತಲ ನೆನಪುಗಳು. ಅಂದು ಶೂರ್ಪನಖಿ ನಕ್ಕಳು, ಪ್ರತಿಯಾಗಿ ನಾನೂ ನಕ್ಕೆ.. ಆದರೆ ಆ ನಗುಗಳ ತಾಕಲಾಟದಲ್ಲಿ ನನ್ನ ಜೀವನದ ನಗುವೇ ಮಾಯವಾಗಿತ್ತು. ನನಗಾಗಿ ಶೂರ್ಪನಖಿಯನ್ನು ದೂಡಿದವನೆ.. ಇಂದು ಯಾರಿಗಾಗಿ ನನ್ನ ಕಾಡಿಗೆ ದೂಡಿದೆ? ಸೀತೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ. ಸ್ವರ್ಣಜಿಂಕೆ ಸಿಗದೇ ಸ್ವರ್ಣಲಂಕೆ ಸುಟ್ಟವ ನೀನು, ಸ್ವರ್ಣಬೆಂಕಿಯಲ್ಲಿ ಸುಟ್ಟುಬಂದವಳು ನಾನು. ಇವೆಲ್ಲದರ ನಡುವೆ ನಾವಿಬ್ಬರೂ ಕಳೆದುಕೊಂಡದ್ದನ್ನು ಈ ಕಾಡಿನಲ್ಲಿ ಹುಡುಕಲೆಂದು ಇಲ್ಲಿ ಬಿಟ್ಟಿರುವೆಯಾ ರಾಮ ಎನ್ನುವ ಸೀತೆಯ ಸಂಕಟ ಏರುತ್ತಲೇ ಹೋಗುತ್ತದೆ. ಕೊನೆಗೂ ಸ್ವರ್ಣಜಿಂಕೆ ಸಿಗದೇ ಹೋಯಿತು ನನಗೆ ಆ ಜಿಂಕೆ ಸಿಗದೇ ಹೋಯಿತು! ಜಿಂಕೆ ಇಲ್ಲಿ ಒಂದು ಚಿತ್ರ ಮಾತ್ರ. ಸೀತೆಯ ಹತಭಾಗ್ಯದ ಆಕೆ ಉರಿದ ಬೆಂಕಿಯಲ್ಲಿ ಕರಟಿ ಹೋದ ಕನಸುಗಳ ಪ್ರತಿರೂಪಿ ಜಿಂಕೆ ಪ್ರೇಕ್ಷಕರ ಕಣ್ಣೆದುರಲ್ಲಿ ಅವರ ಮನದಲ್ಲಿ ಬದಲಾಗುತ್ತ ಹೋಗುತ್ತದೆ.
ಭಾವಭಿವ್ಯಕಿಯ ಅಂಗವಾಗಿಯೋ.. ನರ್ತನದ ಸಂಕೀರ್ಣತೆಗಳ ತೊಯ್ದಾಟಗಳಿಂದ ಮಗುವನ್ನು ಸಮಾಧಾನಿಸಲೋ ಎನ್ನುವಂತೆಯೋ.. ಭ್ರಮರಿ ಮಧ್ಯೆ ಮಧ್ಯೆ ತಮ್ಮ ತುಂಬಿದ ಹೊಟ್ಟೆ ಸವರಿಕೊಳ್ಳುತ್ತಿದ್ದರೆ, ಅಧಾರ ಕೊಡುತ್ತಿದ್ದರೆ ಪಾಪ ಆ ಸೀತೆ ಹೇಗೆ ಅನುಭವಿಸಿದಳೋ ಇಷ್ಟೆಲ್ಲಾ ಸಂಕಟ ಎಂದು ಪ್ರತಿಯೊಬ್ಬರೂ ಮಿಡಿಯುತ್ತಿದ್ದರು.
