ಇಂದಿರಾ ಕ್ಯಾಂಟೀನ್ ಊಟದಲ್ಲಿ ಇಲಿಗಳ ನಂತರ ಹುಳುಗಳ ಸರದಿ
ವಿಜಯಪುರ, ಡಿಸೆಂಬರ್ 10: ಇತ್ತೀಚೆಗಷ್ಟೇ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿ ಉದ್ಘಾಟನೆಗೊಂಡಿದ್ದ ಇಂದಿರಾ ಕ್ಯಾಂಟೀನ್ ಊಟದಲ್ಲಿ ಹುಳುಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಕೆಲವು ತಿಂಗಳ ಹಿಂದಷ್ಟೇ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ನ ಸಾಂಬಾರ್ ತಪ್ಪಲೆಯಲ್ಲಿ ಇಲಿ ಪತ್ತೆಯಾಗಿತ್ತು. ಕೇವಲ ಎರಡು ದಿನಗಳ ಹಿಂದೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡಿತ್ತು.
ಇಂದಿರಾ ಕ್ಯಾಂಟೀನ್‌ಗೆ ಬೆಳಗಿನ ಉಪಹಾರ ಸೇವಿಸಲೆಂದು ಗ್ರಾಹಕರೊಬ್ಬರು ಬಂದಾಗ ಅವರು ಪಡೆದ ಕೇಸರಿಬಾತ್‌ನಲ್ಲಿ ಹತ್ತಾರು ಹುಳುಗಳು ಕಾಣಿಸಿಕೊಂಡಿದ್ದು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕೆಲ ಕಾಲ ಗಲಾಟೆ ನಡೆದು ಕ್ಯಾಂಟೀನ್ ಸ್ಥಗಿತಗೊಳಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಂಸಿ ಮನಗೂಳಿ ಈ ಕ್ಯಾಂಟೀನ್ ಉದ್ಘಾಟಿಸಿದ್ದರು. ಉದ್ಘಾಟನೆ ದಿನ ಸಚಿವರು, ಜನಪ್ರತಿನಿಧಿಗಳಿಗೆ ಅಡುಗೆ ಸಿಬ್ಬಂದಿ ಹೊರಗಿನ ಉಪಹಾರ ತಂದುಕೊಟ್ಟಿದ್ದಾರೆ.
ವೇಳಾಪಟ್ಟಿಯಂತೆ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ನಿಗದಿತ ಅವಧಿಗಿಂತ ತಡವಾಗಿ ಕ್ಯಾಂಟೀನ್ ತೆರೆಯಲಾಗುತ್ತದೆ. ಅವಧಿ ಮುಗಿಯುವ ಮುನ್ನವೇ ಬಾಗಿಲು ಹಾಕುತ್ತಾರೆ.












Click it and Unblock the Notifications