ಬೆಂಗಳೂರು ಸುತ್ತಮುತ್ತಲಿನ 7 ಅತ್ಯುತ್ತಮ ಪ್ರವಾಸಿ ತಾಣಗಳಿವು!ಶಾಂತ ಪರಿಸರದಲ್ಲಿ ವೀಕೆಂಡ್ ಕಳೆಯಲು ಹೇಳಿ ಮಾಡಿಸಿದ ಜಾಗ
ಕರ್ನಾಟಕದ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಕೊಡಗು ಸದಾ ಮುಂಚೂಣಿಯಲ್ಲಿರುತ್ತದೆ. ಆದರೆ, ಪ್ರತಿ ವೀಕೆಂಡ್ ಬಂದಾಗಲೂ ಒಂದೇ ಜಾಗಕ್ಕೆ ಹೋಗುವ ಬೇರೆ ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ ವಾರಾಂತ್ಯದ ರಜೆಯನ್ನು ಮತ್ತಷ್ಟು ರೋಮಾಂಚನಕಾರಿಯಾಗಿಸಬಹುದು. ಹೌದು, ಬೆಂಗಳೂರಿನ ಸುತ್ತ ಮುತ್ತ ಅನೇಕ ಪ್ರವಾಸ ತಾಣಗಳಿವೆ. ಈ ಸ್ಥಳಗಳಲ್ಲಿ ಜನಸಂದಣೆ ಅಷ್ಟಾಗಿ ಇರುವುದಿಲ್ಲ. ಹಾಗಾಗಿ ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಈ ಜಾಗಗಳಿಗೆ ಭೇಟಿ ನೀಡಿ ನೆಮ್ಮದಿಯ ಕಾಲ ಕಳೆಯಬಹುದು.
ಸಿಲಿಕಾನ್ ಸಿಟಿ ಬೆಂಗಳೂರು ಒಂದು ಅದ್ಭುತ ಪ್ರವಾಸಿ ಭೂಪಟದ ಕೇಂದ್ರಬಿಂದುವಿನಂತಿದೆ. ಇಲ್ಲಿಂದ ಕೆಲವೇ ಗಂಟೆಗಳ ಪ್ರಯಾಣ ಮಾಡಿದರೆ ಮಂಜು ಮುಸುಕಿದ ಬೆಟ್ಟಗಳು, ಐತಿಹಾಸಿಕ ತಾಣಗಳು, ವನ್ಯಜೀವಿ ಧಾಮಗಳು ಮತ್ತು ಪ್ರಶಾಂತ ನದಿತೀರಗಳನ್ನು ತಲುಪಬಹುದು. ಈ ಪ್ರದೇಶಗಳು ಕೂರ್ಗಿನಷ್ಟು ಪ್ರಸಿದ್ಧಿಯಾಗಿಲ್ಲ ನಿಜ, ಆದರೆ ಮನಸ್ಸಿಗೆ ಅಪಾರ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ತಾಣವಾಗುವುದರಲ್ಲಿ ಎರಡು ಮಾತಿಲ್ಲ.
ಎಲ್ಲಾ ಜಂಜಾಟಗಳನ್ನು ಮರೆತು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಯಸುವವರಿಗಾಗಿ ಇದು ಬೆಸ್ಟ್ ವೀಕೆಂಡ್ ತಾಣ :
1. ಯೇಲಗಿರಿ (Yelagiri):
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಈ ಗಿರಿಧಾಮವು ಎಲ್ಲಾ ಗಿರಿಧಾಮಗಳಂತೆ ಜನದಟ್ಟಣೆಯಿಂದ ಕೂಡಿಲ್ಲ. ಇಲ್ಲಿನ ಹಿತಕರವಾದ ಹವಾಮಾನ, ಸುಗಮ ರಸ್ತೆಗಳು ಮತ್ತು ಅತ್ಯಂತ ಪ್ರಶಾಂತವಾದ ವಾತಾವರಣ ರಜಾ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಹೇಳಿ ಮಾಡಿಸಿದ ಹಾಗಿದೆ.

