• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಂ.1 ಮುಖ್ಯಮಂತ್ರಿಗಳಿಬ್ಬರ ನಾಡಿನಲ್ಲಿ ..

By Staff
|

ರವಿ ಕೃಷ್ಣಾ ರೆಡ್ಡಿ

Ravi Krishnareddy, the authorಇತ್ತೀಚೆಗೆ ತಾನೆ ಆಂಧ್ರದ ದೀರ್ಘಕಾಲಿಕ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡುರವರು ದಾಖಲೆ ಸ್ಥಾಪಿಸಿದರು. ಅದರ ಹಿಂದೆಯೇ ಬಂದಿತು ದಟ್ಸ್‌ಕನ್ನಡ.ಕಾಮ್‌ನಲ್ಲಿ 'ರಾಯಚೂರಿಗೆ ವಲಸೆ ಬಂದಾವೋ ತೆಲುಗು ಮಕ್ಕಳು!" ಎನ್ನುವ ವರದಿ.

ನಮ್ಮ ಎಸ್‌.ಎಮ್‌.ಕೃಷ್ಣರವರು ದೇಶದ ನಂಬರ್‌ ಒನ್‌ ಮುಖ್ಯಮಂತ್ರಿಯಾಗಿ ಪತ್ರಿಕೆಗಳಿಂದ ಪ್ರಶಂಸೆಗಳಿಸುವ ತನಕ, ಆ ಸ್ಥಾನವನ್ನು ದೀರ್ಘಕಾಲ ಅಲಂಕರಿಸಿದ್ದವರು ನಾಯ್ಡು. ಹೀಗಿರಲು ಅವರ ಸ್ವರ್ಣಾಂಧ್ರದಲ್ಲಿ ಆದದ್ದಾದರೂ ಏನು ಎಂದು ನಮ್ಮ ಬಹಳಷ್ಟು ಓದುಗರಿಗೆ ಅಪನಂಬಿಕೆ ಮತ್ತು ಅದರಿಂದ ನಮ್ಮವರು ಏನು ಕಲಿಯಬಹುದು ಎಂಬ ಚಿಂತನೆ ಮೂಡಿರಲೂಬಹುದು.

ಇತ್ತೀಚಿಗೆ ತಾನೆ ಬಿಡುಗಡೆಗೊಂಡ ಸೆನ್ಸಸ್‌ ಡೈರೆಕ್ಟರೇಟ್‌ ಸರ್ವೆ ಪ್ರಕಾರ, ಆಂಧ್ರದಲ್ಲಿ ಒಂದೇ ಕೋಣೆಯಲ್ಲಿ ಸಂಸಾರ ಮಾಡುತ್ತಿರುವ ಕುಟುಂಬಗಳ ಸಂಖ್ಯೆ ಶೇ. 48.1. ಇದು 1990ರಲ್ಲಿ ಶೇ. 49.9 ರಷ್ಟಿದ್ದು ಈ ಹತ್ತು ವರ್ಷಗಳಲ್ಲಿ ಅಂತಹ ಅಭಿವೃದ್ಧಿಯೇನೂ ಆಗಿಲ್ಲ . ಹಾಗೆಯೇ, ವಿದ್ಯುತ್‌ ಸೌಕರ್ಯ ಇರುವ ಕುಟುಂಬಗಳು ಶೇ. 67.2 ಮಾತ್ರ. ಕರ್ನಾಟಕದಲ್ಲಿ ಹೆಗಡೆಯವರ ಸರ್ಕಾರದಲ್ಲಾದ ಭಾಗ್ಯಜ್ಯೋತಿ ಯೋಜನೆಯಿಂದಾಗಿ ನಮ್ಮಲ್ಲಿ ಈ ಸಂಖ್ಯೆ ತುಂಬಾ ಚೆನ್ನಾಗಿರಬೇಕು. ಇಲ್ಲದಿದ್ದ ಪಕ್ಷದಲ್ಲಿ ಅದು ನಮ್ಮ ಸರ್ಕಾರಗಳು ಕಾರ್ಯಕ್ರಮ ಅನುಷ್ಠಾನದಲ್ಲಿ ತೋರುವ ಹೋಣೆಗೇಡಿತನವನ್ನು ತೋರಿಸುತ್ತದೆ.

