• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆದರ್ಲ್ಯಾಂಡ್ಸ್ ನಲ್ಲಿ ಶ್ರೀಗಂಧದ ಘಮಘಮ

By Staff
|

Kannada Rajyotsava in Srigandha Kannada Koota, Netherlands
“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿ ನುಡಿಯಂತೆ, ಕನ್ನಡಿಗರು ತಾಯ್ನಾಡಲ್ಲಿರಲಿ ಅಥವಾ ವಿದೇಶದಲ್ಲಿರಲಿ, ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂತೆಯೇ ನೆದರ್ಲ್ಯಾಂಡ್ಸ್ ನ ಶ್ರೀಗಂಧ ಕನ್ನಡ ಬಳಗದ ಸದಸ್ಯರೂ ಕೂಡಿ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅಭಿಮಾನದಿಂದ ಆಚರಿಸಿದರು.

* ಶೆಲ್ವನಾರಾಯಣ, ನೆದರ್ಲ್ಯಾಂಡ್ಸ್

ಕನ್ನಡ ಭಾಷೆಯನ್ನು ಮಾತಾಡುವ ಭೂಪ್ರದೇಶಗಳನ್ನು ಒಗ್ಗೂಡಿಸಲು ನಡೆದ ಏಕೀಕರಣ ಚಳವಳಿಯ ಫಲವಾಗಿ ನವೆಂಬರ್ 1, 1956 ರಂದು ಕನ್ನಡ ನಾಡಿನ ಶುಭೋದಯವಾಯಿತು ಹಾಗು ಕರ್ನಾಟಕ ಎಂಬ ಹೆಸರಾಯಿತು. ಅಂದಿನಿಂದ, ಕರ್ನಾಟಕದ ಏಕೀಕರಣಕ್ಕೆ ನಡೆದ ಚಳವಳಿಯ ಹಾಗೂ ಅದಕ್ಕಾಗಿ ಶ್ರಮಿಸಿದ ಕನ್ನಡಾಂಬೆಯ ಭಕ್ತರ ನೆನಪಿಗಾಗಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ.

ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವು ಅನಿವಾರ್ಯ ಕಾರಣಗಳಿಂದ ತಡವಾಗಿ ಪ್ರಾರಂಭವಾದರೂ ಶೆಲ್ವನಾರಾಯಣ ಹಾಗು ಇತರ ಕಾರ್ಯಕರ್ತರ ನೇತೃತ್ವದಲ್ಲಿ ಸುಗಮವಾಗಿ ನಡೆಯಿತು. ಕಾರ್ಯಕ್ರಮದಲ್ಲಿ 95 ಮಂದಿ ಹಿರಿಯರು ಹಾಗು 25 ಮಂದಿ ಮಕ್ಕಳು ಬಾಗವಹಿಸಿದ್ದರು. ಮೊದಲಿಗೆ, ಇತ್ತೀಚೆಗೆ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಅಸುನೀಗಿದವರ ನೆನಪಿನಲ್ಲಿ, ಎರಡು ನಿಮಿಷಗಳ ಕಾಲ ಮೌನವನ್ನಾಚರಿಸುವುದರ ಮೂಲಕ ಶ್ರದ್ಧಾಜಲಿಯನ್ನು ಸಲ್ಲಿಸಲಾಯಿತು.

ನಂತರ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ವೀಣಾ ಅವರು ಸೊಗಸಾಗಿ ನಡೆಸಿಕೊಟ್ಟರು. ಕಾರ್ಯಕ್ರಮವು ವೀಣಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ನಾಡಗೀತೆಯನ್ನು, ಅಜಿತ್ ಮತ್ತು ತಂಡದವರು ಭಾವಪೂರ್ಣವಾಗಿ ಹಾಡಿದರು.

ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಯಾವುದೇ ವಿಚಾರವಿರಲಿ, ಎಳವೆಯಲ್ಲಿ ಅದರ ಬೀಜ ಬಿತ್ತಿದರೆ, ನಾಳೆ ಅದೇ ಬೆಳೆದು ಹೆಮ್ಮರವಾಗುವುದು. ಆದ ಕಾರಣ ತಮ್ಮ ನಾಡಿನಿಂದ ದೂರವಿರುವ ಇಲ್ಲಿನ ಮಕ್ಕಳನ್ನು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸುವುದು ಬಹಳ ಮುಖ್ಯ. ಅಲ್ಲದೆ, ಮಕ್ಕಳೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಉತ್ತಮವಾದ ವೇದಿಕೆ. ಇವೆಲ್ಲವನ್ನೂ ಬಿಂಬಿಸುವಂತೆ, ಕನ್ನಡದ ಅಣ್ಣ ಡಾ. ರಾಜಕುಮಾರ್ ಅವರ ಅಮರಗೀತೆ “ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು" ಎಂದು ಪುಟಾಣಿಗಳಾದ ಶ್ರೇಯಸ್ ಮತ್ತು ಆರ್ಯ ಉತ್ಸಾಹದಿಂದ ಕುಣಿದಾಗ ಅಲ್ಲಿ ನೆರೆದವರ ಸಂತೋಷ ಹೇಳತೀರದು. ಅವರೊಂದಿಗೆ ಅಲ್ಲಿದ್ದ ಇತರ ಪುಟಾಣಿಗಳೂ ವೇದಿಕೆಯನ್ನೇರಿ, ಸಂಭ್ರಮದಿಂದ, ಕನ್ನಡದ ಬಾವುಟವನ್ನು ಬೀಸುತ್ತಾ ತಪ್ಪು ಹೆಜ್ಜೆಗಳನ್ನಿಟ್ಟು ಮುದ್ದಾಗಿ ಕುಣಿದಾಗ, ಅಲ್ಲಿ ನೆರೆದಿದ್ದ ಎಲ್ಲರೂ ಹರ್ಷೋದ್ಗಾರಗಳೊಂದಿಗೆ ಚಪ್ಪಾಳೆ ತಟ್ಟಿದರು.

ಆನಂತರದ್ದು, ಇಡೀ ದಿನದ ಕಾರ್ಯಕ್ರಮಕ್ಕೆ ಕಲಶಪ್ರಾಯವಾಗಿ ನಿಂತ ಭರತನಾಟ್ಯ ಪ್ರದರ್ಶನ. ವಿದೇಶದಲ್ಲಿದ್ದಾಗಲೂ ನಮ್ಮ ಶಾಸ್ತ್ರೀಯ ನೃತ್ಯ ಕಲೆಗಳ ಶಿರೋಮಣಿಯಾದ ಭರತನಾಟ್ಯದ ಸೊಂಪನ್ನು ಅನುಭವಿಸುವ ಅವಕಾಶ ದೊರಕುವುದು ವಿರಳ. ಈ ಬಾರಿ ಈ ಸೌಭಾಗ್ಯ ಶ್ರೀಗಂಧದ ಸದಸ್ಯರದ್ದಾಗಿತ್ತು. ಭರತನಾಟ್ಯದಲ್ಲಿ ಬಹಳ ವರ್ಷಗಳ ಪರಿಶ್ರಮವನ್ನು ಹೊಂದಿದ, ಹಲವಾರು ಪ್ರಶಸ್ತಿಗಳನ್ನೂ ಗಳಿಸಿದ ಕಲಾವಿದೆ ಉಷಾರವರು ತಮ್ಮ ಅದ್ಭುತವಾದ ನೃತ್ಯಪ್ರದರ್ಶನದಿಂದ ಎಲ್ಲರ ಮನಸೂರೆಗೊಂಡರು. ಅವರು ಮೂರು ಕಲಶಗಳ ಮೇಲೆ ದೀಪವನ್ನಿಟ್ಟು, ಎರಡೂ ಕೈಗಳಲ್ಲಿ ದೀಪವನ್ನು ಹಿಡಿದು, ನರ್ತಿಸುತ್ತಾ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದನ್ನು ವೀಕ್ಷಕರು ಉಸಿರುಬಿಗಿಹಿಡಿದು ನೋಡಿದರು.

ಹೀಗೆ ಭರತನಾಟ್ಯವನ್ನು ಆಸ್ವಾದಿಸುತ್ತಾ ಮಾನಸಿಕವಾಗಿ ಭಾರತಕ್ಕೇ ಹೋದ ಪ್ರೇಕ್ಷಕರನ್ನು ಪುನಃ ವಾಸ್ತವಕ್ಕೆ, ನಗಿಸುತ್ತಾ ಕರೆದುತರವಲ್ಲಿ ಮುಂದಿನ ಕಾರ್ಯಕ್ರಮ “ಡೀಲ್" ಎಂಬ ಪ್ರಹಸನ ಸಫಲವಾಯಿತು. ಇಲ್ಲಿನ ಬಹಳಷ್ಟು ಜನ ಭಾರತೀಯರು ಅನುಭವಿಸಿರುವಂತೆ, ನೆದರ್ಲ್ಯಾಂಡ್ಸ್ ಸ್ವಲ್ಪ “ಕಾಸ್ಟ್ಲಿ" ಅಂತಾನೆ ಅನಿಸುವ ದೇಶ. ಅಲ್ಲದೇ ಇಲ್ಲಿ “ಸೆಟ್ಲ್" ಆಗಲು ಬರುವ ಭಾರತೀಯರೂ ಕಡಿಮೆ. ಪ್ರಾಜೆಕ್ಟ್ ಗಳ ಮೇಲೋ, ಅಲ್ಪಾವಧಿ ಕೆಲಸದ ಮೇಲೋ, ಇಲ್ಲಾ ಓದಲು ಎಂದೋ, ಇಲ್ಲಿಗೆ ಬರುವವರು ಹೆಚ್ಚು. ಆದ್ದರಿಂದ, ಇಲ್ಲಿ ಎಲ್ಲಾದಕ್ಕೂ (ಸೆಕೆಂಡ್ ಹ್ಯಾಂಡ್) ಸೇಲ್ ಗೂ ಡೀಲ್ ಗೂ ಅವಕಾಶಾನೂ, ಅವಶ್ಯಕತೆನೂ ಹೆಚ್ಚು.

ಇದಲ್ಲದೇ, ವಿದೇಶಗಳಲ್ಲಿ ಇದ್ದಾಗ, ಸಾಮಾನ್ಯವಾಗಿ ಎದುರಾಗುವ ಸಂದರ್ಭಗಳನ್ನು ಸತೀಶ್ ಮತ್ತು ತಂಡದವರು “ಡೀಲ್" ಎಂಬ ಪ್ರಹಸನದಲ್ಲಿ ಹಾಸ್ಯಮಯವಾಗಿ ಪ್ರದರ್ಶಿಸಿದರು. ಈ “ಡೀಲ್" ನ ಹಿಂದೆ ಬೀಳುವ ಬುದ್ಧಿ ಹೆಚ್ಚಾದಾಗ ಮನೆಯಲ್ಲಿ ನಡೆಯುವ ಅನಾಹುತಗಳು, ಮನೆಯಲ್ಲಿ ಒಬ್ಬ ದಂಡದ ಭಾವಮೈದುನ, ಅಪ್ಪ ಅಮ್ಮಂದಿರನ್ನು ಕರೆಸಿಕೊಳ್ಳೋಣವೆಂದೋ, ಯುರೋಪು ಟ್ರಿಪ್ ಹೋಗೋಣವೆಂದೋ ಪೀಡಿಸುವ ಹೆಂಡತಿ, ಈ ಎಲ್ಲಾ ಸಮಸ್ಯೆಗಳೂ ಒಟ್ಟಿಗೆ ಬಂದಾಗ ಕಂಗಾಲಾಗುವ “ಮೀನಾಕ್ಷಿಯ" ಪತಿಯ ಪರಿಸ್ಥಿತಿಯನ್ನು ಈ ಪ್ರಹಸನವು ರಸವತ್ತಾಗಿ ಚಿತ್ರಿಸಿತು. ಈ ಪ್ರಹಸನದಲ್ಲಿ ಒಬ್ಬರು ಡಚ್ ಮಹನೀಯರೂ ಸೇರಿಕೊಂಡಿದ್ದು ಪ್ರಹಸಕ್ಕೆ ಕಳೆಕಟ್ಟಿತು. ಆನಂತರ ಎಲ್ಲರಿಗೂ ಸಾಕಷ್ಟು ಹಸಿದಿದ್ದರಿಂದ, ಭೋಜನ ಕಾರ್ಯಕ್ರಮವು ಮೊದಲುಗೊಂಡಿತು.

ಭಾನುವಾರ ಮಧ್ಯಾಹ್ನ, ಶೆಲ್ವನಾರಾಯಣ ಹಾಗೂ ತಂಡದವರು ಪ್ರದರ್ಶಿಸಿದ “ಚಾನೆಲ್ 420" ಎಂಬ ನಗೆನಾಟಕ, ಗಲ್ಲಿಗೊಂದರಂತೆ ಹುಟ್ಟಿಕೊಂಡಿರುವ ಟಿ.ವಿ ಚಾನಲ್ಗಳು ಹಾದಿಯಲ್ಲಿ ಸಿಕ್ಕವರನ್ನೆಲ್ಲಾ ಹಿಡಿದು ಸಂದರ್ಶನ ಮಾಡಿ ಬಿತ್ತರಿಸುವ ಸುತ್ತ ಹೆಣೆದಿತ್ತು. ನಗರದ ಸಾಫ್ಟ್ವೇರ್ ಇಂಜಿನೀಯರ್ ಇಂದ ಹಿಡಿದು ಗ್ರಾಮದ ರೈತರವರೆಗೆ ಎಲ್ಲರನ್ನೂ ಸಂದರ್ಶಿಸಿ ಬಿತ್ತರಿಸುವ ವಾಹಿನಿಯ ಕಥನ ಇದಾಗಿತ್ತು. ಇದರಲ್ಲಿ ತಲೆತಿನ್ನುವ ರಿಪೋರ್ಟರ್ ಆಗಿ ಅಜಿತ್, ಭುವನೇಶ್ವರಿಯಾಗಿ ಸುಷ್ಮಾ, ಬಡಪಾಯಿ ಸಾಫ್ಟ್ವೇರ್ ಇಂಜಿನೀರ್ ಆಗಿ ಗಿರಿಧರ್ ಮತ್ತೆ ಮಣ್ಣಿನಮಗ ಪುಟ್ಟಸ್ವಾಮಿಯಾಗಿ ಶೆಲ್ವನಾರಾಯಣ ಅವರು ತಮ್ಮ ಸಮರ್ಥವಾದ ಅಭಿನಯದಿಂದ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.

