• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರ್ತಿದ್ವಯರ ಪವಿತ್ರ ದ್ವಂದ್ವಗಳು

By Staff
|

ಯಾವುದೇ ರೀತಿಯ ಜನಕಲ್ಯಾಣದ ಗುರಿಯಿಲ್ಲದೆ, ನೈಜ ಭಕ್ತಿಯಿಲ್ಲದೆ, ಕೇವಲ ಮತಗಳಿಕೆಯ ದೃಷ್ಟಿಯಿಂದ ಮತ ಆಧಾರಿತ 'ಮತೀಯ ಕಣ್ಣು"ಗಳಿಂದ ತೀರಾ ಇತ್ತೀಚೆಗೆ ಸೃಷ್ಟಿಯಾದದ್ದು ಬಾಬಾ ಬುಡನ್‌ಗಿರಿ ವಿವಾದ. ಇಲ್ಲಿ ಪ್ರತಿವರ್ಷ ತೀರ್ಥಯಾತ್ರೆಗೈದು, ಅಲ್ಲಿಗೆ ಬರುವ ಕನ್ನಡದವರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುವ 'ದತ್ತಭಕ್ತ"ನ ಹೆಸರು ಪ್ರಮೋದ್‌ ಮುತಾಲಿಕ್‌. ಈ ವರ್ಷದ ಈ ದತ್ತ ಜಯಂತಿ ಅಭಿಯಾನದ ಸಮಯದಲ್ಲಿ ರಾಜಧಾನಿ ಬೆಂಗಳೂರಿನಲ್ಲೂ 'ಹಿಂದೂ ವಿರಾಟ್‌ ಸಮಾವೇಶ" ಭರ್ಜರಿಯಿಂದ ನಡೆದು ಇಲ್ಲಿ ಭಾವಾವೇಶದಿಂದ ಹಿಂದಿಯಲ್ಲಿ ಮಾತನಾಡಿದ ಮತ್ತೊಂದು 'ಮತೀಯ ಕೆಂಗಣ್ಣು" ಪ್ರವೀಣ್‌ ಭಾಯಿ ತೊಗಾಡಿಯ.

ಕನ್ನಡ ನಾಡಿನಿಂದಾಚಿನಿಂದ ಬಂದು ಕನ್ನಡ ಭಾಷೆಯಲ್ಲಿ ಮಾತನಾಡುವ ಜನರಲ್ಲಿ ತಮ್ಮ ತಮ್ಮಲ್ಲಿಯೇ ಭೇದ ಬೆಳೆಸಿಕೊಳ್ಳಬೇಕೆಂದು ಹೇಳುವ ಇವರನ್ನು ಕುರಿತು ಇತ್ತೀಚೆಗೆ ಪ್ರಮುಖ ಪತ್ರಿಕೆಗಳ ವಾಚಕರ ಪತ್ರ ವಿಭಾಗದಲ್ಲಿ ಪ್ರಕಟಗೊಂಡದ್ದು ಈ ಕೆಳಗಿನ ಲೇಖನ.