ಆಂಧ್ರದಲ್ಲಿ ಸ್ವಲ್ಪ ಎದ್ದು ಕಾಣಿಸುವ ಅಭಿವೃದ್ಧಿಯಾಗಿರುವುದು 1990 ರಲ್ಲಿ . ಶೇ. 18.4 ಇದ್ದ ವೈಯುಕ್ತಿಕ ಪಾಯಿಖಾನೆಗಳ ಸಂಖ್ಯೆ ಹತ್ತು ವರ್ಷಗಳಲ್ಲಿ ಶೇ. 33 ಕ್ಕೆ ಏರಿದೆ. ನಮ್ಮಲ್ಲಿ ಎಂ.ಪಿ. ಪ್ರಕಾಶ್‌ರವರು ಪಟೇಲರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾಗ ಹಳ್ಳಿಗಳಲ್ಲಿ ಕಕ್ಕಸು ಮನೆ ಕಟ್ಟಿಸಿಕೊಂಡವರಿಗೆ ಉತ್ತೇಜಕ ಸಬ್ಸಿಡಿ ನೀಡಿ ಪ್ರೋತ್ಸಾಹಿಸುವ ಯೋಜನೆ ಹಮ್ಮಿಕೊಂಡಿದ್ದರು. ಅದರ ಫಲಶೃತಿಯ ಸಂಖ್ಯೆ ತಿಳಿದಿಲ್ಲ . ಕರ್ನಾಟಕದ ಸರ್ವೆ ಇನ್ನೂ ಪ್ರಕಟವಾದ ಹಾಗೆ ಇಲ್ಲ . ನೆರೆಯ ರಾಜ್ಯದಲ್ಲಿ ಸುಮಾರು 55 ಲಕ್ಷ ಕುಟುಂಬಗಳಿಗೆ ಇರುವ ಏಕೈಕ ಆಸ್ತಿಯೆಂದರೆ ನಾಯ್ಡುರವರ ತೆಲುಗುದೇಶಂ ಪಕ್ಷದ ಚಿಹ್ನೆಯಾದ ಸೈಕಲ್‌ ಮಾತ್ರ. ದೇಶದ ನಂಬರ್‌ ಒನ್‌ ಮುಖ್ಯಮಂತ್ರಿಗಳ ರಾಜ್ಯದಲ್ಲಿಯೇ ಹೀಗಾದರೆ ಇನ್ನು ಇತರ ಹಿಂದುಳಿದ ರಾಜ್ಯಗಳಲ್ಲಿರುವ ಜನರ ಪಾಡೇನು?

ಆಂಧ್ರಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ. ಬಂಗಾಳ ಕೊಲ್ಲಿ ಕರಾವಳಿಯ ಆಂಧ್ರ, ನಮ್ಮ ಗಡಿಗೇ ಅಂಟಿರುವ ರಾಯಲಸೀಮ ಮತ್ತು ತೆಲಂಗಾಣ. ಆಂಧ್ರ ಮಿಕ್ಕ ಎರಡು ಭಾಗಗಳಿಗಿಂತ ಆರ್ಥಿಕವಾಗಿಯಷ್ಟೇ ಅಲ್ಲ, ಸಾಮಾಜಿಕವಾಗಿಯೂ ಮುಂದುವರಿದ ಪ್ರದೇಶ. ದಕ್ಷಿಣ ಭಾರತದ ಎರಡು ದೊಡ್ಡ ನದಿಗಳಾದ ಗೋದಾವರಿ ಮತ್ತು ಕೃಷ್ಣೆಯರೇ ಈ ಪ್ರಗತಿಗೆ ಬಹಳಷ್ಟು ಕಾರಣ. ಆದ್ದರಿಂದ ಸಹಜವಾಗಿಯೇ ರಾಜ್ಯದ ರಾಜಕೀಯದಲ್ಲಿ, ಆರ್ಥಿಕತೆಯಲ್ಲಿ, ಪ್ರಭಾವಿ ಸಿನಿಮಾ ವಲಯದಲ್ಲಿ ಇವರ ಪ್ರಾಬಲ್ಯ ಹೆಚ್ಚು. ಮುಸ್ಲಿಮರ ಪ್ರಾಬಲ್ಯವೇ ಬಹಳಷ್ಟಿದ್ದ ರಾಜಧಾನಿ- ತೆಲಂಗಾಣದಲ್ಲಿ ಬರುವ ಹೈದರಾಬಾದ್‌ನಲ್ಲಿ ಕೂಡ ಈ ಆಂಧ್ರದವರನ್ನು ಪ್ರೋತ್ಸಾಹಿಸಿ, ಅದು ಒಂದು ರೀತಿಯಲ್ಲಿ ಇಡೀ ರಾಜ್ಯವನ್ನು ಪ್ರತಿನಿಧಿಸುವ ಹಾಗೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್‌.

