ಇನ್ನು 77 ದಿನವಷ್ಟೇ, ಮತ್ತೆ ಸೇರಿಕೊಳ್ಳುತ್ತೇವೆ: ಹವಾಮಾನ ಒಪ್ಪಂದದ ಸೇರ್ಪಡೆಗೆ ಬೈಡೆನ್ ಶಪಥ
ವಾಷಿಂಗ್ಟನ್, ನವೆಂಬರ್ 5: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ, ಆರ್ಥಿಕ ನೀತಿಗಳಿಗೆ ವಿರುದ್ಧ ನೀತಿಗಳನ್ನು ಅನುಸರಿಸುವ ಸೂಚನೆಯನ್ನು ಜೋ ಬೈಡನ್ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಸಂಪೂರ್ಣವಾಗಿ ಹೊರಬೀಳುವ ಮುನ್ನವೇ ಜಯದ ಭರವಸೆ ಹೊಂದಿರುವ ಬೈಡೆನ್, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಐತಿಹಾಸಿಕ ಪ್ಯಾರಿಸ್ ಒಪ್ಪಂದಕ್ಕೆ ತಮ್ಮ ಆಡಳಿತದ ಅಮೆರಿಕ ಮರಳಿ ಸೇರಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
2015ರಲ್ಲಿ ನಡೆದಿದ್ದ ಹವಾಮಾನ ಬದಲಾವಣೆಗಳ ಕುರಿತಾದ ಅಂತಾರಾಷ್ಟ್ರೀಯ ಪ್ಯಾರಿಸ್ ಒಪ್ಪಂದವು ಅಮೆರಿಕಕ್ಕೆ ಮಾರಕವಾಗಿದೆ. ಇದರಿಂದಾಗಿ ನಾವು ಸುಖಾಸುಮ್ಮನೆ ಹಣ ಖರ್ಚು ಮಾಡಬೇಕು ಎಂದು ಡೊನಾಲ್ಡ್ ಟ್ರಂಪ್, ಒಪ್ಪಂದದಿಂದ ಹೊರಬಂದಿದ್ದರು. ಮೂರು ವರ್ಷಗಳ ಹಿಂದೆ ಒಪ್ಪಂದದಿಂದ ಹೊರಬರುವ ಘೋಷಣೆಯು ನವೆಂಬರ್ 4ರಂದು ಅಧಿಕೃತವಾಗಿ ಜಾರಿಗೆ ಬಂದಿದೆ. ಬುಧವಾರದಿಂದ ಅಮೆರಿಕ ಈ ಒಪ್ಪಂದದಿಂದ ಅಧಿಕೃತವಾಗಿ ಹೊರ ನಡೆದಂತಾಗಿದೆ.
'ಇಂದು, ಟ್ರಂಪ್ ಆಡಳಿತವು ಪ್ಯಾರಿಸ್ ಹವಾಮಾಣ ಒಪ್ಪಂದವನ್ನು ಅಧಿಕೃತವಾಗಿ ತೊರೆದಿದೆ. ಇನ್ನು ಸರಿಯಾಗಿ 77 ದಿನಗಳಲ್ಲಿ ಬೈಡೆನ್ ಆಡಳಿತವು ಅದಕ್ಕೆ ಮತ್ತೆ ಸೇರಿಕೊಳ್ಳಲಿದೆ' ಎಂದು ಜೋ ಬೈಡೆನ್ ಟ್ವೀಟ್ ಮಾಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸನ್ನಿಹಿತವಿರುವ ಬೈಡೆನ್, ಗೆಲುವು ತಮ್ಮದಾಗಲಿದ್ದು, 77 ದಿನಗಳಲ್ಲಿ ಟ್ರಂಪ್ ಅವರಿಂದ ತಮಗೆ ಅಧಿಕಾರ ಹಸ್ತಾಂತರವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.

ಬರಾಕ್ ಒಬಾಮಾ ಸರ್ಕಾರದ ಸಂದರ್ಭದಲ್ಲಿ ಅಮೆರಿಕವು ಹವಾಮಾನ ಬದಲಾವಣೆ ಕುರಿತಾದ ಒಪ್ಪಂದಕ್ಕೆ ಬದ್ಧವಾಗಿತ್ತು. ಇದರಲ್ಲಿ ಅಮೆರಿಕ ಮತ್ತು 187 ದೇಶಗಳು ಸಹಿ ಹಾಕಿದ್ದವು. ಆದರೆ ಈ ಒಪ್ಪಂದದಿಂದ ಅಮೆರಿಕಕ್ಕೆ ಬಹಳ ನಷ್ಟವಾಗಲಿದೆ. ರಷ್ಯಾ, ಚೀನಾ ಮತ್ತು ಭಾರತದಂತಹ ದೇಶಗಳಿಗೆ ಲಾಭ ಸಿಗಲಿದೆ. ಇದು ಅಮೆರಿಕಕ್ಕೆ ಭಾರಿ ಆರ್ಥಿಕ ಹೊಡೆತ ನೀಡಲಿದ್ದು, 2025ರ ವೇಳೆಗೆ 2.5 ಮಿಲಿಯನ್ ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು.












Click it and Unblock the Notifications