ನೀವು ಕೂಡ ಈ ತಪ್ಪು ಮಾಡುತ್ತಿದ್ದೀರಾ? ರೈಲು ಪ್ರಯಾಣಿಕರು ತಿಳಿಯಲೇಬೇಕಾದ 7 ಪ್ರಮುಖ ನಿಯಮಗಳು
ವಿಶ್ವದ ಅತಿದೊಡ್ಡ ಸಾರಿಗೆ ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೆಯನ್ನು ಪ್ರತಿದಿನ ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಆದರೆ, ಬಹುತೇಕ ಪ್ರಯಾಣಿಕರು ಕೇವಲ ಟಿಕೆಟ್ ಬುಕಿಂಗ್ ಮತ್ತು ಪ್ರಯಾಣದ ಕಡೆಗಷ್ಟೇ ಗಮನ ಹರಿಸುತ್ತಾರೆಯೇ ವಿನಃ, ರೈಲ್ವೆಯ ಪ್ರಮುಖ ನಿಯಮಗಳು ಮತ್ತು ತಮಗಿರುವ ಹಕ್ಕುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ರೈಲ್ವೆ ಇಲಾಖೆಯ ಈ ನಿಯಮಗಳ ಬಗ್ಗೆ ಸರಿಯಾದ ಅರಿವಿದ್ದರೆ, ಪ್ರಯಾಣದ ವೇಳೆ ಎದುರಾಗುವ ಅನಗತ್ಯ ದಂಡ, ಗೊಂದಲ ಮತ್ತು ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.
1. ಅಧಿಕೃತ ಟಿಕೆಟ್ ಇಲ್ಲದಿದ್ದರೆ ಬೀಳುತ್ತೆ ದಂಡ!
ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ನಾಗರಿಕನೂ ಮಾನ್ಯವಾದ ಟಿಕೆಟ್ ಹೊಂದಿರುವುದು ಅತ್ಯಂತ ಕಡ್ಡಾಯ. ಅದು ಜನರಲ್ ಟಿಕೆಟ್ ಆಗಿರಲಿ ಅಥವಾ ರಿಸರ್ವೇಶನ್ ಟಿಕೆಟ್ ಆಗಿರಲಿ, ಸೂಕ್ತ ದಾಖಲೆ ಇಲ್ಲದೆ ರೈಲು ಹತ್ತುವುದು ಶಿಕ್ಷಾರ್ಹ ಅಪರಾಧವಾಗಿದೆ. ಒಂದು ವೇಳೆ ಟಿಕೆಟ್ ರಹಿತ ಪ್ರಯಾಣ ಕೈಗೊಂಡರೆ, ತಪಾಸಣೆ ನಡೆಸುವ ಅಧಿಕಾರಿಗಳು ನಿಯಮಗಳ ಪ್ರಕಾರ ದಂಡದ ಜೊತೆಗೆ ಹೆಚ್ಚುವರಿ ಪ್ರವಾಸ ಶುಲ್ಕವನ್ನು ವಸೂಲಿ ಮಾಡುತ್ತಾರೆ.

2. ಗುರುತಿನ ಚೀಟಿ ಜೊತೆಯಲ್ಲಿ ಇಟ್ಟುಕೊಳ್ಳಿ
ರಿಸರ್ವೇಶನ್ ಟಿಕೆಟ್‌ನಲ್ಲಿ ಪ್ರಯಾಣಿಸುವವರು ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಪ್ರಯಾಣದ ವೇಳೆ ಟಿಕೆಟ್ ಪರಿಶೀಲಕರು ಗುರುತಿನ ಚೀಟಿ ತೋರಿಸುವಂತೆ ಕೇಳಬಹುದು. ಒಂದೇ ಪಿಎನ್‌ಆರ್ (PNR) ಅಡಿಯಲ್ಲಿ ಗುಂಪು ಟಿಕೆಟ್ ಬುಕ್ ಮಾಡಿದ್ದರೆ, ಕನಿಷ್ಠ ಒಬ್ಬರ ಬಳಿಯಾದರು ಗುರುತಿನ ಚೀಟಿ ಇರಬೇಕು.
