ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ
ಕುಂಭಮೇಳದ ಮೂಲಕ ರಾತ್ರೋರಾತ್ರಿ ವೈರಲ್ ಆಗಿದ್ದ ಮೊನಾಲಿಸಾ ಅವರ ದಿಢೀರ್ ಮದುವೆ ಈಗ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಬೀದಿಗೆ ತಂದು ನಿಲ್ಲಿಸಿದೆ. ಮೊನಾಲಿಸಾ ಇತ್ತೀಚೆಗೆ ಮದುವೆಯಾಗಿರುವ ಕಾರಣದಿಂದ ತಮಗೆ 10 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಮದುವೆಯ ಬಗ್ಗೆ ಸುದ್ದಿಯ ಮೂಲಕ ತಿಳಿದುಕೊಂಡೆ. ಇದು ನನ್ನ ಮುಂದಿನ ಚಿತ್ರ 'ದಿ ಡೈರಿ ಆಫ್ ಮಣಿಪುರ' ಬಿಡುಗಡೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಆತಂಕ ಹೊರಹಾಕಿದ್ದಾರೆ.
ಕುಂಭಮೇಳದಲ್ಲಿ ಬಳೆ ಮತ್ತು ಹಾರ ಮಾರುತ್ತಿದ್ದ ಹುಡುಗಿಯ ಸೌಂದರ್ಯಕ್ಕೆ ಮಾರುಹೋಗಿದ್ದ ಸನೋಜ್ ಮಿಶ್ರಾ, ಆಕೆಯನ್ನು ತಮ್ಮ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಅವರು, "ನನ್ನ 35 ವರ್ಷಗಳ ವೃತ್ತಿಜೀವನದಲ್ಲಿ ಒಬ್ಬ ನಟಿಯನ್ನು ಸಿದ್ಧಪಡಿಸಲು ನಾನು ಇಷ್ಟೊಂದು ಶ್ರಮ ಹಾಕಿರಲಿಲ್ಲ. ಆಕೆಗೆ ನಟನೆ ಕಲಿಸಲು ಮುಂಬೈನಿಂದ ತರಬೇತುದಾರರನ್ನು ಕರೆಸಿ ಒಂದೂವರೆ ವರ್ಷದಲ್ಲಿ ಸುಮಾರು 42 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಆಕೆಯ ಕುಟುಂಬಕ್ಕೆ ಉಜ್ಜಯಿನಿಯಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದೆ" ಎಂದು ಹೇಳಿದ್ದಾರೆ.

10 ಕೋಟಿ ಸಾಲದ ಸುಳಿ
ಈ ಚಿತ್ರಕ್ಕಾಗಿ ಸನೋಜ್ ಮಿಶ್ರಾ ಅವರು ಸುಮಾರು 10 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎನ್ನಲಾಗಿದೆ. "ನನ್ನ ಚಿತ್ರದ ಕಥಾವಸ್ತು ಧಾರ್ಮಿಕ ಮತಾಂತರದ ವಿರುದ್ಧವಾಗಿತ್ತು. ಆದರೆ ಈಗ ಚಿತ್ರದ ನಾಯಕಿಯೇ ಮತಾಂತರಗೊಂಡು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಸಿನಿಮಾ ಹೇಗೆ ಬಿಡುಗಡೆ ಮಾಡಲಿ? ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ. ಪಡೆದ ಸಾಲ ತೀರಿಸಲು ಕೇವಲ ಮೂರು ತಿಂಗಳು ಬಾಕಿ ಇದೆ ಎಂದಿದ್ದಾರೆ.
ಲವ್ ಜಿಹಾದ್ ಆರೋಪ
ಮೊನಾಲಿಸಾ ಇತ್ತೀಚೆಗೆ ಕೇರಳದಲ್ಲಿ ನಟ ಫರ್ಮಾನ್ ಖಾನ್ ಎಂಬುವವರನ್ನು ಮದುವೆಯಾಗಿದ್ದರು. ಇದು ಲವ್ ಜಿಹಾದ್ ಎಂಬ ಆರೋಪ ಕೇಳಿಬಂದಾಗ, ಮೊನಾಲಿಸಾ ಇದನ್ನು ನಿರಾಕರಿಸಿದ್ದರು. ಆದರೆ ಸನೋಜ್ ಮಿಶ್ರಾ ಪ್ರಕಾರ, ಮೊನಾಲಿಸಾ ಸುಳ್ಳು ಹೇಳಿ ಕೇರಳಕ್ಕೆ ಹೋಗಿದ್ದರು. ಬೇರೆ ಸಿನಿಮಾ ಆಫರ್ ಬಂದಿದೆ ಎಂದು ಹೇಳಿ ಹೋಗಿದ್ದಳು. ತರಬೇತಿಗಾಗಿ ಅಲ್ಲಿಗೆ ಹೋಗುತ್ತಿದ್ದೇನೆ ಎಂದಿದ್ದ ಆಕೆ ದಿಢೀರ್ ಮದುವೆಯ ಸುದ್ದಿ ನೀಡಿದ್ದಾಳೆ. ಆಕೆಯ ತಂದೆಯೂ ಅಸಹಾಯಕರಾಗಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ.
ಅವಳಿಗೆ ಹಿಂದಿ ಸರಿಯಾಗಿ ಬರದಿದ್ದರೆ ಮಲಯಾಳಂ ಅಥವಾ ತಮಿಳು ಹೇಗೆ ಮಾತನಾಡುತ್ತಾಳೆ? ಆ ಪ್ರದೇಶದಲ್ಲಿ ಅವರಿಗೆ ವೃತ್ತಿಪರ ಜಾಲವಿರಲಿಲ್ಲ. ಆದರೆ ಆ ಸಮಯದಲ್ಲಿ, ನನಗೆ ಅನುಮಾನವಿರಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಮೊನಾಲಿಸಾಳ ಮದುವೆಯ ಬಗ್ಗೆ ತನಗೆ ಏನೂ ತಿಳಿದಿಲ್ಲ. ಮೊನಾಲಿಸಾಳ ತಂದೆ ತನ್ನ ಸಂಬಂಧಿಯನ್ನು ಮದುವೆಯಾಗಬೇಕೆಂದು ಬಯಸಿದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೊನಾಲಿಸಾ ಹೇಳಿದ್ದಾರೆ. ಆದರೆ ಮಿಶ್ರಾ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅಂತಹ ಸಮಸ್ಯೆಯ ಬಗ್ಗೆ ಎಂದಿಗೂ ಕೇಳಿರಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications