ತನ್ನದೇ ಪ್ರಜೆಗಳ ಮೇಲೆ ಮುನಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಏಪ್ರಿಲ್ 4: ಅಮೆರಿಕದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಅಮೆರಿಕದಲ್ಲಿ ಸಾವಿನ ಸಂಖ್ಯೆ 6100 ಕ್ಕೆ ಕಾಲಿಟ್ಟಿದೆ.
ಈ ಬೆಳವಣಿಗೆಯಿಂದ ತೀವ್ರ ಕಂಗಾಲಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅಮೆರಿಕ ಶ್ವೇತ ಭವನದ ವಕ್ತಾರರು ಅಲ್ಲಿನ ಪ್ರಜೆಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ವೈರಸ್ ಹರಡುವಿಕೆಯನ್ನು ತಡೆಗಟ್ಟಲು ತೀವ್ರ ಹೋರಾಟ ನಡೆಸಿದೆ. ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಟ್ರಂಪ್ ಸರ್ಕಾರ ಜನರಿಗೆ ಮನವಿ ಮಾಡುತ್ತಲೇ ಇದೆ. ವೈರಾಣು ಸೋಂಕಿತರು ಹಾಗೂ ಮೃತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಚಿಂತೆಗೀಡಾಗಿರುವ ಶ್ವೇತಭವನ, ಜನ ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ ಎಂದು ಟ್ರಂಪ್ ಅಸಮಾಧಾನ ಹೊರ ಹಾಕಿದ್ದಾರೆ. ಸಾಮಾಜಿಕ ಅಂತರವನ್ನು ಪಾಲನೆ ಮಾಡದಿದ್ದರೆ ಭಾರೀ ಸಾವು-ನೋವು ಅನುಭವಿಸಬೇಕಾಗುತ್ತದೆ ಎಂದು ಶ್ವೇತಭವನ ಎಚ್ಚರಿಕೆ ನೀಡಿದೆ.

ಶ್ವೇತಭವನ ಗರಂ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾವಿನ ಸಂಖ್ಯೆ ಕಂಡು ಅಮೆರಿಕ ಅಧ್ಯಕ್ಷರ ಅಧಿಕೃತ ಕಾರ್ಯ ಕಚೇರಿ ಶ್ವೇತಭವನ ಗರಂ ಆಗಿದೆ. ಜನ ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿರುವ ಶ್ವೇತಭವನ, ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ
ಸೋಂಕು ಹೆಚ್ಚು ಹರಡುತ್ತಿರುವ ಬಗ್ಗೆ ಮಾತನಾಡಿರುವ ಶ್ವೇತಭವನದ ಕೋವಿಡ್-19 ಸಮಸ್ಯೆಯ ನಿರ್ವಾಹಕ ದೆಬೋರಾ ಬಿರ್ಕ್ಸ್ , ಸಾವಿನ ಅಂಕಿ ಅಂಶಗಳನ್ನು ಗಮನಿಸಿದರೆ ಜನರು ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಮುಂದುವರೆದರೆ ತೀವ್ರ ಕರಾಳ ದಿನಗಳು ಮುಂದೆ ಬರಲಿವೆ ಎಂದು ಎಚ್ಚರಿಸಿದ್ದಾರೆ.

ಶೇ 40 ರಿಂದ 80 ರಷ್ಟು ಜನಕ್ಕೆ ಸೋಂಕು ತಗಲಬಹುದು
ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯೂಯಾರ್ಕ ಗವರ್ನರ್ ಆಂಡ್ರೋ ಕುಮೋ ಮಹತ್ವದ ಹೇಳಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಶೇ 40 ರಿಂದ 80 ರಷ್ಟು ಜನಕ್ಕೆ ಸೋಂಕು ತಗಲಬಹುದು ಎಂದು ಅಂದಾಜಿಸಿದ್ದಾರೆ. ಗವರ್ನರ್ ಅವರ ಈ ಹೇಳಿಕೆ ಅಮೆರಿಕದ ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಯಾರೂ ಹೊರೆಗೆ ಬರಬೇಡಿ
ದಯವಿಟ್ಟು ಯಾರೂ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಶ್ವೇತ ಭವನ ಜನರಿಗೆ ಮನವಿ ಮಾಡಿಕೊಂಡಿದೆ. ಅಮೆರಿಕದಲ್ಲಿ ಸೋಂಕು ಕಾಣಿಸಿಕೊಂಡಿದರಲ್ಲಿ ನ್ಯೂಯಾರ್ಕ ನಗರದ್ದೆ ಅತಿ ಹೆಚ್ಚಿನ ಪಾಲು ಕಂಡು ಬಂದಿದೆ. ಎಂಬತ್ತು ಸಾವಿರ ಜನರಿಗೆ ನ್ಯೂಯಾರ್ಕ್‌ನಲ್ಲಿ ಸೋಂಕು ಕಾಣಿಸಿಕೊಂಡಿದೆ. ಮನೆ ಬಿಟ್ಟು ಯಾರೂ ಹೊರೆಗೆ ಬರಬೇಡಿ ಎಂದು ಅಲ್ಲಿನ ಸ್ಥಳೀಯ ಸರ್ಕಾರ ಕಟ್ಟಪ್ಪಣೆ ಮಾಡಿದೆ.












Click it and Unblock the Notifications