Breaking:ಸಿದ್ದರಾಮಯ್ಯಗೆ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗು ಎಂದು ಸವಾಲು ಹಾಕಿದ್ದ ಪೊಲೀಸ್ ಪೇದೆ ಸಸ್ಪೆಂಡ್
ವಿಜಯಪುರ, ಅಕ್ಟೋಬರ್ 8: ಪೊಲೀಸರ ವಿರುದ್ಧ ಭಾರತ್ ಜೋಡೋ ಯಾತ್ರೆ ವೇಳೆ ಭಾಷಣದಲ್ಲಿ ಗುಡುಗಿದ್ದ ಸಿದ್ದರಾಮಯ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ವಿಜಯಪುರದ ಪೊಲೀಸ್ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ.
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭವಾದ ದಿನ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯ," ಇನ್ನು ಆರು ತಿಂಗಳ ನಂತರ ರಾಜ್ಯದಲ್ಲಿ ಸರಕಾರ ಬದಲಾಗುತ್ತದೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕೆಲವು ಪೊಲೀಸರಿಗೆ ಹೇಳಲು ಬಯಸುತ್ತೇನೆ, ನೀವು ಬಿಜೆಪಿ ಜತೆ ಶಾಮೀಲಾದರೆ ನಿಮಗೆ ತಕ್ಕ ಪಾಠ ಕಲಿಸುವ ಕಾಲ ಬರಲಿದೆ" ಎಂದು ಎಚ್ಚರಿಕೆ ನೀಡಿದ್ದರು.
ಸಿದ್ದರಾಮಯ್ಯ ಅವರ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ತನಿಖೆ ನಡೆಸಲಾಗುವುದು: ಕಟೀಲ್
ಸಿದ್ದರಾಮಯ್ಯ ಪೊಲೀಸರ ವಿರುದ್ಧ ಗುಡುಗಿದ್ದ ವಿಡಿಯೋ ಇದ್ದ ಪೋಸ್ಟ್‌ವೊಂದಕ್ಕೆ ಕಮೆಂಟ್ ಮಾಡಿದ್ದ ವಿಜಯಪುರ ಗ್ರಾಮೀಣ ಠಾಣೆಯ ಕಾನ್‌ಸ್ಟೇಬಲ್ ರಾಜಶೇಖರ್ ಖಾನಾಪುರ ಎಂಬಾತ, " ಪೊಲೀಸರಿಗೆ ಬೈಯ್ಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗು" ಎಂದು ಸವಾಲು ಹಾಕಿದ್ದರು. ಇದು ಸಾಮಾಜಿಕ ಜಾಲಾತಾಣಗಳಲ್ಲಿ ಪರ ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.
ಸಿದ್ದರಾಮಯ್ಯ ಅಭಿಮಾನಿಗಳು ಸರಕಾರಿ ಹುದ್ದೆಯಲ್ಲಿದ್ದು ಪಕ್ಷಾತೀತವಾಗಿ ಕೆಲಸ ಮಾಡುವುದನ್ನು ಬಿಟ್ಟು, ಸಾಮಾಜಿಕ ಜಾಲಾತಾಣಗಳಲ್ಲಿ ಬಿಜೆಪಿ ಪರ ಹೇಳಿಕೆ ನೀಡಿರುವ ಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಕಾನ್‌ಸ್ಟೆಬಲ್ ತಮ್ಮ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಸಂಬಂಧ ಇದುವರೆಗೆ ಯಾರೂ ದೂರು ಕೊಟ್ಟಿಲ್ಲ. ಕೊಟ್ಟರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ತಿಳಿಸಿದ್ದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ಪೇದೆ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಕಾನ್‌ಸ್ಟೇಬಲ್ ರಾಜಶೇಖರ್ ಖಾನಾಪುರರನ್ನು ಅಮಾನತು ಮಾಡಿದ್ದಾರೆ.