'ನಮ್ಮ ಮಕ್ಕಳಿಗೆ ವಾಪಸ್ ಹೋಗಲು ಇಷ್ಟವಿಲ್ಲ': 5 ತಿಂಗಳು ಬೆಂಗಳೂರಿನಲ್ಲಿದ್ದ ಅಮೆರಿಕನ್ ಕುಟುಂಬದ ಪೋಸ್ಟ್ Viral
ಅಮೆರಿಕದಿಂದ ಬಂದು 5 ತಿಂಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ ಕುಟುಂಬವೊಂದು ನಗರದ ಬಗ್ಗೆ ಹಂಚಿಕೊಂಡಿರುವ ಸಕಾರಾತ್ಮಕ ಅನುಭವವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದ ಸಿಲಿಕಾನ್ ಸಿಟಿ, ಐಟಿ-ಬಿಟಿ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಬಗ್ಗೆ ಈ ವಿದೇಶಿ ಪ್ರಜೆಗಳು ಮಾಡಿರುವ ಪೋಸ್ಟ್, ನಗರದ ಜನರ ಆತಿಥ್ಯ ಮತ್ತು ಪ್ರೀತಿಯನ್ನು ಎಲ್ಲೆಡೆ ಪಸರಿಸಿದೆ.
ರೆಡ್ಡಿಟ್ ಪೋಸ್ಟ್‌ನಲ್ಲಿ ಏನಿದೆ?
ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ 'ಥ್ಯಾಂಕ್ಸ್ ಬೆಂಗಳೂರು' ಎಂಬ ಶೀರ್ಷಿಕೆಯಡಿ ಈ ಅಮೆರಿಕನ್ ವ್ಯಕ್ತಿ ತಮ್ಮ ಅನುಭವವನ್ನು ಮುಕ್ತವಾಗಿ ಬರೆದುಕೊಂಡಿದ್ದಾರೆ. "ನಾನು ಮತ್ತು ನನ್ನ ಕುಟುಂಬ ಕೆಲಸದ ನಿಮಿತ್ತ ಐದು ತಿಂಗಳ ಹಿಂದೆ ಬೆಂಗಳೂರಿಗೆ ಬಂದೆವು. ಇಲ್ಲಿಗೆ ಬರುವ ಮುನ್ನ ಅಂತರ್ಜಾಲದಲ್ಲಿ ಬೆಂಗಳೂರಿನ ಟ್ರಾಫಿಕ್, ಕಸದ ಸಮಸ್ಯೆ ಮತ್ತು ಹವಾಮಾನ ವೈಪರೀತ್ಯಗಳ ಕುರಿತು ಸಾಕಷ್ಟು ನಕಾರಾತ್ಮಕ ವಿಚಾರಗಳನ್ನು ಓದಿದ್ದೆವು. ಖಂಡಿತವಾಗಿಯೂ ಇಲ್ಲಿ ಈ ಎಲ್ಲಾ ಸಮಸ್ಯೆಗಳಿವೆ ಮತ್ತು ಮುಂದಿನ ದಿನಗಳಲ್ಲಿ ಇವು ಸುಧಾರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಆದರೆ, ಈ ಸಮಸ್ಯೆಗಳ ಹೊರತಾಗಿಯೂ, ನೀವೆಲ್ಲರೂ ಒಂದು ಅದ್ಭುತ ನಗರವನ್ನು ಹೊಂದಿದ್ದೀರಿ!" ಎಂದು ಅವರು ಬರೆದುಕೊಂಡಿದ್ದಾರೆ.

ಮಕ್ಕಳಿಗೆ ವಾಪಸ್ ಹೋಗಲು ಇಷ್ಟವಿಲ್ಲ
ತಮ್ಮ ಬೆಂಗಳೂರಿನ ಉಳಿದಿದ್ದು ಇಡೀ ಕುಟುಂಬ ಎಷ್ಟರಮಟ್ಟಿಗೆ ಆನಂದಿಸಿದೆ ಎಂದರೆ, ಅವರ ಮಕ್ಕಳಿಗೆ ಈಗ ವಾಪಸ್ ಅಮೆರಿಕಕ್ಕೆ ಹೋಗಲು ಇಷ್ಟವೇ ಇಲ್ಲವಂತೆ. "ನಾವು ಇಲ್ಲಿ ಬಹಳ ಅದ್ಭುತವಾದ ಸಮಯವನ್ನು ಕಳೆದೆವು. ನಮ್ಮ ಮಕ್ಕಳಿಗೆ ಈಗ ನಮ್ಮ ದೇಶಕ್ಕೆ ಹೋಗಲು ಇಷ್ಟವಿಲ್ಲ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಜನರ ದಯೆ ಮತ್ತು ಸಹಾಯ ಮಾಡುವ ಗುಣವನ್ನು ಅವರು ವಿಶೇಷವಾಗಿ ಶ್ಲಾಘಿಸಿದ್ದಾರೆ. "ಇಲ್ಲಿನ ಪ್ರತಿಯೊಬ್ಬರೂ ತುಂಬಾ ದಯಾಮಯಿಗಳು. ನಾವು ಎಲ್ಲೇ ಹೋದರೂ, ಸ್ಥಳೀಯರು ನಮ್ಮೊಂದಿಗೆ ಸ್ನೇಹದಿಂದ ಮಾತನಾಡುತ್ತಿದ್ದರು ಮತ್ತು ನಮಗೆ ಸಹಾಯ ಮಾಡಲು ಮುಂದಾಗುತ್ತಿದ್ದರು. ವಿಶೇಷವಾಗಿ, ನಾವು ಬಸ್ ಮಾರ್ಗಗಳನ್ನು ಹುಡುಕುವಾಗ ದಾರಿ ತಪ್ಪಿದಾಗಲೆಲ್ಲಾ ಇಲ್ಲಿನ ಜನ ನಮಗೆ ಸಹಾಯ ಮಾಡಿದ್ದಾರೆ" ಎಂದು ಅವರು ನೆನಪಿಸಿಕೊಂಡಿದ್ದಾರೆ.
