ಯುಎಸ್‌ನಲ್ಲಿ ಕೋವಿಡ್ ಪ್ರಕರಣದಲ್ಲಿ ಶೇ.73 ರಷ್ಟು ಓಮಿಕ್ರಾನ್!
ವಾಷಿಂಗ್ಟನ್, ಡಿಸೆಂಬರ್ 21: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ಈಗ ವಿಶ್ವದ ಹಲವಾರು ದೇಶಗಳಿಗೆ ಹರಡಿದೆ. ಯುಎಸ್‌ನಲ್ಲಿ ಈ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲಿದೆ. ಈಗ ಯುಎಸ್‌ನಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯ ಶೇಕಡ 73 ರಷ್ಟು ಓಮಿಕ್ರಾನ್ ಪ್ರಕರಣಗಳು ಆಗಿದೆ. ಕಳೆದ ವಾರವಷ್ಟೇ ಯುಎಸ್‌ನಲ್ಲಿ ಓಮಿಕ್ರಾನ್ ಪ್ರಕರಣವು ಶೇಕಡ 3 ರಷ್ಟು ಇತ್ತು. ಆದರೆ ಈಗ ಈ ಶೇಕಡವಾರು ಪ್ರಮಾಣವು ಶೇಕಡ 73 ಕ್ಕೆ ಏರಿಕೆ ಆಗಿದೆ.
ಹೆಚ್ಚು ರೂಪಾಂತರಿಗಳನ್ನು ಹೊಂದಿರುವ ಈ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ದೇಶದಾದ್ಯಂತ ಪತ್ತೆಯಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ವರದಿಯಲ್ಲಿ ತಿಳಿಸಿದೆ. ಕಳೆದ ವಾರ ಯುಎಸ್‌ನಲ್ಲಿ ಡೆಲ್ಟಾ ರೂಪಾಂತರವು ಅಧಿಕವಾಗಿದ್ದವು. ಆದರೆ ಈಗ ಡೆಲ್ಟಾ ರೂಪಾಂತರಗಳ ಪ್ರಮಾಣವು ಶೇಕಡ 27 ರಷ್ಟು ಕಡಿಮೆ ಆಗಿದೆ.
ಈ ನಡುವೆ ಓಮಿಕ್ರಾನ್ ಯುಎಸ್‌ನಲ್ಲಿ ಕೊರೊನಾ ವೈರಸ್ ಸೋಂಕಿನ ಹೊಸ ಅಲೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಾಗೆಯೇ ಯುಎಸ್‌ನ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಆತಂಕವು ಯುಎಸ್ ಆಡಳಿತಕ್ಕೆ ಉಂಟಾಗಿದೆ. ಡೆಲ್ಟಾ ಹೆಚ್ಚು ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೆ ಓಮಿಕ್ರಾನ್ ಡೆಲ್ಟಾಕ್ಕಿಂತ ಅಧಿಕ ತೀವ್ರ ಅನಾರೋಗ್ಯವನ್ನು ಉಂಟು ಮಾಡುವುದಿಲ್ಲ. ಇದಕ್ಕೆ ಸಾಕಷ್ಟು ಪುರಾವೆಗಳು ಇದೆ. ಆದರೆ ಪ್ರಸ್ತುತ ಓಮಿಕ್ರಾನ್ ಪ್ರಮಾಣದಲ್ಲಿ ಹೆಚ್ಚಳವು ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆಯನ್ನು ಹೆಚ್ಚಿಸಿ ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ ಎಂಬ ಆತಂಕವು ಅಧಿಕಾರಿಗಳಿಗೆ ಉಂಟಾಗಿದೆ.

ಓಮಿಕ್ರಾನ್ ಹೆಚ್ಚಳ ನಿರೀಕ್ಷಿತ
ಇನ್ನು "ಈ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವು ನಿರೀಕ್ಷಿತವಾಗಿತ್ತು. ವಿಶ್ವದ ಇತರೆ ಭಾಗಗಳಲ್ಲಿಯೂ ಇದೇ ರೀತಿಯಾಗಿ ಓಮಿಕ್ರಾನ್ ಏರಿಕೆ ಆಗಿದೆ," ಎಂದು ಸಿಡಿಸಿ ಹೇಳಿದೆ. "ಯುಎಸ್‌ನಲ್ಲಿ ಈ ಒಂದು ವಾರದಲ್ಲಿ ದಾಖಲಾದ ಕೋವಿಡ್ ಪ್ರಕರಣಗಳ ಪೈಕಿ ಬಹುತೇಕ ಎಲ್ಲವೂ ಓಮಿಕ್ರಾನ್ ಪ್ರಕರಣವಾಗಿದೆ. ಈ ಓಮಿಕ್ರಾನ್ ರೂಪಾಂತರವು ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿಯಲ್ಲಿ ಅಂದಾಜು ಶೇಕಡ 92 ರಷ್ಟು ಇದೆ. ವಾಷಿಂಗ್ಟನ್ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣವು ಶೇಕಡ 96 ರಷ್ಟು ಇದೆ," ಎಂದು ಸಿಡಿಸಿ ಮಾಹಿತಿ ನೀಡಿದೆ.
ಕೋವಿಡ್ ಲಸಿಕೆ, ಬೂಸ್ಟರ್ ಶಾಟ್ ಪಡೆಯಲು ಜನರಿಗೆ ಮನವಿ
ಲಸಿಕೆಯನ್ನು ಪಡೆಯಲು ಅರ್ಹರಾಗಿರುವವರು ಓಮಿಕ್ರಾನ್ ಸೋಂಕಿನಿಂದ ದೂರವಿರಲು ಬೂಸ್ಟರ್ ಶಾಟ್ ಅನ್ನು ಹಾಕಿಸಿಕೊಳ್ಳಿ ಎಂದು ಯುಎಸ್ ಜನರಿಗೆ ಮನವಿ ಮಾಡಿದೆ. "ಮಾಡರ್ನಾ ತಮ್ಮ ಲಸಿಕೆಯ ಮೂರನೇ ಡೋಸ್ ಈ ಓಮಿಕ್ರಾನ್ ರೂಪಾಂತರದ ವಿರುದ್ಧ ಪ್ರತಿಕಾಯ ಮಟ್ಟವನ್ನು ಹೆಚ್ಚಳ ಮಾಡುತ್ತದೆ," ಎಂದು ಹೇಳಿದೆ. ಈ ನಡುವೆ ಫೈಜರ್ ಹಾಗೂ ಬಯೋಟೆಕ್‌ನ "ಲ್ಯಾಬ್ ಅಧ್ಯಯನದಲ್ಲಿ ಲಸಿಕೆಯ ಮೂರನೇ ಡೋಸ್ ಒಮಿಕ್ರಾನ್ ಅನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ," ಎಂದು ಹೇಳಿಕೊಂಡಿದೆ.
ಇನ್ನು ಓಮಿಕ್ರಾನ್ ರೂಪಾಂತರವು ಯುಎಸ್‌ನಲ್ಲಿ ಪತ್ತೆಯಾಗುತ್ತಿದ್ದಂತೆ ಜನರು ಲಸಿಕಾ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಆರಂಭ ಮಾಡಿದ್ದರು. ಹೆಚ್ಚಿನ ಜನರು ಕೋವಿಡ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ತೆರಳಿದ್ದರು. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಹಲವಾರು ರಾಜ್ಯಗಳಾದ್ಯಂತ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತ್ತು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications