2 ತಿಂಗಳೊಳಗೆ ವ್ಯರ್ಥವಾಗಲಿದೆ 1 ಲಕ್ಷಕ್ಕೂ ಅಧಿಕ ಗ್ರೀನ್ ಕಾರ್ಡ್, ಕಾರಣವೇನು?
ವಾಷಿಂಗ್ಟನ್, ಆಗಸ್ಟ್ 06: ಎರಡು ತಿಂಗಳೊಳಗೆ ಲಕ್ಷಕ್ಕಿಂತಲೂ ಅಧಿಕ ಗ್ರೀನ್ ಕಾರ್ಡ್ ವ್ಯರ್ಥವಾಗಲಿದೆ. ಉದ್ಯೋಗ ಆಧಾರಿತ ವಲಸಿಗರಿಗೆ ಈ ವರ್ಷದ ಕೋಟಾ 2,61,500 ಆಗಿದೆ. ಇದು ಸಾಮಾನ್ಯ 1,40,000 ಕ್ಕಿಂತ ತುಂಬಾ ಹೆಚ್ಚು ಎಂದು ಭಾರತೀಯ ಉದ್ಯೋಗಿ ಸಂದೀಪ್ ಪವಾರ್ ತಿಳಿಸಿದ್ದಾರೆ.
ಅಮೆರಿಕದಲ್ಲಿ ಕಾನೂನುಬದ್ಧ ಕಾಯಂ ವಾಸದ ಹಕ್ಕಿಗಾಗಿ ದಶಕಗಳಿಂದ ಕಾಯುತ್ತಿರುವ ಭಾರತದ ಐಟಿ ಉದ್ಯೋಗಿಗಳಲ್ಲಿ ಇದು ಅಸಮಾಧಾನಕ್ಕೆ ಕಾರಣವಾಗಿದೆ.
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು ನಡೆಸಿರುವ ಪ್ರಸ್ತುತದ ಪ್ರಕ್ರಿಯೆ ಪ್ರಕಾರ 1 ಲಕ್ಷಕ್ಕೂ ಅಧಿಕ ಹೆಚ್ಚುವರಿ ಗ್ರೀನ್ ಕಾರ್ಡ್‌ಗಳು ವ್ಯರ್ಥವಾಗಲಿವೆ. ಜೋ ಬೈಡನ್ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಈ ವರ್ಷ ಲಭ್ಯವಿರುವ ಭಾರಿ ಪ್ರಮಾಣದ ಗ್ರೀನ್ ಕಾರ್ಡ್‌ಗಳು ನಿರುಪಯುಕ್ತವಾಗಲಿವೆ ಎಂದು ಭಾರತದ ಉದ್ಯೋಗಿ ಸಂದೀಪ್ ಪವಾರ್ ತಿಳಿಸಿದ್ದಾರೆ.
ಈ ಗ್ರೀನ್ ಕಾರ್ಡ್‌ಗಳಿಂದ ಪ್ರಯೋಜನ ಪಡೆಯುವ ನೂರಾರು ಸಾವಿರಾರು ಕಾನೂನುಬದ್ಧ ವಲಸಿಗರು ಅಮೆರಿಕದಲ್ಲಿ ಇದ್ದಾರೆ. ಅವರಲ್ಲಿ ಅನೇಕರು ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾಯಂ ನಿವಾಸಿ ಸ್ಥಾನಮಾನಕ್ಕೆ ಹೊಂದಿಕೊಳ್ಳಲು ಕಾಯುತ್ತಿದ್ದಾರೆ. ಆದರೆ ಲಭ್ಯವಿರುವ ವೀಸಾ ಕೊರತೆಯಿಂದಾಗಿ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದುಅವರು ಹೇಳಿದರು.
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು ಅಥವಾ ಯುಎಸ್‌ಸಿಐಎಸ್ ಪ್ರಕಾರ ಅವರು 1,00,000 ಕ್ಕಿಂತ ಹೆಚ್ಚು ಗ್ರೀನ್ ಕಾರ್ಡ್‌ಗಳನ್ನು ವ್ಯರ್ಥ ಮಾಡುತ್ತಾರೆ ಎಂದು ಸೂಚಿಸುತ್ತದೆ. ಇದನ್ನು ಇತ್ತೀಚೆಗೆ ವೀಸಾ ಬಳಕೆಯನ್ನು ನಿರ್ಧರಿಸುವ ರಾಜ್ಯ ಅಧಿಕಾರಿಯಿಂದ ದೃಢಪಡಿಸಲಾಗಿದೆ ಎಂದು ಅವರು ಹೇಳಿದರು.
ಆದರೆ ಈ ವರ್ಷ, ಯುಎಸ್‌ಸಿಐಎಸ್ ತನ್ನ ಕೆಲಸವನ್ನು ಸಮರ್ಥವಾಗಿ ಮತ್ತು ತ್ವರಿತವಾಗಿ ಮಾಡಿದರೆ, ಈ ವಲಸಿಗರಿಗೆ ಅಂತಿಮವಾಗಿ ಶಾಶ್ವತ ನಿವಾಸಿಗಳಾಗುವ ಅವಕಾಶವಿದೆ, ಇಲ್ಲದಿದ್ದರೆ ದಶಕಗಳೇ ಬೇಕಾಗಬಹುದು "ಎಂದು ಪವಾರ್ ಹೇಳಿದರು. ಪವಾರ್ ಅವರು ಭಾರತೀಯ ಉದ್ಯೋಗಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.
ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಶ್ವೇತಭವನ ಇದುವರೆಗೂ ಉತ್ತರ ನೀಡಿಲ್ಲ. ಈ ನಡುವೆ ಅಮೆರಿಕದಲ್ಲಿ ವಾಸಿಸುತ್ತಿರುವ 125 ಭಾರತೀಯರು ಮತ್ತು ಚೀನೀಯರ ಗುಂಪೊಂದು ಗ್ರೀನ್ ಕಾರ್ಡ್‌ಗಳನ್ನು ವ್ಯರ್ಥ ಮಾಡುವುದನ್ನು ತಡೆಯುವಂತೆ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.
ಅಮೆರಿಕದಲ್ಲಿರುವ ನೂರಾರು ಸಾವಿರಾರು ಮಂದಿ ಉದ್ಯೋಗಿಗಳು ಈ ಗ್ರೀನ್ ಕಾರ್ಡ್‌ಗಳಿಂದ ಪ್ರಯೋಜನ ಪಡೆಯಬಹುದು. ಯುಎಸ್‌ಸಿಐಎಸ್ ಅಥವಾ ಬೈಡೆನ್ ಆಡಳಿತವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಈ ವರ್ಷ ಲಭ್ಯವಿರುವ ಹೆಚ್ಚುವರಿ 1,00,000 ಗ್ರೀನ್ ಕಾರ್ಡ್‌ಗಳು ವ್ಯರ್ಥವಾಗುತ್ತವೆ ಎಂದು ಪವಾರ್ ಹೇಳಿದ್ದಾರೆ. ಈ ಕುರಿತು ಕೇಳಲಾದ ಪ್ರಶ್ನೆಗಳಿಗೆ ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿಎಟಿಒ ವರದಿಗಳ ಪ್ರಕಾರ, ಈವರೆಗೂ ಬಾಕಿ ಇರುವ 8 ಲಕ್ಷ ಅರ್ಜಿಗಳ ವಿಲೇವಾರಿ ತಡ ಆಗಲು ಶೇ. 7ರಷ್ಟು ನಿರ್ಬಂಧ ಹೇರಿರೋದೇ ಕಾರಣ ಎನ್ನಲಾಗಿದೆ. 2021ರಲ್ಲಿ ಇಬಿ-2 ಹಾಗೂ ಇಬಿ-3 ಅಡಿ 1,21,609 ಗ್ರೀನ್ ಕಾರ್ಡ್ ನೀಡಲು ಉದ್ದೇಶಿಸಿತ್ತಾದ್ರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರೋಧಿ ನೀತಿಯಿಂದಾಗಿ ತೊಡಕು ಉಂಟಾಗಿದೆ.