''ನಮ್ಮ ನಾಡು, ರಾಷ್ಟ್ರಗಳ ಬಗ್ಗೆ ನಿಷ್ಕಲಂಕ ಪ್ರೇಮವನ್ನು ಬೆಳಸಿಕೊಂಡು ಅವುಗಳಿಗಾಗಿ ಎಲ್ಲ ಬಗೆಯ ತ್ಯಾಗಕ್ಕೆ ಸಿದ್ಧನಾಗಿರುವ ನನಗೆ ಈಚಿನ ದಿನಗಳಲ್ಲಿ ಸ್ವಾನುಕೂಲಾತ್ಮಕ ಸತ್ಯಪ್ರಿಯತೆಯನ್ನು ಬೆಳೆಸಿಕೊಂಡಿರುವ, ಆಕರ್ಷಕ ಭಾಷೆಯ ಕೆಲವರ ನಡೆ, ನುಡಿಗಳಿಂದ ನೋವಾಗಿದೆ. ಧರ್ಮದ ಹೆಸರಲ್ಲಿ ಹಿಂದೂಗಳ ಕೊಲೆ, ಅವರ ಪೂಜಾಸ್ಥಳಗಳ ಅಪವಿತ್ರೀಕರಣಗಳ ಬಗ್ಗೆಯಾಗಲಿ, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನ ಗಳಾಗಲಿ, ಭಾರತದ ಇತಿಹಾಸವಾಗಲಿ- ಆ ಎಲ್ಲದರ ಬಗ್ಗೆ ಅವರು 'ಜಾಣ ಕುರುಡು", 'ಜಾಣ್ಗಿವುಡರು". ಈ ಹಿನ್ನೆಲೆಯಲ್ಲಿ, ಸಮಕಾಲೀನ ಅಗತ್ಯಗಳಾದ ಹಿಂದೂ ವಿರಾಟ್‌ ಸಮಾವೇಶ ಮತ್ತು ದತ್ತ ಜಯಂತಿ ಅಭಿಯಾನಗಳನ್ನು ಅತ್ಯಂತ ಶಾಂತಿ ಶಿಸ್ತುಗಳಿಂದ, ಅಷ್ಟೇ ದೃಢ ನಿರ್ಧಾರದಿಂದ ಕೈಗೊಂಡ ಹಿಂದೂ ಸಮುದಾಯವನ್ನು, ಅಂತೆಯೇ ಅವುಗಳನ್ನು ನಿಷೇಧಿಸದೆ ಅವು ನಡೆಯಲು ಸೂಕ್ತ ಬಂದೋಬಸ್ತಿನೊಡನೆ ಅವಕಾಶ ಮಾಡಿ ಕೊಟ್ಟ ಕರ್ನಾಟಕ ಸರ್ಕಾರವನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. 'ಈಶ್ವರ ಅಲ್ಲಾ ಏಸು ತೇರೆ ನಾಮ್‌, ಸಬಕೋ ಸನ್ಮತಿ ದೇ ಭಗವಾನ್‌" ಎಂಬ ಗೀತೆಯು ದೇವಾಲಯ, ಚರ್ಚು, ಮಸೀದಿಗಳಿಂದ ಸಮಾನವಾಗಿ ಕೇಳಿ ಬರಬೇಕೆಂಬ ಒತ್ತಾಯವನ್ನು ಮಾಡದ ಯಾವುದೇ 'ಸೌಹಾರ್ದ ಸಮಾವೇಶ"ವು ಅರ್ಥಪೂರ್ಣ ವಾಗಲಾರದು.""

ಈ ಪತ್ರದ ಕತೃ, ಡಾ।। ಚಿ. ಮೂ. ಗಳವರು. ಇವರು ಬೆಂಬಲಿಸುವ 'ಸೌಹಾರ್ದ ಸಮಾವೇಶ"ದ ಮುಂಚೂಣಿಯಲ್ಲಿದ್ದವರು, ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಗಳಿಸಿಕೊಟ್ಟ ಮತ್ತೊಬ್ಬ ಕನ್ನಡಿಗ ಗಿರೀಶ ಕಾರ್ನಾಡರು. ಅವರ ಜೊತೆಗೆ ನಿಂತ ಪ್ರತಿಯಾಬ್ಬರೂ ಅಪ್ಪಟ ಕನ್ನಡ ಭಾಷಿಕರು, ಕನ್ನಡದಲ್ಲಿಯೇ ಮಾತನಾಡಿದವರು.

