Basangouda Patil Yatnal: ಅಮಾನತು ಆದೇಶ ಹಿಂಪಡೆಯಲು ಮನವಿ ಪತ್ರ ಬರೆದ ಯತ್ನಾಳ್ !
Basangouda Patil Yatnal: ವಿಜಯಪುರ: ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದಲೂ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿವೆ. ಬಿಜೆಪಿ ಹೈಕಮಾಂಡ್ ಈಗಾಗಲೇ ಯತ್ನಾಳ್ ಅವರನ್ನು ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿ ಆದೇಶ ಮಾಡಿದೆ. ಆದರೆ ಇಲ್ಲಿಯ ವರೆಗೆ ಬಿಜೆಪಿ ಹೈಕಮಾಂಡ್ ಆಗಲಿ ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರಾಗಲಿ ಯತ್ನಾಳ್ ಅವರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಯತ್ನಾಳ್ ಅವರು ಮಾತ್ರ ಬಿಜೆಪಿಗೆ ಮರಳಿ ಬರುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಅವರು ಮಾಡಿರುವ ಕೆಲವು ಪ್ರಮುಖ ಟ್ವೀಟ್‌ಗಳೇ ಸಾಕ್ಷಿ. ಅಲ್ಲದೇ ಮನವಿ ಪತ್ರವೊಂದನ್ನು ಸಹ ಬರೆದಿದ್ದಾರೆ.
ಬಿಜೆಪಿಯಿಂದ ಉಚ್ಚಾಟನೆಯಾಗಿದ್ದರೂ ಯತ್ನಾಳ್ ಅವರು ಬಿಜೆಪಿ ಪರವಾದ ಕೆಲಸಗಳನ್ನು ಮಾಡುವುದನ್ನು ಮುಂದುವರಿಸಿದ್ದಾರೆ. ಅಷ್ಟೇ ಅಲ್ಲ ಅಮಾನತು ಆಗಿರುವ ಬಿಜೆಪಿಯ 18 ಶಾಸಕರ ಪರವಾಗಿಯೂ ಅವರು ಪತ್ರ ವ್ಯವಹಾರ ನಡೆಸಿದ್ದಾರೆ. ಈ ಬೆಳವಣಿಗೆಗಳು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಂದುವರಿದು ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರಗಳನ್ನು ಮೆಚ್ಚಿಕೊಂಡು ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ರೀತಿಯಲ್ಲಿ ಯತ್ನಾಳ್ ಅವರು ಪೋಸ್ಟ್ ಮಾಡುತ್ತಿದ್ದಾರೆ.

ಈ ಮೂಲಕ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದ್ದು. ಬಿಜೆಪಿಗೆ ಮರಳುವ ಆಸೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆಪ್ತರು ಹಾಗೂ ಕೆಲವರು ಸಹ ಅವರು ಬಿಜೆಪಿಗೆ ಮರಳಿ ಬರಲಿದ್ದಾರೆ ಎಂದು ಹೇಳುತ್ತಿರುವುದು ಅಚ್ಚರಿಗೂ ಕಾರಣವಾಗಿದೆ.
ಬಿಜೆಪಿಯ 18 ಶಾಸಕರ ಪರವಾಗಿ ಪತ್ರ
ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯ 18 ಜನ ಅಮಾನತು ಆಗಿರುವ ಶಾಸಕರ ಪರವಾಗಿ ಪತ್ರ ಬರೆದಿದ್ದಾರೆ. ಕರ್ನಾಟಕ ವಿಧಾನಸಭೆಯ 18 ಶಾಸಕರ ಅಮಾನತು ಮರುಪರಿಶೀಲನೆ ಮಾಡಬೇಕು ಎಂದು ಸ್ವೀಕರ್ ಯು.ಟಿ ಖಾದರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಶೇ 4% ಮೀಸಲಾತಿ ಮಸೂದೆ ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (KTPP) ಕಾಯ್ದೆಗೆ ತಿದ್ದುಪಡಿ ವಿರುದ್ಧದ ಪ್ರತಿಭಟನೆ ಮಾಡಿದ ನಂತರ ಕರ್ನಾಟಕ ವಿಧಾನಸಭೆಯ 18 ಶಾಸಕರನ್ನು ಅಮಾನತುಗೊಳಿಸಲಾಗಿದೆ. ನಿಮಗೆ ತಿಳಿದಿರುವಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ಆರೋಗ್ಯಕರ ಚರ್ಚೆಗಳನ್ನು ಮಾಡುವ ಅವಶ್ಯಕತೆ ಇದೆ. ಚರ್ಚೆಗಳು ಹಾಗೂ ವಿಧಾನಸಭೆಯ ಒಟ್ಟಾರೆ ಕಾರ್ಯವೈಖರಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಯತ್ನಾಳ್ ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಪ್ರತಿಭಟನೆಗಳು ಜನರ ಧ್ವನಿಯನ್ನು ಪ್ರತಿನಿಧಿಸಿದೆ. ಅಲ್ಲದೇ ವಿರೋಧ ಪಕ್ಷದ ಕರ್ತವ್ಯದ ಅಭಿವ್ಯಕ್ತಿ ಪ್ರದರ್ಶನವಾಗಿತ್ತು. ಸದನದಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳುವ ಎನ್ನುವ ಮಹತ್ವದ ಸಂದೇಶವನ್ನು ಒಪ್ಪೊಕೊಳ್ಳೋಣ.ಆದರೆ, 18 ಶಾಸಕರ ಮೇಲೆ ಆರು ತಿಂಗಳ ಅಮಾನತು ಹೇರುವುದು ಅತಿಯಾದ ಹಾಗೂ ಗಂಭೀರವಾದ ಕಠಿಣ ಕ್ರಮವಾಗಿದೆ ಎಂದು ಅನಿಸುತ್ತದೆ.
ಈ ರೀತಿ ಅಮಾನತು ಆಗಿರುವವರಲ್ಲಿ ಬಹಳಷ್ಟು ಜನ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಈ ದೀರ್ಘಕಾಲದ ಅಮಾನತು ಅವರು ಸೇವೆ ಸಲ್ಲಿಸುವ ಕ್ಷೇತ್ರಗಳ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಲಿದೆ. ಭಿನ್ನಾಭಿಪ್ರಾಯ ಮತ್ತು ಚರ್ಚೆಯನ್ನು ಮೌನಗೊಳಿಸುವ ಬದಲು ಪ್ರೋತ್ಸಾಹಿಸಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬೆಳವಣಿಗೆ ಆಘಾತಕಾರಿಯಾಗಿದೆ.
ಅಲ್ಲದೇ, ಅಮಾನತು ಆಗಿರುವ 18 ಜನ ಶಾಸಕರು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸಮಸ್ಯೆಯಿಂದಾಗಿ ಈಗಾಗಲೇ ಗಮನಾರ್ಹ ಒತ್ತಡ ಮತ್ತು ಪರಿಣಾಮಗಳನ್ನು ಎದುರಿಸಿದ್ದಾರೆ. ಹೀಗಾಗಿ, ಈ ಶಾಸಕರ ಅಮಾನತು ಅವಧಿಯನ್ನು ಮರುಪರಿಶೀಲನೆ ಮಾಡುವ ಮೂಲಕ ಪರ್ಯಾಯ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಅಮಾನತು ರದ್ದುಪಡಿಸುವುದರಿಂದ ಪ್ರಜಾಪ್ರಭುತ್ವ ತತ್ವಗಳಿಗೆ ವಿಧಾನಸಭೆಯ ಬದ್ಧತೆಯನ್ನು ಕಾಪಾಡಿಕೊಂಡಂತೆ ಆಗುತ್ತದೆ.
