ಹುಬ್ಬಳ್ಳಿಗೂ ತಟ್ಟಿದ ಯುದ್ಧದ ಬಿಸಿ; ಗ್ಯಾಸ್ ಇಲ್ಲದೆ ಮಂಗಳವಾರ ರಾತ್ರಿಯಿಂದಲೇ ಹೋಟೆಲ್‌ಗಳು ಬಂದ್ ಸಾಧ್ಯತೆ

ಹುಬ್ಬಳ್ಳಿ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಕರಿನೆರಳು ಇದೀಗ ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯ ಮೇಲೂ ಬಿದ್ದಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಈ ಯುದ್ಧದ ತೀವ್ರತೆಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿವೆ. ಇದರ ನೇರ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ (Commercial LPG) ಪೂರೈಕೆಯನ್ನು ದಿಢೀರನೆ ಸ್ಥಗಿತಗೊಳಿಸಲಾಗಿದೆ. ಗ್ಯಾಸ್ ಪೂರೈಕೆ ಇಲ್ಲದೆ ಕಂಗಾಲಾಗಿರುವ ಹುಬ್ಬಳ್ಳಿಯ ಹೋಟೆಲ್ ಉದ್ಯಮಿಗಳು, ಅನಿವಾರ್ಯವಾಗಿ ಮಂಗಳವಾರ ರಾತ್ರಿಯೊಳಗೆ ಹೋಟೆಲ್‌ಗಳ ಬಾಗಿಲು ಮುಚ್ಚುವ ಪರಿಸ್ಥಿತಿಗೆ ತಲುಪಿದ್ದಾರೆ.

ಮಂಗಳವಾರ ರಾತ್ರಿಯಿಂದಲೇ ಹೋಟೆಲ್‌ಗಳು ಬಂದ್

ಅಡುಗೆ ಅನಿಲವಿಲ್ಲದೆ ಯಾವುದೇ ಹೋಟೆಲ್ ಉದ್ಯಮ ನಡೆಯಲು ಸಾಧ್ಯವಿಲ್ಲ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಹುಬ್ಬಳ್ಳಿ ಹೋಟೆಲ್ ಸಂಘದ ಕಾರ್ಯದರ್ಶಿ ರವೀಂದ್ರ ಗಾಯತೊಂಡೆ ಅವರು ವಾಸ್ತವ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ. "ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಆಹಾರ ಇಲಾಖೆ ನಮಗೆ ಅಧಿಕೃತವಾಗಿ ಸೂಚನೆ ನೀಡಿದೆ. ಸದ್ಯ ನಮ್ಮ ಬಳಿ ಸಂಗ್ರಹವಿರುವ ಒಂದೆರಡು ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಬಳಸಿಕೊಂಡು ಮಂಗಳವಾರ ಸಂಜೆ ಅಥವಾ ರಾತ್ರಿಯವರೆಗೆ ಹೇಗೋ ಹೋಟೆಲ್ ನಡೆಸಬಹುದು. ಆದರೆ, ಆ ಬಳಿಕ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಹೋಟೆಲ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡುವುದು ಅನಿವಾರ್ಯವಾಗಿದೆ" ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Hubballi Hotels

ರಾಜ್ಯಕ್ಕೆ ಮಾತ್ರ ಯಾಕೆ ಈ ಶಿಕ್ಷೆ?

ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಪ್ರಮುಖ ಕಾರಣವೆಂದರೆ, ಈ ವಾಣಿಜ್ಯ ಗ್ಯಾಸ್ ಪೂರೈಕೆ ಸ್ಥಗಿತ ಕೇವಲ ಕರ್ನಾಟಕ ಮತ್ತು ನೆರೆಯ ತಮಿಳುನಾಡಿಗೆ ಮಾತ್ರ ಸೀಮಿತವಾಗಿದೆ. "ದೇಶದ ಉಳಿದ ಯಾವುದೇ ರಾಜ್ಯಗಳಲ್ಲಿ ಈ ಗ್ಯಾಸ್ ಪೂರೈಕೆಯ ಸಮಸ್ಯೆಯಿಲ್ಲ. ಕೇವಲ ನಮ್ಮ ಎರಡು ರಾಜ್ಯಗಳಿಗೆ ಮಾತ್ರ ಏಕೆ ಈ ತಾರತಮ್ಯ ಮಾಡಲಾಗುತ್ತಿದೆ? ಈ ಹೋಟೆಲ್ ಉದ್ಯಮವನ್ನು ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ ಕೇಂದ್ರ ಸಚಿವ ಹಾಗೂ ಸ್ಥಳೀಯ ಸಂಸದರಾದ ಪ್ರಲ್ಹಾದ್ ಜೋಶಿ ಅವರನ್ನು ಸಂಪರ್ಕಿಸಲು ಸಾಕಷ್ಟು ಬಾರಿ ಯತ್ನಿಸಿದರೂ, ಅವರಿಂದ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ" ಎಂದು ಹೋಟೆಲ್ ಉದ್ಯಮಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ 5 ಸಾವಿರಕ್ಕೂ ಅಧಿಕ ಹೋಟೆಲ್‌ಗಳು