2. ಚಿಕ್ಕಮಗಳೂರು (Chikmagalur):
ಕಾಫಿ ನಾಡು ಚಿಕ್ಕಮಗಳೂರಿನ ಕಡಿದಾದ ಬೆಟ್ಟಗಳು ಮತ್ತು ಹಸಿರು ಕಾಫಿ ತೋಟಗಳು ಪ್ರಕೃತಿ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತವೆ. ಮುಂಜಾನೆಯ ತಂಪಾದ ಗಾಳಿ, ಹಕ್ಕಿಗಳ ಚಿಲಿಪಿಲಿ ಮೈ ಮನ ತಣಿಸುತ್ತದೆ. ಸಂಜೆಯ ಬಿಸಿ ಬಿಸಿ ಕಾಫಿಯ ಸವಿಯೊಂದಿಗೆ ಇಲ್ಲಿನ ಸುಂದರ ಸೂರ್ಯಾಸ್ತವನ್ನು ಕಣ್ಣುಂಬಿಕೊಳ್ಳುವ ಅನುಭವವೇ ಬೇರೆ.
3. ಕೊಳ್ಳಿ ಬೆಟ್ಟಗಳು (Kolli Hills):
ಅಷ್ಟಾಗಿ ಪರಿಚಯಕ್ಕೆ ಬಾರದ ಜಾಗ ಈ ಕೊಳ್ಳಿ ಬೆಟ್ಟ. ದಟ್ಟ ಅರಣ್ಯಕ್ಕೆ ದಾರಿ ಮಾಡಿಕೊಡುವ ಇಲ್ಲಿನ ಹೇರ್‌ಪಿನ್ ತಿರುವುಗಳು, ದಟ್ಟ ಅರಣ್ಯ, ಜಲಪಾತ ಮತ್ತು ಪ್ರಾಚೀನ ದೇವಾಲಯಗಳು ಸಾಹಸಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿನ ಅರಪಾಲೇಶ್ವರ ದೇವಸ್ಥಾನದ ಬಳಿ ಇರುವ 300 ಅಡಿ ಎತ್ತರದ 'ಆಗಾಯ ಗಂಗೈ' ಜಲಪಾತವನ್ನು ಜೀವನದಲ್ಲೊಮ್ಮೆ ವೀಕ್ಷಿಸಲೇಬೇಕು.
4. ಭೀಮೇಶ್ವರಿ (Bheemeshwari):
ಕಾವೇರಿ ನದಿಯ ದಂಡೆಯ ಮೇಲಿರುವ ಭೀಮೇಶ್ವರಿ ನೇಚರ್ ವಾಕ್, ಸಾಹಸ ಕ್ರೀಡೆಗಳು ಮತ್ತು ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಮೊಬೈಲ್ ನೆಟ್‌ವರ್ಕ್ ಜಂಜಾಟದಿಂದ ದೂರವಿದ್ದು, ಪ್ರಶಾಂತವಾಗಿ ಕಾಲ ಕಳೆಯಲು ಇದು ಸೂಕ್ತ ಜಾಗವಾಗಿದೆ.

5. ಕಬಿನಿ (Kabini):
ವನ್ಯಜೀವಿ ಪ್ರೇಮಿಗಳಿಗೆ ಕಬಿನಿ ಅತ್ಯಂತ ನೆಚ್ಚಿನ ತಾಣ. ನಗರದ ಟ್ರಾಫಿಕ್ ಕಿರಿಕಿರಿಯಿಂದ ದೂರ ಉಳಿದು ಆನೆ, ಜಿಂಕೆ ಹಾಗೂ ಚಿರತೆಗಳನ್ನು ಇಲ್ಲಿ ಕಣ್ಣಾರೆ ವೀಕ್ಷಿಸಬಹುದು. ಮುಂಜಾನೆಯ ಜಂಗಲ್ ಸಫಾರಿ ನಗರವಾಸಿಗಳಿಗೆ ಒಂದು ವಿಭಿನ್ನ ಅನುಭವ ನೀಡುತ್ತದೆ.
ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ ಈ ಸುಂದರ ಪ್ರವಾಸಿ ತಾಣಗಳು ವಾರಾಂತ್ಯದ ನೆಮ್ಮದಿಯ ವಿಹಾರಕ್ಕೆ ಹೇಳಿ ಮಾಡಿಸಿದಂತಿವೆ.

6. ಹಂಪಿ (Hampi):
ಭಾರತದ ಅತ್ಯಂತ ವೈಶಿಷ್ಟ್ಯಪೂರ್ಣ ಐತಿಹಾಸಿಕ ತಾಣಗಳಲ್ಲಿ ಹಂಪಿ ಅಗ್ರಸ್ಥಾನದಲ್ಲಿದೆ. ಪ್ರಕೃತಿಯೇ ಕೆತ್ತಿದಂತಿರುವ ಬೃಹತ್ ಬಂಡೆಗಳು, ಭವ್ಯವಾದ ಪುರಾತನ ದೇವಾಲಯಗಳು ಮತ್ತು ಶತಮಾನಗಳ ಇತಿಹಾಸ ಹೊಂದಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

7. ಬಾದಾಮಿ (Badami):
ಬಾದಾಮಿಯ ಕೆಂಪು ಮರಳುಗಲ್ಲಿನ ಬೆಟ್ಟಗಳು ಮತ್ತು ಗುಹಾಂತರ ದೇವಾಲಯಗಳು ಕರ್ನಾಟಕದ ಭವ್ಯ ಇತಿಹಾಸವನ್ನು ಸಾರುತ್ತವೆ. ಇಲ್ಲಿನ ಪ್ರಶಾಂತ ಕೆರೆಯ ತಟದಲ್ಲಿ ನಿಂತು ಕೋಟೆ ಹಾಗೂ 'ಮಾಲೆಗಿತ್ತಿ ಶಿವಾಲಯ'ವನ್ನು ವೀಕ್ಷಿಸುವುದೆಂದರೆ ಅದೊಂದು ಅಪರೂಪದ ದೃಶ್ಯ ವೈಭವ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications