ಅಮೆರಿಕ ಚುನಾವಣೆ: ಬಿಡೆನ್ ಪ್ರಚಾರಕ್ಕೆ ನೆರವು ನೀಡಿದ ಭಾರತೀಯ ದೇಣಿಗೆದಾರರು
ವಾಷಿಂಗ್ಟನ್, ನವೆಂಬರ್ 2: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ತಮ್ಮ ಪ್ರಮುಖ ದೇಣಿಗೆ ಸಂಗ್ರಹಕಾರರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಭಾರತೀಯ ಅಮೆರಿಕನ್ನರು ಸೇರಿದಂತೆ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಈ ವರ್ಷ ಕನಿಷ್ಠ ಒಂದು ಲಕ್ಷ ಡಾಲರ್ ದೇಣಿಗೆ ಸಂಗ್ರಹಿಸಲು ನೆರವಾದವರ ಹೆಸರನ್ನು ಅವರು ಬಹಿರಂಗಪಡಿಸಿದ್ದಾರೆ.
ಸುಮಾರು 800 ಪ್ರಮುಖ ದೇಣಿಗೆದಾರರ ಪಟ್ಟಿ ಇದಾಗಿದ್ದು, ಇದರಲ್ಲಿ 12ಕ್ಕೂ ಅಧಿಕ ಭಾರತೀಯ ಅಮೆರಿಕನ್ನರ ಹೆಸರಿದೆ. ಸ್ವದೇಶ್ ಚಟರ್ಜಿ, ರಮೇಶ್ ಕಪೂರ್, ಶೇಖರ್ ಎನ್ ನರಸಿಂಹನ್, ಆರ್ ರಂಗಸ್ವಾಮಿ, ಅಜಯ್ ಜೈನ್ ಭುಟೋರಿಯಾ ಮತ್ತು ಫ್ರಾಂಕ್ ಇಸ್ಲಾಂ ಈ ಪಟ್ಟಿಯಲ್ಲಿರುವ ಭಾರತ ಮೂಲದ ಸಮುದಾಯದ ಪ್ರಮುಖರಾಗಿದ್ದಾರೆ.
ಇವರಲ್ಲದೆ, ನೀಲ್ ಮಖಿಜಾ, ರಹು, ಪ್ರಕಾಶ್, ದೀಪಕ್ ರಾಜ್, ರಾಜ್ ಶಾ, ರಂಜನ್ ಶಾ, ರಾಧಿಕಾ ಶಾ, ಜಿಲ್ ಮತ್ತು ರಾಜ್ ಸಿಂಗ್, ನಿಧಿ ಥಾಕರ್, ಕಿರಣ್ ಜೈನ್, ಸೋನಿ ಕಲ್ಸಿ ಹಾಗೂ ಬೆಲಾ ಬಜಾರಿಯಾ ಅವರು ಬಿಡೆನ್ ಪರ ದೇಣಿಗೆ ಸಂಗ್ರಹಿಸಿದವರಲ್ಲಿ ಸೇರಿದ್ದಾರೆ. ಭಾರತ-ಅಮೆರಿಕನ್ ಕಾಂಗ್ರೆಸ್ ಸಂಸದೆ ಪ್ರಮೀಳಾ ಜಯಪಾಲ್ ಕೂಡ ಈ ಪಟ್ಟಿಯಲ್ಲಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ಪರ ಒಂದು ಲಕ್ಷಕ್ಕೂ ಅಧಿಕ ಮೊತ್ತದ ದೇಣಿಗೆ ಸಂಗ್ರಹಿಸಿದ ಭಾರತೀಯ ಅಮೆರಿಕನ್ನರ ಪಟ್ಟಿಯಲ್ಲಿ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ಮತ್ತು ಬಿಲ್ ಕ್ಲಿಂಟನ್ ಅವರ ಪ್ರಚಾರದ ಅವಧಿಗೆ ಹೋಲಿಸಿದರೆ ಬಿಡೆನ್ ಪರ ದೇಣಿಗೆ ಸಂಗ್ರಹಿಸಿದವರ ಸಂಖ್ಯೆ ಬಹಳ ಕಡಿಮೆ ಇದೆ. ಡೆಮಾಕ್ರಟಿಕ್ ಪಕ್ಷದ ದೇಣಿಗೆದಾರರಲ್ಲಿ ಪ್ರಮುಖವಾಗಿ ಇರುತ್ತಿದ್ದ ಸಾಂಟ್ ಚಟ್ವಾಲ್ ಅವರಂತಹ ಮುಖ್ಯ ವ್ಯಕ್ತಿಗಳ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಲ್ಲ.
ಸಿನಿಮಾ ನಿರ್ಮಾಪಕ ಜೆಫ್ರಿ ಕಟ್ಜೆನ್‌ಬರ್ಗ್, ನಿರ್ದೇಶಕ ಲೀ ಡೇನಿಯಲ್ಸ್, ಲಿಂಕಡ್‌ಇನ್ ಸಹ ಸಂಸ್ಥಾಪಕ ರೀಡ್ ಹಾಫ್‌ಮ್ಯಾನ್, ಮಾಧ್ಯಮ ಪ್ರಮುಖ ಹೈಮ್ ಸಬಾನ್ ಮತ್ತು ಅಮೆರಿಕದ ಮಾಜಿ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಸ್‌ಕರ್ ಈ ಪಟ್ಟಿಯಲ್ಲಿದ್ದಾರೆ.
ಎರಡು ವರ್ಷಗಳ ಅವಧಿಯಲ್ಲಿ 1 ಬಿಲಿಯನ್ ಡಾಲರ್‌ಗಳಿಗೂ ಅಧಿಕ ದೇಣಿಗೆ ಸಂಗ್ರಹಿಸಿದ ಮೊದಲ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಬಿಡೆನ್ ಪಾತ್ರರಾಗಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿಯೇ ಅವರು 700ಮಿಲಿಯನ್ ಡಾಲರ್‌ಗೂ ಅಧಿಕ ದೇಣಿಗೆ ಸಂಗ್ರಹಿಸಿದ್ದಾರೆ.












Click it and Unblock the Notifications