ಪುಟ್ಟಸ್ವಾಮಿಯ ಮಗಳಾಗಿ ಅಭಿನಯಿಸಿದ 1 ವರ್ಷದ ಪುಟಾಣಿ ಅಭಿಜ್ಞಾ ನಾಟಕದ ಮಧ್ಯದಲ್ಲಿ ಅಪೇಕ್ಷಿಸಿದಂತೆ ಕುಯ್ಗುಟ್ಟುತ್ತಾ ಹಾಸ್ಯಕ್ಕೆ ಮತ್ತಷ್ಟು ಮೆರಗು ನೀಡಿದ್ದಳು. ಇದಾದ ಮೇಲೆ, ಕನ್ನಡ ಚಿತ್ರರಂಗದ ವಿಹಂಗಮ ನೋಟವೆಂಬ ರುಚಿರುಚಿಯಾದ 'ಚೌಚೌಭಾತನ್ನು' ಶ್ರೀಮತಿ ವಿನಯಾ ಮತ್ತು ತಂಡದವರು ಉಣಬಡಿಸಿದರು. ಬಹಳ ಮನೋಜ್ಞವಾಗಿ ಮೂಡಿಬಂದ ಈ ಕಾರ್ಯಕ್ರಮವು, ನಮ್ಮ ಕನ್ನಡ ಚಿತ್ರರಂಗ ಬೆಳೆದುಬಂದ ಹಾದಿಯನ್ನು ಝಲಕ್ ಗಳ ಮೂಲಕ ತೋರಿಸುವ ವಿಶಿಷ್ಟವಾದ ಪ್ರಯತ್ನವಾಗಿತ್ತು. ರಾಜಕುಮಾರ್, ಅರುಣ್ ಕುಮಾರ್ ಹಾಗೂ ಆರತಿ ಇವರ ನಟನಾಶೈಲಿಯನ್ನು, ಪುನಃ ನೆದರ್ಲ್ಯಾಂಡ್ಸ್ ನಲ್ಲಿ ನೋಡುವಾಗ ಎಷ್ಟೋ ಪ್ರೇಕ್ಷಕರ ಮನಃಪಟಲದಲ್ಲಿ ಅಂದಿನ ಸಿನೆಮಾಗಳ ಸುಂದರ ನೆನಪುಗಳು ಹಾದುಹೋಗಿರಬಹುದು. ಅಂದಿಗೂ ಇಂದಿಗೂ ಕನ್ನಡ ಸಿನೆಮಾಗಳಲ್ಲಗಿರುವ, ಬದಲಾವಣೆ (ಬೆಳವಣಿಗೆ ಅಲ್ಲ) ಯನ್ನೂ ಮನಮುಟ್ಟುವಂತೆ ಚಿತ್ರಿಸುವಲ್ಲಿ ಈ ಕಾರ್ಯಕ್ರಮ ಸಫಲವಾಯಿತು. ನಂತರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದು ನಾಯಕ್ ಮತ್ತು ತಂಡದವರ “ಭಿಕ್ಷುಕನ ಪ್ರಸಂಗ" ಎಂಬ ನಗೆನಾಟಕ. ನಡುವಯಸ್ಸಿನ ಗಂಡಸರ ಚಪಲತೆಯನ್ನು ಚಿತ್ರಿಸುವುದರಲ್ಲಿ ಈ ನಾಟಕ ಯಶಸ್ವಿಯಾಯಿತು.

