Namma Metro: ಸಂಚಾರ ನಿರ್ಬಂಧ ಹಿನ್ನೆಲೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಹಿನ್ನೆಲೆಯಲ್ಲಿ ಬುಧವಾರ ನಮ್ಮ ಮೆಟ್ರೋ ರೈಲಿನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು. ಮೆಟ್ರೋ ಮೂರು ಮಾರ್ಗಗಳ ಪೈಕಿ ನೇರಳೆ ಮಾರ್ಗದಲ್ಲಿ ಜನ ಸಂಚಾರ ಹೆಚ್ಚಾಗಿತ್ತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸರು ಸಿಎಂ ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭ ಸಂಬಂಧ ವಿಧಾನಸೌಧ, ಕಬ್ಬನ್ ಪಾರ್ಕ್, ರಾಜಭವನ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ತಾತ್ಕಲಿಕವಾಗಿ ನಿಬಂಧಿಸಿದ್ದರು. ಹೀಗಾಗಿ ಖಾಸಗಿ ವಾಹನಗಳಲ್ಲಿ ಓಡಾಡುವ ಜನರು ನಮ್ಮ ಮೆಟ್ರೋ ರೈಲನ್ನು ಆಶ್ರಯಿಸಿದರು. ಹೀಗಾಗಿ ಮೆಟ್ರೋ ನೇರಳೆ ಮಾರ್ಗದಲ್ಲಿ ಎಂದಿಗಿಂತ ಜನ ಹೆಚ್ಚಾಗಿ ಓಡಾಡಿದ್ದು ಕಂಡು ಬಂತು.

ವಿಧಾನಸೌಧದ ಕಡೆಗೆ ತೆರಳುವವರ ಸಂಖ್ಯೆ ಏರಿಕೆ
ವಿಧಾನಸೌಧದ ಕಡೆಗೆ ಹೋಗುವ ಪ್ರಯಾಣಿಕರ ಪ್ರಮಾಣ ಹೆಚ್ಚಿತ್ತು. ಚಲ್ಲಘಟ್ಟದಿಂದ ವೈಟ್‌ಫಿಲ್ಡ್ ವರೆಗೆ ಇರುವ ನೇರಳೆ ಮಾರ್ಗದಲ್ಲಿ ವಿಧಾನಸೌಧ, ಕಬ್ಬನ್‌ಪಾರ್ಕ್, ಎಂಬಿ ರಸ್ತೆ, ಮೆಜೆಸ್ಟಿಕ್ ಇವು ನಗರದ ಹೃದಯಭಾಗಗಳಾಗಿವೆ. ಲೋಕಭವನ, ಕ್ವೀನ್ಸ್ ರಸ್ತೆ, ವಿಧಾನಸೌಧ, ಬಿ.ಆರ್. ಅಂಬೇಡ್ಕರ್ ರಸ್ತೆ ಸೇರಿದಂತೆ ಈ ಭಾಗಗಳಿಗೆ ಓಡಾಡುವವರ ಪ್ರಮಾಣ ನಿತ್ಯವು ಹೆಚ್ಚಿರುತ್ತದೆ. ಬುಧವಾರ ಎಂದಿಗಿಂತಲೂ ದಟ್ಟಣೆ ಅಧಿಕವಾಗಿತ್ತು. ಹೀಗಾಗಿ ಮೆಟ್ರೋ ರೈಲುಗಳ ಆವರ್ತನವನ್ನೂ ಹೆಚ್ಚಿಸಿದ್ದೆವು ಎಂದು ಮೆಟ್ರೋ ಅಧಿಕಾರಿಗಳು ಹೇಳಿದರು.
ಯಶವಂತಪುರ, ತುಮಕೂರು ರಸ್ತೆ ಕಡೆಯಿಂದ ಹಸಿರು ಮಾರ್ಗದಲ್ಲಿ ಬರುವವ ಪ್ರಯಾಣಿಕರು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಇಂಟರ್‌ಚೇಂಜ್ ನಲ್ಲಿ ನೇರಳೆ ಮಾರ್ಗಕ್ಕೆ ರೈಲು ಬದಲಾಯಿಸುತ್ತಾರೆ. ಇಲ್ಲಿ ಕೂಡ ದೈನಂದಿನಕ್ಕಿಂತ ತುಸ ಹೆಚ್ಚಿನ ಜನ ದಟ್ಟಣೆ ದಾಖಲಾಯಿತು. ಒಟ್ಟಾರೆ ಲೋಕಭವನದಲ್ಲಿದ್ದ ರಾಜಕೀಯ ಕಾರ್ಯಕ್ರಮ ಸಂಬಂಧ ಜನರು ಸುಲಭ ಸಂಚಾರಕ್ಕಾಗಿ ನಮ್ಮ ಮೆಟ್ರೋ ಆಶ್ರಯಿಸಿದರು.
ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು
ಜೂನ್ 3 ರಿಂದ ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಹೆಚ್ಚುವರಿಯಾಗಿ ಎರಡು ರೈಲುಗಳನ್ನು ಬಿಡಲಾಗಿದೆ. ಮೊದಲಿದ್ದ 8, ಹೆಚ್ಚುವರಿ 2 ಸೇರಿ ಒಟ್ಟು 10 ರೈಲುಗಳು ಸೇವೆಗೆ ನಿಯೋಜನೆಗೊಂಡಂತಾಗಿದೆ. ನೇರಳೆ ಮಾರ್ಗ, ಹಸಿರು ಮಾರ್ಗದಿಂದ ಹಳದಿ ಲೈನ್ ಮೆಟ್ರೋ ಅನುಸರಿಸುವ ಪ್ರಯಾಣಿಕರ ಸಂಖ್ಯೆ ಸುಮಾರು ಒಂದು ಲಕ್ಷ ಇದೆ. ಹೆಚ್ಚುವರಿ ರೈಲು ಬಿಡುಗಡೆ ಬೆನ್ನಲ್ಲೆ ಹೆಚ್ಚಿನ ಜನರು ಸಂಚಾರ ಮಾಡಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಕಾಮಗಾರಿಗೆ ಕಾರ್ಮಿಕರ ಕೊರತೆ
ಬೆಂಗಳೂರು ನಮ್ಮ ಮೆಟ್ರೋ ಹೊಸ ಮಾರ್ಗಗಳಾದ ಗುಲಾಬಿ ಮಾರ್ಗ (ಮೊದಲ ಹಂತ ತಾವರೆಕರೆ-ಕಾಳೇನ ಅಗ್ರಹಾರ) ಮತ್ತು ನೀಲಿ ಮಾರ್ಗ (2ಎ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ) ಇದೇ ವರ್ಷದಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಗಳು ಇವೆ. ಆದರೆ ಅಂತಿಮ ಹಂತದಲ್ಲಿರುವ ಕಾಮಗಾರಿಗೆ ಕಾರ್ಮಿಕರ ಕೊರತೆ ಉಂಟಾಗಿದೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹಿನ್ನೆಲೆ ತೆರಳಿದ್ದ ಕಾರ್ಮಿಕರಲ್ಲಿ ಎಲ್ಲರೂ ಬೆಂಗಳುರು ಮೆಟ್ರೋ ಕೆಲಸಕ್ಕೆ ಮರಳಿಲ್ಲ ಎಂದು ತಿಳಿದು ಬಂದಿದೆ.













Click it and Unblock the Notifications