ಕನ್ನಡಿಗರಲ್ಲಿಯೇ ಭೇದ ಹುಟ್ಟಿಸುವ, 'ಮತೀಯ ಕೆಂಗಣ್ಣು"ಗಳನ್ನು ಹೊಗಳುವ, ಅಪ್ಪಿಕೊಳ್ಳುವ ಚಿ.ಮೂ. ಗಳವರದು ಅಪ್ಪಟ 'ಮತೀಯ ಕಾಮಾಲೆ ಕಣ್ಣು" ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಇವರ ವಿದ್ವಾಂಸತ್ವ ಇಂತಹ ದ್ವಂದ್ವಗಳಿಗೆ ಉಪಯೋಗವಾಗುತ್ತಿರುವುದು ಶೋಚನೀಯ. ಇವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ನಾಡು-ನುಡಿಗೆ ತಮ್ಮ ಕೈಲಾದಷ್ಟು ದುಡಿಯುತ್ತಿರುವ ಇಬ್ಬರು ಹಿರಿಯ ಕನ್ನಡಿಗರ (ಓದುಗರ ಪತ್ರ ವಿಭಾಗದಲ್ಲಿ ಪ್ರಕಟಗೊಂಡ) ಪ್ರತಿಕ್ರಿಯೆ ಹೀಗಿದೆ.

ಎಚ್‌. ಎಸ್‌. ದೊರೆಸ್ವಾಮಿ:

''ವಿಚಾರವಾದಿಗಳಿಗೆ ಡಾ. ಚಿದಾನಂದ ಮೂರ್ತಿಯವರು ಕಿವಿಮಾತು ಹೇಳುವ ಸಂದರ್ಭದಲ್ಲಿ ತನ್ನ ಬಣ್ಣಿಸುತ್ತ, ಅನ್ಯರನ್ನು ಹಳಿಯುವ ಮಾತುಗಳನ್ನಾಡಿದ್ದಾರೆ. ಈಶ್ವರ ಅಲ್ಲಾ ತೇರೇ ನಾಮ್‌, ಸಬ್‌ಕೋ ಸನ್ಮತಿ ದೇ ಭಗವಾನ್‌ ಎಂದು ಎಲ್ಲ ಕೋಮಿನವರೂ ಕೂಡಿಕೊಂಡು ಪೂಜೆ ಮಾಡುತ್ತಿದ್ದ ಬಾಬಾಬುಡನ್‌ ಗಿರಿಯಲ್ಲಿ ಕೋಮುವ್ಯಾಧಿ ಹರಡಿ ಆ ದೇವಾಲಯವನ್ನು 'ಕಬ್ಜಾ" ಮಾಡುವ ತೊಗಾಡಿಯ ಬಳಗವನ್ನು ಚಿ.ಮೂ. ಸಮರ್ಥನೆ ಮಾಡಲು ಹೊರಟಿರುವುದರಿಂದ, ಚಿ.ಮೂ ಅವರೂ ಹಿಂದೂ ಮತಾಂಧರಾದರೇನೋ ಎಂದು ಗಾಬರಿಯಾಗುತ್ತಿದೆ. ವಾಸ್ತವದಲ್ಲಿ ಚರ್ಚ್‌ ಮತ್ತು ಮಸೀದಿಗಳಲ್ಲಿ ಮಾತ್ರವಲ್ಲ ಹಿಂದೂ ದೇವಾಲಯಗಳಲ್ಲೂ ಈಶ್ವರ ಅಲ್ಲಾ ಹಾಡುವ ಅಭ್ಯಾಸ ಇಲ್ಲ. ಅದು ಮೂರೂ ಕಡೆ ಕೇಳಿಬರುವಂತೆ ಮಾಡುವುದು ಜಾಣ್‌ ಕುರುಡರ, ಜಾಣ್‌ಗಿವುಡರದು ಮಾತ್ರವಲ್ಲದೆ ಚಿ.ಮೂ. ಅವರದೂ ಕರ್ತವ್ಯ. ಅನ್ಯರಿಗೆ ಉಪದೇಶ ಮಾಡುವ ಮೊದಲು ಎಲ್ಲ ತ್ಯಾಗಕ್ಕೂ ಸಿದ್ದರಿರುವ, ನಾಡು ನುಡಿಗಳ ಬಗೆಗೆ ನಿಷ್ಕಳಂಕ ಪ್ರೇಮ ಬೆಳೆಸಿಕೊಂಡಿರುವ ಚಿ.ಮೂ. ಮೊದಲು ಆ ಕೆಲಸ ಮಾಡಿ ತೋರಿಸಲಿ. ಯಾರನ್ನೋ ಒಬ್ಬಿಬ್ಬರನ್ನು ಗುರಿಯಾಗಿಟ್ಟುಕೊಂಡು ಚಿ.ಮೂ. ರವರು ಸಾರಾಸಗಟಾಗಿ ಎಲ್ಲ ವಿಚಾರವಾದಿಗಳನ್ನು ನಿಂದನೆ ಮಾಡಿದ್ದಾರೆಂಬುದು ಅವರು ಉಪಯೋಗಿಸಿರುವ ವಿಶೇಷಣಗಳಿಂದ ವೇದ್ಯವಾಗುತ್ತದೆ. ಇದು ಚಿ.ಮೂ. ಅಂತಹ ವಿದ್ವಾಂಸರಿಗೆ ಗೌರವ ತರುವುದಿಲ್ಲ.""

ಕೆ. ಮರುಳಸಿದ್ದಪ್ಪ :

''ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಗಾಂಧೀವಾದಿ ಎಚ್‌. ಎಸ್‌. ದೊರೆಸ್ವಾಮಿಯವರು ಚಿ.ಮೂ.ರವರ ಅನ್ಯ ದೂಷಣ ಕಾರ್ಯವನ್ನು ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಾರ್ಹವಾಗಿದೆ. ವಾಸ್ತವವಾಗಿ ಚಿಮೂ.ರವರ ಕನ್ನಡ ಪ್ರೇಮ, ಹಿಂದೂ ಪ್ರೇಮ, ಎಲ್ಲವೂ ಸ್ವಕೇಂದ್ರಿತ ನಾರ್ಸಿಸಸ್‌ ಮನೋಭಾವದಿಂದ ಹುಟ್ಟಿಕೊಂಡಿದೆ. 'ಈಶ್ವರ ಅಲ್ಲಾ ತೇರೆ ನಾಮ್‌...." ಮಸೀದಿಯಿಂದ ಮೊಳಗಬೇಕೆಂದು ಅವರು ಬಯಸುವ ಮುನ್ನ ಹಿಂದೂ ದೇವಾಲಯಗಳಿಂದ ಏನು ಮೊಳಗುತ್ತಿದೆ? ಎಂಬುದನ್ನು ಕಿವಿಕೊಟ್ಟು ಆಲಿಸಬಹುದಿತ್ತು. ಕ್ರೈಸ್ತ ಚರ್ಚುಗಳ ಭಾಷೆ ಯಾವುದಿರಬೇಕೆಂದು ಚಳವಳಿಗೆ ಹೋಗುವ ಮುನ್ನ ನಮ್ಮ ದೇವಾಲಯಗಳ ಮಂತ್ರಗಳ ಭಾಷೆ ಕನ್ನಡವೇ? ನಮ್ಮ ಮದುವೆಗಳ ಆಚರಣೆಗಳಲ್ಲಿ ಕನ್ನಡವನ್ನು ಬಳಸಲಾಗುತ್ತಿದೆಯೇ? ಕೇಳಿಕೊಳ್ಳಬಹುದಿತ್ತು. ಆದರೆ ಮೂಲಭೂತವಾದಿಗಳ ಮನಸ್ಸು ಏಕಮುಖವಾಗಿರುತ್ತದೆ. ಅದಕ್ಕೆ ನಾಲಗೆ ಇರುತ್ತದೆಯೇ ಹೊರತು, ಕಣ್ಣು ಮತ್ತು ಕಿವಿಗಳಿರುವುದಿಲ್ಲ. ತರ್ಕಕ್ಕೆ ಅಲ್ಲಿ ಆಸ್ಪದವೇ ಇಲ್ಲ. ಭಾವಾವೇಶವೇ ಅದರ ಬಂಡವಾಳ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ವಕ್ತಾರರಾದ ಚಿ.ಮೂ. ತಾನೊಬ್ಬ ಸಂತನೆಂಬಂತೆ ವೇಷ ಕಟ್ಟುತ್ತಿರುವುದು ಇತ್ತೀಚಿನ ಕುತೂಹಲಕಾರಿ ಸುದ್ದಿ ಎಂಬುದನ್ನು ಮಾತ್ರ ಒಪ್ಪಲೇಬೇಕಾಗಿದೆ.""

