ಯುಎಸ್ಎ ಫಲಿತಾಂಶದ ದಾರಿ ತಪ್ಪಿಸುತ್ತಿದ್ದಾರೆಯೇ ಟ್ರಂಪ್?
ವಾಶಿಂಗ್ಟನ್, ನವೆಂಬರ್.05: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಮತದಾನ ಪ್ರಕ್ರಿಯೆ ಮುಗಿದ ನಂತರದಲ್ಲಿ ಚಲಾವಣೆಯಾದ ಮತಗಳನ್ನು ಯಾವುದೇ ಕಾರಣಕ್ಕೂ ಎಣಿಕೆ ಮಾಡುವಂತಿಲ್ಲ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಮಾಡಿರುವ ಸಂದೇಶವನ್ನು ಟ್ವಿಟರ್ ನಲ್ಲಿ ಫ್ಲಾಗ್ ಮಾಡಲಾಗಿದೆ. ಇದರ ಅರ್ಥ ಈ ಸಂದೇಶವು ಒಬ್ಬ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯ ಆಗಿರುತ್ತದೆ ಎಂಬುದನ್ನು ಮತ್ತು ವಿಶೇಷವಾಗಿ ಗಮನ ಹರಿಸಬೇಕು ಎಂಬ ಎಚ್ಚರಿಕೆಯನ್ನು ನೀಡುತ್ತದೆ. ಅಮೆರಿಕಾ ಚುನಾವಣಾ ಫಲಿತಾಂಶದ ಬಗ್ಗೆ ದಾರಿ ತಪ್ಪಿಸುವ ಯತ್ನ ನಡೆಯುತ್ತಿರಬಹುದು ಎಂಬ ಅನುಮಾನದ ಮೇಲೆ ಈ ರೀತಿ ಪೋಸ್ಟ್ ನ್ನು ಫ್ಲಾಗ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಘೋಷಣೆಯಾದ ನಂತರದಲ್ಲಿ ಡೊನಾಲ್ಡ್ ಟ್ರಂಪ್ ಹಾಕುತ್ತಿರುವ ಬಹುತೇಕ ಸಂದೇಶಗಳನ್ನು ಟ್ವಿಟರ್ ಕಂಪನಿಯು ಫ್ಲಾಗ್ ಮಾಡುತ್ತಿತ್ತು. "ಮತದಾನ ನಂತರ ಚಲಾವಣೆ ಆಗಿರುವ ಮತಗಳನ್ನು ಯಾವುದೇ ಕಾರಣಕ್ಕೂ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ" ಎಂದು ಇತ್ತೀಚಿಗಷ್ಟೇ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಏಕೆಂದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಚುನಾವಣೆ ನಡೆದ ಬಳಿಕ ಅದರ ಫಲಿತಾಂಶ ಹೊರ ಬರುವುದಕ್ಕೆ ಕೆಲವೊಮ್ಮೆ ದಿನಗಳು ಸಾಕಾಗುತ್ತದೆ. ಕೆಲವೊಮ್ಮೆ ವಾರವೂ ಬೇಕಾಗುತ್ತದೆ.

ಬಿಡೆನ್ ಏಟಿಗೆ ಟ್ರಂಪ್ ತಿರುಗೇಟು:
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಎಲ್ಲರ ಮತಗಳೂ ಕೂಡಾ ಎಣಿಕೆಯಾಗಬೇಕು ಎಂದು ಮನವಿ ಮಾಡಿಕೊಂಡಿದ್ದು, ಈ ಸಂಬಂಧ ವಿಡಿಯೋವೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಮತ ಎಣಿಕೆಯನ್ನೇ ನಿಲ್ಲಿಸುವಂತೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮುನ್ನಡೆ ಜೋ ಬಿಡೆನ್ 253 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 213 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.












Click it and Unblock the Notifications