ಎಲ್ಲಾ ಚುನಾಯಿತ ಪ್ರತಿನಿಧಿಗಳು ತಮ್ಮ ಮೇಲೆ ನಂಬಿಕೆ ಇಟ್ಟಿರುವ ಜನರ ಕಡೆಗೆ ತಮ್ಮ ಜವಾಬ್ದಾರಿಗಳನ್ನು ಪೂರೈಸಬಹುದು. ನೀವು ಈ ವಿನಂತಿಯನ್ನು ಸೂಕ್ತವಾಗಿ ಪರಿಗಣಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಶಾಸಕಾಂಗ ನ್ಯಾಯವನ್ನು ಎತ್ತಿಹಿಡಿಯುವ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುದೀರ್ಘ ಪತ್ರವನ್ನು ಬರೆದಿದ್ದಾರೆ.
ಇನ್ನು ಇದೇ ರೀತಿ ಬಿಜೆಪಿಯ ಪರವಾಗಿ ಹಲವು ಟ್ವೀಟ್‌ಗಳನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರಗಳ ಬಗ್ಗೆ ಯತ್ನಾಳ್ ಅವರು ಮೆಚ್ಚುಗೆ ಸೂಚಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ಯತ್ನಾಳ್ ಅವರು ಮೊದಲಿನಿಂದಲೂ ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿದ್ದು. ಬಿಜೆಪಿಯಿಂದ ಉಚ್ಚಾಟನೆಯ ನಂತರವೂ ಟ್ವೀಟ್ ಮಾಡುವುದು ಮುಂದುವರಿಸಿದ್ದಾರೆ. ಆದರೆ ಇದರಲ್ಲಿ ಅಚ್ಚರಿಯ ವಿಷಯವೆಂದರೆ ಅವರು ಬಿಜೆಪಿಯ ಮೂಲ ಸಿದ್ಧಾಂತ ಅಥವಾ ಕೇಂದ್ರ ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿಲ್ಲ.
ಯತ್ನಾಳ್ ಮರಳಿ ಬಿಜೆಪಿಗೆ ಬರಲಿ: ಪತ್ರ ಚಳವಳಿ
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಲಿಂಗಾಯತ ವಕೀಲರು, ಪಂಚಮಸಾಲಿಯ ಕೆಲವು ಮುಖಂಡರು ಧಾರವಾಡದಲ್ಲಿ ಪತ್ರ ಚಳವಳಿಯನ್ನು ನಡೆಸಿದ್ದಾರೆ.
ಯತ್ನಾಳ್ ಅವರು ನೇರ ನುಡಿಯ ನಿಷ್ಠುರ ವ್ಯಕ್ತಿ. ವಾಜಪೇಯಿ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದಂತವರು. ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದಕ್ಕೆ ಲಕ್ಷಾಂತರ ಹಿಂದೂ ಕಾರ್ಯಕರ್ತರು ನೊಂದುಕೊಂಡಿದ್ದಾರೆ.
ಯತ್ನಾಳ ಅವರಿಲ್ಲದೇ ಬಿಜೆಪಿ ಬರುವ ದಿನಗಳಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ. ಲಕ್ಷಾಂತರ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದು ಅತೀವ ನೋವುಂಟು ಮಾಡಿದೆ. ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಾದರೆ ಯತ್ನಾಳ ಅವರಂತಹ ಶಕ್ತಿ ಬಿಜೆಪಿಯಲ್ಲಿ ಇರಲೇಬೇಕು. ಪಕ್ಷದಲ್ಲಿರುವ ಸಣ್ಣಪುಟ್ಟ ವೈಮನಸ್ಸುಗಳನ್ನು ವರಿಷ್ಠರು ಕುಳಿತು ಬಗೆಹರಿಸುವ ಕೆಲಸ ಮಾಡಬೇಕು. ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಕರೆತರಲೇಬೇಕು ಎಂದು ಲಿಂಗಾಯತ ವಕೀಲರು, ಹಿಂದೂ ಕಾರ್ಯಕರ್ತರು ಆಗ್ರಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.












Click it and Unblock the Notifications