***

ಮೂರ್ತಿ-2:

Dr. U.R.Anantha Murthyಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಜ್ಞಾನಪೀಠ ಪುರಸ್ಕೃತರು ಹಾಗೂ ವಿಚಾರಶೀಲ ಪ್ರಯೋಗಶೀಲ ಸಾಹಿತಿ. ಮುಕ್ಕಾಲು ಶತಮಾನಕ್ಕೂ ಹಿಂದೆಯೇ ಅಂತರ್ಜಾತೀಯ ವಿವಾಹವಾದವರು. ನಮ್ಮ ಮತ್ತೊಬ್ಬ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು. ಆರ್‌. ಅನಂತಮೂರ್ತಿಯವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತರ್ಮತೀಯ ವಿವಾಹವಾದವರು. ನಾಡಿನ ಯಾವತ್ತೂ ಜನತೆ ಇವರನ್ನು ಇವರ ವೈಚಾರಿಕತೆಗೆ, ಪ್ರಗತಿಶೀಲ ಚಿಂತನೆಗೆ, ಕನ್ನಡ ಸಾಹಿತ್ಯ ಕೃಷಿಗೆ ಮೆಚ್ಚಿ ನೆಚ್ಚಿದವರು. ಹಲವರ ಸ್ಫೂರ್ತಿಯಾದವರು. ಅನಂತಮೂರ್ತಿಗಳಂತೂ ದೇಶ ವಿದೇಶ ಸುತ್ತಿದವರು, ವಿದೇಶಗಳ ಪ್ರಗತಿಪರ ವಾತಾವರಣದಲ್ಲಿ ಅಧ್ಯಯನ ಮಾಡಿದವರು. ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದವರು. ಜಾತಿ-ವಿಜಾತಿ ಎನ್ನದೆ ಎಲ್ಲರಲ್ಲೂ ಅಂಗಸಂಗವಿದ್ದ ಜೆ. ಎಚ್‌. ಪಟೇಲರ ಆತ್ಮೀಯ ಮಿತ್ರರಾಗಿದ್ದವರು. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, ಆ ಪ್ರಭಾವದಿಂದ ಡಾಲರ್‌ ಕಾಲೋನಿಯಲ್ಲಿ ಸೈಟು ಪಡೆದುಕೊಂಡವರು ಎಂಬ ಆರೋಪಕ್ಕೆ ಗುರಿಯಾದವರು.

