ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್
ರಾಜ್ಯಾದ್ಯಂತ ನಾಳೆಯಿಂದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಸಹಜವಾಗಿಯೇ ಸ್ವಲ್ಪ ಮಟ್ಟಿನ ಆತಂಕ, ಕಾತರ ಮನೆಮಾಡಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಒಂದು ಪ್ರಮುಖ ಘಟ್ಟ. ವರ್ಷಪೂರ್ತಿ ಓದಿದ ಶ್ರಮ ಒಂದೆಡೆಯಾದರೆ, ಪರೀಕ್ಷೆಯ ಹಿಂದಿನ ದಿನ ಹಾಗೂ ಪರೀಕ್ಷಾ ದಿನದಂದು ನಾವು ನಮ್ಮ ಮನಸ್ಸು ಮತ್ತು ದೇಹವನ್ನು ಹೇಗೆ ಇರಿಸಿಕೊಳ್ಳುತ್ತೇವೆ ಎಂಬುದು ಇನ್ನೊಂದೆಡೆ ಬಹಳ ಮುಖ್ಯವಾಗುತ್ತದೆ. ಕೊನೆಯ ಕ್ಷಣದಲ್ಲಿ ಪುಸ್ತಕ ಹಿಡಿದು ಹಗಲು ರಾತ್ರಿ ಒದ್ದಾಡುವುದಕ್ಕಿಂತ, ಈ ಕೆಳಗಿನ ಸರಳ ಹಾಗೂ ಪರಿಣಾಮಕಾರಿ ಟಿಪ್ಸ್ ಅನುಸರಿಸುವುದು ಉತ್ತಮ ಫಲಿತಾಂಶ ನೀಡುತ್ತದೆ.
ಅಂಕಗಳ ಬಗ್ಗೆ ಅನಗತ್ಯ ಗೊಂದಲ, ಗಾಬರಿ ಬೇಡ
ಪರೀಕ್ಷೆ ಎಂದ ಕೂಡಲೇ 'ನನಗೆ ಎಷ್ಟು ಮಾರ್ಕ್ಸ್ ಬರಬಹುದು?', 'ಪ್ರಶ್ನೆಪತ್ರಿಕೆ ಕಷ್ಟ ಇರುತ್ತದಾ?' ಎಂಬೆಲ್ಲಾ ಪ್ರಶ್ನೆಗಳು ಕಾಡುವುದು ಸಹಜ. ಆದರೆ, ಈ ಸಮಯದಲ್ಲಿ ಅಂಕಗಳ ಬಗ್ಗೆ ಯೋಚಿಸಿ ಗಾಬರಿ ಬೀಳುವ ಅಗತ್ಯವಿಲ್ಲ. ನೀವು ಈಗಾಗಲೇ ವರ್ಷವಿಡೀ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೀರಿ. ನಿಮ್ಮ ಶ್ರಮದ ಮೇಲೆ ನಂಬಿಕೆ ಇರಲಿ. ಒತ್ತಡವನ್ನು ಕಡಿಮೆ ಮಾಡಲು ಆದಷ್ಟು ರಿಲಾಕ್ಸ್ ಆಗಿರಿ. ಸ್ವಲ್ಪ ಹೊತ್ತು ಲೈಟಾಗಿ ನಿಮ್ಮಿಷ್ಟದ ಆಟ ಆಡಿ. ನಿಮ್ಮ ಅಣ್ಣ, ತಂಗಿ ಅಥವಾ ಸ್ನೇಹಿತರ ಜೊತೆಗೆ ಪರೀಕ್ಷೆಯ ವಿಚಾರ ಬಿಟ್ಟು ಬೇರೆ ವಿಷಯಗಳ ಬಗ್ಗೆ ಹರಟೆ ಹೊಡೆಯಿರಿ. ಇದರಿಂದ ಮೆದುಳು ಶಾಂತವಾಗುತ್ತದೆ.

ರಾತ್ರಿ ಊಟ ಹೀಗಿರಲಿ
ಪರೀಕ್ಷೆಯ ಹಿಂದಿನ ದಿನ ರಾತ್ರಿ ಊಟದ ಕಡೆಗೆ ವಿಶೇಷ ಗಮನ ಹರಿಸಬೇಕು. ಅತಿಯಾಗಿ ಮಸಾಲೆ ಇರುವ, ಎಣ್ಣೆಯಲ್ಲಿ ಕರಿದ ಅಥವಾ ಜಂಕ್ ಫುಡ್‌ಗಳಿಂದ ದೂರವಿರಿ. ಸುಲಭವಾಗಿ ಜೀರ್ಣವಾಗುವಂತಹ, ಹಗುರವಾದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ. ಊಟವಾದ ನಂತರ ಸ್ವಲ್ಪ ಹೊತ್ತು ವಾಕ್ ಮಾಡುವುದು ಒಳ್ಳೆಯದು. ಇದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಹೊಟ್ಟೆ ಕೆಡಿಸುವಂತಹ ಹೊರಗಿನ ಆಹಾರ ಬೇಡವೇ ಬೇಡ.
ಚೆನ್ನಾಗಿ ನಿದ್ದೆ ಮಾಡಿ
"ಬೆಳಿಗ್ಗೆ ಪರೀಕ್ಷೆ ಇದೆ, ಇಡೀ ರಾತ್ರಿ ನಿದ್ದೆ ಮಾಡದೆ ಓದುತ್ತೇನೆ" ಎಂಬುದು ಬಹುತೇಕ ವಿದ್ಯಾರ್ಥಿಗಳು ಮಾಡುವ ದೊಡ್ಡ ತಪ್ಪು. ಮೆದುಳು ತಾನು ಓದಿದ್ದನ್ನು ಪರೀಕ್ಷಾ ಕೊಠಡಿಯಲ್ಲಿ ನೆನಪಿಸಿಕೊಳ್ಳಬೇಕಾದರೆ, ಅದಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಆಳವಾದ ನಿದ್ದೆಯ ಅವಶ್ಯಕತೆ ಇರುತ್ತದೆ. ಹಾಗಾಗಿ, ರಾತ್ರಿ ಬೇಗ ಮಲಗಿ, ಚೆನ್ನಾಗಿ ನಿದ್ದೆ ಮಾಡಿ. ಬೆಳಿಗ್ಗೆ ಏಳುವಾಗ ನಿಮ್ಮ ಮನಸ್ಸು ಉಲ್ಲಾಸದಿಂದಿರುತ್ತದೆ ಹಾಗೂ ನೆನಪಿನ ಶಕ್ತಿ ಚುರುಕಾಗಿರುತ್ತದೆ.
ಬೆಳಿಗ್ಗೆ ಬೇಗ ಏಳಿ, ಮರೆಯದೇ ತಿಂಡಿ ತಿನ್ನಿ
ಬೆಳಿಗ್ಗೆ ಸ್ವಲ್ಪ ಬೇಗ ಏಳಿ, ನಿತ್ಯಕರ್ಮಗಳನ್ನು ಮುಗಿಸಿ. ಬೇಕಿದ್ದರೆ ರಿಲ್ಯಾಕ್ಸ್ ಆಗಿ ಒಂದೆರಡು ಪ್ರಮುಖ ಅಂಶಗಳನ್ನು ಮಾತ್ರ ಕಣ್ಣಾಡಿಸಿ. ಆದರೆ, ಯಾವುದೇ ಕಾರಣಕ್ಕೂ ಹೊಸ ವಿಷಯಗಳನ್ನು ಈಗ ಕಲಿಯಲು ಹೋಗಬೇಡಿ. ಪರೀಕ್ಷೆಗೆ ಹೋಗುವ ಮುನ್ನ ಉಪಾಹಾರ ಸೇವಿಸುವುದನ್ನು ಮಾತ್ರ ಮರೆಯದಿರಿ. ಖಾಲಿ ಹೊಟ್ಟೆಯಲ್ಲಿ ಪರೀಕ್ಷೆ ಬರೆಯಲು ಕುಳಿತರೆ ಸುಸ್ತು, ತಲೆನೋವು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಮೆದುಳು ಮೂರು ಗಂಟೆಗಳ ಕಾಲ ಏಕಾಗ್ರತೆಯಿಂದ ಕೆಲಸ ಮಾಡಲು ಶಕ್ತಿ ಬೇಕು, ಹಾಗಾಗಿ ಮರೆಯದೆ ತಿಂಡಿ ತಿನ್ನಿ.
ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚೆ ತಲುಪಿ
ಪರೀಕ್ಷೆ ಆರಂಭವಾಗುವ ಕನಿಷ್ಠ ಅರ್ಧ ಗಂಟೆಗೂ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಿ. ಕೊನೆಯ ಕ್ಷಣದ ಧಾವಂತ ಬೇಡ. ಹಾಲಿಕೆಟ್, ಪೆನ್, ಪೆನ್ಸಿಲ್ ಎಲ್ಲವೂ ಇದೆಯೇ ಎಂದು ಹಿಂದಿನ ದಿನವೇ ಖಚಿತಪಡಿಸಿಕೊಳ್ಳಿ. ಪರೀಕ್ಷಾ ಕೇಂದ್ರದ ಬಳಿ ಹೋದ ನಂತರ ಸ್ನೇಹಿತರೊಂದಿಗೆ 'ನೀನು ಆ ಪ್ರಶ್ನೆ ಓದಿದ್ದೀಯಾ?' ಎಂದು ಕೊನೆಯ ಕ್ಷಣದ ಚರ್ಚೆ ಮಾಡಬೇಡಿ. ಇದು ನಿಮ್ಮಲ್ಲಿ ಇಲ್ಲದ ಆತಂಕವನ್ನು ಹುಟ್ಟುಹಾಕಬಹುದು.
ರೂಮು, ಬೆಂಚ್ ಸಮಾಧಾನಾಗಿ ಹುಡುಕಿ
ನೋಟಿಸ್ ಬೋರ್ಡ್ ನೋಡಿ ನಿಮ್ಮ ಕೊಠಡಿ ಮತ್ತು ಬೆಂಚ್ ಅನ್ನು ಸಮಾಧಾನವಾಗಿ ಹುಡುಕಿಕೊಳ್ಳಿ. ನಿಮ್ಮ ಜಾಗದಲ್ಲಿ ಕುಳಿತ ನಂತರ ಒಂದೆರಡು ಬಾರಿ ದೀರ್ಘವಾಗಿ ಉಸಿರಾಡಿ. ನಿಮಗೆ ನೀಡಲಾದ ಪ್ರಶ್ನೆಪತ್ರಿಕೆಯನ್ನು ಮೊದಲಿಗೆ 15 ನಿಮಿಷಗಳ ಕಾಲ ಸಾವಧಾನವಾಗಿ ಓದಿಕೊಳ್ಳಿ. ಯಾವ ಪ್ರಶ್ನೆಗಳಿಗೆ ಉತ್ತರ ಚೆನ್ನಾಗಿ ಗೊತ್ತಿದೆಯೋ, ಅವುಗಳನ್ನು ಮೊದಲು ಬರೆಯಲು ಪ್ರಾರಂಭಿಸಿ. ಅಕ್ಷರಗಳು ದುಂಡಾಗಿರಲಿ.
ಯಾವುದೇ ಆತಂಕವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ನಿಮ್ಮ ಶ್ರಮಕ್ಕೆ ಖಂಡಿತಾ ತಕ್ಕ ಫಲ ಸಿಗುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್












Click it and Unblock the Notifications