ಲಕ್ಷ್ಮಣ ರೇಖೆಯನ್ನು ದಾಟಿದ ತಪ್ಪಿಗೆ ಲಕ್ಷ್ಮಣನನ್ನೇ ಕಾಡಿಗೆ ಬಿಡಲು ಕಳಿಸಿದೆಯ? ರೇಖೆ ದಾಟಿದ ತಪ್ಪಿಗೆ ಹಾಗಿದ್ದರೆ ಸೀತೆ ಅನುಭವಿಸಿದ್ದು ಸಾಲದೇ? ಅವಳ ಪ್ರಶ್ನೆಗಳಿಗೆ ಉತ್ತರ ರಮಾಯಣದಲ್ಲಂತೂ ಉತ್ತರವಿಲ್ಲ. ಅಲ್ಲಿ ಗರಬಡಿದವರಂತೆ ಕೂತ ನಮ್ಮಲ್ಲೂ ಉತ್ತರವಿರಲಿಲ್ಲ. ವಿಲಾಪಿಸುವ ಸೀತೆ ಮತ್ತೆ ಅಗ್ನಿರೂಪದಲ್ಲಿ ಸಾಮಾನ್ಯ ಹೆಣ್ಣಂತೆ ಕೆಂಡಕೋಪವಾಗಿ ನೀನೀಗ ಪ್ರಜಾರಮಣ ಜಗದೇಕವೀರ ರಾಮನಲ್ಲವೇ. ಮುಂದೆ ನೀನು ಅಶ್ವಮೇಧದ ಸಂಕಲ್ಪ ಮಾಡಿದರೆ, ನಿನ್ನ ಯಜ್ಞಕ್ಕೆ ಒದಗುವವಳು ಈ ಸಂಗಾತಿಯಲ್ಲ. ಸ್ವರ್ಣಬೆಂಕಿಯಲಿ ಉರಿದರೂ ಆರದ ಈ ತೇಜವಲ್ಲ, ಸಂಶಯದ ಸುಳಿಯಲ್ಲಿ ಸಿಕ್ಕು ಮನದ ಬೇಗುದಿಯ ಒಳಸುಳಿಯೊಳಗೆಲ್ಲ ನಲುಗಿ ಕೆಂಪಾದ ಸ್ವರ್ಣಸೀತೆ; ಅದಷ್ಟೇ ಇನ್ನು ನಿನ್ನ ಪಾಲಿಗೆ ಎಂದು ಉಸುರುವಾಗ ನಿನ್ನ ತೀರ್ಮಾನ ಸರಿ ಸೀತೆ ಭೇಷ್ ಎನ್ನಬೇಕು ಅನಿಸುತ್ತಿತ್ತು.
ಮತ್ತೆ ಕುಹೂ ಗಾನದಿಂದ ಎಚ್ಚತ್ತ ಸೀತೆ ತಾನಿನ್ನು ಬದುಕುವುದು ತನ್ನ ಬಸಿರ ಭಾಗ್ಯಕ್ಕಾಗಿ ಎನ್ನುತ್ತಾ ಸೀತೆ ಈಗ ಮಾತೆ.. ಜಗನ್ಮಾತೆ ಎಂಬ ಗಾಯನದೊಂದಿಗೆ ಮುಕ್ತಾಯಗೊಳ್ಳುತ್ತದೆ. ಉದ್ಯಾವರರ ಸರಳ ಸಂಕ್ಷಿಪ ಆದರೂ ಸಮಗ್ರವಾಗಿ ಸೀತೆಯ ಪ್ರಶ್ನೆಗಳನ್ನು ಬಿಂಬಿಸುವ ಪಾಂಡಿತ್ಯಪೂರ್ಣ ಸಾಹಿತ್ಯಕ್ಕೆ ಭ್ರಮರಿಯವರ ಸುಶ್ರಾವ್ಯ ಕಂಠದಲ್ಲಿ, ಸಂಗೀತ ಸಾಥಿಯಲ್ಲಿ.. ಅವರ ತುಂಬಿದ ಬಸುರಿಯ ಸ್ಥಿತಿಯಲ್ಲಿನ ಅದ್ಭುತ ನರ್ತನ ಸೀತೆಯನ್ನು ನಮಗೆ ತಲುಪಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಸಾಹಿತ್ಯ ಪರಿಪಕ್ವವಾಗಿದ್ದರೂ ಈ ಕೃತಿಯನ್ನು ಸಹಜ ಸ್ಥಿತಿಯಲ್ಲಿ ಎಷ್ಟೇ ಸುಂದರವಾಗಿ ಸಂಕೀರ್ಣತೆಗಳಿಂದ ನರ್ತಿಸಿದ್ದರೂ ಸೀತೆ ನಮ್ಮನು ಇಷ್ಟು ಗಾಢವಾಗಿ ತಟ್ಟುತ್ತಿದ್ದಳೋ ಇಲ್ಲವೋ. ಭ್ರಮರಿಯವರು ಬಸುರಿಯ ಬಯಕೆಯೆಂಬಂತೆ ಈ ಒಂದು ಕೃತಿಯನ್ನು ಅನುಭವಿಸಿ ಅಭಿನಯಿಸಿದ್ದು ಸೀತೆಯ ಸ್ವಗತವನ್ನು ಅನಿರ್ವಚನೀಯ ಅನುಭವವನಾಗಿಸಿದೆ. ಅಲ್ಲಿಂದ ಹೊರಬಂದರೂ ಮನದಲ್ಲುಳಿಯುವುದು ಒಂದೇ ಭಾವ. "ಹೌದು.. ಕೊನೆಗೂ ಬಣ್ಣದ ಜಿಂಕೆ ಸಿಗಲಿಲ್ಲ ಸೀತೆಗೆ".
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ














Click it and Unblock the Notifications