ನಮ್ಮಲ್ಲಿನ ಕೆಲವು ಪತ್ರಿಕೆಗಳು ಕೆಲವೊಂದು ಸಲ ನಾನಾ ತರಹದ ವೈಯುಕ್ತಿಕ ಜಿದ್ದಿಗೆ ಬಿದ್ದು ತಮಗಾಗದವರನ್ನು ಹಣಿಯಲು ಪ್ರಯತ್ನಿಸುತ್ತಿರುತ್ತವೆ. ಕೆಲವೊಂದು ಬಾರಿ ಅದಕ್ಕೆ ಸಾಕ್ಷ್ಯಗಳಿದ್ದರೂ, ಅವರು ಬಳಸುವ ಭಾಷೆ ಅನಾಗರೀಕವಾಗಿರುತ್ತದೆ. ನಮ್ಮಲ್ಲಿನ ರಾಜಕಾರಣಿಗಳಂತೂ ಇವ್ಯಾವುದಕ್ಕೂ ಜಗ್ಗದಷ್ಟು ಗಟ್ಟಿ ಚರ್ಮದವರಾಗಿ ಬಿಟ್ಟಿರುತ್ತಾರೆ. ಕನಕಪುರ ಕ್ಷೇತ್ರದ ಹಾಲಿ ಶಾಸಕ ಮತ್ತು ಮಾಜಿ ಮಂತ್ರಿ ಪಿ.ಜಿ.ಆರ್‌. ಸಿಂಧ್ಯಾರ ಬಗ್ಗೆ ಇತ್ತೀಚಿನ ಒಂದು ಲೇಖನದಲ್ಲಿ ಪತ್ರಿಕೆಯಾಂದು ಬಳಸಿದ ಕೆಲವೊಂದು ಸ್ಯಾಂಪಲ್ಲುಗಳು ಹೀಗಿವೆ: ಕ್ಷುದ್ರಜಂತು, ಹರಾಮಕೋರ, ಲಫಂಗ, ಕಂತ್ರಿಬ್ರೂಟ್‌, ಜೇಬುಗಳ್ಳ, ಕೊಳ್ಳೆಬಾಕ, ನಿಯತ್ತಿಲ್ಲದ ನಾಯಿ, ಪರಮ ಚಾಂಡಾಲ, ನಮಕ್‌ ಹರಾಮಿ, ತಲೆಹಿಡುಕ ರಾಜಕಾರಣಿ,....

'ಅಗ್ನಿ" ವಾರಪತ್ರಿಕೆಯ ಸಂಪಾದಕ ಶ್ರೀಧರ್‌ರವರು ಲಂಕೇಶ್‌ ಮತ್ತಿತರ ಸಾಹಿತಿಗಳ ಜೊತೆ ಒಡನಾಡಿದವರು, ನಂತರ ಕೆಲಕಾಲ ಬೆಂಗಳೂರಿನ ಭೂಗತ ಲೋಕದ ದೊರೆಯಾಗಿದ್ದವರು. ಕೆಲವು ವರ್ಷಗಳಿಂದೆ ಅವರು ಮತ್ತೆ ಜೈಲಿನಲ್ಲಿರಬೇಕಾದ ಸಂದರ್ಭ ಬಂದಾಗ ಈ ವಾರಪತ್ರಿಕೆಯನ್ನು ನಡೆಸಿದ್ದು ಕವಯತ್ರಿ-ಲೇಖಕಿ ಪ್ರತಿಭಾ ನಂದಕುಮಾರ್‌. ಬಂಡಾಯ ಸಾಹಿತಿ ಚಂಪಾ ಅಗ್ನಿಯ ಲೇಖಕ ಬಳಗದವರಲ್ಲಿ ಒಬ್ಬರು.

