ಆಗಸ್ಟ್‌ನಲ್ಲಿ ಯುಕೆ ಕನ್ನಡ ಬಳಗದ ಬೆಳ್ಳಿ ಹಬ್ಬ
ಬೆಂಗಳೂರು, ಫೆ.20 : ಯುನೈಟೆಡ್ ಕಿಂಗಡಂನ ಕನ್ನಡ ಬಳಗಕ್ಕೆ ಈಗ 25ರ ಸಂಭ್ರಮ. ಈ ಪ್ರಯುಕ್ತ 25 ವರ್ಷಗಳ ಹಿಂದೆ ಯುಕೆಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಬಳಗ ಮ್ಯಾಂಚೆಸ್ಟರ್ ಬಳಿಯ ಚೆಶಾಯರ್‌ನಲ್ಲಿ ಆಗಸ್ಟ್ 22ರಿಂದ ಮೂರು ದಿನಗಳ ಕಾಲ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.
ಈ ಸಂಗತಿಯನ್ನು ಹಂಚಿಕೊಳ್ಳಲು ಕನ್ನಡ ಬಳಗದ ಅಧ್ಯಕ್ಷೆ ಕೆ.ಎಸ್.ಭಾನುಮತಿ ಅವರು ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಕರೆದಿದ್ದರು.
ಹಾಡು, ಕುಣಿತ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೇಳೈಸಲಿರುವ ಈ ಸಂಭ್ರಮದಲ್ಲಿ ಯುಕೆಯಲ್ಲಿರುವ ಒಂದೂವರೆ ಸಾವಿರ ಕನ್ನಡ ಕುಟುಂಬಗಳಲ್ಲದೆ ಕವಿ ಕೆ.ಎಸ್.ನಿಸಾರ್ ಅಹ್ಮದ್ ಸೇರಿದಂತೆ ಕರ್ನಾಟಕದ ಅನೇಕ ಖ್ಯಾತ ಕಲಾವಿದರು, ಬರಹಗಾರರು ಭಾಗಿಯಾಗಲಿದ್ದಾರೆ ಎಂದು ಭಾನುಮತಿ ವಿವರಿಸಿದರು.
ಬೆಳ್ಳಿ ಹಬ್ಬ ಆಚರಣೆಯ ರೂಪುರೇಷೆಗಳನ್ನು ವಿವರಿಸಿದ ಭಾನುಮತಿ, ಕರ್ನಾಟಕ ನಾಡು, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಬೆಳ್ಳಿಹಬ್ಬ ವಿಶ್ವಕ್ಕೆ ಎತ್ತಿ ತೋರಿಸಲಿದೆ ಎಂದರು. ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದಲೂ ಪ್ರನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಇದೇ ಸಮಯದಲ್ಲಿ, ಕನ್ನಡದಲ್ಲಿ ಬರೆಯುವುದು ಮತ್ತು ಕನ್ನಡದಲ್ಲಿ ಈಮೇಲ್ ಕಳುಹಿಸುವ ಬಗ್ಗೆ ಕಾರ್ಯಾಗಾರ ನಡೆಸಲಾಗುವುದು ಎಂದು ಅವರು ಹೇಳಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications