ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನಗೂ ಕೆಟ್ಟ ಭಾಷೆ ಬರುತ್ತದೆ : ಯಡಿಯೂರಪ್ಪ ವಿರುದ್ಧ ಗುಡುಗಿದ ಸಿಎಂ

By ಯಾದಗಿರಿ ಪ್ರತಿನಿಧಿ
|
Google Oneindia Kannada News

ಯಾದಗಿರಿ, ಡಿಸೆಂಬರ್ 17: "ಯಡಿಯೂರಪ್ಪ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ. ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ ಅಂತಾರೆ. ನಾನೂ ಕೂಡಾ ಹಳ್ಳಿಯಿಂದ ಬಂದವನು. ನನಗೂ ಕೆಟ್ಟಭಾಷೆ ಬಳಸಲು ಬರುತ್ತದೆ. ಈ ರೀತಿಯ ಭಾಷೆಯಿಂದ ನನ್ನನ್ನು ಹೆದರಿಸಬಹುದು ಅಂದುಕೊಂಡಿದ್ದಾರೆ. ಅದು ಸಾಧ್ಯವಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಹುಣಸಗಿ ಪಟ್ಟಣದ ಯು.ಕೆ.ಪಿ ಪೊಲೀಸ್ ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ 110 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. "ಸಮಾಜವನ್ನು ಒಡೆಯುವ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವ ಬಿಜೆಪಿಗೆ ಅಧಿಕಾರ ಸಿಗಬಾರದು," ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ ಸತ್ಕರಿಸಿದರು.

ಐತಿಹಾಸಿಕ ದಿನ

ಐತಿಹಾಸಿಕ ದಿನ

"ಸುರಪುರದಲ್ಲಿ ಇವತ್ತು ಐತಿಹಾಸಿಕ ದಿನ. 110 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಇಲ್ಲಿ ಚಾಲನೆ ಕೊಟ್ಟಿದ್ದೇನೆ. ಹುಣಸಗಿಯನ್ನು ತಾಲೂಕು ಕೇಂದ್ರ ಮಾಡಿದ್ದೇವೆ. ಜನವರಿ ತಿಂಗಳಲ್ಲಿ ಹುಣಸಗಿ ಹೊಸ ತಾಲೂಕುಯ ಅಸ್ತಿತ್ವಕ್ಕೆ ಬರಲಿದೆ," ಎಂದರು.

"ರಾಜಾ ವೆಂಕಟಪ್ಪ ನಾಯಕ ಅವರದ್ದು ಮಾತು ಕಡಿಮೆ. ಆದರೆ ಕೆಲಸ ಜಾಸ್ತಿ. ಅವರು ಕೇಳಿದ ಎಲ್ಲ ಕೆಲಸಗಳನ್ನು ಮಾಡಿ ಕೊಟ್ಟಿದ್ದೇವೆ. ಇನ್ನೂ ಏನೇನು ಕೇಳ್ತಾರೋ ಅದನ್ನೂ ಮಾಡಿಕೊಡ್ತೀವಿ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ," ಎಂದು ಸಿದ್ದರಾಮಯ್ಯ ವಿಶ್ವಾಸದಿಂದ ನುಡಿದರು.

ಯಾರೂ ಮಾಡದ ಅಭಿವೃದ್ಧಿ

ಯಾರೂ ಮಾಡದ ಅಭಿವೃದ್ಧಿ

"ಸುರಪುರ ಒಂದು ಹಿಂದುಳಿದ ತಾಲೂಕು. ಈ ಭಾಗದಿಂದ ನೀರಾವರಿಗೆ ಹೆಚ್ಚು ಒತ್ತು ಕೊಡಲು ಹುಣಸಗಿ ತಾಲೂಕು ಮಾಡಲಾಗಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಹಿಂದೆ ಯಾರೂ ಮಾಡದ ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಿದ್ದೇವೆ," ಎಂದು ಮುಖ್ಯಮಂತ್ರಿ ವಿವರ ನೀಡಿದರು.

