ಅಮೆರಿಕದಲ್ಲಿ ಶರವೇಗಿಯಾಗಿದೆ ಡೆಲ್ಟಾ; ಒಂದೇ ವಾರದಲ್ಲಿ ಸೋಂಕು ಹೆಚ್ಚಳ
ವಾಷಿಂಗ್ಟನ್, ಆಗಸ್ಟ್ 12: ವಿಶ್ವದಾದ್ಯಂತ ಡೆಲ್ಟಾ ಕೊರೊನಾ ರೂಪಾಂತರ ಹರಡುತ್ತಿದ್ದು, ಅಮೆರಿಕದಲ್ಲಿ ಮತ್ತೆ ಪರಿಸ್ಥಿತಿ ಆತಂಕಕಾರಿಯಾಗಿ ಮಾರ್ಪಡುತ್ತಿದೆ. ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ವರದಿ ನೀಡಿದೆ.
ಕಳೆದ ಒಂದು ವಾರದಲ್ಲಿ ಎಲ್ಲಾ ದೇಶಗಳ ಪೈಕಿ ಅಮೆರಿಕದಲ್ಲಿ ದಾಖಲಾದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಅತಿ ಹೆಚ್ಚಿದೆ ಎಂದು ತಿಳಿಸಿದೆ.
ಕಳೆದ ಒಂದು ವಾರಕ್ಕೆ ಹೋಲಿಸಿದರೆ, ಒಂದೇ ವಾರದಲ್ಲಿ ಅಮೆರಿಕದಲ್ಲಿ ಸೋಂಕಿನ ಪ್ರಮಾಣ 35% ಹೆಚ್ಚಾಗಿದೆ ಎಂದು WHO ಮಾಹಿತಿ ನೀಡಿದೆ. ಇದೀಗ ಅಪಾಯಕಾರಿ ಮಟ್ಟದಲ್ಲಿ ಡೆಲ್ಟಾ ಸೋಂಕು ಹರಡುತ್ತಿದ್ದು, ಹಲವು ದೇಶಗಳು ನಿರ್ಬಂಧಗಳನ್ನು ಮರಳಿ ತರುತ್ತಿವೆ ಎಂದು ತಿಳಿಸಿದೆ.
ಇದರ ಜೊತೆಗೆ ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ದಾಳಿಯಿಂದಾಗಿ ಐಸಿಯು ಹಾಸಿಗೆಗಳ ಲಭ್ಯತೆ ತಗ್ಗಿರುವುದು ಯುಎಸ್‌ನ ನಗರ ಆಸ್ಟಿನ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕೊರೊನಾ ವೈರಸ್ ಸಾಂಕ್ರಾಮಿಕದ ಸ್ಥಳೀಯ ಸ್ಥಿತಿ "ಭೀಕರ" ಎಂದು ತುರ್ತು ಎಚ್ಚರಿಕೆಯ ಗಂಟೆಯನ್ನು ಟೆಕ್ಸಾಸ್ ರಾಜಧಾನಿ ಆಸ್ಟಿನ್‌ನ ನಿವಾಸಿಗಳಿಗೆ ನೀಡಿದೆ. ಆಸ್ಟಿನ್ ಪ್ರದೇಶ ಸುಮಾರು 2.4 ಮಿಲಿಯನ್ ಜನಸಂಖ್ಯೆ ಇರುವ ನಗರವಾಗಿದ್ದು, ಪ್ರಸ್ತುತ ಕೇವಲ ಆರು ತೀವ್ರ ನಿಗಾ ಘಟಕ ಹಾಸಿಗೆಗಳನ್ನು ಹೊಂದಿದೆ ಎಂದು ರಾಜ್ಯ ಆರೋಗ್ಯ ದತ್ತಾಂಶ ತೋರಿಸಿರುವುದು ಆತಂಕವನ್ನು ದುಪ್ಪಟ್ಟುಗೊಳಿಸಿದೆ. ಮುಂದೆ ಓದಿ...

ಅಮೆರಿಕ ಹಾಗೂ ಇರಾನ್‌ನಲ್ಲಿ ಮಿತಿ ಮೀರುತ್ತಿರುವ ಕೊರೊನಾ
ಕೊರೊನಾ ಸೋಂಕಿನ ಪ್ರಕರಣಗಳ ವಾರದ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, ಅಮೆರಿಕ, ಭಾರತ, ಇರಾನ್, ಬ್ರೆಜಿಲ್ ಹಾಗೂ ಇಂಡೋನೇಷ್ಯಾ, ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ ದೇಶಗಳು ಎಂದು ಗುರುತಿಸಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ, ಭಾರತ, ಬ್ರೆಜಿಲ್ ಹಾಗೂ ಇಂಡೋನೇಷ್ಯಾ ಕೊರೊನಾ ಪ್ರಕರಣಗಳಲ್ಲಿ ತಗ್ಗಿದೆ. ಆದರೆ ಅಮೆರಿಕ ಹಾಗೂ ಇರಾನ್ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದೆ ಎಂದು ತಿಳಿಸಿದೆ.

ಮರಣ ಪ್ರಮಾಣ ಸ್ಥಿರವಾಗಿ ಉಳಿದಿದೆ
ಒಂದು ವಾರದ ಅವಧಿಯಲ್ಲಿ ಅಮೆರಿಕದಲ್ಲಿ 734,354 ಹಾಗೂ ಇರಾನ್‌ನಲ್ಲಿ 248,102 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಎರಡು ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಆದರೆ ಕಳೆದ ವಾರಕ್ಕೆ ಹೋಲಿಸಿದರೆ ಸೋಂಕಿನಿಂದ ಸಂಭವಿಸಿದ ಮರಣ ಪ್ರಮಾಣ ಇಲ್ಲಿ ಸ್ಥಿರವಾಗಿದೆ ಎಂದು ತಿಳಿಸಿದೆ. ಇದರೊಂದಿಗೆ ಯುರೋಪ್ ದೇಶಗಳಲ್ಲಿ ಹಾಗೂ ಆಗ್ನೇಯ ಏಷ್ಯಾದಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಿರುವುದಾಗಿ ಮಾಹಿತಿ ನೀಡಿದೆ.

ಮತ್ತೆ ಏಳು ದೇಶಗಳಿಗೆ ಆವರಿಸಿರುವ ಡೆಲ್ಟಾ
ಕಳೆದ ವಾರ ಮತ್ತೆ ಏಳು ದೇಶಗಳಿಗೆ ಡೆಲ್ಟಾ ರೂಪಾಂತರ ವ್ಯಾಪಿಸಿದೆ. ಇದುವರೆಗೂ ಒಟ್ಟು 142 ದೇಶಗಳಲ್ಲಿ ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಅಧ್ಯಯನವೊಂದನ್ನು ಉಲ್ಲೇಖಿಸಿರುವ WHO, ಕೊರೊನಾದ ಮೂಲ ಸೋಂಕಿಗಿಂತ ಈ ಡೆಲ್ಟಾ ರೂಪಾಂತರದ ವೈರಲ್ ಲೋಡ್ ಸಾವಿರ ಪಟ್ಟು ಹೆಚ್ಚಿದೆ ಎಂದು ತಿಳಿಸಿದೆ.

ಪ್ರತಿನಿತ್ಯ ಸರಾಸರಿ ಲಕ್ಷ ಕೊರೊನಾ ಪ್ರಕರಣಗಳು ದಾಖಲು
ಅಮೆರಿಕದಲ್ಲಿ ಕೊರೊನಾವೈರಸ್ ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಳೆದ ಆರು ತಿಂಗಳಲ್ಲಿ ಹೆಚ್ಚಾಗಿದೆ. ಲಸಿಕೆ ವಿತರಣೆ ಪ್ರಮಾಣ ಕಡಿಮೆಯಾಗುತ್ತಿದ್ದು, ಡೆಲ್ಟಾ ರೂಪಾಂತರ ಪ್ರಕರಣ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಡೆಲ್ಟಾ ರೂಪಾಂತರ ಉಲ್ಬಣಗೊಂಡಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೊರೊನಾ ವೈರಸ್ ಡೆಲ್ಟಾ ರೂಪಾಂತರಿಯಿಂದಾಗಿ ಅಮೆರಿಕದಲ್ಲಿ ಸೋಂಕಿಗೀಡಾಗುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 6 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.












Click it and Unblock the Notifications