ಅಮೆರಿಕ ಚುನಾವಣೆ: ಜನಪ್ರತಿನಿಧಿಗಳ ಸಭೆಯಲ್ಲಿ ಡೆಮಾಕ್ರಟಿಕ್ ಪ್ರಾಬಲ್ಯ
ವಾಷಿಂಗ್ಟನ್, ನವೆಂಬರ್ 4: ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ನಡುವಿನ ಪೈಪೋಟಿ ಮುಂದುವರಿದಿದೆ. ಸ್ಪಷ್ಟ ಫಲಿತಾಂಶ ಪ್ರಕಟವಾಗಲು ಶುಕ್ರವಾರದವರೆಗೂ ಕಾಯಬೇಕಾಗಬಹುದು. ಅತ್ತ ಡೊನಾಲ್ಡ್ ಟ್ರಂಪ್ ತಮ್ಮದೇ ಗೆಲುವು ಎಂದು ಹೇಳಿದ್ದರೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಶ್ವೇತಭವ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
ಆದರೆ ಜನಪ್ರತಿನಿಧಿಗಳ ಸಭೆಯಲ್ಲಿ ನಿರೀಕ್ಷೆಯಂತೆಯೇ ಡೆಮಾಕ್ರಟಿಕ್ ಪಕ್ಷ ತನ್ನ ನಿಯಂತ್ರಣವನ್ನು ಮರಳಿ ಸಾಧಿಸಿದೆ. ಅಷ್ಟೇ ಅಲ್ಲ, 435 ಸದಸ್ಯರ ಸಭೆಯಲ್ಲಿನ ತನ್ನ ಪ್ರಾಬಲ್ಯವನ್ನು ತಕ್ಕಮಟ್ಟಿಗೆ ವಿಸ್ತರಿಸಿಕೊಂಡಿದೆ.
ಸದನದ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ತಮ್ಮ ಪಕ್ಷದ ಸದಸ್ಯರ ಸಂಖ್ಯೆಯನ್ನು ಈ ಚುನಾವಣೆಯಲ್ಲಿ ಕನಿಷ್ಠ ನಾಲ್ಕರಿಂದ ಐದು ಸ್ಥಾನಗಳವರೆಗೆ ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಈ ಫಲಿತಾಂಶವು ಪೆಲೊಸಿ ಅವರಿಗೆ ಹೆಚ್ಚಿನ ಶಕ್ತಿ ನೀಡಿದೆ.

ಮರು ಆಯ್ಕೆಯ ಪ್ರಯತ್ನದಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲು ಅನುಭವಿಸಿದರೆ, ಅವರ ಮೊದಲ ಅವಧಿಯಲ್ಲಿ ನೀಡಿದ ಆದೇಶಗಳು ಹಾಗೂ ತೆಗೆದುಕೊಂಡ ಕ್ರಮಗಳನ್ನು ರದ್ದುಗೊಳಿಸುವ ಪೆಲೊಸಿ ಉದ್ದೇಶ ಸುಲಭವಾಗಲಿದೆ.
ಈ ಬಾರಿಯ ಜನಪ್ರತಿನಿಧಿಗಳ ಚುನಾವಣೆಯಲ್ಲಿ ಭಾರತ ಮೂಲದ ಎಲ್ಲ ನಾಲ್ವರೂ ಡೆಮಾಕ್ರಟಿಕ್ ಅಭ್ಯರ್ಥಿಗಳು ಜನಪ್ರತಿನಿಧಿ ಸಭೆಗೆ ಮರು ಆಯ್ಕೆಯಾಗಿದ್ದಾರೆ. ಡಾ. ಅಮಿ ಬೇರಾ, ಪ್ರಮೀಳಾ ಜಯಪಾಲ್, ರೋ ಖನ್ನಾ ಮತ್ತು ರಾಜಾ ಕೃಷ್ಣಮೂರ್ತಿ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.












Click it and Unblock the Notifications