Puneeth Rajkumar Birthday: ಇಂದು ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ
ಇಂದು ಮಾರ್ಚ್ 17. ಕೋಟ್ಯಂತರ ಕನ್ನಡಿಗರ ಪಾಲಿನ 'ಪವರ್ ಸ್ಟಾರ್', ಸರಳತೆಯ ಡಾ.ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಅಪ್ಪು ದೈಹಿಕವಾಗಿ ನಮ್ಮನ್ನು ಅಗಲಿರಬಹುದು, ಆದರೆ ಅವರ ನಗು, ಅವರ ವ್ಯಕ್ತಿತ್ವ ಮತ್ತು ಅವರು ಬಿಟ್ಟುಹೋದ ಸಮಾಜಮುಖಿ ಕೆಲಸಗಳು ಪ್ರತಿಕ್ಷಣವೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿವೆ. ಇಂದು ಅವರ 51ನೇ ಜನ್ಮದಿನವನ್ನು ರಾಜ್ಯಾದ್ಯಂತ "ಸ್ಫೂರ್ತಿ ದಿನ"ವಾಗಿ ಆಚರಿಸಲಾಗುತ್ತಿದೆ.
ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಕಿರಿಯ ಪುತ್ರನಾಗಿ 1975ರಲ್ಲಿ ಜನಿಸಿದ ಲೋಹಿತ್ (ಪುನೀತ್), ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. 'ಬೆಟ್ಟದ ಹೂವು' ಚಿತ್ರದ ರಾಮು ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಅಪ್ಪು, ಬಾಲನಟನಾಗಿ 'ಭಾಗ್ಯವಂತ', 'ಚಲಿಸುವ ಮೋಡಗಳು', 'ಎರಡು ನಕ್ಷತ್ರಗಳು' ಅಂತಹ ಚಿತ್ರಗಳ ಮೂಲಕ ಮನೆಮಾತಾಗಿದ್ದರು.

2002ರಲ್ಲಿ 'ಅಪ್ಪು' ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ಅವರು, ಮೊದಲ ಚಿತ್ರದಲ್ಲೇ ಯಶಸ್ಸಿನ ಶಿಖರ ಏರಿದರು. ಅಲ್ಲಿಂದ ಶುರುವಾದ ಅವರ ಪಯಣ 'ಅಭಿ', 'ಆಕಾಶ್', 'ಮಿಲನ', 'ಜಾಕಿ', 'ರಾಜಕುಮಾರ'ದಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನ ಸ್ಟಾರ್ ನಟನನ್ನಾಗಿ ಮಾಡಿತು. ಅವರ ನೃತ್ಯ, ಸಾಹಸ ಮತ್ತು ನಟನೆಗೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತವೇ ಮಾರುಹೋಗಿತ್ತು.
ಪುನೀತ್ ಕೇವಲ ಒಬ್ಬ ನಟನಾಗಿ ಉಳಿಯಲಿಲ್ಲ. ಅವರ ನಿಜವಾದ ವ್ಯಕ್ತಿತ್ವ ತೆರೆಯ ಹಿಂದೆ ಇತ್ತು. ಶಕ್ತಿಧಾಮದ ಮೂಲಕ ಸಾವಿರಾರು ಅನಾಥ ಮಕ್ಕಳಿಗೆ ಆಸರೆಯಾಗಿದ್ದರು. ನೂರಾರು ಶಾಲೆಗಳಿಗೆ ನೆರವು ನೀಡುತ್ತಿದ್ದರು. ಈ ಯಾವುದೇ ಸಮಾಜಮುಖಿ ಕೆಲಸಗಳನ್ನು ಅವರು ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಅವರ ನಿಧನದ ನಂತರವಷ್ಟೇ ಅವರು ಮಾಡುತ್ತಿದ್ದ ದಾನ-ಧರ್ಮಗಳ ಮಹತ್ವ ಜಗತ್ತಿಗೆ ತಿಳಿಯಿತು. ತಮ್ಮ ಮರಣದ ನಂತರವೂ ನೇತ್ರದಾನ ಮಾಡುವ ಮೂಲಕ ನಾಲ್ಕು ಜನರಿಗೆ ಬೆಳಕಾದರು.
ಗಂಧದ ಗುಡಿ ಮತ್ತು ಕರ್ನಾಟಕ ರತ್ನ
ಪ್ರಕೃತಿ ಮತ್ತು ಕರ್ನಾಟಕದ ಕಾಡುಗಳ ಮೇಲೆ ಅವರಿಗಿದ್ದ ಪ್ರೀತಿಯನ್ನು 'ಗಂಧದ ಗುಡಿ' ಸಾಕ್ಷ್ಯಚಿತ್ರದಲ್ಲಿ ನಾವು ನೋಡಬಹುದು. ಅವರ ನಿಸ್ವಾರ್ಥ ಸೇವೆ ಮತ್ತು ಸಿನಿಮಾ ಸಾಧನೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಕರ್ನಾಟಕ ರತ್ನ' ನೀಡಿ ಗೌರವಿಸಿದೆ. ಅಲ್ಲದೆ ಅಭಿಮಾನಿಗಳು ರಕ್ತದಾನ ಶಿಬಿರಗಳು, ಅನ್ನದಾನ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಪುನೀತ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅವರು ನಟಿಸಿದ ಎವರ್‌ಗ್ರೀನ್ ಸಿನಿಮಾ 'ಆಕಾಶ್' ರಾಜ್ಯಾದ್ಯಂತ ಮರು ಬಿಡುಗಡೆಯಾಗಿತ್ತು. ಸಿನಿಮಾ ಬಿಡುಗಡೆಯಾಗಿ 20 ವರ್ಷಗಳಾದರೂ, ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಅಪ್ಪು ಎಂಟ್ರಿಗೆ ಶಿಳ್ಳೆ-ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದರು. "ನೀನೇ ನೀನೇ" ಹಾಡಿಗೆ ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಡ್ಯಾನ್ಸ್ ಮಾಡುವ ಮೂಲಕ ಅಪ್ಪುವನ್ನು ನೆನೆದಿದ್ದರು.

ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳಿಂದ ನಮನ
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯ ಆವರಣ ಇಂದು ಅಕ್ಷರಶಃ ಜನಸಾಗರದಿಂದ ತುಂಬಿಹೋಗಿದೆ. "ಅಪ್ಪು ಅಮರ", "ಜೊತೆಗಿರದ ಜೀವ ಎಂದಿಗೂ ಜೀವಂತ" ಎಂಬ ಘೋಷಣೆಗಳು ಮೊಳಗುತ್ತಿವೆ. ಅಭಿಮಾನಿಗಳು ಬೆಳ್ಳಂಬೆಳಿಗ್ಗೆಯೇ ಬಂದು ನೆಚ್ಚಿನ ನಟನ ಸಮಾಧಿಗೆ ನಮನ ಸಲ್ಲಿಸುತ್ತಿದ್ದು, ಅನೇಕರು ಭಾವುಕರಾಗಿ ಕಣ್ಣೀರು ಹಾಕುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.
ಯುವಜನತೆಗೆ ಸ್ಫೂರ್ತಿ
ಸಿನಿಮಾ ಸಾಧನೆಗಿಂತಲೂ ಪುನೀತ್ ಅವರ ವ್ಯಕ್ತಿತ್ವ ಯುವಜನತೆಗೆ ದೊಡ್ಡ ಪಾಠ. ಸೋಲನ್ನು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಿದ್ದ ರೀತಿ, ಎಷ್ಟೇ ಎತ್ತರಕ್ಕೆ ಬೆಳೆದರೂ ನೆಲದ ಮೇಲಿದ್ದ ಅವರ ಸರಳತೆ ಎಲ್ಲರಿಗೂ ಮಾದರಿ. "ನಟನಾಗಿ ಚಿತ್ರರಂಗದಲ್ಲಿ ಮಿಂಚಿದರೂ, ಮನುಷ್ಯನಾಗಿ ಜನರ ಹೃದಯದಲ್ಲಿ ಸಿಂಹಾಸನ ಹಾಕಿದವರು ಅಪ್ಪು" ಎನ್ನುತ್ತಾರೆ ಅವರ ಅಭಿಮಾನಿಗಳು. ಕರ್ನಾಟಕದ ಪ್ರತಿ ಮನೆಯ ಮಗನಂತಿದ್ದ ಅಪ್ಪು, ತಮ್ಮ ನಗುವಿನ ಮೂಲಕ, ಕೆಲಸಗಳ ಮೂಲಕ ಇಂದಿಗೂ ನಮ್ಮ ನಡುವೆಯೇ ಇದ್ದಾರೆ.












Click it and Unblock the Notifications