ಅಮೆರಿಕ ಸಂಸತ್‌ಗೆ ಆಯ್ಕೆಯಾಗಿ ಇತಿಹಾಸ ಬರೆದ ಕಪ್ಪುವರ್ಣೀಯ ಸಲಿಂಗಿ ಟೊರೆಸ್
ವಾಷಿಂಗ್ಟನ್, ನವೆಂಬರ್ 4: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ರಿಚಿ ಟೊರೆಸ್ ಅಮೆರಿಕ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕ ಕಾಂಗ್ರೆಸ್‌ಗೆ ಚುನಾಯಿತರಾದ ಮೊದಲ ಕಪ್ಪುವರ್ಣೀಯ ಸಲಿಂಗಿ ಎಂಬ ಖ್ಯಾತಿಗೆ ಅವರು ಒಳಗಾಗಿದ್ದಾರೆ. ಇದುವರೆಗೂ ತಾವು ಸಲಿಂಗಿ ಎಂದು ಬಹಿರಂಗವಾಗಿ ಹೇಳಿಕೊಂಡ ಯಾವುದೇ ಕಪ್ಪು ವರ್ಣೀಯ ಅಭ್ಯರ್ಥಿ ಕಾಂಗ್ರೆಸ್ ಪ್ರವೇಶಿಸಿರಲಿಲ್ಲ.
32 ವರ್ಷದ ಟೊರೆಸ್, ನ್ಯೂಯಾರ್ಕ್ ನಗರ ಕೌನ್ಸಿಲ್ ಸದಸ್ಯರಾಗಿದ್ದು, ನ್ಯೂಯಾರ್ಕ್‌ನ 15ನೇ ಕಾಂಗ್ರೆಸ್ ಜಿಲ್ಲೆಯಿಂದ ಗೆಲುವು ಸಾಧಿಸಿದ್ದಾರೆ. ತಮ್ಮ ಎದುರಾಳಿ, ರಿಪಬ್ಲಿಕನ್ ಪಕ್ಷದ ಪ್ಯಾಟ್ರಿಕ್ ಡೆಲಿಸಸ್ ಎದುರು ಅವರು ಜಯಭೇರಿ ಬಾರಿಸಿದ್ದಾರೆ.
'ದಕ್ಷಿಣ ಬ್ರಾಂಕ್ಸ್‌ನಲ್ಲಿ ಇಂದು ಹೊಸ ಯುಗ ಆರಂಭವಾಗಿದೆ' ಎಂದು ಟೊರೆಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 'ನ್ಯೂಯಾರ್ಕ್ ನಗರ ಜೀವಿಸಲು ತಮ್ಮ ಜೀವವನ್ನು ಪಣವಾಗಿಟ್ಟ ಅಗತ್ಯ ಕೆಲಸಗಾರರ ಆಕಾಂಕ್ಷೆಗಳನ್ನು ಪೂರ್ತಿಗೊಳಿಸಲು ಅವರನ್ನು ಪ್ರತಿನಿಧಿಸುವ ಅವಕಾಶವು ಜೀವಮಾನದ ಗೌರವ' ಎಂದು ಅವರು ತಿಳಿಸಿದ್ದಾರೆ.

ಆಫ್ರೋ-ಲ್ಯಾಟಿನ್ ಎಂದು ತಮ್ಮನ್ನು ಗುರುತಿಸಿಕೊಂಡಿರುವ ಟೊರೆಸ್, 2013ರಿಂದ ನ್ಯೂಯಾರ್ಕ್ ನಗರ ಕೌನ್ಸಿಲ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ರಿಪಬ್ಲಿಕನ್ ಪಕ್ಷದ ಜೋಸ್ ಸೆರ್ರಾನೊ ವರ್ಷದ ಆರಂಭದಲ್ಲಿ ತಮ್ಮ ನಿವೃತ್ತಿ ಘೋಷಿಸಿದ ಬಳಿಕ ಜೂನ್‌ನಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಅವರು ಸುಮಾರು 12 ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಸೋಲಿಸಿದ್ದರು.
ಮತ್ತೊಬ್ಬ ಕಪ್ಪು ವರ್ಣೀಯ ಸಲಿಂಗಿ ಮೊಂಡೈರ್ ಜೋನ್ಸ್ ಅವರು ವೆಸ್ಟ್‌ಚೆಸ್ಟರ್ ಕೌಂಟಿಯಿಂದ ಸ್ಪರ್ಧಿಸಿದ್ದು, ಅವರ ಫಲಿತಾಂಶ ಇನ್ನೂ ಹೊರಬಂದಿಲ್ಲ. 33 ವರ್ಷದ ಜೋನ್ಸ್ ರಿಪಬ್ಲಿಕನ್ ಅಭ್ಯರ್ಥಿಗಿಂತ ಮುನ್ನಡೆ ಪಡೆದಿದ್ದರು.












Click it and Unblock the Notifications