54 ವರ್ಷದ ಮಾಜಿ ಸಿಎಂ ಜೊತೆ ರಹಸ್ಯವಾಗಿ ಎರಡನೇ ಮದುವೆಯಾದ 'ಟಗರು' ಖ್ಯಾತಿಯ ಕಾನ್ಸ್‌ಟೇಬಲ್ ಸರೋಜಾ
ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ 'ಟಗರು' ಸಿನಿಮಾದ ನಟಿ ರಹಸ್ಯವಾಗಿ ಮದುವೆಯಾಗಿದ್ದಾರೆ. ಈ ಸಿನಿಮಾದಲ್ಲಿ "ಕಾನ್ಸ್‌ಟೇಬಲ್ ಸರೋಜಾ" ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ತ್ರಿವೇಣಿ ರಾವ್ ಅವರು ದೇಶದ ರಾಜಕೀಯ ಲೋಕದ ಪ್ರಭಾವಿ ನಾಯಕರೊಬ್ಬರ ಕೈ ಹಿಡಿಯುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ತ್ರಿಪುರಾದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಬಿಜೆಪಿ ಸಂಸದರೂ ಆಗಿರುವ 54 ವರ್ಷದ ಬಿಪ್ಲಬ್ ಕುಮಾರ್ ದೇವ್ (Biplab Kumar Deb) ಅವರೊಂದಿಗೆ ತ್ರಿವೇಣಿ ರಾವ್ ಗುಟ್ಟಾಗಿ ಎರಡನೇ ಮದುವೆಯಾಗಿದ್ದು, ಈ ರಹಸ್ಯ ವಿವಾಹದ ಸುದ್ದಿ ಈಗ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ದೇಶದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ದೆಹಲಿಯಲ್ಲಿ ನಡೆದ ರಹಸ್ಯ ಕಲ್ಯಾಣ
ವರದಿಗಳ ಪ್ರಕಾರ ಕಳೆದ ಜೂನ್ 19ರಂದು ನವದೆಹಲಿಯಲ್ಲಿ ಆಪ್ತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಖಾಸಗಿ ವಿವಾಹ ಮಹೋತ್ಸವ ನಡೆದಿದೆ. ತೀರಾ ರಹಸ್ಯವಾಗಿ ನಡೆದ ಈ ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರವೇ ಈ ಮದುವೆಯ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ ಮೂಲದ, ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ಈ ನಟಿ ದಿಢೀರನೆ ಮಾಜಿ ಸಿಎಂ ಜೊತೆ ಹಸೆಮಣೆ ಏರಿರುವುದು ಅಚ್ಚರಿಗೆ ಕಾರಣವಾಗಿದೆ.
ಮಾಜಿ ಸಿಎಂಗೆ ಇದು ಎರಡನೇ ಮದುವೆ
ಬಿಪ್ಲಬ್ ಕುಮಾರ್ ದೇವ್ ಅವರು ಈ ಹಿಂದೆ ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ನಿತಿ ದೇವ್ ಅವರನ್ನು ವಿವಾಹವಾಗಿದ್ದರು. ಇವರಿಬ್ಬರ ಮದುವೆಯು 2001ರಲ್ಲಿ ನವದೆಹಲಿಯ ಆರ್ಯ ಸಮಾಜ ಮಂದಿರದಲ್ಲಿ ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ನಡೆದಿತ್ತು ಎಂದು ಕೋರ್ಟ್ ದಾಖಲೆಗಳು ತಿಳಿಸುತ್ತವೆ. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಆದರೆ, ದಾಂಪತ್ಯದಲ್ಲಿ ಮೂಡಿದ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ 2022ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