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಹೋಟೆಲ್ ಉದ್ಯಮವೇ ಪ್ರಮುಖ ವಾಣಿಜ್ಯ ಚಟುವಟಿಕೆಯಾಗಿದೆ. ಹುಬ್ಬಳ್ಳಿ ಹೋಟೆಲ್ ಸಂಘದ ಅಡಿಯಲ್ಲಿಯೇ ಸುಮಾರು 300ಕ್ಕೂ ಹೆಚ್ಚು ಸುಸಜ್ಜಿತ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಸಣ್ಣ ಪುಟ್ಟ ದರ್ಶಿನಿಗಳು, ಟೀ ಸ್ಟಾಲ್‌ಗಳು, ಹಾಗೂ ಬೀದಿಬದಿ ಉಪಾಹಾರ ಗೃಹಗಳನ್ನು ಸೇರಿಸಿದರೆ ನಗರದಲ್ಲಿ ಒಟ್ಟು 5,000ಕ್ಕೂ ಹೆಚ್ಚು ಹೋಟೆಲ್‌ಗಳಿವೆ.

"ಒಂದೊಂದು ಸಣ್ಣ ಹೋಟೆಲ್‌ಗೂ ದಿನಕ್ಕೆ ಕನಿಷ್ಠ 16.5 ಕೆ.ಜಿ. ಸಾಮರ್ಥ್ಯದ ಒಂದು ಅಥವಾ ಎರಡು ವಾಣಿಜ್ಯ ಸಿಲಿಂಡರ್‌ಗಳು ಬೇಕೇ ಬೇಕು. ದೊಡ್ಡ ಹೋಟೆಲ್‌ಗಳಿಗೆ ಇದರ ಅವಶ್ಯಕತೆ ಇನ್ನೂ ಹೆಚ್ಚಿರುತ್ತದೆ. ಅಡುಗೆ ಅನಿಲಕ್ಕೆ ಪರ್ಯಾಯವಾಗಿ ಉರುವಲು ಅಥವಾ ಇತರ ವ್ಯವಸ್ಥೆಗಳನ್ನು ದಿಢೀರನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಹೋಟೆಲ್ ಮುಚ್ಚುವುದೊಂದೇ ನಮ್ಮ ಮುಂದಿರುವ ದಾರಿ" ಎಂದು ಗಾಯತೊಂಡೆ ವಿವರಿಸಿದ್ದಾರೆ.

ಮುಂದೇನು ಗತಿ?

ಹೋಟೆಲ್‌ಗಳು ದಿಢೀರ್ ಬಂದ್ ಆದರೆ ಕೇವಲ ಮಾಲೀಕರಿಗಷ್ಟೇ ಅಲ್ಲ, ಅಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ ಹಾಗೂ ಪ್ರತಿದಿನ ಹೋಟೆಲ್ ಊಟವನ್ನೇ ನಂಬಿಕೊಂಡಿರುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೂ ಭಾರೀ ತೊಂದರೆಯಾಗಲಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ, ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ ವಾಣಿಜ್ಯ ಗ್ಯಾಸ್ ಪೂರೈಕೆಯನ್ನು ಸುಗಮಗೊಳಿಸಬೇಕು ಎಂಬುದು ಎಲ್ಲರ ಒಕ್ಕೊರಲಿನ ಆಗ್ರಹವಾಗಿದೆ. ಇಲ್ಲವಾದಲ್ಲಿ ಹುಬ್ಬಳ್ಳಿಯ ಆರ್ಥಿಕ ಚಟುವಟಿಕೆಗಳ ಮೇಲೂ ಇದು ಗಂಭೀರ ಪರಿಣಾಮ ಬೀರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+