ಭಾರತ-ಚೀನಾ ಗಡಿ ವಿಚಾರದಲ್ಲಿ ಮೋದಿಗೆ ಕೋಪ ತರಿಸಿದ್ದ ಟ್ರಂಪ್
ವಾಷಿಂಗ್ಟನ್, ಜನವರಿ 17: ಭಾರತ ಮತ್ತು ಚೀನಾ ಏಷ್ಯಾದ ದೇಶಗಳು ಎಂಬುದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿಳಿದಿತ್ತು. ಆದರೆ ಈ ಎರಡೂ ದೇಶಗಳು ಗಡಿ ಹಂಚಿಕೊಂಡಿವೆ ಎನ್ನುವುದೇ ಅವರಿಗೆ ಗೊತ್ತಿರಲಿಲ್ಲ.
ಟ್ರಂಪ್ ಅವರ ಜ್ಞಾನ ಕಂಡು ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಘಾತಕ್ಕೊಳಗಾಗಿದ್ದರು. ಕೊನೆಗೆ ಸಾವರಿಸಿಕೊಂಡಿದ್ದರು ಎಂದು 'ವಾಷಿಂಗ್ಟನ್ ಪೋಸ್ಟ್' ಪತ್ರಕರ್ತರಾದ ಫಿಲಿಪ್ ರುಕ್ಕರ್ ಮತ್ತು ಕರೋಲ್ ಲಿಯೋನಿಂಗ್ ಬರೆದಿರುವ 'ಎ ವೆರಿ ಸ್ಟೇಬಲ್ ಜೀನಿಯಸ್' ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಟ್ರಂಪ್ ಅಧ್ಯಕ್ಷರಾದ ಬಳಿಕ ಒಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆಗ ಔಪಚಾರಿಕ ಮಾತುಕತೆ ವೇಳೆ, 'ಚೀನಾ-ಭಾರತ ಗಡಿ ಹಂಚಿಕೆಯೇ ಆಗಿಲ್ಲ. ನೀವು ಚೀನಾ ಗಡಿಯನ್ನು ಆಕ್ರಮಿಸಿಕೊಂಡಿದ್ದೀರಿ' ಎಂದು ಟ್ರಂಪ್ ಹೇಳಿದ್ದರು. ಇದರಿಂದ ಮೋದಿ ಆಘಾತಕ್ಕೆ ಒಳಗಾಗಿದ್ದರು. ಕ್ರಮೇಣ ಅದು ಕೋಪಕ್ಕೆ ಬದಲಾಯಿತು. ಬಳಿಕ ಮಾತು ಬದಲಿಸಿದ್ದರು ಎಂದು ಅವರು ಬರೆದಿದ್ದಾರೆ.

ಸಭೆ ಬಳಿಕ ಹೊರ ಬಂದಿದ್ದ ಮೋದಿ, 'ಈ ವ್ಯಕ್ತಿಗೆ ಗಾಂಭೀರ್ಯವೇ ಇಲ್ಲ. ಈ ವ್ಯಕ್ತಿಯನ್ನು ನಮ್ಮ ಪಾಲುದಾರ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ' ಎಂದು ಸಿಟ್ಟಿನಿಂದ ನುಡಿದಿದ್ದರು. ಈ ಸಭೆಯ ಬಳಿಕ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧದಲ್ಲಿ ಭಾರತ ಒಂದು ಹೆಜ್ಜೆ ಹಿಂದೆ ಇರಿಸಿತ್ತು ಎಂದು 417 ಪುಟಗಳ ಪುಸ್ತಕದಲ್ಲಿ ಬರೆಯಲಾಗಿದೆ.
ಡೊನಾಲ್ಡ್ ಟ್ರಂಪ್ ಅವರ ತಿಳಿವಳಿಕೆ ಮಟ್ಟವು ಅನೇಕ ಬಾರಿ ಟೀಕೆಗೆ ಒಳಗಾಗಿತ್ತು. ಕಳೆದ ವರ್ಷ ನೇಪಾಳ ಮತ್ತು ಭೂತಾನ್ ಭಾರತದಲ್ಲಿ ಇದೆ ಎಂದು ನನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದರು. ನೇಪಾಳವನ್ನು 'ನಿಪ್ಪಲ್' ಎಂದೂ ಭೂತಾನ್‌ಅನ್ನು 'ಬುಟ್ಟೋನ್' ಎಂದೂ ಉಚ್ಚರಿಸಿದ್ದರು.












Click it and Unblock the Notifications