ಛೇ.. ಛೇ.. ಇದಕ್ಕೆ ಪ್ರತಿಭಟನೆ ಅಂತಾರಾ.? ಸಾವಿಗೆ ನ್ಯಾಯ ದೊರಕಿಸುವುದು ಹೀಗಾ.?
ವಾಷಿಂಗ್ಟನ್, ಮೇ 31: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ ಬಳಿಕ ಮಿನ್ನಿಯಾಪೊಲಿಸ್ ನಗರವೂ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 17 ನಗರದಲ್ಲಿ ಪ್ರತಿಭಟನೆಯ ಕಾವು ಏರಿದೆ.
ಕಳೆದ ಐದು ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಹಿಂಸಾಚಾರ ರೂಪ ಪಡೆದುಕೊಂಡಿದೆ. ವಾಣಿಜ್ಯ ಮಳಿಗೆಗಳು, ಹೋಟೆಲ್ ಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಪರಿಣಾಮ ಮಿನ್ನಿಯಾಪೊಲಿಸ್ ನಗರ ಅಕ್ಷರಶಃ ಹೊತ್ತಿಯುರಿದಿದೆ.
ಈ ನಡುವೆ ಪ್ರತಿಭಟನೆಯನ್ನೇ ಲಾಭ ಮಾಡಿಕೊಳ್ಳಲು ಒಂದು ಗುಂಪು ಪ್ರಯತ್ನಿಸಿರುವುದು ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದೆ. ಪ್ರತಿಭಟನೆ ಹೆಸರಿನಲ್ಲಿ.. 'ಬ್ಲಾಕ್ ಮ್ಯಾನ್' ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ದೊರಕಿಸುವ ನೆಪದಲ್ಲಿ.. ಪ್ರತಿಭಟನಾಕಾರರ ಗುಂಪೊಂದು ಪೋರ್ಟ್ ಲ್ಯಾಂಡ್ ನಲ್ಲಿರುವ ಲೂಯಿ ವಿಟಾನ್ ಅಂಗಡಿಗೆ ನುಗ್ಗಿ ಲೂಟಿ ಹೊಡೆದಿದ್ದಾರೆ.
|
ಅಂಗಡಿ ಲೂಟಿ
ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ದೊರಕಿಸಲು ಪ್ರತಿಭಟನೆ ನಡೆಸುತ್ತಿದ್ದವರು ಪೋರ್ಟ್ ಲ್ಯಾಂಡ್ ನಲ್ಲಿನ ಲೂಯಿ ವಿಟಾನ್ ಅಂಗಡಿಯ ಗಾಜಿನ ಬಾಗಿಲು ಒಡೆದು, ಒಳಗೆ ನುಗ್ಗಿ ಅಲ್ಲಿದ್ದ ದುಬಾರಿ ಬೆಲೆಯ ವಸ್ತುಗಳನ್ನು ಕೊಂಡೊಯ್ದಿದ್ದಾರೆ. ಕ್ಯಾಮರಾದಲ್ಲಿ ಸೆರೆಯಾಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ವೈರಲ್ ಆಗಿದೆ.
|
ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ
''ಲೂಟಿ ಹೊಡೆಯುವ ಕಾರಣಕ್ಕೆ ಇವರೆಲ್ಲಾ 'ಪ್ರತಿಭಟನೆ' ಮಾಡುತ್ತಿದ್ದಾರೆ'', ''ಜಾರ್ಜ್ ಫ್ಲಾಯ್ಡ್ ಹೆಸರನ್ನು ದುರುಪಯೋಗ ಪಡಿಸಿಕೊಂಡು, ಅಂಗಡಿಗಳಿಗೆ ಕನ್ನ ಹಾಕುತ್ತಿದ್ದಾರೆ. ಇದರಿಂದ ಜಾರ್ಜ್ ಫ್ಲಾಯ್ಡ್ ಸಾವಿಗೆ ಹೇಗೆ ನ್ಯಾಯ ಸಿಗುತ್ತದೆ.?'', ''ಇದು ಪ್ರತಿಭಟನೆ ಅಲ್ಲ.. ಕಳ್ಳತನ.. ಇದು ಖಂಡಿತ ಸರಿಯಲ್ಲ'' ಎಂದು ಹಲವರು ಲೂಟಿ ಹೊಡೆಯುತ್ತಿರುವವರಿಗೆ ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕಿದ್ದಾರೆ.
|
ಐದು ದಿನಗಳಿಂದ ಪ್ರತಿಭಟನೆ
ಕಳೆದ ಐದು ದಿನಗಳಿಂದ ಮಿನ್ನಿಯಾಪೊಲಿಸ್ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಿಂಸಾತ್ಮಕ ಪ್ರತಿಭಟನೆಯಿಂದ ಹಲವು ವಾಣಿಜ್ಯ ಮಳಿಗೆ, ಹೋಟೆಲ್ ಗಳಿಗೆ ಬೆಂಕಿ ಬಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಪ್ರತಿಭಟನಾಕಾರರ ಗುಂಪಿನ ಕಡೆಗೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ ಪರಿಣಾಮ, ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿತ್ತು.

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?
ಕಳೆದ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.
''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.
ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.
ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ ಪೊಲೀಸರನ್ನು ಬಂಧಿಸಲಾಗಿದ್ದು, ಕೆಲಸದಿಂದ ವಜಾಗೊಳಿಸಲಾಗಿದೆ.












Click it and Unblock the Notifications