Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಾರ್ಚ್ 17ರಂದು ಮಂಗಳವಾರ ಸಂಜೆ ಧಾರಾಕಾರ ಮಳೆಯಾಗಿದೆ. ಕಳೆದ ಒಂದು ತಿಂಗಳ ಅವಧಿಯಿಂದಲೂ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನವು ಹೆಚ್ಚಾಗಿತ್ತು. ಇದೀಗ ಕಳೆದ ಎರಡು ದಿನಗಳಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದ್ದು ತಂಪಾದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಇನ್ನೂ ಎರಡರಿಂದ ಮೂರು ದಿನಗಳ ಕಾಲ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಯುಗಾದಿಗೆ ಮೊದಲ ಮಳೆ ಇದಾಗಿದ್ದು ರಾಜ್ಯಕ್ಕೆ ಶುಭಸೂಚಕ ಎಂದು ಹಿರಿಯರು ಪರಿಗಣಿಸಿದ್ದಾರೆ. ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.

ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುಂಚಿತವಾಗಿ ಉತ್ತಮ ಮಳೆ ಆಗಿದೆ. ಆಲಿಕಲ್ಲು ಸಹಿತ ಭಾರೀ ಮಳೆ ವಿವಿಧ ಪ್ರದೇಶಗಳಲ್ಲಿ ಮುಂದುವರಿದಿದೆ. ಬೆಂಗಳೂರಿನ ಯಲಹಂಕ ಭಾಗದಲ್ಲಿ ಅರ್ಧಗಂಟೆಗೂ ಹೆಚ್ಚು ಸಮಯದಿಂದ ಭಾರೀ ಮಳೆ ಆಗುತ್ತಿದೆ. ಬಸವನಗುಡಿ, ಕೆಂಗೇರಿ ಹಾಗೂ ಚೌಡೇಶ್ವರಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಕಳೆದ ಹಲವು ದಿನಗಳಿಂದ ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದ ಜನ ನಿರಾಳರಾಗಿದ್ದಾರೆ.
ಉತ್ತರ ಒಳನಾಡು ಕರ್ನಾಟಕದಿಂದ ಮನ್ನಾರ್ ಕೊಲ್ಲಿವರೆಗೆ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ತಮಿಳುನಾಡಿನ ಒಳನಾಡು ಪ್ರದೇಶಗಳ ಮೇಲೆ, ಸುಮಾರು 0.9 ಕಿ.ಮೀ ಎತ್ತರದಲ್ಲಿ ಸಮುದ್ರಮಟ್ಟದ ತೊಟ್ಟಿ ನಿರಂತರವಾಗಿ ವಿಸ್ತರಿಸಿದೆ. ಉತ್ತರ ಶ್ರೀಲಂಕಾ ಕರಾವಳಿಯಿಂದ ನೈಋತ್ಯ ಬಂಗಾಳ ಕೊಲ್ಲಿ ಮೂಲಕ ಕೊಮೊರಿನ್ ಪ್ರದೇಶದವರೆಗೆ, ಮನ್ನಾರ್ ಕೊಲ್ಲಿಯ ಬಳಿ ಸುಮಾರು 3.1 ಕಿ.ಮೀ ಎತ್ತರದಲ್ಲಿ ಚಂಡಮಾರುತ ಪರಿಚಲನೆ (trough) ಕಂಡುಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
Bengaluru Rain: ಬೆಂಗಳೂರಿನಲ್ಲಿ ಹೇಗಿದೆ ಹವಾಮಾನ
ಚಂಡಮಾರುತ ಪರಿಚಲನೆಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರರಿಂದ ನಾಲ್ಕು ದಿನಗಳ ಅವಧಿಗೆ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆ ಅವಧಿಯಲ್ಲಿ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮಳೆ ಆಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಹಾಗೂ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮುಂದಿನ 48 ಗಂಟೆ ಅವಧಿಯಲ್ಲಿ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಮಿಂಚು - ಗುಡುಗು ಸಹಿತ ಮಳೆ ಆಗಲಿದೆ. ಇನ್ನು ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಹಾಗೂ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.












Click it and Unblock the Notifications