5 ಸ್ಟಾರ್ ಹೊಟೇಲ್ ಬೇಕಂತಿಲ್ಲ, ರಸ್ತೆಯಲ್ಲೂ ಮಲಗಬಲ್ಲೆ: ಕುಮಾರಸ್ವಾಮಿ
Recommended Video
ಯಾದಗಿರಿ, ಜೂನ್ 22: "ನಾನು ಗ್ರಾಮ ವಾಸ್ತವ್ಯ ಎಂದು ಫೈವ್ ಸ್ಟಾರ್ ಹೊಟೇಲ್ ನಲ್ಲಿ ತಂಗುತ್ತೇನೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ನನಗೆ ಫೈವ್ ಸ್ಟಾರ್ ಹೊಟೇಲ್ ಬೇಕಿಲ್ಲ. ನಾನು ರಸ್ತೆಯಲ್ಲೂ ಮಲಗಬಲ್ಲೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಕತೆ ಹೇಳುವ ಚಿತ್ರಗಳು
ಯಾದಗಿರಿಯ ಗುರುಮಟ್ಕಲ್ ನಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿದರು. "ನಾನು ವಿಪಕ್ಷಗಳನ್ನು ಒಂದು ಪ್ರಶ್ನೆ ಕೇಳುತ್ತೇನೆ. ಬಾತ್ ರೂಮ್ ನಂಥ ಕನಿಷ್ಠ ಸೌಲಭ್ಯವನ್ನೂ ಹೊಂದಿಲ್ಲದಿದ್ದರೆ ಹೇಗೆ? ಕೆಲಸ ಮಾಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ? ನಾನೇನು ಆ ಬಾತ್ ರೂಮ್ ಅನ್ನು ನನ್ನೊಂದಿಗೆ ವಾಪಸ್ ಕೊಂಡೊಯ್ಯುವುದಿಲ್ಲವಲ್ಲ" ಎಂದು ಚಂಡರಕಿ ಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಹೇಳಿದರು.

"ನಾನು ಇಲ್ಲಿಗೆ ಒಂದು ಸಾಮಾನ್ಯ ಬಸ್ಸಿನಲ್ಲಿ ಬಂದಿದ್ದೇನೆ. ವೋಲ್ವೋ ಬಸ್ಸಿನಲ್ಲಲ್ಲ. ನನಗೆ ಬಿಜೆಪಿಯಿಂದ ಕಲಿಯುವ ಅಗತ್ಯವಿಲ್ಲ. ನಾನು ಗುಡಿಸಲಿನಲ್ಲೂ ಮಲಗಿದ್ದೇನೆ. ನಮ್ಮ ತಂದೆ ಪ್ರಧಾನಿಯಾಗಿದ್ದಾಗ ನಾನು ರಷ್ಯಾದ ಗ್ರಾಂಡ್ ಕ್ರೆಮ್ಸಲಿನ್ ಅರಮನೆಯಲ್ಲೂ ಮಲಗಿದ್ದೆ. ನಾನು ನನ್ನ ಬದುಕಿನಲ್ಲಿ ಎಲ್ಲವನ್ನೂ ನೋಡಿದ್ದೇನೆ" ಎಂದು ಕುಮಾರಸ್ವಾಮಿ ಹೇಳಿದರು.
"ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿ, ಸಾವಿರಾರು ಜನರ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಲು ಯತ್ನಿಸಿದ್ದೇನೆ. ನಾಳೆ ಕಲಬುರಗಿಯ ಹೇರೂರುಬಿ ಗ್ರಾಮದಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಿದ್ದೆ. ಭಾರೀ ಮಳೆಯ ಕಾರಣ ಈ ಕಾರ್ಯಕ್ರಮವನ್ನು ಮುಂದೂಡುವಂತೆ ಜಿಲ್ಲಾಡಳಿತ ಸಲಹೆ ಮಾಡಿದೆ. ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು" ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ತಾವು ಸರ್ಕಾರಿ ಶಾಲೆಯಲ್ಲಿ ನೆಲದ ಮೇಲೇ ಹಾಸಿಗೆ ಹಾಕಿ ಮಲಗಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.












Click it and Unblock the Notifications