ಅಮೆರಿಕ ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ ಬೈಡನ್?
ಇದೊಂದು ದಿನ ಇಡೀ ಜಗತ್ತಿನ ಕೇಂದ್ರ ಬಿಂದು ಅಮೆರಿಕ. ಏಕೆಂದರೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತದಾನ ಇಂದು ಅಂತ್ಯವಾಗಲಿದೆ. ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಲೆಕ್ಕಾಚಾರಗಳು ಜೋರಾಗಿವೆ. ಚುನಾವಣಾ ಸಮೀಕ್ಷೆಗಳ ಪ್ರಕಾರ ಜೋ ಬೈಡನ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದ್ದರೂ ಡೆಮಾಕ್ರಟ್ಸ್ ಇಷ್ಟಕ್ಕೇ ಖುಷಿಪಡಬೇಕಿಲ್ಲ. ಏಕೆಂದರೆ ಅಕಸ್ಮಾತ್ ಜೋ ಬೈಡನ್ ಗೆದ್ದರೂ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಹಿನ್ನಡೆ ಉಂಟಾಗಲಿದೆ. ಸದ್ಯ ಅಮೆರಿಕ ಸೆನೆಟ್‌ನಲ್ಲಿ ಡೆಮಾಕ್ರಟ್ಸ್ ಹಾಗೂ ರಿಪಬ್ಲಿಕನ್ಸ್ 47-53ರ ಬಲಾಬಲ ಹೊಂದಿದ್ದಾರೆ.
ಇದರ ಆಧಾರದಲ್ಲಿ ಹೇಳುವುದಾದರೆ ಬೈಡನ್ ಗೆದ್ದರೂ ಸೆನೆಟ್‌ನಲ್ಲಿ ಬಹುಮತ ಪಡೆಯದ ಹೊರತು ಬೈಡನ್ ಆಡಳಿತ ಶಾಸನಗಳನ್ನು ರಚಿಸುವುದು ಕಷ್ಟವಾಗಲಿದೆ. ಅದರಲ್ಲೂ ಆರೋಗ್ಯ, ವಲಸೆ ಮತ್ತು ಹವಾಮಾನ ಬದಲಾವಣೆಯಂತಹ ಪ್ರಮುಖ ವಿಷಯಗಳ ಬಗ್ಗೆ ಶಾಸನ ರಚನೆ ಕಷ್ಟಕರವಾಗಲಿದ್ದು, ಇದೀಗ ಸೆನೆಟ್‌ನಲ್ಲಿ ಬಹುಮತ ಪಡೆಯಲೇಬೇಕಾದ ಒತ್ತಡದಲ್ಲಿ ಡೆಮಾಕ್ರಟಿಕ್ ಪಕ್ಷ ಇದೆ. ಆರೋಗ್ಯ, ವಲಸೆ ಮತ್ತು ಹವಾಮಾನ ಬದಲಾವಣೆ ಜೋ ಬೈಡನ್ ಪಕ್ಷದ ಅಜೆಂಡಾ ಆಗಿತ್ತು. ಸಮೀಕ್ಷೆಗಳ ಪ್ರಕಾರ ಬೈಡನ್ ಗೆದ್ದರೂ ಪ್ರಮುಖ ಶಾಸನಗಳಲ್ಲಿ ಬದಲಾವಣೆ ತರಲು ಬೈಡನ್ ಆಡಳಿತ ಪರದಾಡಬೇಕಿದೆ.

2 ಸ್ಥಾನ ಗೆದ್ದರೂ ಒಂದರಲ್ಲಿ ಕಷ್ಟ..!
ಡೆಮಾಕ್ರಟಿಕ್ ಅಭ್ಯರ್ಥಿಗಳು ಅರಿಜೋನಾ ಹಾಗೂ ಕೊಲೊರಾಡೋ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ರಿಪಬ್ಲಿಕನ್ಸ್ ವಿರುದ್ಧ ಪ್ರಬಲ ಪೈಪೋಟಿ ಕೊಡುತ್ತಿದ್ದಾರೆ. ಆದರೆ ಅಲಬಾಮಾ ರಾಜ್ಯದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೀಗೆ 2 ರಾಜ್ಯಗಳಲ್ಲಿ ಸೆನೆಟರ್ ಸ್ಥಾನಗಳನ್ನು ಡೆಮಾಕ್ರಟಿಕ್ ಪಕ್ಷ ತನ್ನ ವಶಕ್ಕೆ ಪಡೆದರೂ, ಮತ್ತೊಂದು ರಾಜ್ಯದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. ಹೀಗೆ ರಿಪಬ್ಲಿಕನ್ಸ್ ಮತ್ತಷ್ಟು ಬಲವಾಗುತ್ತಾರೆ.

