• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯೋತ್ಸವ : ವೇದಿಕೆಯಲ್ಲಿ ಅಷ್ಟಲಕ್ಷ್ಮಿಯರು

By Staff
|
ಭಾನುವಾರ ಮಧ್ಯಾಹ್ನ ಊಟದ ನಂತರ ವಸಂತ ಸಾಹಿತ್ಯೋತ್ಸವ ಸಮ್ಮೇಳನಕ್ಕೆ ಕಳೆಕೊಟ್ಟದ್ದು ಚುರುಕು ಮಾತಿನ ಮಹಿಳಾ ಸಮಾವೇಶ. ಕಥೆಗಾರ್ತಿ, ಕವಯಿತ್ರಿ ಶಶಿಕಲಾ ಚಂದ್ರಶೇಖರ್ ಉತ್ಸಾಹದಿಂದ ನಡೆಸಿಕೊಟ್ಟ ಇದರಲ್ಲಿ ಅಮೆರಿಕನ್ನಡತಿಯರಾದ ವಿಮಲಾ ರಾಜಗೋಪಾಲ್, ನಳಿನಿ ಮಯ್ಯ, ತ್ರಿವೇಣಿ ಶ್ರೀನಿವಾಸರಾವ್, ಮೀರಾ ಪಿ.ಆರ್., ಮತ್ತು ಜ್ಯೋತಿ ಮಹಾದೇವ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾದ ವೀಣಾ ಶಾಂತೇಶ್ವರ-ವೈದೇಹಿ ಅವರುಗಳನ್ನೂ ಸೇರಿಸಿ ವೇದಿಕೆಯ ಮೇಲೆ ಎಂಟು ಮಹಿಳೆಯರಿದ್ದ ಈ ಸಂವಾದಕ್ಕೆ ಬರಹಗಾರ ಗೆಳೆಯ ಡಾ. ಗುರು ಕಾಗಿನೆಲೆ ಕೊಟ್ಟ ಹೆಸರು "ವೇದಿಕೆಯಲ್ಲಿ ಅಷ್ಟಲಕ್ಷ್ಮಿಯರು". ಬಹುತೇಕ ಸ್ತ್ರೀವಾದದ ಸುತ್ತ ಇದ್ದ ಸಂವಾದದಲ್ಲಿ, ಮಹಿಳಾ ಬರಹಗಾರರ ಮುಕ್ತತೆಯ ಬಗ್ಗೆ, ವಿಮರ್ಶಕಿಯರು ಯಾಕಿಲ್ಲವೆಂಬ ವಿಷಯದತ್ತ, ಲೇಖಕಿಯರಿಗಿರುವ ಇತಿ-ಮಿತಿಗಳ ಸುತ್ತ ಚರ್ಚೆಗಳಿದ್ದವು.

