22 ಇಂಚಿನ ರಂಧ್ರದ ಮೂಲಕ ಜೈಲಿನಿಂದ ಕೊಲೆ ಆರೋಪಿಗಳು ಎಸ್ಕೇಪ್
ಕ್ಯಾಲಿಫೋರ್ನಿಯಾ, ನವೆಂಬರ್ 6: ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ಇಬ್ಬರು ಆರೋಪಿಗಳು ಕೇವಲ 22 ಇಂಚು ಅಗಲದ ಕಿಂಡಿಯ ಮೂಲಕ ಜೈಲಿನಿಂದ ಪರಾರಿಯಾದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಸಾಲಿನಸ್ ನಗರದಲ್ಲಿ ನಡೆದಿದೆ.
ಶೌಚಾಲಯದ ಸೀಲಿಂಗ್‌ಅನ್ನು ತುಂಡರಿಸಿದ ಆರೋಪಿಗಳು ಅದರ ರಂಧ್ರದ ಮೂಲಕ ನುಸುಳಿ ಪರಾರಿಯಾಗಿದ್ದು, ಅವರ ಚಾಕಚಕ್ಯತೆ ಪೊಲೀಸರನ್ನೂ ಬೆರಗುಗೊಳಿಸಿದೆ. ಆರೋಪಿಗಳು ಈ ರೀತಿ ಸೀಲಿಂಗ್ ಕತ್ತರಿಸಿ ಪರಾರಿಯಾಗಲು ಅವಕಾಶವಿದೆ ಎಂಬ ಅರಿವೂ ತಮಗೆ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರೂ ಆರೋಪಿಗಳು ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದು, ನ್ಯಾಯಾಲಯದಲ್ಲಿ ಅವರ ವಿಚಾರಣೆ ಆರಂಭವಾಗಿರಲಿಲ್ಲ.
ಸ್ಯಾಂಟೋಸ್ ಸಾಮ್ಯುಯೆಲ್ ಫೋನ್ಸೆಕಾ (21) ಮತ್ತು ಜೊನಾಥನ್ ಸಲಾಜಾರ್ (20) ಮಾಂಟೆನರಿ ಕೌಂಟಿ ಅಡಲ್ಟ್ ಡಿಟೆನ್ಷನ್ ಫೆಸಿಲಿಟಿ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದಾರೆ. 800ಕ್ಕೂ ಹೆಚ್ಚು ಕೈದಿಗಳು ಈ ಜೈಲಿನಲ್ಲಿದ್ದು, ಉಳಿದವರು ತಪ್ಪಿಸಿಕೊಂಡಿಲ್ಲ.

ಶೌಚಾಲಯದಲ್ಲಿ ಇದ್ದಾಗ ಜೈಲು ಕಾವಲುಗಾರರ ಕಣ್ಣಿಗೆ ಕೈದಿಗಳು ಕಾಣಿಸುವುದಿಲ್ಲ. ಈ ಅವಕಾಶವನ್ನು ಉಪಯೋಗಿಸಿಕೊಂಡು ಪೈಪ್‌ಗಳ ಮೂಲಕ ಏರಿ ಅಲ್ಲಿಗೆ ತಲುಪಿದ್ದರು. ಅವರು ಹೇಗೆ ತಪ್ಪಿಸಿಕೊಂಡಿದ್ದಾರೆ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.
2018ರ ಜೂನ್‌ನಲ್ಲಿ ಎರಡು ದಿನಗಳ ಅಂತರದಲ್ಲಿ ಲೊರೆನ್ಸೊ ಗೋಮೆಜ್ ಅಕೋಸ್ಟಾ ಮತ್ತು ಎರ್ನಸ್ಟೋ ಗಾರ್ಸಿಯಾ ಕ್ರೂಜ್ ಎಂಬ ಇಬ್ಬರನ್ನು ಕೊಂದ ಪ್ರಕರಣದಲ್ಲಿ ಫೋನ್ಸೇಕಾ ಮತ್ತು ಆತನ ಪ್ರೇಯಸಿಯನ್ನು ಬಂಧಿಸಲಾಗಿತ್ತು.
ಕಾರ್‌ನಲ್ಲಿ ತೆರಳುತ್ತಿದ್ದ ಜೈಮ್ ಮಾರ್ಟಿನೆಜ್ ಎಂಬಾತನ ಮೇಲೆ ಗುಂಡು ಹಾರಿಸಿ ಕೊಂದ ಆರೋಪ ಸಲಾಜಾರ್ ಮೇಲಿದೆ.












Click it and Unblock the Notifications