ನಿಲ್ದಾಣದಲ್ಲಿಯೇ ಮಾನವ ಹೃದಯ ಮರೆತು ಬಂದಿದ್ದ ವಿಮಾನ
ವಾಷಿಂಗ್ಟನ್, ಡಿಸೆಂಬರ್ 14: ಕಸಿ ಚಿಕಿತ್ಸೆಗಾಗಿ ತರಬೇಕಿದ್ದ ಮಾನವ ಹೃದಯವನ್ನು ಮರೆತುಬಂದಿದ್ದರಿಂದ ಸಿಯಾಟಲ್‌ನಿಂದ ಡಲ್ಲಾಸ್‌ಗೆ ತೆರಳುತ್ತಿದ್ದ ವಿಮಾನ ಅದಕ್ಕಾಗಿಯೇ ವಾಪಸ್ ಹೋದ ಘಟನೆ ಅಮೆರಿಕದಲ್ಲಿ ನಡೆದಿದೆ.
ಸ್ಯಾಕ್ರೆಮೆಂಟೊದಲ್ಲಿಂದ ಹೃದಯವನ್ನು ಸೌತ್ ವೆಸ್ಟ್ ಏರ್‌ಲೈನ್ಸ್ ವಾಷಿಂಗ್ಟನ್‌ಗೆ ತರುವ ಜವಾಬ್ದಾರಿ ಹೊತ್ತಿತ್ತು. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು.
ಆದರೆ, ಸಿಬ್ಬಂದಿ ಅದನ್ನು ವಿಮಾನಕ್ಕೆ ತುಂಬಿಸುವುದನ್ನು ಮರೆತೇ ಬಿಟ್ಟಿದ್ದರು. ಎಂದಿನಂತೆ ಡಲ್ಲಾಸ್‌ಗೆ ತೆರಳುವ ರೀತಿ ವಿಮಾನವನ್ನು ಸಿದ್ಧಪಡಿಸಿದ್ದರು.

ವಿಮಾನವು ವ್ಯೋಮಿಂಗ್ ಸಮೀಪ ಹೋಗುವ ಸಮಯದಲ್ಲಿ ಸಿಬ್ಬಂದಿ ತಂಡಕ್ಕೆ ಹೃದಯವನ್ನು ಅಲ್ಲೇ ಬಿಟ್ಟುಬಂದ ಸಂಗತಿ ನೆನಪಾಗಿದೆ. ಕೂಡಲೇ ಸ್ಪೀಕರ್‌ನಲ್ಲಿ ಘೋಷಣೆ ಮಾಡಿದ ಸಿಬ್ಬಂದಿ, ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿದರು.
ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಊರನ್ನು ತಲುಪುವುದಕ್ಕಿಂತಲೂ ಹೃದಯವನ್ನು ತರುವುದು ಹೆಚ್ಚು ಮುಖ್ಯವಾದದ್ದು ಎಂದು ಅಭಿಪ್ರಾಯಪಟ್ಟರು. ಆದರೆ, ಇದೇ ವೇಳೆ ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯತನವನ್ನೂ ಖಂಡಿಸಿದರು.
ಸಾಮಾನ್ಯವಾಗಿ ಹೃದಯ ಮತ್ತು ಶ್ವಾಸಕೋಶಗಳನ್ನು ವಾಣಿಜ್ಯ ಉದ್ದೇಶದ ವಿಮಾನಗಳಲ್ಲಿ ಕೊಂಡೊಯ್ಯುವುದಿಲ್ಲ. ಏಕೆಂದರೆ ಈ ಅಂಗಗಳನ್ನು ವ್ಯಕ್ತಿಯ ದೇಹದಿಂದ ತೆಗೆದು ಇನ್ನೊಬ್ಬರಿಗೆ ಕಸಿ ಮಾಡಲು ನಾಲ್ಕರಿಂದ ಆರು ಗಂಟೆ ಮಾತ್ರ ಸಮಯ ಇರುತ್ತದೆ.
ಮೂತ್ರಪಿಂಡಗಳ ಕಸಿಗೆ 24-36 ಗಂಟೆಗಳ ಕಾಲಾವಕಾಶ ಇರುವುದರಿಂದ ಅವುಗಳನ್ನು ವಾಣಿಜ್ಯ ವಿಮಾನಗಳಲ್ಲಿ ಕೊಂಡೊಯ್ಯಲಾಗುತ್ತದೆ.












Click it and Unblock the Notifications