ಇದೀಗ ನೂತನ ಅಧ್ಯಕ್ಷ ಜೋ ಬಿಡೆನ್ ಅವರು ಸುಧಾರಣಾ ನೀತಿಗಳನ್ನು ಜಾರಿಗೆ ತರಲೇಬೇಕಿದೆ. ಏಕೆಂದರೆ, ಸದ್ಯದ ನಿಯಮಾವಳಿ ಪ್ರಕಾರ ಬಾಕಿ ಉಳಿದಿರುವ ಅರ್ಜಿ ವಿಲೇವಾರಿಗೆ ಕನಿಷ್ಟ 84 ವರ್ಷ ಬೇಕಾಗುತ್ತದೆ..!
ಭಾರತದ ನಂತರದ ಸ್ಥಾನದಲ್ಲಿ ಇರುವ ದೇಶ ಚೀನಾ.. ಅಮೆರಿಕ ದೇಶಕ್ಕೆ ಸಲ್ಲಿಕೆಯಾಗಿರುವ ಉದ್ಯೋಗ ಗ್ರೀನ್ ಕಾರ್ಡ್ ಅರ್ಜಿಗಳ ಪೈಕಿ ಶೇ. 14ರಷ್ಟು ಚೀನೀಯರದ್ದು. ಇನ್ನುಳಿದ ಶೆ. 18ರಷ್ಟು ಅರ್ಜಿಗಳು ವಿಶ್ವದ ಇನ್ನಿತರ ದೇಶಗಳದ್ದು ಎಂದು ತಿಳಿದುಬಂದಿದೆ.
ಅಮೆರಿಕದ ನಿವಾಸಿ ಎಂದು ಗುರ್ತಿಸಿಕೊಳ್ಳಬೇಕಾದ್ರೆ, ತಮ್ಮ ಉದ್ಯೋಗದಲ್ಲಿ ಅತ್ಯುನ್ನತ ಕೌಶಲ್ಯ ಹೊಂದಿರಬೇಕು. ಇಂಥವರನ್ನು ಶಾಶ್ವತ ಉದ್ಯೋಗ ಕಾರ್ಯಕ್ರಮದಡಿ ಔದ್ಯೋಗಿಕ ಗ್ರೀನ್ ಕಾರ್ಡ್ ನೀಡಿ ಅಮೆರಿಕದಲ್ಲಿ ಉಳಿಸಿಕೊಳ್ಳಲಾಗುತ್ತದೆ. ಒಟ್ಟು 1,40,000 ಮಂದಿಯ ಪೈಕಿ ಪ್ರತಿ ವರ್ಷ ಕೇವಲ ಶೇ. 7ರಷ್ಟು ಮಂದಿಗೆ ಈ ಸೌಲಭ್ಯ ಸಿಗುತ್ತದೆ.

ಗ್ರೀನ್ ಕಾರ್ಡ್ ಎಂದರೇನು?
ಗ್ರೀನ್‌ಕಾರ್ಡ್ ಹೊಂದುವುದರಿಂದ ವಲಸೆ ಕುರಿತ ಹಲವು ಲಾಭಗಳನ್ನು ಪಡೆಯಬಹುದು. ಜೊತೆಗೆ ಅಮೆರಿಕದಲ್ಲಿ ಶಾಶ್ವತ ಉದ್ಯೋಗ ಹೊಂದಲು ಇದು ನೆರವಾಗುತ್ತದೆ. ಗ್ರೀನ್‌ಕಾರ್ಡ್ ಹಸಿರು ಬಣ್ಣದಲ್ಲಿದ್ದು, ಆದ್ದರಿಂದ ಇದನ್ನು ಗ್ರೀನ್‌ಕಾರ್ಡ್ ಎಂದು ಕರೆಯಲಾಗುತ್ತದೆ. ಅಮೆರಿಕದ ಶಾಶ್ವತ ನಿವಾಸಿ ಎಂಬುದಕ್ಕೆ ಪುರಾವೆ. ಅಮೆರಿಕದ ಪೌರತ್ವ ಪಡೆವ ಮೊದಲೇ ಇರುವ ಒಂದು ವಲಸೆ ಪ್ರಕ್ರಿಯೆ. ಗ್ರೀನ್‌ಕಾರ್ಡ್ ಅಮೆರಿಕದಲ್ಲಿ ಕಾನೂನು ಬದ್ಧ ಶಾಶ್ವತ ನಿವಾಸಿಯಾಗಿದ್ದಾನೆ ಎಂಬುದನ್ನು ತೋರಿಸುತ್ತದೆ.