3. ಬೋರ್ಡಿಂಗ್ ಸ್ಟೇಷನ್ ಬದಲಾಯಿಸಬಹುದು
ಪ್ರಯಾಣಿಕರ ಯೋಜನೆಗಳು ಕೊನೆಯ ಕ್ಷಣದಲ್ಲಿ ಬದಲಾದರೆ, ರೈಲು ಹೊರಡುವ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬೋರ್ಡಿಂಗ್ ಸ್ಟೇಷನ್ ಬದಲಾಯಿಸಲು ಭಾರತೀಯ ರೈಲ್ವೆ ಅವಕಾಶ ಕಲ್ಪಿಸಿದೆ. ಈ ಅತ್ಯುತ್ತಮ ನಿಯಮದ ಸದುಪಯೋಗ ಪಡೆದುಕೊಂಡು ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಗದಿತ ಮಾರ್ಗದ ಬೇರೆ ಯಾವುದೇ ರೈಲ್ವೆ ನಿಲ್ದಾಣದಿಂದಲೂ ರೈಲು ಹತ್ತಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
4. ಟಿಕೆಟ್ ಬೇಗ ರದ್ದು ಮಾಡಿದರೆ ಹೆಚ್ಚು ಹಣ ವಾಪಸ್
ಟಿಕೆಟ್ ರದ್ದುಪಡಿಸಿದಾಗ ಸಿಗುವ ಮರುಪಾವತಿ ಮೊತ್ತವು ರದ್ದು ಮಾಡುವ ಸಮಯವನ್ನು ಅವಲಂಬಿಸಿರುತ್ತದೆ. ರೈಲು ಹೊರಡುವ ಸಮಯಕ್ಕೂ ಸಾಕಷ್ಟು ಮುಂಚಿತವಾಗಿ ಟಿಕೆಟ್ ರದ್ದು ಮಾಡಿದರೆ ಹೆಚ್ಚು ಹಣ ವಾಪಸ್ ಸಿಗುತ್ತದೆ. ಕೊನೆಯ ಕ್ಷಣದಲ್ಲಿ ರದ್ದು ಮಾಡಿದರೆ ಕಡಿತದ ಪ್ರಮಾಣ ಅಥವಾ ಕೆಲವು ಸಂದರ್ಭಗಳಲ್ಲಿ ಮರುಪಾವತಿ ಸಿಗದೇನೆ ಇರಬಹುದು.
5. ಲಗೇಜ್ ನಿಯಮಗಳನ್ನು ಪಾಲಿಸಿ
ಪ್ರಯಾಣಕ್ಕೆ ಅನುಗುಣವಾಗಿ ಭಾರತೀಯ ರೈಲ್ವೆ ಲಗೇಜ್ ಮಿತಿಯನ್ನು ನಿಗದಿಪಡಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚು ಸಾಮಾನು ಸಾಗಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಬಹುದು. ಆದ್ದರಿಂದ ಪ್ರಯಾಣಕ್ಕೂ ಮುನ್ನ ಲಗೇಜ್ ಮಿತಿಯ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
6. ಮೇಲ್ದರ್ಜೆಗೆ ಅಪ್‌ಗ್ರೇಡ್ ಆಗುವ ಅವಕಾಶ
ಖಾಲಿ ಆಸನಗಳ ಲಭ್ಯತೆ ಮತ್ತು ರೈಲ್ವೆ ನಿಯಮಗಳ ಆಧಾರದ ಮೇಲೆ ಪ್ರಯಾಣಿಕರು ತಮ್ಮ ಪ್ರಯಾಣ ವರ್ಗವನ್ನು ಮೇಲ್ದರ್ಜೆಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶ ಪಡೆದುಕೊಳ್ಳಬಹುದು. ಇತ್ತೀಚಿನ ನಿಯಮ ಬದಲಾವಣೆಗಳಿಂದ ಈ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿದೆ.
7. ಪ್ರಯಾಣದ ವೇಳೆ ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ
ರೈಲು ಪ್ರಯಾಣದ ಅವಧಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿ, ವಿವಾದ ಅಥವಾ ಸಮಸ್ಯೆ ಉಂಟಾದರೆ ಟಿಕೆಟ್ ಪರಿಶೀಲಕರು (TTE) ಹಾಗೂ ರೈಲ್ವೆ ಭದ್ರತಾ ಸಿಬ್ಬಂದಿಯ ನೆರವು ಪಡೆಯಲು ಪ್ರಯಾಣಿಕರಿಗೆ ಮುಕ್ತ ಅವಕಾಶವಿದೆ. ಅಧಿಕೃತವಾಗಿ ದೂರುಗಳನ್ನು ದಾಖಲಿಸಿ, ಕ್ಷಣಾರ್ಧದಲ್ಲಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ರೈಲ್ವೆ ಇಲಾಖೆಯು 'ರೈಲ್ ಮದದ್' (Rail Madad) ಡಿಜಿಟಲ್ ಸೇವೆ ಮತ್ತು ವಿಶೇಷ ಸಹಾಯವಾಣಿ ಸಂಖ್ಯೆಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ಭಾರತೀಯ ರೈಲ್ವೆಯ ಈ ಮೂಲಭೂತ ನಿಯಮಗಳು ಮತ್ತು ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದು ಪ್ರಯಾಣವನ್ನು ಹೆಚ್ಚು ಸುರಕ್ಷಿತ, ಸುಗಮ ಮತ್ತು ಒತ್ತಡರಹಿತವಾಗಿಸುತ್ತದೆ. ಮುಂದಿನ ಬಾರಿ ರೈಲಿನಲ್ಲಿ ಪ್ರಯಾಣಿಸುವ ಮೊದಲು ಈ ನಿಯಮಗಳನ್ನು ನೆನಪಿಟ್ಟುಕೊಂಡರೆ ಅನೇಕ ತೊಂದರೆಗಳಿಂದ ದೂರವಿರಬಹುದು.














Click it and Unblock the Notifications