ನಿಸಾರ್ ಅಹ್ಮದ್ ಅವರ "ನಿತ್ಯೋತ್ಸವ" ಕವಿತೆಯನ್ನು ಸುಂದರವಾದ ನೃತ್ಯ ಸಂಯೋಜನೆಯೊಂದಿಗೆ ಪ್ರದರ್ಶಿಸಿ ಉಷಾರವರು ಮತ್ತೊಮ್ಮೆ ಪ್ರೇಕ್ಷಕರ ಮನಸೂರೆಗೊಂಡರು. ನಾಡು, ನುಡಿ ಹಾಗು ನಮ್ಮ ಸಂಸ್ಕೃತಿಯನ್ನು ಉಳಿಸುವುದರಲ್ಲಿ ಮಹತ್ತ್ವವಾದ ಪಾತ್ರವಹಿಸುವುದು ಹೆಂಗಸರು. ಒಬ್ಬ ತಾಯಿ ಮನಸ್ಸುಮಾಡಿದರೆ ಇಡೀ ಸಮಾಜವನ್ನು ಬದಲಿಸಬಲ್ಲಳು. ನಮಗೆ ನಮ್ಮ ತಾಯ್ನುಡಿಯ ರಕ್ಷಣೆಗೆ ಇಂದು ಬೇಕಿರುವುದು ಸ್ತ್ರೀಯರ ಸಂಕಲ್ಪ. ತಾವು ಈ ಸವಾಲನ್ನೆದುರಿಸಲು ತಯಾರಿದ್ದೇವೆಂದು, “ಕನ್ನಡ ಕನ್ನಡ" ಎಂಬ ಉತ್ಸಾಹಭರಿತವಾದ ನೃತ್ಯದಿಂದ ತೋರಿದರು ವಾಣಿ ಮತ್ತು ತಂಡದವರು.

ಕೊನೆಯದಾಗಿ ಮಂಜುಳಾ ಮತ್ತು ತೇಜಸ್ವಿಯವರು ನಡೆಸಿಕೊಟ್ಟ “ಸಿನಿ ಸವಾಲ್" ರಸಪ್ರಶ್ನೆ, ಸಿನೆಮಾದ ಬಗ್ಗೆ ದಿವ್ಯವಾದ ಅಜ್ಞಾನವನ್ನು ಹೊಂದಿದ ನನ್ನಂತಹವರಿಗೆ ಸ್ವಲ್ಪ ಜ್ಞಾನೋದಯವನ್ನು ಮಾಡಿಸುವುದರೊಂದಿಗೆ, ಬಹಳಷ್ಟು ಮಂದಿಗೆ ತಮ್ಮ ಸಿನೆಮಾ ಜ್ಞಾನವನ್ನು ಉತ್ತಮಪಡಿಸಲು, ತೋರಿಸಲು ಹಾಗು ಅದರೊಂದಿಗೆ ಬಹುಮಾನಗಳಿಸಲೂ ಸಹಾಯ ಮಾಡುವುದರಲ್ಲಿ ಸಫಲವಾಯಿತು. ದೃಶ್ಯ-ಶ್ರಾವ್ಯ ವಿಭಾಗದಲ್ಲಿ, ಹಾಡುಗಳ ಹಾಗೂ ದೃಶ್ಯಗಳ ಉತ್ತಮವಾದ ಸಂಯೋಜನೆ, ಎಲ್ಲರ ಮನಸೆಳೆದಿತು. ಹೀಗೆ ಸಂಜೆಯಹೊತ್ತಿಗೆ, “ರಾಜ್ಯೋತ್ಸವದ ಕಾರ್ಯಕ್ರಮ ಮುಗಿದೇಹೋಯಿತಲ್ಲಾ" ಎಂಬ ದುಗುಡದೊಂದಿಗೆ, ಹೊಸ ಸ್ನೇಹಿತರನ್ನು ಸಂಪಾದಿಸಿದ, ಹಳೆಯ ಸ್ನೇಹಿತರನ್ನು ಮತ್ತೆ ಭೇಟಿಯಾದ ಸಂತೋಷವೂ ಸೇರಿತ್ತು, ಯಥಾಪ್ರಕಾರ, ಜಿಟಿಜಿಟಿ ಎಂದು ಸುರಿಯುವ ನೆದರ್ಲ್ಯಾಂಡ್ಸ್ ನ ಸೋನೆಮಳೆಯಲ್ಲೂ ರಾಜ್ಯೋತ್ಸವದ ಕಾರ್ಯಕ್ರಮಗಳನ್ನು ಮೆಲುಕು ಹಾಕುತ್ತಾ ಸಂತೋಷವಾಗಿ ಮನೆಯ ಕಡೆಗೆ ಎಲ್ಲರೂ ಪಾದಬೆಳೆಸಿದೆವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X