ಯಾವುದೇ ಸಮಸ್ಯೆ ಎದುರಾಗಲಿಲ್ಲ
ವಿದೇಶಿಗರು ಭಾರತಕ್ಕೆ ಬಂದಾಗ ಸಾಮಾನ್ಯವಾಗಿ ಎದುರಿಸುವ ಯಾವುದೇ ಸಮಸ್ಯೆಗಳು ತಮಗೆ ಎದುರಾಗಲಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. "ನಮಗೆ ಇಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಎದುರಾಗಲಿಲ್ಲ. ನಮ್ಮಲ್ಲಿ ಯಾರಿಗೂ ಆರೋಗ್ಯ ಹದಗೆಡಲಿಲ್ಲ, ಯಾರೂ ನಮಗೆ ಮೋಸ ಮಾಡಲು ಪ್ರಯತ್ನಿಸಲಿಲ್ಲ ಮತ್ತು ರಸ್ತೆಗಳನ್ನು ಹೊರತುಪಡಿಸಿ ನಮಗೆ ಬೇರೆ ಯಾವುದೇ ಅಪಾಯಕಾರಿ ಪರಿಸ್ಥಿತಿ ಎದುರಾಗಲಿಲ್ಲ. ಪ್ರವಾಸಕ್ಕೆ ಮುನ್ನ ಭಾರತದ ವೀಸಾ ಪಡೆಯುವುದೊಂದೇ ನಮಗೆ ಎದುರಾದ ದೊಡ್ಡ ಸವಾಲಾಗಿತ್ತು. ಒಟ್ಟಾರೆಯಾಗಿ, ನಮಗೆ ಆಶ್ರಯ ನೀಡಿದ್ದಕ್ಕೆ ಧನ್ಯವಾದಗಳು, ಈ ನಗರಕ್ಕೆ ಐದು ಸ್ಟಾರ್ ನೀಡುತ್ತೇನೆ, ನಾವು ಮತ್ತೆ ಬರುತ್ತೇವೆ" ಎಂದು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ರೆಡ್ಡಿಟ್ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾಕಷ್ಟು ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. "ನೀವು ನಮ್ಮ ನಗರದಲ್ಲಿ ಉತ್ತಮ ಸಮಯ ಕಳೆದಿರುವುದು ಸಂತೋಷದ ವಿಚಾರ. ಆತಿಥ್ಯ, ಆಹಾರ ಮತ್ತು ಪ್ರೀತಿ ನಮ್ಮ ನಗರದ ಹೆಗ್ಗುರುತು. ಆದಷ್ಟು ಬೇಗ ಮತ್ತೆ ಬನ್ನಿ!" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಬೆಂಗಳೂರು ಒಂದು ಅದ್ಭುತ ನಗರ. ಇಲ್ಲಿನ ಜನ ಬಹಳ ಸ್ನೇಹಜೀವಿಗಳು. ಭಾಷೆಯ ವಿಚಾರವನ್ನು ಬಲವಂತವಾಗಿ ಹೇರಲು ಹೋದಾಗ ಮಾತ್ರ ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಉಳಿದಂತೆ ಕೆಲವು ರೌಡಿಗಳೂ ಇದ್ದಾರೆ, ಆದರೆ ಅದು ಎಲ್ಲಾ ಕಡೆಯೂ ಇರುವಂಥದ್ದೇ. ಉತ್ತಮ ಹವಾಮಾನ, ರುಚಿಯಾದ ಆಹಾರ ಹೊಂದಿರುವ ಇದು ಭಾರತದ ಅತ್ಯುತ್ತಮ ಮೆಟ್ರೋ ನಗರ" ಎಂದು ಶ್ಲಾಘಿಸಿದ್ದಾರೆ.












Click it and Unblock the Notifications