ಕಪ್ಪು ಮಣ್ಣಿನ ಬಯಲುಸೀಮೆಯ ರಾಯಲಸೀಮೆ ಮತ್ತು ಗುಡ್ಡಗಾಡು, ಬಯಲುಸೀಮೆಯ ತೆಲಂಗಾಣಗಳು ನಮ್ಮ ಹಿಂದುಳಿದ ಹೈದರಾಬಾದ್‌-ಕರ್ನಾಟಕದ ಅಪ್ಪಟ ಪಡಿಯಚ್ಚುಗಳು. ಪಾಳೆಗಾರಿಕೆ, ಜಮೀನ್ದಾರಿ ಸಂಸ್ಕೃತಿ ಹಾಗೂ ಬಹಳಷ್ಟು ಮಳೆಯಾಧಾರಿತ ಕೃಷಿಯ ಅವಲಂಬನೆ ಈ ಪ್ರದೇಶಗಳಲ್ಲಿ ಎದ್ದು ಕಾಣುವ ಸಾಮ್ಯತೆ.

ಹಾಗಾದರೆ, ಕಳೆದ ಏಳು ವರ್ಷಗಳಿಂದ ಆಡಳಿತ ನಡೆಸುತ್ತಿರುವ ನಾಯ್ಡು ಸರ್ಕಾರ ಏನೂ ಮಾಡಿಲ್ಲ ವೇ ? ಇಲ್ಲ ಎನ್ನುವುದು ತಪ್ಪಾಗುತ್ತದೆ. ಕೆಲವೊಂದು ವಿಭಾಗಗಳಲ್ಲಿ , ಉದಾಹರಣೆಗೆ ಹೈಟೆಕ್‌, ಅದು ನಿಜವಾಗಿಯೂ ಗಣನೀಯ. ಅದೇ ರೀತಿ ಇಡೀ ಭಾರತೀಯ ರಾಜಕಾರಣಿಗಳಿಗೆ ವೃತ್ತಿಪರತೆಯ ಪಾಠ ಕಲಿಸಿದ ಗುರು, ನಾಯ್ಡುರವರು. ಈ ಸಮಯದಲ್ಲಿ ಅವರ ಸರ್ಕಾರ ಮಾಡಿದ ವಿದೇಶಿ ಸಾಲವೂ ಅಪಾರವಾಗಿದೆ. ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಆದ ಅಭಿವೃದ್ದಿಯಿಂದಾಗಿ, ನಮ್ಮವೇ ಹಣಕಾಸು ಸಂಸ್ಥೆಗಳು ಐ.ಎಂ.ಎಫ್‌ಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲು ತಯಾರಿರುವುದು ಮಾತ್ರ ಪರಿಸ್ಥಿತಿಯ ವ್ಯಂಗ್ಯ. ಇದೇ ಸಮಯದಲ್ಲಿ ಕರ್ನಾಟಕ ಕಂಡಿದ್ದು ಮೂವರು ಮುಖ್ಯಮಂತ್ರಿಗಳು. ದೇವೇಗೌಡರ ಕಠಿಣ ಪರಿಶ್ರಮ, ಪಟೇಲರು ತಮ್ಮ ಮಂತ್ರಿಗಳಿಗೆ ನೀಡಿದ ಸ್ವಾತಂತ್ರ್ಯ, ಮತ್ತು ಕೃಷ್ಣರ ಪ್ರೊಫೆಷನಲ್‌- ಕಾಸ್ಮೋಪಾಲಿಟನ್‌ ಟಚ್‌ನಿಂದಾಗಿ, (ಮತ್ತಿತರ ಸಾನುಕೂಲತೆಯಿಂದಾಗಿಯೂ) ಕರ್ನಾಟಕದ ಅಭಿವೃದ್ದಿ ನೆರೆಯ ಆಂಧ್ರದಕ್ಕಿಂತಲೂ ರವಷ್ಟು ಮೇಲುಗೈ ಸಾಧಿಸಿರುವುದು ತಿಳಿಯುತ್ತದೆ. ಹೀಗಾಗಿ ರಾಯಚೂರಿಗೆ ಬಡ ತೆಲುಗರು, ಬೆಂಗಳೂರಿಗೆ ಬಡ ತಮಿಳರು ಬರುತ್ತಿರುವುದು ಬದುಕಲು, ಉಳಿಯಲು (ಸರ್ವೈವಲ್‌), ಮಾಡುವ ಒಂದು ಸಹಜ ಮಾನವ ಕ್ರಿಯೆ. ಹಾಗೆಯೇ ನಮ್ಮಲ್ಲಿನ ಅದೇ ಕೆಲಸ ಮಾಡುವ ಬಡವರಿಗೆ ಇದು ಅನಪೇಕ್ಷಣೀಯ ಸಹ.

ಉತ್ತರ ಕರ್ನಾಟಕವ ಹೋಲುವ ತೆಲಂಗಾಣ

ಕಳೆದ ಮೂರು ನಾಲ್ಕು ವರ್ಷಗಳಿಂದ ಮಳೆ ಮರೀಚಿಕೆಯಾಗಿ ಬರದ ತಾಂಡವದಿಂದಾಗಿ ಉತ್ತರ ಕರ್ನಾಟಕದ ರೈತರಂತೆಯೇ ತೆಲಂಗಾಣದ ಜನರ ಜೀವನವೂ ದುರ್ಭರವಾಗಿದೆ. ಹೈಟೆಕ್‌ ಅಭಿವೃದ್ಧಿಯಿಂದಾಗಿ ಬರುವ ದುಡ್ಡು ಭವಿಷ್ಯದ ದೃಷ್ಟಿಯಿಂದ ಬೆಂಗಳೂರು, ಹೈದರಾಬಾದ್‌ಗಳ ಮೂಲಭೂತ (ಇನ್‌ಫ್ರಾಸ್ಟ್ರಕ್ಚರ್‌) ಸೌಕರ್ಯ ವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆಯೆ ವಿನಹ ಅವು ದೇಶದ ಬೇರು ಪ್ರದೇಶಗಳಿಗೆ ಹೋಗುವುದು ಈ ಸಮಯದಲ್ಲಂತೂ ಸಾಧ್ಯವಿಲ್ಲ.

1999ರ ಉತ್ತರಾರ್ಧದ ಕಡುಬೇಸಿಗೆಯಲ್ಲಿ ಗಲ್ಲಿಗೊಂದು ಕಂಪ್ಯೂಟರ್‌ ಇನ್‌ಸ್ಟಿಟ್ಯೂಟ್‌ ಮತ್ತು ರಸ್ತೆಗೊಬ್ಬಳು ತೆಲಂಗಾಣದ ಹದಿಹರೆಯದ ಭಿಕ್ಷುಕಿಯನ್ನು ನಾನು ಹೈದರಾಬಾದ್‌ನಲ್ಲಿ ಕಂಡಿದ್ದೆ. ಹೈದರಾಬಾದನ್ನು ಈ ಸಮಯದಲ್ಲಿ ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ಉತ್ಪ್ರೇಕ್ಷೆಯಲ್ಲ ಎಂದು ಖಂಡಿತ ಗೊತ್ತು.

ಇತ್ತೀಚೆಗೆ ತೆಲಂಗಾಣ ರಾಜ್ಯ ಸಮಿತಿಯ ಚಟುವಟಿಕೆಗಳು ಆಂಧ್ರಪ್ರದೇಶದಲ್ಲಿ ಜೋರಾಗಿವೆ. ಈ ಸಮತಿಯ ನೇತಾರ ಚಂದ್ರಶೇಖರ ರಾವ್‌. ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು ಅವಕೃಪೆಗೆ ಪಾತ್ರನಾಗಿ ತೆಲುಗು ದೇಶಂನಿಂದ ಹೊರಬಂದ ಚಂದ್ರಶೇಖರರಾವ್‌ ಹಿಂದುಳಿದಿರುವ ತೆಲಂಗಾಣವನ್ನೇ ಜನರ ಸಂಘಟಿಸಿ ಕಟ್ಟಿದ ತೆಲಂಗಾಣ ರಾಜ್ಯ ಸಮಿತಿ ಎಂಬ ಹೊಸ ಪಕ್ಷ ಈಗ ಪ್ರಬಲ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಇವರು ಆಯೋಜಿಸಿದ ರ್ಯಾಲಿಗೆ ಸೇರಿದ ಜನರ ಸಂಖ್ಯೆ (ಬಿ.ಬಿ.ಸಿ.ಯ ಪ್ರಕಾರ) ಸುಮಾರು ಹತ್ತು ಲಕ್ಷ! ಈ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ.

