ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಕಿಮ್ ಜಾಂಗ್ ಉನ್ ಭಯ ಶುರುವಾಯ್ತು | Kim Jong Un
ಉತ್ತರ ಕೊರಿಯಾ ಅನ್ನೋ ದೇಶ ಎಷ್ಟು ಚಿಕ್ಕದಾಗಿ ಇದೆಯೋ ಅಷ್ಟೇ ದೊಡ್ಡದಾಗಿ ಹವಾ ಇಟ್ಟಿದ್ದು, ಪಾಶ್ಚಿಮಾತ್ಯ ದೇಶಗಳು ಕೂಡ ಉತ್ತರ ಕೊರಿಯಾ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ಇದೆ. ಒಂದು ಕಡೆ ಪದೇ ಪದೇ ತನ್ನ ಬಳಿ ಇರುವ ಪರಮಾಣು ಸಾಮರ್ಥ್ಯದ ಕ್ಷಿಪಣಿ ಹಾಗೂ ಪರಮಾಣು ಅಸ್ತ್ರದ ರಾಶಿ ಹೊರಗೆ ತೆಗೆದು ಕಿಮ್ ಹವಾ ಎಬ್ಬಿಸುತ್ತಾನೆ. ಆದರೆ ಈ ಬಾರಿ ಇರಾನ್ ವಿರುದ್ಧ ಭೀಕರವಾಗಿ ಯುದ್ಧ ನಡೆಯುವ ಸಮಯದಲ್ಲೇ ರೊಚ್ಚಿಗೆದ್ದು, ಜಪಾನ್ ಹಾಗೂ ದಕ್ಷಿಣ ಕೊರಿಯಾ ಎದೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದಾನೆ ಈ ಸರ್ವಾಧಿಕಾರಿ. ಇಡೀ ಜಗತ್ತು ಇರಾನ್ ಸಂಘರ್ಷದ ಹಿನ್ನೆಲೆ, ಮಧ್ಯಪ್ರಾಚ್ಯದ ಕಡೆಗೆ ಗಮನ ಹರಿಸಿರುವ ಸಮಯದಲ್ಲಿ ಉತ್ತರ ಕೊರಿಯಾ ಬೇರೆ ಏನೋ ಸ್ಕೆಚ್ ಹಾಕಿ ಕುಳಿತಂತೆ ಕಾಣುತ್ತಿದೆ.
ದಕ್ಷಿಣ ಕೊರಿಯಾ & ಜಪಾನ್ ದೇಶಗಳು ಉತ್ತರ ಕೊರಿಯಾಗೆ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಇದ್ದು, ತುಂಬಾ ಸುಲಭವಾಗಿ ಉತ್ತರ ಕೊರಿಯಾ ಈ ದೇಶಗಳ ಮೇಲೆ ದಾಳಿ ಮಾಡಬಹುದು. ಇದೇ ಕಾರಣಕ್ಕೆ ಪರಮಾಣು ಸಾಮರ್ಥ್ಯ ಹೊಂದಿರುವ ಉತ್ತರ ಕೊರಿಯಾ ದೇಶದಿಂದ ದಕ್ಷಿಣ ಕೊರಿಯಾ & ಜಪಾನ್ ದೇಶಗಳನ್ನು ರಕ್ಷಣೆ ಮಾಡಲು ಅಮೆರಿಕ ಕೂಡ ಭಾರಿ ದೊಡ್ಡ ಮಟ್ಟದಲ್ಲಿ ಭದ್ರತೆಯನ್ನೂ ಒದಗಿಸುತ್ತಿದೆ. ಇದಕ್ಕಾಗಿ ಅಮೆರಿಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಪ್ರತಿವರ್ಷವೂ ಖರ್ಚು ಮಾಡುತ್ತಾ ಬಂದಿದೆ.

ಕ್ಷಿಪಣಿ ರಕ್ಷಣಾ ವ್ಯವಸ್ಥೆಯೂ ಇಲ್ಲ
ಆದರೆ ಯಾವಾಗ ಇರಾನ್ ವಿರುದ್ಧ ಅಮೆರಿಕ ಯುದ್ಧ ಶುರು ಮಾಡಿತ್ತೋ ಆ ನಂತರ ದಕ್ಷಿಣ ಕೊರಿಯಾ & ಜಪಾನ್ ದೇಶಗಳ ರಕ್ಷಣೆಗೆ ಎಂದು ಅಮೆರಿಕ ನಿಯೋಜನೆ ಮಾಡಿದ್ದ ಪಡೆಗಳು, ಶಸ್ತ್ರಾಸ್ತ್ರಗಳು ದೊಡ್ಡ ಪ್ರಮಾಣದಲ್ಲಿ ಇರಾನ್ ಕಡೆ ಬರುತ್ತಿವೆ. ಅದರಲ್ಲೂ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಕೂಡ ಇಲ್ಲಿಂದ ಹೊರಟ ಕಾರಣಕ್ಕೆ ಉತ್ತರ ಕೊರಿಯಾ ನೇರವಾಗಿ ತಮ್ಮ ಮೇಲೆ ದಾಳಿ ಮಾಡಿ ವಿನಾಶ ಸೃಷ್ಟಿ ಮಾಡಬಹುದು ಎಂಬ ಆತಂಕ ಕಾಡುತ್ತಿದೆ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಿಗೆ.
ಇದಕ್ಕೆ ತಕ್ಕಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ದೊಡ್ಡ ಪ್ರಮಾಣದಲ್ಲಿ ಸಾಲು ಸಾಲು ಕ್ಷಿಪಣಿ ಪ್ರಯೋಗವನ್ನೂ ನಡೆಸುತ್ತಿದ್ದಾನೆ. ಇದೆಲ್ಲಾ ನೋಡುತ್ತಿದ್ದರೆ ಜಪಾನ್ ಮತ್ತು ದಕ್ಷಿಣ ಕೊರಿಯಾದ ಮೇಲೆ ಯಾವ ಕ್ಷಣ ಬೇಕಾದರೂ ದಾಳಿ ಆಗಬಹುದು ಎನ್ನುವ ಆತಂಕ ಏಷ್ಯಾ ಭಾಗದಲ್ಲಿ ಮೂಡಿದೆ. ಇದೇ ಕಾರಣಕ್ಕೆ ಎರಡೂ ದೇಶಗಳು ತಮ್ಮ ತಮ್ಮ ಗಡಿ ಭಾಗದಲ್ಲಿ ಇದೀಗ ಅಲರ್ಟ್ ಆಗಿ ನಿಂತಿದ್ದು, ಕಠಿಣ ಪರಿಸ್ಥಿತಿ ಎದುರಿಸಲು ಸಿದ್ಧತೆ ಕೂಡ ಸಾಗಿದೆ.
ಕಿಮ್ ವಿರುದ್ಧ ಮಾತನಾಡದ ಅಮೆರಿಕ
ಅಮೆರಿಕ ಜಗತ್ತಿನ ದೊಡ್ಡಣ್ಣ & ಬಲಿಷ್ಠ ಸೇನೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಂಡಿದೆ. ಇದೇ ಕಾರಣಕ್ಕೆ ತಮ್ಮ ವಿರುದ್ಧ ಮಾತನಾಡುವ ಯಾವುದೇ ದೇಶಕ್ಕೆ ಬುದ್ಧಿ ಕಲಿಸದೆ ಬಿಡುವುದಿಲ್ಲ ಈ ಅಮೆರಿಕ. ಇರಾನ್ ವಿಚಾರದಲ್ಲಿ ಕಿರಿಕ್ ಶುರುವಾಗಿದ್ದು ಕೂಡ ಇದೇ ಕಾರಣಕ್ಕೆ, ಹೀಗಿದ್ದಾಗ ಕೂಡ ಅಮೆರಿಕ ಮಾತ್ರ ಉತ್ತರ ಕೊರಿಯಾ ವಿರುದ್ಧ ಮಾತನಾಡುತ್ತಿಲ್ಲ. ಅದರಲ್ಲೂ ಪರಮಾಣು ಅಸ್ತ್ರಗಳ ರಾಶಿಯನ್ನೇ ಹೊಂದಿರುವ ಕಿಮ್ ಜಾಂಗ್ ಉನ್ ಬಗ್ಗೆ ಅಮೆರಿಕ ಯಾಕೆ ಮಾತನಾಡುತ್ತಿಲ್ಲ? ಎಂದು ಜನರು ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಶ್ನೆ ಕೇಳುತ್ತಿದ್ದಾರೆ. ಇದು ಇನ್ನಷ್ಟು ತಿಕ್ಕಾಟಕ್ಕೂ ಇದೀಗ ವೇದಿಕೆಯನ್ನ ಒದಗಿಸುತ್ತಿದ್ದು, ಕಿಮ್ ಜಾಂಗ್ ಉನ್ ನಡೆ ಬಗ್ಗೆ ಅಕ್ಕಪಕ್ಕದ ದೇಶಗಳಿಗೆ ಭಾರಿ ಚಿಂತೆ ಶುರುವಾಗಿದೆ.












Click it and Unblock the Notifications