ಡ್ರಾ ಆದರೆ ಉಪಾಧ್ಯಕ್ಷರ ಹವಾ
ಇನ್ನೊಂದು ಲೆಕ್ಕಾಚಾರ ಇದೆ. ಅದೇನೆಂದರೆ ಅಕಸ್ಮಾತ್ 3 ರಾಜ್ಯಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ಗೆದ್ದರೆ ಬಲಾಬಲ 50-50ಕ್ಕೆ ಏರಲಿದೆ. ಹೀಗೆ ಡೆಮಾಕ್ರಟಿಕ್ ಪಕ್ಷಕ್ಕೆ 50 ಸೆನೆಟರ್‌ಗಳ ಬಲ ಹಾಗೂ ಡೆಮಾಕ್ರಟಿಕ್ ಪಕ್ಷಕ್ಕೆ 50 ಸೆನೆಟರ್‌ಗಳ ಬಲ ಸಿಗಲಿದೆ. ಈ ಸಂದರ್ಭದಲ್ಲಿ ಯಾವುದೇ ಬಿಲ್ ಪಾಸ್ ಮಾಡುವಾಗ, ಅಲ್ಲಿ ಟೈ ಆದರೆ ಉಪಾಧ್ಯಕ್ಷರು ಇತ್ಯರ್ಥ ಮಾಡಲಿದ್ದಾರೆ. ಹೀಗಿರುವಾಗ ಸದ್ಯದ ಪರಿಸ್ಥಿತಿಯಲ್ಲಿ ವೈಟ್‌ಹೌಸ್ ಅನ್ನು ಸಂಪೂರ್ಣವಾಗಿ ಹಿಡಿತಕ್ಕೆ ಪಡೆಯಲು ಡೆಮಾಕ್ರಟಿಕ್ ಪಕ್ಷ ಬಾಕಿ ಇರುವ 3 ರಾಜ್ಯಗಳಲ್ಲೂ ಗೆಲ್ಲಬೇಕಿದೆ.

ಕೊಟ್ಟ ಮಾತು ಈಡೇರಿಸುತ್ತಾರಾ ಬಿಡೆನ್..?
ಜೋ ಬೈಡನ್ ಈಗ ಟ್ರಂಪ್ ಕೈಗೊಂಡಿರುವ ಕ್ರಮಗಳನ್ನು ಮೊದಲಿನ ಸ್ಥಿತಿಗೆ ತರುವ ಭರವಸೆ ಕೊಟ್ಟು ಮತ ಕೇಳಿದ್ದಾರೆ. ಪ್ರಮುಖವಾಗಿ ವಲಸೆ ಕಾನೂನು, ಆರೋಗ್ಯ ಸೇವೆ ಹಾಗೂ ಹವಾಮಾನ ಬದಲಾವಣೆ ತಡೆಗಾಗಿ ಅಮೆರಿಕ ಸರ್ಕಾರ ಕೈಗೊಳ್ಳಬಹುದಾದ ಸಕಾರಾತ್ಮಕ ಅಂಶಗಳನ್ನ ಜನರ ಮುಂದಿಟ್ಟಿದ್ದಾರೆ. ಇದು ಈಡೇರಲು ಡೆಮಾಕ್ರಟಿಕ್ ಪಕ್ಷ ಸೆನೆಟ್ ಅನ್ನ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆಯಲೇಬೇಕಿದೆ. ಇಲ್ಲವಾದರೆ ಬೈಡನ್ ನೀಡಿದ್ದ ಪ್ರಮುಖ ಆಶ್ವಾಸನೆಗಳು ಆಶ್ವಾಸನೆ ರೂಪದಲ್ಲೇ ಉಳಿಯಲಿದೆ. ಇದು ಭವಿಷ್ಯದಲ್ಲಿ ಬಿಡೆನ್ ಕುರಿತು ಹಾಗೂ ಡೆಮಾಕ್ರಟಿಕ್ ಆಡಳಿತದ ಕುರಿತು ಅಪಾರ್ಥ ಸೃಷ್ಟಿಮಾಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಮಾತ್ರ ಸಾಲದು, ಜೋ ಬೈಡನ್ ಸೆನೆಟ್‌ನಲ್ಲಿಯೂ ತಮ್ಮ ಹವಾ ತೋರಿಸಬೇಕಿದೆ.

ಸಮೀಕ್ಷೆಗಳು ಹೇಳುವಂತೆ ಬೈಡನ್ 308 ಸ್ಥಾನ
ಆದರೆ ಸದ್ಯದ ಸಮೀಕ್ಷೆಗಳು ಹೇಳುವಂತೆ ಬೈಡನ್ 308 ಸ್ಥಾನಗಳಲ್ಲಿ ಈಗಾಗಲೇ ಗೆದ್ದಾಗಿದ್ದು, ಇನ್ನೂ 104 ಸ್ಥಾನಗಳು ಅತಂತ್ರವಾಗಿವೆ. 104 ಸ್ಥಾನಗಳಲ್ಲಿ ಬಹುಪಾಲು ಮತಗಳು ಬೈಡನ್‌ಗೆ ಬೀಳುವ ಸಾಧ್ಯತೆ ಇದ್ದು, ಸಮೀಕ್ಷೆಗಳ ವರದಿ ನಿಜವಾದರೆ ಬೈಡನ್್ ಗೆಲುವು ಅಮೆರಿಕ ಚುನಾವಣೆಯಲ್ಲಿ ದೊಡ್ಡ ಇತಿಹಾಸವನ್ನೇ ನಿರ್ಮಿಸಲಿದೆ. ಸುಮಾರು 3 ದಶಕಗಳ ದಾಖಲೆ ಮುರಿಯಲಿದೆ. ಜೊತೆ ಜೊತೆಗೆ ಶೇಕಡವಾರು ಮತದಾನದಲ್ಲಿ ಶೇ. 53.1ರಷ್ಟು ಮತಗಳನ್ನು ಬಾಚಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಆದರೆ ಮತ್ತೊಂದು ಬದಿಯಲ್ಲಿ ಟ್ರಂಪ್‌ಗೆ ಶೇಕಡವಾರು ಮತದಾನದಲ್ಲೂ ಭಾರಿ ಹಿನ್ನಡೆಯಾಗಿದೆ.












Click it and Unblock the Notifications