ಚಂದ್ರಶೇಖರ ರಾವ್‌ಗೆ ಅಮೇರಿಕಾದಲ್ಲಿರುವ ಅನಿವಾಸಿ ತೆಲಂಗಾಣದವರಿಂದ ಹಣ ಮತ್ತು ನೈತಿಕ ಬೆಂಬಲ ಚೆನ್ನಾಗಿದೆ ಎಂದು ಸುದ್ದಿ. ಅದೇ ರೀತಿ ಇನ್ನೊಂದು ಕಡೆ, ತೆಲಂಗಾಣದ ಬರಪೀಡಿತ ಜನರಿಗೆ ಸಾಂತ್ವನ ಹೇಳುವ ಕಾರಣ ಕೊಟ್ಟು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನೇತಾರ ರಾಜಶೇಖರ ರೆಡ್ಡಿಯವರೂ 60 ದಿನಗಳ ಪಾದಯಾತ್ರೆ ಪ್ರಾರಂಭಿಸಿದ್ದು, ಈ ಪಾದಯಾತ್ರೆಗೆ ಜನರಲ್ಲಿ, ಪತ್ರಿಕೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಹೀಗಾಗಿ ಕಾಂಗ್ರೆಸ್ಸಿಗರು ಮುಂದಿನ ಚುನಾವಣೆಯ ಬಗ್ಗೆ ಬಹಳಷ್ಟು ಆಶಾವಾದದಿಂದಿದ್ದಾರೆ. ಆದರೆ ಅಭಿನವ ಚಾಣಾಕ್ಷ ನಾಯ್ಡುರವರ ಹಿಡಿತ ಅಷ್ಟೇನೂ ಕಮ್ಮಿಯಾದ ಹಾಗೆ ಕಾಣುವುದಿಲ್ಲ.

ಕರ್ನಾಟಕದಲ್ಲಿ ಹೈಟೆಕ್‌ ಬದಲಿಗೆ 'ಅಗ್ರಿ"ಟೆಕ್‌

ಇತ್ತ ಕರ್ನಾಟಕದಲ್ಲಿ ಎರಡು ವರ್ಷ ಹೈಟೆಕ್‌ ಆಗಿದ್ದ ಬಜೆಟ್‌ ಈ ಬಾರಿ 'ಅಗ್ರಿ"ಟೆಕ್‌ ಆಗಿದೆ. ಜನತಾ ಪರಿವಾರದ ಗೋಜಲು ಹೀಗೆಯೇ ಮುಂದುವರಿದಲ್ಲಿ, ಈಗ ಹೇಗೆ ನಡೆಯಿತ್ತಿದೆಯಾ ಹಾಗೆ ನಡೆಸಿಕೊಂಡು ಹೋದರೆ ಸಾಕು, ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿಯೂ ಬಹುಮತ ಗಳಿಸಬಹುದು. ಜನತಾ ಪರಿವಾರ ಒಂದಾದ ಪಕ್ಷದಲ್ಲಿ, ಮುಖ್ಯಮಂತ್ರಿಗಳ ಪ್ರೊಗ್ರೆಸ್‌ ರಿಪೋರ್ಟ್‌ ಕರ್ನಾಟಕದ ಮೂಲೆ ಮೂಲೆಯ ಜನರ ಮನ್ನಣೆ ಗಳಿಸುವುದು ಸ್ವಲ್ಪ ಕಷ್ಟವೆ. ಏಕೆಂದರೆ, ನಮ್ಮಲ್ಲಿಯೂ ಅಂತಹ ಕ್ರಾಂತಿಕಾರಕ ಅಭಿವೃದ್ಧಿ ಆಗಿಲ್ಲ, ಆಗಿದ್ದರೂ ಅದು ಬೆಂಗಳೂರಿನಾಚೆ ಇಲ್ಲ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.