₹1 ಕೋಟಿ ಜೀವನಾಂಶ
ನಂತರ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ನ್ಯಾಯಾಲಯದ ಒಪ್ಪಂದದ ಪ್ರಕಾರ, ನಿತಿ ದೇವ್ ಅವರಿಗೆ ಒಟ್ಟು 1 ಕೋಟಿ ರೂಪಾಯಿಗಳನ್ನು ಜೀವನಾಂಶದ ರೂಪದಲ್ಲಿ ನೀಡಲು ನಿರ್ಧರಿಸಲಾಗಿತ್ತು. ಈ ಮೊತ್ತವನ್ನು ತಲಾ 50 ಲಕ್ಷ ರೂಪಾಯಿಗಳಂತೆ ಎರಡು ಕಂತುಗಳಲ್ಲಿ ಪಾವತಿಸುವ ಮೂಲಕ ಎರಡು ದಶಕಗಳಿಗೂ ಹೆಚ್ಚು ಕಾಲದ ದಾಂಪತ್ಯ ಜೀವನಕ್ಕೆ ಕಾನೂನುಬದ್ಧವಾಗಿ ತೆರೆ ಎಳೆಯಲಾಗಿತ್ತು. ಈ ವಿಚ್ಛೇದನ ಪ್ರಕ್ರಿಯೆ ಮುಗಿದ ಕೆಲವೇ ತಿಂಗಳುಗಳಲ್ಲಿ ಬಿಪ್ಲಬ್ ದೇವ್ ಅವರು ಎರಡನೇ ಮದುವೆ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಅಗರ್ತಲಾದಲ್ಲಿ ಅದ್ಧೂರಿ ರಿಸೆಪ್ಷನ್
ಜೂನ್ 24ರಂದು ತ್ರಿಪುರಾದ ಅಗರ್ತಲಾದಲ್ಲಿರುವ ಪ್ರಸಿದ್ಧ 'ಹೋಟೆಲ್ ಪೋಲೋ ಟವರ್ಸ್'ನಲ್ಲಿ ಈ ನವದಂಪತಿಯ ಭವ್ಯ ಆರತಕ್ಷತೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಬಿಪ್ಲಬ್ ದೇವ್ ಅವರು ರಾಜಕೀಯ ಪಕ್ಷಗಳ ಭೇದ ಮರೆತು ದೇಶದ ಪ್ರಮುಖ ನಾಯಕರು, ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದಾರೆ.
ಈ ಅದ್ಧೂರಿ ರಿಸೆಪ್ಷನ್‌ನಲ್ಲಿ ಭಾಗಿಯಾಗಲಿರುವ ಪ್ರಮುಖ ಗಣ್ಯರ ಪೈಕಿ ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ, ಮಹಾರಾಷ್ಟ್ರ ರಾಜ್ಯಪಾಲ ಹಾಗೂ ತ್ರಿಪುರಾದ ಮಾಜಿ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ, ನವದೆಹಲಿಯ ಹಿರಿಯ ಬಿಜೆಪಿ ನಾಯಕರು, ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ.
ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ
ಆಪ್ತ ಮೂಲಗಳ ಮಾಹಿತಿಯ ಪ್ರಕಾರ, ಆರತಕ್ಷತೆಯಲ್ಲಿ ಪಾಲ್ಗೊಳ್ಳುವ ಮುನ್ನ ಬಿಪ್ಲಬ್ ಕುಮಾರ್ ದೇವ್ ಅವರು ತಮ್ಮ ಪತ್ನಿ ಜೊತೆ ಉದಯಪುರದಲ್ಲಿರುವ ಪ್ರಸಿದ್ಧ 'ತ್ರಿಪುರಾ ಸುಂದರಿ ದೇವಸ್ಥಾನ'ಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಹೊಸ ಜೀವನಕ್ಕಾಗಿ ದೇವಿಯ ಆಶೀರ್ವಾದ ಪಡೆಯಲಿದ್ದಾರೆ. ಸ್ಯಾಂಡಲ್‌ವುಡ್ ತಾರೆ ಹಾಗೂ ಈಶಾನ್ಯ ಭಾರತದ ಪ್ರಭಾವಿ ರಾಜಕಾರಣಿಯ ಈ ಹೊಸ ಪಯಣ ಸದ್ಯ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.













Click it and Unblock the Notifications