ಮುಗಿಯದ CBSE ಗೊಂದಲ: ಸೈಬರ್ ದಾಳಿ, ಪಾವತಿ ನಿರ್ಬಂಧ; ಶಿಕ್ಷಣ ಸಚಿವರ ರಾಜೀನಾಮೆಗೆ ಹೆಚ್ಚಿದ ಆಗ್ರಹ
ಪ್ರತಿ ವರ್ಷವೂ ಒಂದಲ್ಲ ಒಂದು ಸಮಸ್ಯೆಯಿಂದ ಸುದ್ದಿಯಾಗುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. 12ನೇ ತರಗತಿಯ ಪರೀಕ್ಷೆ ಬರೆದು, ಮರುಮೌಲ್ಯಮಾಪನಕ್ಕೆ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಬಾರಿಯ ಅನುಭವ ಅಕ್ಷರಶಃ ನರಕಯಾತನೆಯಾಗಿದೆ. ಆರಂಭದಿಂದಲೂ ವಿಳಂಬ, ತಾಂತ್ರಿಕ ದೋಷಗಳು, ಸೈಬರ್ ದಾಳಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ ಎಲ್ಲವೂ ಸೇರಿ ಸಿಬಿಎಸ್‌ಇ ವ್ಯವಸ್ಥೆಯ ಕರಾಳ ಮುಖ ಇಡೀ ಜಗತ್ತಿನ ಎದುರು ಬಯಲಾಗಿದೆ.
ಫಲಿತಾಂಶ ಬಂದು 3ವಾರ ಕಳೆದರೂ ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲೇ ಇಲ್ಲ. ವಾರಗಟ್ಟಲೆ ಕಾಯಿಸಿದ ನಂತರ ಕೊನೆಗೂ ಪೋರ್ಟಲ್ ತೆರೆದರು. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ನಿರಾಳತೆ ಸಿಗಲಿಲ್ಲ. ಸಿಬಿಎಸ್‌ಇಯ ಅಧಿಕೃತ ಟ್ವೀಟ್ ಪ್ರಕಾರ, ಪೋರ್ಟಲ್ ಆರಂಭವಾದ ಕೆಲವೇ ಹೊತ್ತಿನಲ್ಲಿ 16,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. ಆದರೆ, ಇದೇ ವೇಳೆ ಕೇವಲ 2 ನಿಮಿಷಗಳಲ್ಲಿ ಬರೋಬ್ಬರಿ 1.5 ಮಿಲಿಯನ್ ಹಿಟ್ಸ್ ಮತ್ತು 1 ಲಕ್ಷಕ್ಕೂ ಹೆಚ್ಚು ಅನಧಿಕೃತ ಫೈಲ್ ಆಕ್ಸೆಸ್ ಯತ್ನಗಳು (ಸೈಬರ್ ದಾಳಿ) ನಡೆದಿವೆ.

ಡಿಜಿಟಲ್ ಇಂಡಿಯಾ ಅಭಿಯಾನದ ಬಗ್ಗೆ ಅಬ್ಬರದ ಪ್ರಚಾರ ಮಾಡುವ ಸರ್ಕಾರದ ವ್ಯವಸ್ಥೆ ಇಷ್ಟು ಕಳಪೆಯಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ತಂತ್ರಜ್ಞಾನ ಇಷ್ಟು ಬೆಳೆದಿದ್ದರೂ, ವಿದ್ಯಾರ್ಥಿಗಳ ದತ್ತಾಂಶವನ್ನು ರಕ್ಷಿಸುವಲ್ಲಿ ಮತ್ತು ಪೋರ್ಟಲ್ ಅನ್ನು ಸುಗಮವಾಗಿ ನಿರ್ವಹಿಸುವಲ್ಲಿ ಸಿಬಿಎಸ್‌ಇ ಐಟಿ ವಿಭಾಗ ಸಂಪೂರ್ಣ ವಿಫಲವಾಗಿದೆ. "ಇವರ ಐಟಿ ತಂಡ ಇನ್ನೂ ಹಳೆಯ ಕಾಲದ ರೀತಿಯೇ ಕೆಲಸ ಮಾಡುತ್ತಿದೆ. ಯಾರು ಬೇಕಾದರೂ ಇವರ ಡೇಟಾ ಹ್ಯಾಕ್ ಮಾಡಬಹುದು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾವತಿ ವ್ಯವಸ್ಥೆಯಲ್ಲಿನ ಅವಾಂತರ
ಮೊದಲೆಲ್ಲಾ ಮರುಮೌಲ್ಯಮಾಪನ ಶುಲ್ಕ ಪಾವತಿಸಲು ಹಲವಾರು ಆಯ್ಕೆಗಳಿದ್ದವು. ಆದರೆ ಹಿಂದೆ ಎಚ್‌ಡಿಎಫ್‌ಸಿ ಗೇಟ್‌ವೇ ಮೂಲಕ ಪಾವತಿ ಮಾಡುವಾಗ ಭದ್ರತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ಈಗ ಸಿಬಿಎಸ್‌ಇ ದಿಢೀರ್ ಆಗಿ ಹೊಸ ನಿಯಮ ಜಾರಿಗೆ ತಂದಿದೆ. ಪಾವತಿ ಆಯ್ಕೆಗಳನ್ನು ಕೇವಲ ಎಸ್‌ಬಿಐ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಈ ನಿರ್ದಿಷ್ಟ ಬ್ಯಾಂಕ್‌ಗಳಲ್ಲಿ ಖಾತೆ ಇಲ್ಲದ ವಿದ್ಯಾರ್ಥಿಗಳು ಹಾಗೂ ಪೋಷಕರು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಯುಪಿಐ ಸೇರಿದಂತೆ ನೂರಾರು ಪಾವತಿ ಆಯ್ಕೆಗಳಿರುವ ಈ ಡಿಜಿಟಲ್ ಯುಗದಲ್ಲಿ, ಕನಿಷ್ಠ ಕಾಮನ್ ಸೆನ್ಸ್ ಕೂಡ ಇಲ್ಲದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಆಡಳಿತದ ಮಿಸ್‌ಮ್ಯಾನೇಜ್‌ಮೆಂಟ್‌ಗೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ರಿ-ಟೋಟಲಿಂಗ್ ಆಯ್ಕೆಯೇ ಇಲ್ಲ
ಅದೆಷ್ಟೋ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಯಲ್ಲಿ ಕೇವಲ ಅಂಕಗಳ ಎಣಿಕೆ (ಟೋಟಲಿಂಗ್) ತಪ್ಪಾಗಿರುತ್ತದೆ. ಅದಕ್ಕಾಗಿ ಮರು ಎಣಿಕೆಗೆ ಅರ್ಜಿ ಸಲ್ಲಿಸೋಣ ಎಂದರೆ ಆ ಆಯ್ಕೆಯೇ ಪೋರ್ಟಲ್‌ನಲ್ಲಿ ಲಭ್ಯವಿಲ್ಲ! ಇದರಿಂದ ಸಣ್ಣ ತಪ್ಪಿಗೂ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡಬೇಕಾದ ಸಂಸ್ಥೆ, ಅವರ ದಾರಿ ಮುಚ್ಚುವ ಕೆಲಸ ಮಾಡುತ್ತಿದೆ.
ಬಲಿಪಶುಗಳಾದ ಅಧಿಕಾರಿಗಳು, ಸೇಫ್ ಆದ ಸಚಿವರು
ಈ ಇಡೀ ಅವ್ಯವಸ್ಥೆ ಮತ್ತು ಮಹಾ ಎಡವಟ್ಟುಗಳ ನಂತರ ಸರ್ಕಾರ ಕೇವಲ ಕಣ್ಣೊರೆಸುವ ತಂತ್ರ ಅನುಸರಿಸಿದೆ. ತಕ್ಷಣಕ್ಕೆ ಸಿಬಿಎಸ್‌ಇ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಒಂದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಆದರೆ ಈ ಇಡೀ ಗೊಂದಲದ ನೈತಿಕ ಹೊಣೆ ಹೊರಬೇಕಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತ್ರ ಸಂಪೂರ್ಣ ಸೇಫ್ ಆಗಿದ್ದಾರೆ. "ಅಧಿಕಾರಿಗಳಿಗೆ ಶಿಕ್ಷೆ, ಸಚಿವರಿಗೆ ರಕ್ಷಣೆ, ಇದೇನಾ ಹೊಣೆಗಾರಿಕೆ? ಇದು ಕೇವಲ ತಮ್ಮ ತಪ್ಪುಗಳನ್ನು ಮುಚ್ಚಿಹಾಕುವ ತಂತ್ರವಷ್ಟೇ" ಎಂದು ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ತೀವ್ರ ವಾಗ್ದಾಳಿ ನಡೆಸಿವೆ.
"ಶಿಕ್ಷಣ ಸಚಿವರನ್ನು ವಜಾಗೊಳಿಸಿ ಮತ್ತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಿ" ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. 18.5 ಮಿಲಿಯನ್ ಸಿಬಿಎಸ್‌ಇ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿಗಳಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಈ ಹಿಂದೆಯೇ ವಜಾಗೊಳಿಸುತ್ತಿದ್ದರು ಎಂಬುದು ಜನರ ನೇರ ಆರೋಪ.
ಒಟ್ಟಿನಲ್ಲಿ, ಸಿಬಿಎಸ್‌ಇ ವ್ಯವಸ್ಥೆಯಲ್ಲಿನ ಈ ಅವ್ಯವಸ್ಥೆಗಳು, ಸಮನ್ವಯದ ಕೊರತೆ ಮತ್ತು ಬೇಜವಾಬ್ದಾರಿತನವು ವಿದ್ಯಾರ್ಥಿಗಳ ಮತ್ತು ಪೋಷಕರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದೆ. ಭವಿಷ್ಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಪಾರದರ್ಶಕ, ದೋಷರಹಿತ ಮತ್ತು ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆಯನ್ನು ರೂಪಿಸುತ್ತದೆಯೇ ಕಾದು ನೋಡಬೇಕಿದೆ.












Click it and Unblock the Notifications