ವೈದೇಹಿಯವರು ಮಾತಿನ ನಡುವೆ "ಅವರೂ (ಗಂಡಸರೂ) ಸ್ವಲ್ಪ ಕೆಳಗೆ ಬರಲಿ" ಎಂದು ಸಾಂದರ್ಭಿಕವಾಗಿ ನುಡಿದಾಗ ವೀಣಾ ಅವರು ಸಿಡಿಸಿದ ಮಾತು, "ಅಂದರೆ ಅವರು ಈಗ ಮೇಲಿದ್ದಾರೆ ಅಂತಲೇ ನೀವು ಹೇಳೋದು?"- ಸಭೆಯಲ್ಲಿ ನಗು ಹರಡಿತು. "ಆಧುನಿಕ ಕಿಚನ್-ಕ್ರಾಂತಿ ಬಹಳಷ್ಟು ಮಹಿಳೆಯರಿಗೆ ತಮ್ಮ ಮನೆಯ ಗಂಡಸರನ್ನು ಕೆಲಸಕ್ಕೆ ಹಚ್ಚಲು ಸುಲಭ ಕಾರಣ ಕೊಟ್ಟಿದೆ. "ಸ್ವಲ್ಪ ಗ್ಯಾಸ್ ಸ್ಟೋವ್ ಆಫ್ ಮಾಡಿ" ಅನ್ನುವಂಥ ಕೋರಿಕೆಗಳನ್ನು ಗಂಡಸರೂ ಸುಲಭವಾಗಿ, ಸರಳವಾಗಿ ಸ್ವೀಕರಿಸಬಹುದಾಗಿದೆ. ಮೊದಲಿನಂತೆ ಒಲೆ ಊದಿ ಕಣ್ಣು ಕೆಂಪಾಗಿಸಿಕೊಳ್ಳುವ ಸಂದರ್ಭ ಇಲ್ಲದಿರುವುದು ಮಹಿಳೆಗೆ ಸಿಕ್ಕ ದೊಡ್ಡ ವರ" ಎನ್ನುವಂಥ ಗಂಭೀರವಾದ ವಿಷಯಗಳೂ ತಿಳಿಹಾಸ್ಯ ಮಿಶ್ರಿತ ಚಟಾಕಿಗಳೊಡನೆ ಹರಿದಾಡಿದವು. ಸಭಿಕರಿಂದಲೂ ಪ್ರಶ್ನೆಗಳನ್ನು ಆಹ್ವಾನಿಸಲಾಗಿದ್ದು, "ಸೀತೆ-ದ್ರೌಪದಿಯರ ಪಾತ್ರಗಳನ್ನು ನೀವೀಗ ಸ್ತ್ರೀವಾದದ ನೆಲೆಯಿಂದ ಹೇಗೆ ಚಿತ್ರಿಸುತ್ತೀರಿ" ಎನ್ನುವ ಪ್ರಶ್ನೆಗೆ ವೈದೇಹಿಯವರು ತಮ್ಮ ಶಕುಂತಲೆಯ ಚಿತ್ರಣದ ಕಥೆ ಓದಿರೆಂದು ತಿಳಿಸಿದರು. ಲವಲವಿಕೆಯ ಸಂವಾದದಲ್ಲಿ ನಿಗದಿತ ಸಮಯ ಸರಿದದ್ದೇ ತಿಳಿಯಲಿಲ್ಲ. ಪಟ್ಟಾಂಗಕ್ಕೆ ಸಮಯದ ಮಿತಿಯೆ? ಆದರೂ ಮುಂದಿನ ಕಲಾಪಕ್ಕೆ ವೇದಿಕೆಯನ್ನು ತೆರವುಗೊಳಿಸಿತು ಮಹಿಳಾಮಂಡಳಿ.

"ಬರೆದು ಹೇಳಿ" ಸ್ಪರ್ಧೆ

ಇದೇನೀ ಸ್ಪರ್ಧೆ ಎಂದು ಆಶ್ಚರ್ಯವೇ? ಅಮೇರಿಕೆಯಲ್ಲಿ ನ್ಯಾಶನಲ್ ಜಿಯೊಗ್ರಾಫಿಕ್ ಸಂಸ್ಥೆ ನಡೆಸುವ "ಸ್ಪೆಲ್ಲಿಂಗ್ ಬೀ" ಸ್ಪರ್ಧೆಯ ಮಾದರಿಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಾಷಿಂಗ್ಟನ್ ನಲ್ಲಿ ಕನ್ನಡ ಕಲಿತ ಮಕ್ಕಳು ಭಾಗವಹಿಸಿದ್ದರು. ಇಲ್ಲೇ ಹುಟ್ಟಿದ ಅಥವಾ ಬೆಳೆದ ಮಕ್ಕಳು ಕನ್ನಡ ಕಲಿತು ಮುಂದೆ ಕನ್ನಡದ ಕಂಪನ್ನು ಮತ್ತು ಇಂಪನ್ನು ಪಸರಿಸಲು ತಯಾರಾಗುತ್ತಿದ್ದಾರೆ ಎಂಬ ಸೂಚನೆ ಈ ಸ್ಪರ್ಧೆಯಿಂದ ವ್ಯಕ್ತವಾಯಿತು.