ಈ ಹಿಂದೆ ಲಂಕೇಶ್‌ ಪತ್ರಿಕೆಗೆ ಬರೆಯುತ್ತಿದ್ದ ದ್ವಾರಕಾನಾಥ್‌ ಎಂಬುವವರು ಈಗ ಇದೇ ಅಗ್ನಿ ವಾರಪತ್ರಿಕೆಯಲ್ಲಿ ಕೆಲವು ದಿನಗಳ ಹಿಂದೆ ಅನಂತಮೂರ್ತಿಗಳ ಮೇಲೆ ಅವಹೇಳನಕಾರಿ ಲೇಖನ ಬರೆದಿದ್ದಾರೆಂದು ಸ್ವತಃ ಅನಂತಮೂರ್ತಿಯವರೇ ಹೇಳಿದ್ದು ನವೆಂಬರ್‌ 25ರ ದಟ್ಸ್‌ಕನ್ನಡ.ಕಾಂ ನಲ್ಲಿ ವರದಿಯಾಗಿದೆ. ಸಾಹಿತಿ ಅನಂತಮೂರ್ತಿಯವರು ಪತ್ರಿಕೆಗಳಲ್ಲಿ ಸಾಹಿತ್ಯೇತರ, ವೈಯುಕ್ತಿಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಮುಖ್ಯಮಂತ್ರಿ ಪಟೇಲರ ಆಸ್ಥಾನದಲ್ಲಿ ಇವರಿಗಿದ್ದ ಪ್ರಭಾವಳಿಯ ಮೇಲೆ ಇವರಿಬ್ಬರ ಮಾಜಿ ಗೆಳೆಯ ಲಂಕೇಶರ ಪತ್ರಿಕೆಯಲ್ಲಿ 'ಜರತಾರಿ ರಾಜಗುರು(?)" ಎಂಬ ಮುಖಪುಟ ಶೀರ್ಷಿಕೆ ಪ್ರಕಟವಾಗಿದ್ದ ನೆನಪು. ಈಗ ಅಗ್ನಿಯಲ್ಲಿ ಏನು ಪ್ರಕಟವಾಗಿದೆಯಾ ತಿಳಿದಿಲ್ಲವಾದರೂ, ಅನಂತಮೂರ್ತಿಗಳು ಹೇಳುವುದು 'ಅದು ಇಲ್ಲ ಸಲ್ಲದ ಆರೋಪಗಳ, ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಅವಹೇಳನಕಾರಿ ಲೇಖನ" ಎಂದು.

ಆದರೆ ಪ್ರಶ್ನೆ ಇರುವುದು ಇವ್ಯಾವುದರಲ್ಲೂ ಅಲ್ಲ. ಅಂತರ್ಮತೀಯ ವಿವಾಹವಾದ, ಜಾತಿ-ಮತ ಎಂಬ ಭೇದವಿಲ್ಲದೆ ಸಕಲ ಕನ್ನಡಿಗರಿಂದ ಓದಿಸಿಕೊಳ್ಳುವ ಸಾಹಿತ್ಯ ರಚಿಸಿದ, ಉಪಾಧ್ಯಾಯರಾಗಿ, ಉಪಕುಲಪತಿಗಳಾಗಿದ್ದ, ಹಾಲಿ Film and Television Institute of India, Pune ಯ ನಿರ್ದೇಶಕರಾಗಿರುವ ಅನಂತಮೂರ್ತಿಗಳು ಈ ವಿವಾದವನ್ನು ಜಾತಿಯ ಮಟ್ಟಕ್ಕೆ ಇಳಿಸಿಬಿಟ್ಟು ತಮ್ಮನ್ನು ತಾವೇ ಬೆತ್ತಲೆಗೊಳಿಸಿಕೊಂಡಿದ್ದಾರೆ. ಇವರನ್ನು ಬೈದಿರುವುದನ್ನು 'ಬ್ರಾಹ್ಮಣರನ್ನು ಬೈಯುವುದೇ ಒಂದು ಉದ್ಯೋಗವಾಗಿದೆ" ಎಂದು ಸಾರ್ವಜನಿಕವಾಗಿ ಅರ್ಥೈಸುತ್ತಾರೆ. 'ಬ್ರಾಹ್ಮಣರಿಗೆ ಕೋಪ ಬರುವುದಿಲ್ಲ ಎಂದು ಇವರೆಲ್ಲ ಅಂದುಕೊಂಡಿದ್ದಾರೆ" ಎನ್ನುತ್ತ 'ಪತ್ರಿಕೆಯ ಧೋರಣೆಯಿಂದ ನೊಂದ ಇತರರು ಧರಣಿಯಲ್ಲಿ ಪಾಲ್ಗೊಳ್ಳಬೇಕೆಂಬ ಇಷ್ಟ ಇದ್ದರೆ ಪಾಲ್ಗೊಳ್ಳಬಹುದು" ಎಂದು ಭೇದ ಎಣಿಸಿ ಸ್ವಜಾತಿ ಬಾಂಧವರಿಗೆ ಬೆಣ್ಣೆ ಹಚ್ಚುತ್ತಾರೆ, ಒಬ್ಬ ಜಾತಿಭ್ರಾಂತ ಶೋಷಕ ರಾಜಕಾರಣಿಯಂತಾಡುತ್ತಾರೆ.

ಕನ್ನಡದ ಸಾಹಿತಿಗೆ ವಿನಾಕಾರಣ ಅವಮಾನವಾಗಿದ್ದರೆ ಪ್ರತಿಭಟಿಸಲು ಕನ್ನಡಿಗರು ಬರುವುದು ಬೇಡವೇ? ಕೋಪ, ತಾಪ, ಜ್ಞಾನ, ಕತ್ತಿ, ಲೇಖನಿ, ನೇಗಿಲು, ವಿಜ್ಞಾನ ಇವೆಲ್ಲವೂ ಆಯಾಯ ಜಾತಿಗಳ ಸೊತ್ತೆ ಎನ್ನುವ ನವನವೀನ ಚಿಂತನೆಯಲ್ಲಿ ಮುಳುಗುತ್ತಿದ್ದಾರೆ ನಮ್ಮ ಈ ಜ್ಞಾನಪೀಠಿಗಳು. ಇವರು ಈಗ ಯಾವ ಜಾತಿಯ ಸಾಹಿತಿ ಎನ್ನಬೇಕು ಎಂದು ಪರೋಕ್ಷವಾಗಿ(?) ಹೇಳುತ್ತಿದ್ದಾರೆ. ಇವರಿಗೆ ಜನಿಸಿದ ಅಪ್ಪಟ ಮಾನವ ಜಾತಿಯ ಮಕ್ಕಳು ಯಾವ ಜಾತಿ ಈಗ?

ಈ ವಿಷಯವಾಗಿ ಅನಂತಮೂರ್ತಿಗಳ ಸಾಹಿತ್ಯ ಮೆಚ್ಚುತ್ತಿದ್ದ ಹಿರಿಯರೊಬ್ಬರ ಜೊತೆಗೆ ಈ ಮಧ್ಯೆ ಮಾತನಾಡುತ್ತಿದ್ದಾಗ ಅವರೆಂದದ್ದು, 'ವಿದೇಶಗಳಲ್ಲೆಲ್ಲ ಓದಿ ಸುತ್ತಿ ಬಂದ ಇವರು ಸಾರ್ವಜನಿಕವಾಗಿ ಕಣ್ಣೀರಿಡುತ್ತ, ಪ್ರಜಾಪ್ರಭುತ್ವದಲ್ಲಿ ಲಭ್ಯವಿರುವ ಕಾನೂನಿನ ಪ್ರಕಾರ ನಡೆದುಕೊಳ್ಳದೆ ಮಧ್ಯಯುಗದ ರೀತಿಯ ಬ್ಲ್ಯಾಕ್‌ಮೇಲ್‌ ತಂತ್ರಕ್ಕೆ ಶರಣಾಗಿದ್ದಾರೆ". ಇದಕ್ಕೆ ಅನಂತಮೂರ್ತಿಗಳೇ ಹೇಳುವ ಪಾಳೆಯಗಾರಿಕೆ ಮನಸ್ಸತ್ವದ 'ಹಿಂದಿನ ಕಾಲದಲ್ಲಾಗಿದ್ದರೆ ಕಪಾಳಕ್ಕೆ ಹೊಡೆದು ನೀನು ಮಾಡುತ್ತಿರುವುದು ತಪ್ಪು ಎಂದು ಹೇಳಬಹುದಿತ್ತು" ವಾಕ್ಯಕ್ಕಿಂತ ಉದಾಹರಣೆ ಬೇಕಿಲ್ಲ. ಪಕ್ಕಕ್ಕಿಟ್ಟರೆ ಪಾವಿತ್ರ್ಯ, ಕಾಣವೇನು ವಿವಿಧ ಬೆತ್ತಲೆ ಕೋನಗಳು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more