ಸುಳ್ಳು ಬಿಜೆಪಿ ಮನೆ ದೇವರು

ಸುಳ್ಳು ಬಿಜೆಪಿ ಮನೆ ದೇವರು

"ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ಟು ಬೇರೆ ಕಸುಬಿಲ್ಲ. ಅವರು ಸುಳ್ಳನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದರೆ ಹಾಗೆ ಮಾಡುತ್ತೀವಿ, ಹೀಗೆ ಮಾಡುತ್ತೀವಿ ಅಂತಾರೆ. ಹಿಂದೆ ಅಧಿಕಾರದಲ್ಲಿ ಇದ್ದಾಗ ಯಾಕೆ ಅಭಿವೃದ್ಧಿ ಮಾಡಲಿಲ್ಲ? ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತಾ ಯಡಿಯೂರಪ್ಪ ಹೇಳುತ್ತಾರೆ. ಒಂದು ಕಡೆನೂ ರಕ್ತದಲ್ಲಿ ಬರೆದುಕೊಟ್ಟಿದ್ದನ್ನು ನೋಡಲಿಲ್ಲ," ಎಂದು ಸಿಎಂ ಕುಟುಕಿದರು.

"ಯಡಿಯೂರಪ್ಪರಿಂದ ಹಿಡಿದು ಸಾಕಷ್ಟು ಜನ ಬಿಜೆಪಿಯವರು ಜೈಲಿಗೆ ಹೋದರು. ಕೆಲವರು ಜೈಲು, ಇನ್ನೂ ಕೆಲವರು ಬೇಲು.. ಇವರಿಗೆ ಮತ್ತೆ ಅಧಿಕಾರ ಕೊಡಬಾರದು. ಕೊಟ್ಟರೆ ರಾಜ್ಯವನ್ನು ಲೂಟಿ ಮಾಡಿಬಿಡುತ್ತಾರೆ," ಎಂದು ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

ಮಿಷನ್ 150 ಠುಸ್

ಮಿಷನ್ 150 ಠುಸ್

"ಯಡಿಯೂರಪ್ಪ ರಾಜ್ಯಾಧ್ಯಕ್ಷ ಆದ ಮೇಲೆ ಮಿಷನ್ 150 ಅಂತಾ ಹೇಳುತ್ತಾ ಇದ್ದಾರೆ. ಉಪ ಚುನಾವಣೆ ಸೋಲಿನ ನಂತರ ಮಿಷನ್ 150 ಟುಸ್ ಆಗಿದೆ. ಯಡಿಯೂರಪ್ಪರಿಗೆ ಅಮಿತ್ ಶಾ ಬೈದಿರಬೇಕು. ರಾಜ್ಯದಲ್ಲಿ ಗಲಭೆ ಸೃಷ್ಟಿಸಿ ಅಂದಿರಬೇಕು. ಅದಕ್ಕೇ ಯಡಿಯೂರಪ್ಪ ಬಾಯಿಗೆ ಬಂದ ಹಾಗೇ ಮಾತಾಡಿಕೊಂಡು ತಿರುಗುತ್ತಿದ್ದಾರೆ," ಎಂದು ತಮಾಷೆ ಮಾಡಿದರು.