ಈವರೆಗಿನ ಕಾನೂನಿನಲ್ಲಿ ಏನಿತ್ತು?
ದೇಶವೊಂದರಿಂದ ಬರುವ ಉದ್ಯೋಗಿಗಳಿಗೆ ಈ ಕಾರ್ಡ್‌ಗಳಲ್ಲಿ ಶೇ. 7ರಷ್ಟು ಕಾರ್ಡ್‌ಗಳನ್ನು ಮಾತ್ರ ವಿತರಿಸಲಾಗುತಿತ್ತು. ಇದರಿಂದ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಅಥವಾ ಭಾರತದಿಂದ ಅಮೆರಿಕಕ್ಕೆ ಹೋಗುವ ವ್ಯಕ್ತಿ ಗ್ರೀನ್ ಕಾರ್ಡ್ ಪಡೆಯಲು ಬಹಳ ವರ್ಷ ಕಾಯಬೇಕಿತ್ತು. ಅಮೆರಿಕ ವರ್ಷಕ್ಕೆ 1.40 ಲಕ್ಷ ಗ್ರೀನ್ ಕಾರ್ಡ್‌ಗಳನ್ನು ಮಾತ್ರ ಸಿದ್ಧಪಡಿಸುತ್ತದೆ.

ಪಡೆಯಲು ಯಾರು ಅರ್ಹ?
ಅಮೆರಿಕ ಪೌರತ್ವ ಹೊಂದಿದವರೊಂದಿಗೆ ಕೌಟುಂಬಿಕ ಸಂಬಂಧ ಅಥವಾ ಗ್ರೀನ್‌ಕಾರ್ಡ್ ಹೊಂದಿರುವ ವ್ಯಕ್ತಿಯೊಂದಿಗೆ ಸಂಬಂಧ, ಅಮೆರಿಕದಲ್ಲಿ ಉದ್ಯೋಗ, ಉದ್ಯಮ ನಡೆಸುತ್ತಿರುವವರು, ವರ್ಷಕ್ಕೂ ಹೆಚ್ಚು ಕಾಲ ನಿರಾಶ್ರಿತರಾಗಿ ನೆಲೆಸಿರುವವರು, ಡೈವರ್ಸಿಟಿ ವೀಸಾ ಲಾಟರಿ ಪಡೆದವರು, ಅಮೆರಿಕದಲ್ಲಿ ದೊಡ್ಡ ಮಟ್ಟದ ಉದ್ಯಮ ಸ್ಥಾಪನೆ ಉದ್ದೇಶ ಹೊಂದಿದವರು, ಕೌಶಲ ಹೊಂದಿದ ನೌಕರರು, ಎಚ್ 1ಬಿ ವೀಸಾದಲ್ಲಿ ಅಮೆರಿಕದಲ್ಲಿ ನೌಕರಿ ಮಾಡುತ್ತಿರುವವರು ಆರು ವರ್ಷದೊಳಗಾಗಿ ಗ್ರೀನ್‌ಕಾರ್ಡ್ ಪಡೆಯಲು ಅರ್ಹರು.

ಗ್ರೀನ್ ಕಾರ್ಡ್ ಅವಧಿ
ಗ್ರೀನ್‌ಕಾರ್ಡ್ ಅವಧಿ 10 ವರ್ಷ ಇರುತ್ತದೆ. ಇದರ ಅವಧಿಮುಕ್ತಾಯವಾಗುವ ಕೊನೆಯ ಆರು ತಿಂಗಳ ಒಳಗೆ ಮತ್ತೆ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.












Click it and Unblock the Notifications