ತಂಬಾಕು ಎಲೆಯಿಂದ ಕೊರೊನಾ ಲಸಿಕೆ ತಯಾರಿಸಿದ ವಿಶ್ವದ ನಂ.2 ಸಿಗರೇಟ್ ಕಂಪನಿ!
ವಾಷಿಂಗ್ಟನ್, ಮೇ 16: ಡೆಡ್ಲಿ ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿಯಲು ಅಮೇರಿಕಾ, ಚೀನಾ, ಯು.ಕೆ, ಇಸ್ರೇಲ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಪ್ರತಿನಿತ್ಯ ಒಂದಲ್ಲೊಂದು ಕ್ಲಿನಿಕಲ್ ಪ್ರಯೋಗ ಕೈಗೊಳ್ಳುತ್ತಿದ್ದಾರೆ.
ಹೀಗಿರುವಾಗಲೇ, ವಿಶ್ವದ ನಂ.2 ಸಿಗರೇಟ್ ಕಂಪನಿ ಬ್ರಿಟಿಷ್ ಅಮೇರಿಕನ್ ಟೊಬ್ಯಾಕೊ ಕೂಡ ಕೋವಿಡ್-19 ಗೆ ಲಸಿಕೆ ತಯಾರಿಸಲು ಮುಂದೆ ಬಂದಿದೆ.
ಪ್ರೀ-ಕ್ಲಿನಿಕಲ್ ಪ್ರಯೋಗಗಳಲ್ಲಿ ಸಕಾರಾತ್ಮಕ ರೋಗ ನಿರೋಧಕ ಪ್ರತಿಕ್ರಿಯೆ ಲಭ್ಯವಾದ ನಂತರ, ತಂಬಾಕು ಎಲೆಗಳಲ್ಲಿರುವ ಪ್ರೋಟೀನ್ ಗಳನ್ನು ಬಳಸಿಕೊಂಡು ತಯಾರಿಸಿರುವ ಸಂಭಾವ್ಯ ಕೋವಿಡ್-19 ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಸಿದ್ಧವಾಗಿದ್ದೇವೆ ಎಂದು ಬ್ರಿಟಿಷ್ ಅಮೇರಿಕನ್ ಟೊಬ್ಯಾಕೊ ಸಂಸ್ಥೆ ತಿಳಿಸಿದೆ.
ಯು.ಎಸ್.ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್.ಡಿ.ಎ) ಕಡೆಯಿಂದ ಲಸಿಕೆಗೆ ಅನುಮತಿ ಸಿಕ್ಕ ಕೂಡಲೆ ಮನುಷ್ಯರ ಮೇಲೆ ಮೊದಲ ಹಂತದ ಪ್ರಯೋಗ ಕೈಗೊಳ್ಳುತ್ತೇವೆ ಎಂದು 'ಲಕ್ಕಿ ಸ್ಟ್ರೈಕ್' ಸಿಗರೇಟ್ ನ ಮೇಕರ್ ತಿಳಿಸಿದ್ದಾರೆ.

ತುದಿಗಾಲಲ್ಲಿ ನಿಂತಿದೆ ಸಿಗರೇಟ್ ಕಂಪನಿ
''ಸರ್ಕಾರ ಬೆಂಬಲ ಸಿಕ್ಕರೆ, ತಂಬಾಕು ಎಲೆಗಳಲ್ಲಿರುವ ಪ್ರೋಟೀನ್ ಗಳನ್ನು ಬಳಸಿಕೊಂಡು ಕೋವಿಡ್-19 ಲಸಿಕೆಯನ್ನು ತಯಾರಿಸುತ್ತೇವೆ. ಪ್ರತಿ ವಾರ 1 ಮಿಲಿಯನ್ ನಿಂದ 3 ಮಿಲಿಯನ್ ನಷ್ಟು ಡೋಸ್ ತಯಾರು ಮಾಡುತ್ತೇವೆ'' ಎಂದು ಹೇಳಿ ಬ್ರಿಟಿಷ್ ಅಮೇರಿಕನ್ ಟೊಬ್ಯಾಕೊ ಸಂಸ್ಥೆ ಕಳೆದ ತಿಂಗಳು ಎಲ್ಲರ ಕಣ್ಣರಳಿಸಿತ್ತು. ಇದೀಗ ಮನುಷ್ಯರ ಮೇಲೆ ಪ್ರಯೋಗ ನಡೆಸಲು ಸಂಸ್ಥೆ ತುದಿಗಾಲಲ್ಲಿ ನಿಂತಿದೆ.

ಆಕ್ಸ್ ಫರ್ಡ್ ಲಸಿಕೆ
ಅತ್ತ ಯು.ಕೆನಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೆಡಿ ಮಾಡಿರುವ ಲಸಿಕೆಯಿಂದ ಮಂಗಗಳಲ್ಲಿ Antibodies ಉತ್ಪತ್ತಿಯಾಗಿದೆ. ಲಸಿಕೆಯಿಂದ ಕ್ಲಿನಿಕಲ್ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಲಭ್ಯವಾಗುತ್ತಿದ್ದು, ವಿಜ್ಞಾನಿಗಳಲ್ಲಿ ಭರವಸೆ ಮೂಡಿಸಿದೆ.

ಇಟಲಿಯಿಂದ ಘೋಷಣೆ
ಇನ್ನೂ, ಇಟಲಿಯಲ್ಲಿ ಇಲಿಗಳ ಮೇಲೆ ಲಸಿಕೆಯ ಪ್ರಯೋಗ ಮಾಡಲಾಗಿದ್ದು, ಪಾಸಿಟಿವ್ ಫಲಿತಾಂಶ ಲಭ್ಯವಾಗಿದೆ. ಹೀಗಾಗಿ, ವಿಶ್ವದ ಮೊಟ್ಟ ಮೊದಲ ಕೊರೊನಾ ವೈರಸ್ ಲಸಿಕೆ ತಯಾರಿಸಲಾಗಿದೆ ಎಂದು ಇಟಲಿಯ ವಿಜ್ಞಾನಿಗಳು ಘೋಷಿಸಿದ್ದಾರೆ.

ವಿವಿಧ ಹಂತಗಳ ಪ್ರಯೋಗದಲ್ಲಿ ಇರುವ ಲಸಿಕೆ
ಇಟಲಿ, ಇಸ್ರೇಲ್, ಯು.ಕೆ, ಅಮೇರಿಕಾ, ಚೀನಾ ಸೇರಿದಂತೆ ವಿಶ್ವದ ಹಲವೆಡೆ ಕೊರೊನಾ ವೈರಸ್ ಲಸಿಕೆಗಾಗಿ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ವಿವಿಧ ಹಂತಗಳ ಪ್ರಯೋಗದಲ್ಲಿರುವ ಲಸಿಕೆಗಳು ಜನರ ಕೈಗೆ ಲಭಿಸಬೇಕು ಅಂದ್ರೆ, ಎಲ್ಲಾ ಪ್ರಯೋಗಗಳನ್ನೂ ಪಾಸ್ ಮಾಡಬೇಕು. ಇದಕ್ಕೆ ಕಮ್ಮಿ ಅಂದರೂ ಇನ್ನೊಂದು ವರ್ಷ ಸಮಯ ಬೇಕು.












Click it and Unblock the Notifications