ಬಿಜೆಪಿಯವರದ್ದು ಬರೀ ಬೊಗಳೆ

ಬಿಜೆಪಿಯವರದ್ದು ಬರೀ ಬೊಗಳೆ

"ಬಿಜೆಪಿಯವರು ದಲಿತರಿಗೆ ಏನೂ ಒಳ್ಳೆಯದು ಮಾಡಲಿಲ್ಲ. ಅಲ್ಪಸಂಖ್ಯಾತರಿಗೆ ಏನೂ ಒಳಿತು ಮಾಡಲಿಲ್ಲ. ಇವತ್ತು ನಾವು ಟಿಪ್ಪು ಜಯಂತಿ ಮಾಡಿದರೆ ವಿರೋಧಿಸುತ್ತಾರೆ. ಅಧಿಕಾರದಲ್ಲಿ ಇದ್ದಾಗ ಇವರು ಟಿಪ್ಪು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಟಿಪ್ಪು ಟೋಪಿ, ಖಡ್ಗ ಹಿಡಿದು, ಪಕ್ಕದಲ್ಲಿ ಶೋಭಾ ಕರಂದ್ಲಾಜೆಯನ್ನು ನಿಲ್ಲಿಸಿಕೊಂಡು ಫೋಸ್ ಕೊಟ್ಟಿದ್ದಾರೆ. ಫೇಸ್ ಬುಕ್ ನಲ್ಲಿ, ವಾಟ್ಸಾಪ್ ನಲ್ಲಿ ಈ ಚಿತ್ರಗಳು ಹರಿದಾಡ್ತಿವೆ. ಮಾಧ್ಯಮದವರೂ ಇದನ್ನು ಗಮನಿಸಬೇಕು," ಎಂದು ಬಿಜೆಪಿಯವರನ್ನು ಲೇವಡಿ ಮಾಡಿದರು.

ಶಹಾಪೂರದಲ್ಲಿ ಕಾಂಗ್ರೆಸ್ ಸಮಾವೇಶ

ಶಹಾಪೂರದಲ್ಲಿ ಕಾಂಗ್ರೆಸ್ ಸಮಾವೇಶ

ಬಳಿಕ ಶಹಾಪೂರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗವಹಿಸಿದರು. ನಗರದ ಸರ್ಕಾರಿ ಪದವಿ ಕಾಲೇಜ್ ಮೈದಾನದಲ್ಲಿ ಈ ಸಮಾವೇಶ ನಡೆಯಿತು.

ಸಸಿಗಳಿಗೆ ನೀರು ಹಾಕುವ ಮೂಲಕ ಶಹಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಡೊಳ್ಳು ಬಾರಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತು.

ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ

ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ

"ಶಹಾಪೂರದಲ್ಲಿ ನಾವು ಒಂದೂವರೆ ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಬಿಜೆಪಿಯವರು ನಮ್ಮಷ್ಟು ಹಣ ಖರ್ಚು ಮಾಡಿದ್ದಾರಾ?," ಎಂದು ಸಮಾವೇಶದಲ್ಲಿ ಭಾಗಿಯಾದವರಿಗೆ ಸಿಎಂ ಪ್ರಶ್ನೆ ಮಾಡಿದರು. ಈ ವೇಳೆ ಇಲ್ಲ, ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೂಗಿ ಹೇಳಿದರು.

"ಬಿಜೆಪಿಯವರು ನರೇಂದ್ರ ಮೋದಿ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ನಾವು ನಮ್ಮ ಯೋಜನೆಗಳ ಮೇಲೆ ಅವಲಂಬಿತವಾಗಿದ್ದೇವೆ," ಎಂದು ಸಿದ್ದರಾಮಯ್ಯನವರು ಎದೆಯುಬ್ಬಿಸಿ ನುಡಿದರು.

"ಯಡಿಯೂರಪ್ಪ ಏನೇನು ಕೆಲಸ ಮಾಡಿದ್ದೀರಿ ಎಂದರೆ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಎನ್ನುತ್ತಾರೆ. ಅದನ್ನು ಬಿಟ್ಟು ಬೇರೆ ಏನೂ ಹೇಳಲ್ಲ. ಮೂರನೆಯದ್ದು ನಾನು ಜೈಲಿಗೆ ಹೋಗಿಲ್ಲ ಎಂದು ಹೇಳಬಹುದು," ಎಂದು ಚಟಾಕಿ ಹಾರಿಸಿದರು.