"ಬರೆದು ಹೇಳಿ" ಸ್ಪರ್ಧೆಗೆ ಅನುವಾಗಲು ಅದಕ್ಕೊಂದು ಸ್ವರೂಪ, ಮತ್ತು ನಿಬಂಧನೆಗಳನ್ನು ರಚಿಸಿದವರು, ಫಣೀ೦ದ್ರ ಮಂಕಾಲೆ. ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ನಡೆಸಲಾಯಿತು. ಮೊದಲ ಹಂತದಲ್ಲಿ ಕಾಗುಣಿತ ಮತ್ತು ಒತ್ತಕ್ಷರಗಳಿಲ್ಲದ ಎರಡು ಅಥವ ಮೂರು ಅಕ್ಷರಗಳುಳ್ಳ ಸರಳ ಪದಗಳನ್ನು ಬಳಸಲಾಯಿತು. ಎರಡನೇ ಹಂತದಲ್ಲಿ, ಕಾಗುಣಿತಗಳುಳ್ಳ ಮತ್ತು ಮೂರು ಅಥವ ನಾಲ್ಕು ಅಕ್ಷರಗಳುಳ್ಳ ಪದಗಳನ್ನು ಬಳಸಲಾಯಿತು. ಮೂರನೇ ಮತ್ತು ಅಂತಿಮ ಹಂತದ ಸ್ಪರ್ಧೆಯನ್ನು ಮುಖ್ಯ ಅತಿಥಿಗಳ ಹಾಗೂ ಸಭೆಗೆ ಆಗಮಿಸಿದ್ದವರ ಸಮ್ಮುಖದಲ್ಲಿ ರಂಗದ ಮೇಲೆ ನಡೆಸಲಾಯಿತು. ಎಲ್ಲಾ ಐದು ಸ್ಪರ್ಧಿಗಳು ತಮ್ಮ ಪ್ರಾಥಮಿಕ ಕನ್ನಡ ಜ್ಞಾನವನ್ನು "ಬರೆದು ಹೇಳುವ" ಮೂಲಕ ಎರಡು ಸುತ್ತುಗಳಲ್ಲಿ ಪ್ರದರ್ಶಿಸಿದರು. ಸಭಾಸದರೆಲ್ಲರೂ ಚಪ್ಪಾಳೆ ತಟ್ಟುತ್ತ ತಮ್ಮ ಹರ್ಷವನ್ನು ಪ್ರಕಟಿಸಿದರು. ಈ ಕಾರ್ಯಕ್ರಮದ ಅಂಗವಾಗಿ, ಮುಖ್ಯ ಅತಿಥಿಗಳಿಂದ ಕನ್ನಡ ಕಲಿಯೋಣ ವೃಂದ ಪ್ರಕಟಿಸುವ "ಕನ್ನಡದ ಕಂದ" ಪತ್ರಿಕೆಯನ್ನು "ಲೋಕಾರ್ಪಣೆ" ಮಾಡಿಸಲಾಯಿತು. ನಂತರ ಭಾಗವಹಿಸಿದ ಎಲ್ಲಾ ಹತ್ತು ಮಕ್ಕಳಿಗೂ ಮಹಾಭಾರತದ ಕಥೆಗಳು (ಕನ್ನಡ ಸಾಹಿತ್ಯ ರಂಗದ ವತಿಯಿಂದ) ಮತ್ತು ಪಂಚತಂತ್ರ ಕಥೆಗಳ (ಸವಿತಾ ಮತ್ತು ಮಂಜುನಾಥ ರಾವ್ ರವರ್ ಕೊಡುಗೆ) ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಅಮೋಘ್ ಮತ್ತು ಮೇದಿನಿ ವೇದಿಕೆಯಿಂದ ಸಭಿಕರುನ್ನುದ್ದೇಶಿಸಿ ಕನ್ನಡದಲ್ಲಿ ಎರಡು ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿದರು. ಕೊನೆಯಲ್ಲಿ, ಮಕ್ಕಳು ಶಾಲೆಯಲ್ಲಿ ಕಲಿತ "ಪಾಲಿಸೆಮ್ಮ ಮುದ್ದು ಶಾರದೆ" ದೇವರನಾಮವನ್ನು ಹಾಡಿದರು.

ಕನ್ನಡ ಸಾಹಿತ್ಯ ರಂಗದ ಕಾರ್ಯಕ್ರಮಗಳು ಎಂದೂ ಸಮಯಪರಿಪಾಲನೆಯಲ್ಲಿ ತನ್ನದೇ ಆದ ಶಿಸ್ತನ್ನು ಕಾಪಾಡಿಕೊಂಡು ಬಂದಿದೆ. ಈ ಬಾರಿಯೂ ಅದನ್ನು ತಥಾಗತ ಪಾಲಿಸಿದ ವಲ್ಲೀಶಶಾಸ್ತ್ರಿಯವರಿಗೆ ಕೃತಜ್ಞತೆಗಳು. ಹಾಗೇ ವೇದಿಕೆಯ ಅಲಂಕಾರವನ್ನು ಸುಂದರವಾಗಿ ಮಾಡಿ ಎಲ್ಲರನೂ ಖುಷಿಪಡಿಸಿದ ಹರಿಯವರಿಗೂ ಕಸಾರಂ ತನ್ನ ಧನ್ಯವಾದವನ್ನು ತಿಳಿಸುತ್ತದೆ.

ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more