ಬೆಂಗಳೂರಿನಲ್ಲಿ ಕರ್ನಾಟಕದ ಸುಮಾರು ಶೇ. 15 ರಷ್ಟು ಜನಸಂಖ್ಯೆಯಿದ್ದು, ಅಷ್ಟರ ಮಟ್ಟಿಗೆ ಬೆಂಗಳೂರಿನ ಅಭಿವೃದ್ಧಿ ಕರ್ನಾಟಕದ ಅಭಿವೃದ್ಧಿಯೆಂದೂ ಪರಿಗಣಿಸಬಹುದು. (ಹಿಂದಿನ ಲೇಖನಕ್ಕೆ ಪ್ರತಿಕ್ರಿಯಿಸಿದ ಅನಿವಾಸಿ ಓದುಗರೊಬ್ಬರು, ತುಮಕೂರಿನ ಬಳಿಯ ತಮ್ಮ ಅಜ್ಜಿಯ ಊರನ್ನು ಉಲ್ಲೇಖಿಸಿ, ಇಲ್ಲಿ ಅಭಿವೃದ್ಧಿ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದೆಯೆಂದೂ, ಬೆಂಗಳೂರಿನ ಕೆಲವು ಭಾಗಗಳಲ್ಲಿ ಜನರು ಸಾರ್ವಜನಿಕವಾಗಿಯೇ ತಮ್ಮ ನಿತ್ಯ ಕರ್ಮಗಳನ್ನು ಮಾಡುವಷ್ಟು (ಓಪನ್‌ ಟಾಯ್ಲೆಟ್‌) ಬಡತನವಿದೆಯೆಂದೂ ಬರೆದಿದ್ದಾರೆ.)

ಜನತಾ ಪರಿವಾರದಲ್ಲಿ ಸಿದ್ಧರಾಮಯ್ಯ, ಎಂ.ಪಿ.ಪ್ರಕಾಶ್‌, ಭೈರೇಗೌಡ, ಸಿಂಧ್ಯಾರಂತಹ ಯೋಗ್ಯ ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದು, ಅವರೇನಾದರು ಅಧಿಕಾರಕ್ಕೆ ಬಂದರೆ, ಅವರವರ ನಡುವಿನ ಸ್ಪರ್ಧೆಯಿಂದಾಗಿ ಯಾರೇ ಆಗಲಿ ಒಳ್ಳೆಯ ಆಡಳಿತ ಕೊಡಲೇಬೇಕಾಗುತ್ತದೆ ಮತ್ತು ಅದರಿಂದ ಕರ್ನಾಟಕಕ್ಕೇ ಒಳ್ಳೆಯದು.

ಕಾಂಗ್ರೆಸ್‌ನಲ್ಲಿಯೂ ಕೆಲವು ಯೋಗ್ಯ ಅಭ್ಯರ್ಥಿಗಳಿದ್ದು, ತಕ್ಷಣ ಜನರಲ್ಲಿ ಪ್ರಭಾವ ಬೀರುವ ಯೋಜನೆಗಳನ್ನು ಪ್ರಾರಂಭಿಸದಿದ್ದಲ್ಲಿ ಆಡಳಿತ ಪಕ್ಷ ವಿರೋಧಿ ಅಲೆಯೇನಾದರು ಗಟ್ಟಿಯಾದರೆ ಕಾಂಗ್ರೆಸ್ಸಿಗರು ಅವಕಾಶ ವಂಚಿತರಾಗುವುದು ಖಚಿತ.

ಅಂತಿಮವಾಗಿ ಹೇಳುವುದಾದರೆ, ಕೃಷ್ಣ ಹಾಗೂ ಚಂದ್ರಬಾಬು ಅವರ ಸರ್ಕಾರಗಳೆರಡು ಓಡುತ್ತಿರುವ ಹಾದಿ ಹೆಚ್ಚೂ ಕಡಿಮೆ ಒಂದೇ ಆಗಿದೆ. ಮುಂಬರುವ ಚುನಾವಣೆ ಇಬ್ಬರ ಪಾಲಿಗೂ ಅಗ್ನಿಪರೀಕ್ಷೆಯಾಗಲಿದೆ. ಈ ಪರೀಕ್ಷೆಯಲ್ಲಿ ಗೆದ್ದು ಬಂದವರೇ ನಿಜವಾದ ನಂಬರ್‌ 1.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more