ಮೂರು ರಾಜ್ಯಗಳಲ್ಲಿ ಮತ ಎಣಿಕೆ ಸ್ಥಗಿತಕ್ಕೆ ಟ್ರಂಪ್ ಕಾನೂನು ಹೋರಾಟ
ವಾಷಿಂಗ್ಟನ್, ನವೆಂಬರ್ 5: ಶ್ವೇತಭವನ ಪ್ರವೇಶದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಅವರ ಕನಸು ನನಸಾಗುವ ಹಂತದಲ್ಲಿದೆ. ಮಿಚಿಗನ್ ಮತ್ತು ವಿಸ್ಕನ್ಸಿನ್‌ನಲ್ಲಿನ ಅವರ ಗೆಲುವು ಬಹುಮತದ ಸಮೀಪಕ್ಕೆ ಅವರನ್ನು ಕೊಂಡೊಯ್ದಿದೆ. ಆದರೆ ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಈ ಫಲಿತಾಂಶವನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಟ್ರಂಪ್ ಅವರ ಪ್ರಚಾರ ತಂಡವು ಮತ ಎಣಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕಾನೂನು ಹೋರಾಟ ನಡೆಸಿದೆ.
ಮತದಾನದ ಹಿಂದಿನ ದಿನದಿಂದಲೂ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಮಾಡಿದ್ದರು. ಚುನಾವಣೆಯ ದಿನ ಕೂಡ ಅವರು ತಾವು ಗೆಲ್ಲದಿದ್ದರೆ ಈ ಫಲಿತಾಂಶವನ್ನು ಒಪ್ಪಿಕೊಳ್ಳುವುದಿಲ್ಲ. ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆ ಎಂದು ಹೇಳಿದ್ದರು.
ಮಿಚಿಗನ್, ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾಗಳಲ್ಲಿನ ಮತ ಎಣಿಕೆ ವಿರುದ್ಧ ಟ್ರಂಪ್ ಪ್ರಚಾರ ತಂಡ ಮೊಕದ್ದಮೆ ಹೂಡಿದೆ. ವಿಸ್ಕನ್ಸಿನ್‌ನಲ್ಲಿ ಮರು ಮತ ಎಣಿಕೆ ನಡೆಸುವಂತೆ ಒತ್ತಾಯಿಸಿದೆ.

'ನಮ್ಮ ವ್ಯವಸ್ಥೆಯ ಸಮಗ್ರತೆಗೆ ಮತ್ತು ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ಹಾನಿ ಮಾಡಲಾಗಿದೆ. ಮಿಚಿಗನ್‌ನಲ್ಲಿ ರಹಸ್ಯವಾಗಿ ಮತಗಳನ್ನು ತುಂಬಲಾಗಿದೆ' ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಈ ಆರೋಪಕ್ಕೆ ಅವರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.
ಮಿಚಿಗನ್‌ನಲ್ಲಿ ಮತ ಎಣಿಕೆಯನ್ನು ಅಮಾನತುಗೊಳಿಸುವಂತೆ ದೂರು ಸಲ್ಲಿಸಲಾಗಿದೆ. ಮತ ಎಣಿಕೆ ಪ್ರಕ್ರಿಯೆಯನ್ನು ಸಮೀಪದಿಂದ ನೋಡಲು ವೀಕ್ಷಕರಿಗೆ ಇಲ್ಲಿ ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ. ಡೆಮಾಕ್ರಟಿಕ್ ಪ್ರಬಲ ನೆಲೆಯಾದ, ಕಪ್ಪುವರ್ಣೀಯರೇ ಹೆಚ್ಚಿರುವ ಡೆಟ್ರೋಯಿಟ್‌ನಲ್ಲಿ ಟ್ರಂಪ್ ಬೆಂಬಲಿಗರು ಮತ ಎಣಿಕೆ ನಿಲ್ಲಿಸಿ ಎಂಬ ಘೋಷಣೆಗಳನ್ನು ಕೂಗಿದರು.












Click it and Unblock the Notifications