ಸಮಗ್ರ ಕರ್ನಾಟಕ ಅಭಿವೃದ್ಧಿಯ ಕನಸು

ಸಮಗ್ರ ಕರ್ನಾಟಕ ಅಭಿವೃದ್ಧಿಯ ಕನಸು

"ನಾವು 371(J) ಜಾರಿಗೆ ಮನವಿ ಮಾಡಿದರೆ ಮಿಸ್ಟರ್ ಲಾಲ್ ಕೃಷ್ಣ ಅಡ್ವಾಣಿ ಆಗಲ್ಲ ಎಂದರು. ನಮ್ಮ ಸರ್ಕಾರ 371 (J) ಜಾರಿಗೆ ತಂದಿತು. ಹಣ ಎಷ್ಟು ಬೇಕಾದರೂ ಕೊಡುತ್ತೇನೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಆಗಬೇಕು. ಸಮಗ್ರ ಕರ್ನಾಟಕ ಅಭಿವೃದ್ಧಿಯೇ ನಮ್ಮ ಕನಸು," ಎಂದು ಸಿದ್ದರಾಮಯ್ಯ ತಿಳಿಸಿದರು.

"ಯಡಿಯೂರಪ್ಪ ದಲಿತರ ಮನೆಯಲ್ಲಿ ತಿಂಡಿ ತಿನ್ನಲು ಹೋಗುತ್ತಾರೆ. ಅಧಿಕಾರದಲ್ಲಿದ್ದಾಗ ಒಂದು ದಿನ ದಲಿತರ ಮನೆಗೆ ಹೋಗಲಿಲ್ಲ. ಹೋಟೆಲ್ ತಿಂಡಿ ತಂದು ದಲಿತರ ಮನೆಯಲ್ಲಿ ತಿಂದರು," ಎಂದು ಸಿಎಂ ವ್ಯಂಗ್ಯವಾಡಿದರು. ದಲಿತರಿಗೆ ಗುತ್ತಿಗೆದಾರಿಕೆಯಲ್ಲಿ ಮೀಸಲಾತಿ ತಂದವರು ನಾವು. ಎಸ್ಸಿ-ಎಸ್ಟಿ ಅನುದಾನವನ್ನು ಕಡ್ಡಾಯ ಬಳಕೆಗೆ ಕಾನೂನು ತಂದವರು ನಾವು. ದಲಿತರಿಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಇದೆನ್ನೆಲ್ಲಾ ಬಿಜೆಪಿಯವರು ಮಾಡದೇ ಡೋಂಗಿ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.

ಗೋವಾ ಕನ್ನಡಿಗರಿಗೆ ಬಿಜೆಪಿ ಅನ್ಯಾಯ

ಗೋವಾ ಕನ್ನಡಿಗರಿಗೆ ಬಿಜೆಪಿ ಅನ್ಯಾಯ

ಗೋವಾ ಕನ್ನಡಿಗರನ್ನು ಒಕ್ಕಲೆಬ್ಬಿಸುತ್ತಿರುವುದು ಬಿಜೆಪಿ ಸರ್ಕಾರ. ಗೋವಾ ಕನ್ನಡಿಗರಿಗೆ ಬಿಜೆಪಿಯವರು ತೊಂದರೆ ಮಾಡುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, "ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ಹಾಕ್ತಿವಿ ಎಂದು ಮೋದಿ ಹೇಳಿದರು. ಹದಿನೈದು ಪೈಸೆಯೂ ಹಾಕಲಿಲ್ಲ ಪುಣ್ಯಾತ್ಮ. ಅಚ್ಛೇ ದಿನ್ ಆಯೇಗಾ? ಎಂದು ಮೋದಿ ಹೇಳಿದರು. ಕ್ಯೂ ಆಯೇಗಾ ಅಚ್ಛೆ ದಿನ್," ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ಸಚಿವ ಎಂ.ಬಿ ಪಾಟೀಲ, ಪ್ರಿಯಾಂಕ್ ಖರ್ಗೆ, ಶಾಸಕ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

English summary
"I too came from the village, and I know to use the bad language," said chief minister Siddaramaiah against BJP state president BS Yeddyurappa in Yadgir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X